ಮಲೆನಾಡಿನ ಕುಗ್ರಾಮಗಳಲ್ಲಿ ಜೀವಬಲಿಗೆ ಕಾದಿವೆ ಅಸುರಕ್ಷಿತ ಕಾಲುಸಂಕಗಳು

ಆಶಿಕಾಳ ದುರಂತ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಅತಿ ಹೆಚ್ಚು ಮಳೆ ಬೀಳುವ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹಲವು ಕುಗ್ರಾಮಗಳಿಗೆ ಭೇಟಿ ನೀಡಿದಾಗ ಕಂಡ ಚಿತ್ರಣ ನಿಜವಾಗಿಯೂ ಆಘಾತಕಾರಿ. ‘ದಿ ಸ್ಟೇಟ್’ ನಡೆಸಿದ ಪ್ರತ್ಯಕ್ಷ ಸಮೀಕ್ಷೆಯಲ್ಲಿ ಕಂಡ ವಾಸ್ತವಾಂಶಗಳಿವು

ಮಲೆನಾಡಿನಲ್ಲಿ ಕಳೆದ ಒಂದೂವರೆ ದಶಕದಲ್ಲೇ ಕಂಡರಿಯದ ಪ್ರಮಾಣದ ಭಾರಿ ಮಳೆ ಸುರಿಯುತ್ತಿದೆ. ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಮೂವರು ಕೊಚ್ಚಿಹೋಗಿದ್ದಾರೆ. ಬರೋಬ್ಬರಿ ಒಂದು ವಾರ ಕಾಲ ಬಹುತೇಕ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನೂರಾರು ಎಕರೆ ಬೆಳೆ ಮುಳುಗಡೆಯಾಗಿದೆ, ಮನೆಗಳು ಕುಸಿದುಬಿದ್ದಿವೆ, ಸೇತುವೆ, ಕಾಲು ಸೇತುವೆ, ರಸ್ತೆಗಳು ನೀರಿನಲ್ಲಿ ಹೋಮವಾಗಿವೆ.

ಆದರೆ, ಈ ಬಾರಿ ವಾಡಿಕೆಗಿಂತ ಅಧಿಕ ಎಂಬುದನ್ನು ಹೊರತುಪಡಿಸಿದರೆ, ತೀರ್ಥಹಳ್ಳಿ, ಹೊಸನಗರ, ಸಾಗರ, ಶೃಂಗೇರಿ, ಕೊಪ್ಪ, ಮೂಡಿಗೆರೆ ಸೇರಿದಂತೆ ದಟ್ಟ ಮಲೆನಾಡಿನ ಭಾಗದಲ್ಲಿ ಇಂತಹ ಮಳೆ ಮತ್ತು ಅದರೊಂದಿಗೆ ಬೆನ್ನೇರಿ ಬರುವ ಅನಾಹುತಗಳು ಹೊಸದೇನಲ್ಲ. ಆದರೆ, ಪ್ರಶ್ನೆ ಇರುವುದು; ಇಷ್ಟು ವರ್ಷಗಳ ಅನುಭವದ ಬಳಿಕವೂ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳವರೆಗೆ ಈ ಭಾಗದ ಇಂತಹ ಜೀವ ಮತ್ತು ಆಸ್ತಿಪಾಸ್ತಿ ಹಾನಿಯನ್ನು ಕನಿಷ್ಠ ತಡೆಯುವ ನಿಟ್ಟಿನಲ್ಲಿ ನಿಜವಾಗಿಯೂ ಏನಾದರೂ ಕೆಲಸಗಳಾಗಿವೆಯೇ ಎಂಬುದು.

ಮಳೆ ಅನಾಹುತಗಳನ್ನು, ಅತಿವೃಷ್ಟಿಯ ಹಾನಿಯನ್ನು ಎದುರಿಸಲು ನಮ್ಮ ಆಡಳಿತ ವ್ಯವಸ್ಥೆ ಎಷ್ಟರಮಟ್ಟಿಗೆ ಸಜ್ಜಾಗಿದೆ ಎಂಬುದಕ್ಕೆ ಕಳೆದ ಹತ್ತು ದಿನದ ಅವಧಿಯಲ್ಲಿ ಜಲಸಮಾಧಿಯಾಗಿರುವ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೊನ್ನೆತಾಳ್ ಪಂಚಾಯ್ತಿ ವ್ಯಾಪ್ತಿಯ ದೊಡ್ಲಿಮನೆಯ ಶಾಲಾ ಬಾಲಕಿ ಆಶಿಕಾ (೧೪), ಹೊಸನಗರ ತಾಲೂಕಿನ ಮುಂಬಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೆಂಕಟ ನಾಯ್ಕ ಎಂಬ ಕೂಲಿಕಾರ್ಮಿಕ ಹಾಗೂ ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದ ಅಶೋಕ ಎಂಬ ಯುವಕ ಸೇರಿದಂತೆ ಹಲವು ನಿದರ್ಶನಗಳು ಸಿಗುತ್ತಿವೆ.

ಶಾಲೆಗೆ ಹೋದವಳು ವಾಪಸು ಬರುವ ದಾರಿಯಲ್ಲಿ ಮುರಿದು ಶಿಥಿಲಗೊಂಡ ಕಾಳುಸಂಕದಿಂದ ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಹೋದ ಆಶಿಕಾಳ ದುರಂತ ಘಟನೆಯ ಬಳಿಕವೂ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹಲವು ಕಾಲುಸಂಕಗಳು ಯಾವ ಸುರಕ್ಷತೆಯೂ ಇಲ್ಲದೆ, ಜೀವಬಲಿಗೆ ಕಾದಿವೆ. ಆ ಹಿನ್ನೆಲೆಯಲ್ಲಿ ‘ದಿ ಸ್ಟೇಟ್’ ರಾಜ್ಯದ ಚಿರಾಪುಂಜಿ ಎಂಬ ಹೆಗ್ಗಳಿಕೆಯ ಅತಿ ಮಳೆಯ ಆಗುಂಬೆ ಹೋಬಳಿಯ ಕುಗ್ರಾಮಗಳಲ್ಲಿ ನಡೆಸಿದ ಸಾಕ್ಷಾತ್ ಸಮೀಕ್ಷೆಯಲ್ಲಿ ಕಂಡುಬಂದ ವಾಸ್ತವಾಂಶಗಳು ಬೆಚ್ಚಿಬೀಳಿಸದೆ ಇರಲಾರವು.

ಆಶಿಕಾಳನ್ನು ಬಲಿ ಪಡೆದ ದೊಡ್ಲಿಮನೆ ಹಳ್ಳದ ಕಾಲುಸಂಕವಿರಬಹುದು, ನಾಲೂರಿನ ಸಮೀಪದ ಕಾರೆಮನೆ ಹೊಳೆಯ ಕಾಲುಸಂಕವಿರಬಹುದು, ಅಗಸರಕೋಣೆ ಸಮೀಪದ ಚಿಮುಟಿಗ ಕಾಲುಸಂಕವಿರಬಹುದು, ಚೆಂಗಾರು-ಕಮ್ಮರಡಿ ನಡುವಿನ ಮಾಲತಿ ನದಿ ಮುಳುಗಡೆ ಪ್ರದೇಶಗಳಾಗಿರಬಹುದು... ಯಾವುದೇ ಕುಗ್ರಾಮಕ್ಕೆ ಹೋದರೂ, ಆ ಊರಿನ ಹಳ್ಳ, ಹೊಳೆ, ನದಿಗಳನ್ನು ದಾಟಲು ಜನರಿಗೆ ಎಂಟೆದೆಯ ಧೈರ್ಯ ಬೇಕು. ೨೫ ಅಡಿ ಅಗಲದ ದೊಡ್ಲಿಮನೆ ಹಳ್ಳ ದಾಟುವಾಗ ಆಶಿಕಾ ನೀರುಪಾಲಾದಳು. ಆದರೆ, ಆಕೆಯ ಊರಿನ ಸುತ್ತಮುತ್ತಲ ಹಳ್ಳಿಗಳ ಆಕೆಯದೇ ವಯಸ್ಸಿನ ಮತ್ತು ಶಿಕ್ಷಣದ ಅದಮ್ಯ ಬಯಕೆಯ ಮಕ್ಕಳು ಹಾದುಬರುವ ಹೊಳೆ-ಹಳ್ಳಗಳನ್ನು ನೋಡಿದರೆ, ಮುಂದೆ ಇನ್ನೆಂಥ ಅನಾಹುತಗಳು ಕಾದಿವೆಯೋ ಎಂದು ಎದೆ ಕಂಪಿಸದೆ ಇರದು.

ಆಕೆ ಎರಡು ಹಳ್ಳ ದಾಟಿ ಶಾಲೆಗೆ ಕಾಲಿಡಬೇಕು!

ನಾಲೂರಿನಿಂದ ೮ ಕಿಮೀ ದಟ್ಟ ಕಾಡಿನ ನಡುವಿನ ಬಾಳೆಕೊಡ್ಲುವಿನ ದಿವ್ಯಾಳ ಕಲಿಕೆಯ ಸಾಹಸವಂತೂ ದಿಗ್ಭ್ರಮೆ ಹುಟ್ಟಿಸುವಂತಹದ್ದು. ಆಕೆ ಆಗುಂಬೆಯ ಪರಿಸರದ ನಿತ್ಯಹರಿದ್ವರ್ಣ ಕಗ್ಗಾಡಿನ ನಡುವೆ ನಿತ್ಯ ಎರಡು ಹಳ್ಳಗಳನ್ನು ದಾಟಿಕೊಂಡೇ ನಾಲೂರಿಗೆ ತಲುಪಬೇಕು. ಅಲ್ಲಿಂದ ಮತ್ತೆ ಮೂರು ಕಿಮೀ ದಾರಿಯನ್ನು ಡಾಂಬರು ರಸ್ತೆಯಲ್ಲಿ ನಡೆದು ಅಥವಾ ಬಸ್ಸಿಗೆ ಹೋಗಿ ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆ ಸೇರಬೇಕು. ಮಲೆನಾಡಿನ ಅತಿ ಹಿಂದುಳಿದ ಬುಡಕಟ್ಟು ಸಮುದಾಯವಾದ ಹಸಲರ ಮನೆಗಳೇ ಇರುವ ಕಾಡಿನ ಊರು ಬಾಳೆಕೊಡ್ಲು ಅಕ್ಷರಶಃ ಗೊಂಡಾರಣ್ಯದ ನಡುವಿನ ಜನವಸತಿ ಪ್ರದೇಶ. ಅಲ್ಲಿನ ಮಕ್ಕಳ ಪೈಕಿ ಎಸ್‌ಎಸ್‌ಎಲ್‌ಸಿವರೆಗೆ ಶಾಲೆಗೆ ಹೋಗಿರುವ ಮೊದಲಿಗಳು ದಿವ್ಯಾ. ಬೆಳಗ್ಗೆ ಏಳೂವರೆಗೆ ಮನೆ ಬಿಡುವ ಆಕೆ ಶಾಲೆಗೆ ತಲುಪುವುದು ೯.೩೦ಕ್ಕೆ! ಆಕೆ ಶಾಲೆಗೆ ತಲುಪಲು ಬರೋಬ್ಬರಿ ಎರಡು ತಾಸು ಬೇಕು. ಅಂತಹ ದುರ್ಗಮ ದಾರಿ ಅದು. ಆ ಸಾಹಸಮಯ ದಾರಿಯ ಕಾರಣದಿಂದಾಗಿಯೇ ಆ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ‘ದಿ ಸ್ಟೇಟ್’ ಆಕೆಯ ಮನೆಗೆ ಹೋಗುವಾಗ ಕೂಡ ದಾರಿಯಲ್ಲಿ ಎರಡು ಹಳ್ಳಗಳನ್ನು ಹಾದುಹೋಗಬೇಕಾಯಿತು.

ಇನ್ನು, ನಾಲೂರು ಸಮೀಪದ ಕಾರೆಮನೆಯ ಕಾಲುಸಂಕದ ಸ್ಥಿತಿ ಇನ್ನೂ ಭಯಂಕರ. ಮಳೆಗಾಲದಲ್ಲಿ ತುಂಬಿ ಹರಿಯುವ ನಾಲೂರು ಹೊಳೆಯನ್ನು ದಾಟಿಯೇ ಕಾರೆಮನೆಯ ನಿವಾಸಿಗಳು ಹೊರಜಗತ್ತಿನ ಸಂಪರ್ಕ ಪಡೆಯಬೇಕು. ಆದರೆ, ೨೦೦೬ರಲ್ಲಿ ಆ ಹೊಳೆಗೆ ಅಡ್ಡಲಾಗಿ ಕಾಲುಸಂಕ ನಿರ್ಮಾಣದ ಉದ್ದೇಶದಿಂದ ಹಾಕಲಾಗಿರುವ ಸಿಮೆಂಟ್ ಪಿಲ್ಲರುಗಳು ನೀರಿನಲ್ಲಿ ಹಾಗೇ ಮುಳುಗಿದ ಸ್ಥಿತಿಯಲ್ಲೇ ಇವೆ. ಕಾಲುಸಂಕದ ಕಾರ್ಯ ಪಿಲ್ಲರುಗಳ ಮಟ್ಟಕ್ಕೇ ನಿಂತುಹೋಗಿ ೧೨ ವರ್ಷ ಕಳೆದಿದೆ. ಹಾಗಾಗಿ, ಸ್ವಂತ ದುಡ್ಡಿನಲ್ಲಿ ಅರೆಬರೆ ಪಿಲ್ಲರುಗಳಿಗೆ ಮರದ ತುಂಡುಗಳನ್ನು ಜೋಡಿಸಿಕೊಂಡು ಹೊಳೆ ದಾಟುವ ಹರಸಾಹಸ ಮಾಡುತ್ತಿದ್ದಾರೆ ಅಲ್ಲಿನ ಜನ. ಶಾಲಾ ಮಕ್ಕಳು ಕೂಡ ಇದೇ ಸಂಕವನ್ನು ಬಳಸಿಯೇ ನಿತ್ಯ ಶಾಲೆಗೆ ಹೋಗಬೇಕು!

ಅಗಸರಕೋಣೆ ಸಮೀಪದ ಚಿಮುಟಹೊಳೆ ಕಾಲುಸಂಕದ ಸ್ಥಿತಿ ಕೂಡ ಭಿನ್ನವಾಗೇನೂ ಇಲ್ಲ. ಅಲ್ಲಿಯೂ ಕಾಲುಸಂಕ ನಿರ್ಮಾಣಕ್ಕೆ ಪಿಲ್ಲರ್ ಹಾಕಿ ವರ್ಷಗಳೇ ಕಳೆದರೂ ಸಂಕ ನಿರ್ಮಾಣವಾಗಿಲ್ಲ. ನಿತ್ಯ ಓಡಾಟಕ್ಕೆ ಊರಿನ ಜನರೇ ಮರದ ತುಂಡುಗಳನ್ನು ಜೋಡಿಸಿ ಕಟ್ಟಿಕೊಂಡಿರುವ ತಾತ್ಕಾಲಿಕ ವ್ಯವಸ್ಥೆಯಲ್ಲಿಯೇ ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ಓಡಾಡುತ್ತಿದ್ದಾರೆ.

ಹೊರಜಗತ್ತಿನ ಸಂಪರ್ಕವೇ ಕಡಿತ!

ಇನ್ನು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಗಡಿಭಾಗದ ಚೆಂಗಾರು ಮತ್ತು ಕಮ್ಮರಡಿ ನಡುವಿನ ಮಾಲತಿ ನದಿಯ ಪ್ರವಾಹ ಸಂದರ್ಭದಲ್ಲಂತೂ ಆ ಭಾಗದ ಸುಮಾರು ಮೂರು ಗ್ರಾಮ ಪಂಚಾಯ್ತಿಗಳೊಂದಿಗೆ ತಾಲೂಕು ಕೇಂದ್ರಕ್ಕೆ ಸಂಪರ್ಕವೇ ಕಡಿದುಹೋಗುತ್ತದೆ. ಚೆಂಗಾರು ಮತ್ತು ಸುತ್ತಮುತ್ತಲ ಗ್ರಾಮಗಳ ಹದಿನೈದಕ್ಕೂ ಹೆಚ್ಚು ಮಕ್ಕಳು ನಿತ್ಯ ಕಮ್ಮರಡಿಯ ಶಾಲೆಗೆ ತೆರಳಲು ಚಿಕ್ಕ ನಾಡದೋಣಿಯನ್ನೇ ಬಳಸಬೇಕು. ಈ ಮಾರ್ಗದಲ್ಲಿ ನದಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂಬ ಜನರ ದಶಕಗಳ ಬೇಡಿಕೆ ಹಾಗೇ ಇದೆ. ಇತ್ತೀಚಿನ ಚುನಾವಣೆಗೆ ಮುನ್ನ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೂ, ಕಾಮಗಾರಿ ಅನುಮೋದನೆಯಾಗಿದೆಯೇ ಎಂಬ ಬಗ್ಗೆಯೇ ಅಲ್ಲಿನ ಜನರಿಗೆ ಅನುಮಾನಗಳಿವೆ.

ಶಾಲೆಗೆ ಹೋಗುವ ಮಕ್ಕಳು, ಆಸ್ಪತ್ರೆಗೆ ಹೋಗುವ ವಯೋವೃದ್ಧರು, ನಿತ್ಯ ದುಡಿಮೆ ಅರಸಿಹೋಗುವ ಕೂಲಿಕಾರ್ಮಿಕರು ಸೇರಿದಂತೆ ಹಲವರಿಗೆ ಅಪಾಯಕಾರಿ ಕಾಲುಸಂಕಗಳನ್ನು ದಾಟಿ ಹೊರಜಗತ್ತಿಗೆ ಕಾಲಿಡುವುದು ನಿತ್ಯಕರ್ಮ. ಆದರೆ, ಸ್ಥಳೀಯ ಆಡಳಿತಗಳು ಅಂತಹ ಅನಿವಾರ್ಯತೆಯನ್ನು ಗುರುತಿಸಿ, ಕನಿಷ್ಠ ಸುರಕ್ಷತೆ ಮತ್ತು ತಾತ್ಕಾಲಿಕ ಕಾಲುಸಂಕಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕೂಡ ನಿಭಾಯಿಸುತ್ತಿಲ್ಲ ಎಂಬುದು ನಮ್ಮ ಪ್ರವಾಸದ ವೇಳೆ ಕಣ್ಣಿಗೆ ರಾಚದೆ ಇರಲಿಲ್ಲ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ತೀರ್ಥಹಳ್ಳಿಯ ಈ ಬಾಲಕಿಯನ್ನು ನಿಜಕ್ಕೂ ಕೊಂದವರಾರು?

ಸುಲಭ ಪರಿಹಾರೋಪಾಯಗಳಿವೆ!

ಗುತ್ತಿಗೆದಾರರ ಹಿತಾಸಕ್ತಿ ಮತ್ತು ಜನಪ್ರತಿನಿಧಿಗಳ ಲಾಭಕೋರತನದ ಕಾರಣಕ್ಕೆ ಕೆಲವು ಕಡೆ ಅಗತ್ಯಕ್ಕಿಂತ ದೊಡ್ಡ ಗಾತ್ರದ ಪಿಲ್ಲರುಗಳನ್ನು ನಿರ್ಮಾಣ ಮಾಡುವ ಪ್ರಯತ್ನ ಅರ್ಧಕ್ಕೆ ನಿಂತಿದೆ. ಕೆಲವು ಕಡೆ ಕನಿಷ್ಠ ಕಾಲುಸೇತುವೆ ಕೂಡ ನಿರ್ಮಾಣವಾಗಿಲ್ಲ. “ಗುತ್ತಿಗೆದಾರರು ಮತ್ತು ಅವರೊಂದಿಗೆ ಸಖ್ಯದ ಪ್ರತಿನಿಧಿಗಳ ‘ಲೆಕ್ಕಾಚಾರ’ಗಳನ್ನು ಬಿಟ್ಟು ನೋಡಿದರೆ, ಕೇವಲ ಗಟ್ಟಿಮುಟ್ಟಾದ ಕಬ್ಬಿಣದ ರೇಲಿಂಗ್ ಪಟ್ಟಿ ಮತ್ತು ಕೆಲವು ಸಿಮೆಂಟ್ ಹಲಗೆಗಳಿದ್ದರೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸುರಕ್ಷತೆಯ ಕಾಲುಸಂಕ ನಿರ್ಮಾಣ ಸಾಧ್ಯವಿದೆ. ಆದರೆ, ಅದರಲ್ಲಿ ಲಾಭದ ಮೇಲೆ ಕಣ್ಣಿಟ್ಟಿರುವವರಿಗೆ ಆಸಕ್ತಿ ಇಲ್ಲ,” ಎಂಬ ಗ್ರಾಮಸ್ಥ ದಿನೇಶ್ ಎಂಬುವರ ಮಾತಿನಲ್ಲಿ ನಿಜವಿಲ್ಲದೇ ಇಲ್ಲ!

ಹಾಗೇ, “ತೀರಾ ಕಾಲುಸಂಕದ ಮೂಲಕ ಸಮಸ್ಯೆ ನಿವಾರಣೆಯಾಗದು ಎಂಬಂತಹ ಚೆಂಗಾರುನಂತಹ ಪ್ರದೇಶದ ಶಾಲಾ ಮಕ್ಕಳು ನದಿಯ ಕಾರಣಕ್ಕೆ ಶಿಕ್ಷಣ ವಂಚಿತರಾಗದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಂತಹ ದುರ್ಗಮ ಪ್ರದೇಶದಲ್ಲಿ ಹಳ್ಳಿಗಾಡಿನ ಶಾಲಾ ಮಕ್ಕಳ ಅನುಕೂಲಕ್ಕಾಗಿ ಕನಿಷ್ಠ ಗ್ರಾಮ ಪಂಚಾಯ್ತಿ ಕೇಂದ್ರಕ್ಕೊಂದು ಉಚಿತ ಹಾಸ್ಟೆಲ್ ಸೌಲಭ್ಯ ನೀಡಬೇಕು. ಕನಿಷ್ಠ ಹೊಳೆ-ಹಳ್ಳಗಳು ತುಂಬಿ ಹರಿಯುವ ಮಳೆಗಾಲದ ಮಟ್ಟಿಗಾದರೂ ವಿದ್ಯಾರ್ಥಿಗಳಿಗೆ ಊಟ-ವಸತಿಯ ವ್ಯವಸ್ಥೆ ಮಾಡಿ ಸರ್ಕಾರ ಇಲ್ಲಿನ ಮಕ್ಕಳ ನೆರವಿಗೆ ಬರಬೇಕು. ಆ ಮೂಲಕ ಕುಗ್ರಾಮದ ದುರ್ಬಲ ವರ್ಗಗಳ ಮಕ್ಕಳು ಶಿಕ್ಷಣ ವಂಚಿತರಾಗದಂತೆ ಮತ್ತು ಹೊಳೆ-ಹಳ್ಳಗಳಿಗೆ ಜೀವ ಬಲಿಯಾಗದಂತೆ ತಡೆಯುವುದು ಸಾಧ್ಯ. ಆದರೆ, ಅಂತಹ ಕ್ರಮಗಳಿಗೆ ಜನ ಕಾಳಜಿಯ ನಾಯಕತ್ವ ಬೇಕು,” ಎನ್ನುವುದು ಗ್ರಾಮದ ಯುವ ಮುಖಂಡ ನಿತ್ಯಾನಂದ ಅವರ ಅಭಿಪ್ರಾಯ.

ಈ ನಡುವೆ, ಆಶಿಕಾ ದುರಂತದ ಬಳಿಕ ಮಾರನೇ ದಿನವೇ ಶಿವಮೊಗ್ಗ ಜಿಲ್ಲಾಧಿಕಾರಿಗಳು ಒಂದು ಸುತ್ತೋಲೆ ಹೊರಡಿಸಿ, “ಕಿರುಸೇತುವೆ, ಕಾಲುಸಂಕಗಳ ನಿರ್ವಹಣೆಯನ್ನು ಸ್ಥಳೀಯ ಆಡಳಿತಗಳು ಸರಿಯಾಗಿ ಮಾಡಬೇಕು. ಜನ ಕೂಡ ಇಂತಹ ಸಂಪರ್ಕ ಸೇತುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು,” ಎಂದು ಸೂಚಿಸಿದ್ದರು. ಆದರೆ, ಆ ಸುತ್ತೋಲೆ ಯಾರಿಗೆ ತಲುಪಬೇಕಿತ್ತೋ ಅವರಿಗೆ ತಲುಪಿ, ಏನನ್ನು ಸಾಧಿಸಬೇಕಿತ್ತೋ ಅದನ್ನು ಸಾಧಿಸುವಲ್ಲಿ ಸಫಲವಾಗಿಲ್ಲ ಎಂಬ ಕಟುವಾಸ್ತವಕ್ಕೆ ಸಾಕ್ಷಿಯಾಗಿದ್ದು ಆಗುಂಬೆ ಹೋಬಳಿಯ ಸಾಲು-ಸಾಲು ಕಾಲುಸಂಕಗಳು! ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಸಡ್ಡೆ ಮತ್ತು ಜನರನ್ನು ವೋಟು ಹಾಕುವ ಯಂತ್ರಗಳಷ್ಟೇ ಎಂಬಂತಹ ಮನಸ್ಥಿತಿಗೂ ಆ ಕುಗ್ರಾಮಗಳು ಮೂಕಸಾಕ್ಷಿಯಾಗಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More