ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ

ಸೆಕ್ಷನ್ ೩೭೭ ಪ್ರಕರಣದ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

ಸಲಿಂಗಕಾಮ ಶಿಕ್ಷಾರ್ಹ ಅಪರಾಧ ಎನ್ನುವ ಕುರಿತ ಸೆಕ್ಷನ್ 377 ರದ್ದತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ತನ್ನ ತೀರ್ಪನ್ನು ಕಾದಿರಿಸಿದೆ. ಸಲಿಂಗಕಾಮದ ಪರ, ವಿರೋಧ ವಾದಗಳನ್ನು ಮಂಡಿಸಿರುವ ಆಯಾ ಬಣದ ವಕೀಲರಿಗೆ ತಮ್ಮ ಹೇಳಿಕೆಗಳನ್ನು ಶುಕ್ರವಾರದೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕೆಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯ ತಾನು ಅಂತಿಮ ತೀರ್ಪು ನೀಡುವ ಮುನ್ನ 377 ಸೆಕ್ಷನ್ ಎಲ್ಲ ಅಂಶಗಳನ್ನು ಪುನರ್ ಪರಿಶೀಲನೆ ನಡೆಸುವುದಾಗಿ ಹೇಳಿದ್ದು, ಮೂಲಭೂತ ಹಕ್ಕುಗಳ ದಮನಕಾರಿ ಪ್ರಯತ್ನಗಳನ್ನು ತಡೆಯಲು ಬಹುಮತದ ಸರ್ಕಾರಗಳಿಗೆ ಕಾಯುವ ಅಗತ್ಯವಿಲ್ಲ ಎಂದಿದೆ.

ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರ ನಾಮನಿರ್ದೇಶನ ಹಿಂಪಡೆದ ಸಮ್ಮಿಶ್ರ ಸರ್ಕಾರ

ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದ್ದ, ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ನಾಮನಿರ್ದೇಶಿತ ಸದಸ್ಯರ ನೇಮಕಾತಿಯನ್ನು ಉನ್ನತ ಶಿಕ್ಷಣ ಇಲಾಖೆ ಹಿಂಪಡೆದುಕೊಂಡಿದೆ. “ಹೊಸ ಸರ್ಕಾರ ಬಂದಾಗ ಬದಲಾವಣೆ ಮಾಡಲಾಗುತ್ತದೆ. ಹೀಗಾಗಿ, ಎಲ್ಲ ವಿಶ್ವವಿದ್ಯಾಲಯಗಳ ಎಲ್ಲ ಸದಸ್ಯರನ್ನು ಬದಲಾಯಿಸುತ್ತೇವೆ,” ಎಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸ್ಪಷ್ಟಪಡಿಸಿದ್ದ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆಯಿಂದ ಈ ಆದೇಶ ಹೊರಬಿದ್ದಿದೆ.

ಸಂಸದರಿಗೆ ಐಫೋನ್‌ ಕೊಟ್ಟಿದ್ದನ್ನು ವಿವಾದ ಮಾಡಬೇಡಿ: ಡಿಕೆಶಿ

ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಐಫೋನ್ ಮತ್ತು ಮೋಚಿ ಕಂಪನಿಯ ಚರ್ಮದ ಚೀಲವನ್ನು ನಾನೇ ಉಡುಗೊರೆಯಾಗಿ ನೀಡಿದ್ದು, ಇದನ್ನು ಅನಗತ್ಯವಾಗಿ ವಿವಾದ ಮಾಡಬೇಡಿ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಐಫೋನ್‌ ಬೆಲೆ ೮೯ ಸಾವಿರ ರುಪಾಯಿ ಮತ್ತು ಚೀಲದ ಬೆಲೆ ೯ ಸಾವಿರ ರುಪಾಯಿ. ಸಂಸದರು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಿ ಎಂದು ಕೊಟ್ಟಿದ್ದೇನೆ. ಇದನ್ನೆಲ್ಲ ಸದುದ್ದೇಶದಿಂದ ನೀಡಲಾಗಿದೆ,” ಎಂದು ಅವರು ಹೇಳಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಐಫೋನ್‌ ನಿರಾಕರಿಸಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಬಿಜೆಪಿ ಟೀಕೆಗೆ ರಾಹುಲ್ ಗಾಂಧಿ ತಿರುಗೇಟು

‘ಕಾಂಗ್ರೆಸ್ ಮುಸ್ಲಿಮರ ಪಕ್ಷ’ ಎಂಬ ಹೇಳಿಕೆ ಕುರಿತ ವಿವಾದ ಸಂಬಂಧ ಆಡಳಿತಾರೂಢ ಬಿಜೆಪಿಯ ಟೀಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀಕ್ಷ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಅವರು ಮಂಗಳವಾರ ಟ್ವೀಟ್ ಮಾಡಿ, “ನಾನು ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿರುತ್ತೇನೆ. ದುರ್ಬಲ, ತುಳಿತಕ್ಕೊಳಗಾದ, ನಿರ್ಲಕ್ಷಿತರ ಪರವಾಗಿದ್ದೇನೆ. ನೋವಿನಲ್ಲಿರುವವರನ್ನು ಅಪ್ಪಿಕೊಳ್ಳುವುದು ನನಗೆ ಮುಖ್ಯವಾಗಿದ್ದು, ಧರ್ಮ, ಜಾತಿ, ಅವರ ನಂಬಿಕೆಗಳು ನನಗೆ ನಗಣ್ಯ. ದ್ವೇಷ ಹಾಗೂ ಭಯವನ್ನು ಅಳಿಸಲು ನಾನು ಇಚ್ಛಿಸುವೆ,” ಎಂದಿದ್ದಾರೆ.

ಪಕ್ಷದ ವೇದಿಕೆಯಲ್ಲಿನ ಕಣ್ಣೀರಿಗೆ ಭಿನ್ನ ಅರ್ಥ ಕಲ್ಪಿಸುವುದು ಸರಿಯಲ್ಲ: ಎಚ್‌ಡಿಕೆ

“ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಾಗ ಕಠಿಣವಾಗಿರುತ್ತೇನೆ, ನೋವುಂಟಾದಾಗ ಭಾವನಾತ್ಮಕವಾಗಿ ಸ್ಪಂದಿಸುತ್ತೇನೆ; ಇದು ನನ್ನ ಸ್ವಾಭಾವಿಕ ನಡೆ. ಜನರ ಕಷ್ಟಗಳಿಗೆ ಬಹಿರಂಗವಾಗಿಯೇ ಕಣ್ಣೀರಿಡುತ್ತೇನೆ. ಇದು ನನ್ನಲ್ಲಿನ ಸಹಜ ಪ್ರಕ್ರಿಯೆ. ಇದಕ್ಕೆ ಯಾವುದೇ ಬಣ್ಣ ಇರುವುದಿಲ್ಲ. ನನ್ನ ಕಣ್ಣೀರಿನಷ್ಟೇ ನಡತೆಯೂ ಪಾರದರ್ಶಕವಾಗಿದೆ,” ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರ ಸಭೆ ನಡೆಸಲು ದೆಹಲಿ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು, “ಪಕ್ಷದ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದು ನಿಜ. ಪಕ್ಷದ ಸದಸ್ಯರ ಜೊತೆಗೆ ಚರ್ಚಿಸುವಾಗ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ,” ಎಂದಿದ್ದಾರೆ.

ಕೊಹ್ಲಿ ಪಡೆಯನ್ನು ಎಚ್ಚರಿಸಿದ ಕುಕ್ ಶತಕ!

ಮುಂದಿನ ತಿಂಗಳು ಶುರುವಾಗಲಿರುವ ಭಾರತ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಭಾರತ ಎ ತಂಡದ ವಿರುದ್ಧ ಅಲೆಸ್ಟೈರ್ ಕುಕ್ ಶತಕದೊಂದಿಗೆ ಕೊಹ್ಲಿ ಪಡೆಯನ್ನು ಎಚ್ಚರಿಸಿದ್ದಾರೆ. ಸೋಮವಾರ ವೊರ್ಸೆಸ್ಟರ್‌ನಲ್ಲಿ ಶುರುವಾದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗಿಳಿದ ಇಂಗ್ಲೆಂಡ್, ೮೪ ಓವರ್‌ಗಳಲ್ಲಿ ಇಂಗ್ಲೆಂಡ್ ಲಯನ್ಸ್ ಇಲೆವೆನ್ ಎರಡು ವಿಕೆಟ್ ನಷ್ಟಕ್ಕೆ ೨೯೦ ರನ್ ಗಳಿಸಿದೆ. ೧೭೩ ಎಸೆತಗಳಲ್ಲಿ ಶತಕ ಪೂರೈಸಿದ ಕುಕ್, ದಿನಾಂತ್ಯಕ್ಕೆ ೨೨೯ ಎಸೆತಗಳಲ್ಲಿ ೨೧ ಬೌಂಡರಿ ಸೇರಿದ ೧೪೫ ರನ್ ಗಳಿಸಿ ಔಟಾಗದೆ ಉಳಿದರು.

ಆಸ್ಟ್ರೇಲಿಯಾ ಫುಟ್ಬಾಲ್ ತಂಡದಲ್ಲಿ ಕಾಣಿಸಿಕೊಂಡ ಬೋಲ್ಟ್!

ಎಂಟು ಒಲಿಂಪಿಕ್ಸ್ ಚಾಂಪಿಯನ್ ಹಾಗೂ ವಿಶ್ವ ಶರವೇಗಿ ಉಸೇನ್ ಬೋಲ್ಟ್ ಆಸ್ಟ್ರೇಲಿಯಾ ಫುಟ್ಬಾಲ್‌ಗೆ ಲಗ್ಗೆ ಹಾಕಿದ್ದಾರೆ. ದೇಶದ ಗರಿಷ್ಠ ಗೋಲ್‌ಧಾರಿ ಟಿಮ್ ಕಾಹಿಲ್ ನಿವೃತ್ತಿ ಹೇಳಿದ ದಿನದಂದೇ ಬೋಲ್ಟ್ ಆಸ್ಟ್ರೇಲಿಯಾದ ಎ ಲೀಗ್‌ನ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ಕ್ಲಬ್‌ ಸಖ್ಯಕ್ಕೆ ಮುಂದಾಗಿದ್ದಾರೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಬಳಿಕ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಫುಟ್ಬಾಲ್‌ ಆಟದ ಅಪ್ಪಟ ಪ್ರೇಮಿ ಬೋಲ್ಟ್ ಮ್ಯಾಂಚೆಸ್ಟರ್ ಯುನೈಟೆಡ್‌ನ ಅಭಿಮಾನಿ ಕೂಡ. ೧೦೦ ಮತ್ತು ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ವೀರ ಬೋಲ್ಟ್ ಆರು ವಾರಗಳ ಕಾಲ ಆಸ್ಟ್ರೇಲಿಯನ್ ಕ್ಲಬ್‌ ಜೊತೆ ಫುಟ್ಬಾಲ್ ಟ್ರಯಲ್ ನಡೆಸಲಿದ್ದಾರೆ.

ಪ್ರಶಸ್ತಿಗಳನ್ನು ಹಿಂದಿರುಗಿಸಲಿದ್ದಾರೆ ದಿವಂಗತ ಹಾಕಿ ಆಟಗಾರ ಮುಹಮ್ಮದ್ ಶಹೀದ್ ಪತ್ನಿ!

ದಿವಂಗತ ಹಾಕಿ ಪಟು ಮುಹಮ್ಮದ್ ಶಹೀದ್ ಅವರ ಪತ್ನಿ ಪರ್ವೀನ್ ರಶೀದ್ ತಮ್ಮ ಪತಿಗೆ ದೊರೆತ ಎಲ್ಲ ಪ್ರಶಸ್ತಿಗಳನ್ನೂ ವಾಪಸ್ ನೀಡಲು ನಿರ್ಧರಿಸಿದ್ದಾರೆ. ತಮ್ಮ ಪತಿ ಜುಲೈ 20, 2016ರಂದು ನಿಧನರಾದ ನಂತರ ಸರಕಾರ ನೀಡಿದ್ದ ಯಾವೊಂದು ಆಶ್ವಾಸನೆಗಳನ್ನು ಈಡೇರಿಸದ್ದಕ್ಕಾಗಿ ಪ್ರತಿಭಟಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಮಾಸ್ಕೋದಲ್ಲಿ 1980ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದಿದ್ದ ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದ ಮುಹಮ್ಮದ್ ಶಹೀದ್ ಅವರ ಹಾಕಿ ಪ್ರತಿಭೆಯನ್ನು ಗುರುತಿಸಿ ಅವರನ್ನು ‘ಮಾಸ್ಟರ್ ಡ್ರಿಬ್ಲರ್’ ಎಂದು ಕರೆಯಲಾಗುತ್ತಿತ್ತು. 1980-81ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ಅವರು 1986ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ಸಲ್ಮಾನ್‌ ಭೇಟಿ ತಮಗೆ ಸಂತಸ ನೀಡಿದೆ ಎಂದ ಕಮಲ್‌ ಹಾಸನ್

ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ದಸ್ ಕಾ ದಮ್’ ಸೆಟ್‌ನಲ್ಲಿ ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರು ಸೋಮವಾರ ನಟ ಸಲ್ಮಾನ್‌ ಖಾನ್‌ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ತಾವು ನಟಿಸಿ, ನಿರ್ದೇಶಿರುವ ‘ವಿಶ್ವರೂಪಂ-2’ ಚಿತ್ರದ ಪ್ರಚಾರ ಕೈಗೊಂಡಿದ್ದಾರೆ. ಬುಧುವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಲ್ಮಾನ್‌ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಕಮಲ್‌, ಸಲ್ಮಾನ್‌ ಭೇಟಿ ತಮಗೆ ಸಂತಸ ತಂದಿದೆ ಎಂದಿದ್ದಾರೆ. ಹಿಂದಿ ಹಾಗೂ ತಮಿಳು ಬಿಗ್‌ ಬಾಸ್‌ ಶೋಗಳನ್ನು ಈ ಇಬ್ಬರು ನಟರು ನಡೆಸಿಕೊಡುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಖರ್ಗೆ, ಸಿದ್ದರಾಮಯ್ಯ, ಮುನಿಯಪ್ಪಗೆ ಸ್ಥಾನ

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಂಗಳವಾರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ರಚಿಸಿದ್ದು, ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಕೆ ಎಚ್‌ ಮುನಿಯಪ್ಪ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ೨೩ ಸದಸ್ಯರು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ. ವಿಶೇಷ ಆಹ್ವಾನಿತರಲ್ಲಿ ಕೋಲಾರ ಸಂಸದ ಕೆ ಎಚ್ ಮುನಿಯಪ್ಪ ಸೇರಿದಂತೆ ೧೦ ಮಂದಿ ಸೇರಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More