ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ

ಕೋಳಿವಾಡ, ರಾಜಣ್ಣಗೆ ಕೆಪಿಸಿಸಿಯಿಂದ ನೋಟಿಸ್‌ ಜಾರಿ

ಪಕ್ಷಕ್ಕೆ ಮುಜುಗರವಾಗುವಂಥ ಹೇಳಿಕೆಗಳನ್ನು ನೀಡಲಾಗಿದೆ ಎಂದು ರಾಣೆಬೆನ್ನೂರು ಮಾಜಿ ಶಾಸಕ, ಮಾಜಿ ವಿಧಾನ ಸಭಾಧ್ಯಕ್ಷ ಕೆ ಬಿ ಕೋಳಿವಾಡ ಹಾಗೂ ಮಧುಗಿರಿ ಮಾಜಿ ಶಾಸಕ ಕೆ ಎನ್‌ ರಾಜಣ್ಣ ಅವರಿಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ವಿ ವೈ ಘೋರ್ಪಡೆ ಅವರು ಸೋಮವಾರ ನೋಟಿಸ್‌ ಜಾರಿಗೊಳಿಸಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಣ್ಣೀರು ಹಾಕಲು ಕಾಂಗ್ರೆಸ್‌ ನಾಯಕರು ಕಾರಣ ಎಂದು ಕೋಳಿವಾಡ ಹೇಳಿದ್ದರು. ಜೆಡಿಎಸ್‌ ಮೈತ್ರಿ ಧರ್ಮಪಾಲಿಸುತ್ತಿಲ್ಲ ಎಂದು ರಾಜಣ್ಣ ಅವರು ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯ್ದಿದ್ದನ್ನು ಉಲ್ಲೇಖಿಸಿ ನೋಟಿಸ್‌ ಜಾರಿಗೊಳಿಸಲಾಗಿದ್ದು, ಒಂದು ವಾರದೊಳಗೆ ಸಮಜಾಯಿಸಿ ನೀಡುವಂತೆ ಸೂಚಿಸಲಾಗಿದೆ.

ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್‌: ಎಚ್‌ಡಿಕೆ

ಸರ್ಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸ್ವಕ್ಷೇತ್ರವಾದ ಚನ್ನಪಟ್ಟಣದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಸಾವಿರಾರು ರುಪಾಯಿ ವಂತಿಗೆ ನೀಡುವವರಿಗೆ ಬಸ್‌ ಪಾಸ್‌ ಕೊಡಿಸುವುದು ಕಷ್ಟವಾಗುವುದಿಲ್ಲ ಎಂದು ಖಾರವಾಗಿಯೇ ನುಡಿದಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ನೀಡಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಬಿಹಾರದಲ್ಲಿ 21 ಬಾಲಕಿಯರ ಮೇಲೆ ಅತ್ಯಾಚಾರ: ಆರೋಪ

ಬಿಹಾರದ ಮುಜಾಫರ್ ನಗರದಲ್ಲಿ ನಡೆದಿದೆ ಎನ್ನಲಾದ ಪೈಶಾಚಿಕ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಆಶ್ರಯತಾಣದಲ್ಲಿದ್ದ 40 ಬಾಲಕಿಯರ ಪೈಕಿ 21 ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರಂತರ ಅತ್ಯಾಚಾರ ಎಸಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಓರ್ವ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಹತ್ಯೆ ಮಾಡಿ ಆಶ್ರಯತಾಣದ ಮುಂಭಾಗದಲ್ಲಿ ಹೂಳಲಾಗಿದೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು, ಮುಜಫರ್ ನಗರ ಠಾಣೆಯ ಎಸ್‌ಎಸ್‌ಪಿ ಹರ್ಫೀತ್ ಕೌರ್ ನೇತೃತ್ವದಲ್ಲಿ ಶವ ಪತ್ತೆಗಾಗಿ ಸೋಮವಾರ ಶೋಧಕಾರ್ಯ ಆರಂಭಿಸಿದ್ದಾರೆ.

ಮಕ್ಕಳ ಅಪಹರಣ ಆರೋಪದಲ್ಲಿ ಮಾನಸಿಕ ಅಸ್ವಸ್ಥೆ ಹತ್ಯೆ

ದೇಶಾದ್ಯಂತ ಮಕ್ಕಳ ಅಪಹರಣದ ಕುರಿತಾದ ವದಂತಿಗಳು ಹಬ್ಬುತ್ತಿರುವ ನಡುವೆಯೇ ಮಧ್ಯಪ್ರದೇಶದ ಮೋರ್ವಾದಲ್ಲಿ ಇಂಥದ್ದೇ ಘಟನೆ ವರದಿಯಾಗಿದೆ. ಮಕ್ಕಳ ಕಳ್ಳಿ ಎಂದು ಭಾವಿಸಿದ ಸ್ಥಳೀಯರು, ಮಾನಸಿಕ ಅಸ್ವಸ್ಥೆಯ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಆಕೆಯ ಭಾವಚಿತ್ರ ಕೆಲ ದಿನಗಳಿಂದ ವಾಟ್ಸ್ ಆಪ್‌ನಲ್ಲಿ, ‘ಮಕ್ಕಳ ಕಳ್ಳರಿದ್ದಾರೆ ಎಚ್ಚರ ವಹಿಸಿ' ಎಂಬ ಬರಹದ ಜೊತೆ ಹರಿದಾಡುತ್ತಿತ್ತು ಎನ್ನಲಾಗಿದೆ.

ಯುಜಿಸಿ ಬದಲಿಗೆ ಶೀಘ್ರವೇ ಉನ್ನತ ಶಿಕ್ಷಣ ಆಯೋಗ: ಜಾವಡೇಕರ್

ಯುಜಿಸಿಗೆ ಬದಲಾಗಿ ಶೀಘ್ರವೇ ಉನ್ನತ ಶಿಕ್ಷಣ ಆಯೋಗ ರಚಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಸೋಮವಾರ ಲೋಕಸಭೆಯಲ್ಲಿ ಪ್ರಕಟಿಸಿದ್ದಾರೆ. ಉನ್ನತ ಶಿಕ್ಷಣ ಆಯೋಗದ ಕರಡು ಮಸೂದೆಯನ್ನು ಸಂಸತ್‌ನ ಮುಂದೆ ಶೀಘ್ರದಲ್ಲೇ ಮಂಡಿಸಲಾಗುವುದು ಎಂದ ಅವರು, “ಉದ್ದೇಶಿತ ಆಯೋಗವು ಅಧಿಕಾರಿಶಾಹಿ ಸಂಸ್ಥೆಯಾಗಿರುವುದಿಲ್ಲ. ಬದಲಾಗಿ ಉನ್ನತ ಶಿಕ್ಷಣ ಗುಣಮಟ್ಟ ಕಾಪಾಡುವ ಸ್ವಾಯತ್ತ ಸಂಸ್ಥೆಯಾಗಿರುತ್ತದೆ. ಆಯೋಗವು ಎರಡು ವಿಭಾಗಗಳನ್ನು ಒಳಗೊಂಡಿರುತ್ತದೆ. ಒಂದು ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತದ ಬಗ್ಗೆ ಗಮನಹರಿಸಿದರೆ, ಮತ್ತೊಂದು ಅವುಗಳಿಗೆ ಹಂಚಿಕೆಯಾಗುವ ಅನುದಾನದ ನಿರ್ವಹಣೆ ಮಾಡುತ್ತದೆ,” ಎಂದು ತಿಳಿಸಿದರು.

ಡೇವಿಡ್‌ ಹೆಡ್ಲಿ ಮೇಲೆ ಅಮೆರಿಕ ಜೈಲಿನಲ್ಲಿ ದಾಳಿ, ಸ್ಥಿತಿ ಗಂಭೀರ

ಅಮೆರಿಕ ಜೈಲಿನಲ್ಲಿ ಕೈದಿಗಳ ನಡುವೆ ಸಂಘರ್ಷ ನಡೆದಿದ್ದು, ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್‌ ಹೆಡ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಇಬ್ಬರು ಸಹ ಕೈದಿಗಳು ಹೆಡ್ಲಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಡೇವಿಡ್‌ ಹೆಡ್ಲಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಆತನಿಗೆ ಚಿಕಿತ್ಸೆ ನೀಡಲಾಗಿದೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಹಾಗೂ ಗೂಢಚರ ಸಂಸ್ಥೆಯ ಪರವಾಗಿ ಕೆಲಸ ಆತ ಕೆಲಸ ಮಾಡಿದ್ದ ಆರೋಪವಿದೆ.

ಒಂಬತ್ತು ತಿಂಗಳಲ್ಲಿ 44 ಲಕ್ಷ ಉದ್ಯೋಗ ಸೃಷ್ಟಿ: ಇಪಿಎಫ್ಒ

2017ರ ಸೆಪ್ಟಂಬರ್-2018 ಮೇ ಅವಧಿಯಲ್ಲಿ ದೇಶದಲ್ಲಿ 44,74,859 ಉದ್ಯೋಗ ಸೃಷ್ಟಿಸಲಾಗಿದೆ ಎಂದು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ತಿಳಿಸಿದೆ. ಪೇರೋಲ್ ಮಾಹಿತಿ ಆಧರಿಸಿ ಇಪಿಎಫ್ಒ ಈ ಅಂಕಿ-ಅಶಗಳನ್ನು ಬಿಡುಗಡೆ ಮಾಡಿದೆ. ಸಾಮಾಜಿಕ ಸುರಕ್ಷಿತ ಯೋಜನೆಗಳಡಿ ಹೊಸದಾಗಿ ನೊಂದಾಯಿಸಿರುವ ಕಾರ್ಮಿಕರ ಸಂಖ್ಯೆ 41,26,138. ಮೇ ತಿಂಗಳಲ್ಲಿ ಅತಿ ಗರಿಷ್ಠ ಎಂದರೆ 7,43,608 ಮಂದಿ ನೊಂದಾಯಿಸಿದ್ದಾರೆ. ಮೇ ತಿಂಗಳಲ್ಲಿ 18-21 ವಯೋಮಿತಿಯಲ್ಲಿರುವ 2,51,536 ಮಂದಿ ನೊಂದಾಯಿಸಿದ್ದಾರೆ. 22-25 ವಯೋಮಿತಿಯಲ್ಲಿರುವ1,90,090 ಮಂದಿ ನೊಂದಾಯಿಸಿದ್ದಾರೆ. ಈ ಅಂಕಿ-ಅಂಶಗಳು ತಾತ್ಕಾಲಿಕ, ಮಾಹಿತಿಯನ್ನು ಸಂಗ್ರಹವು ಸತತ ಪ್ರಕ್ರಿಯೆಯಾಗಿದ್ದು ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಹೇಳಿದೆ.

ನಟ ಮೋಹನ್‌ ಲಾಲ್‌ ಆಯ್ಕೆಗೆ ವಿರೋಧ

ಕೇರಳ ರಾಜ್ಯ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿಯಾಗಿ ಮೋಹನ್ ಲಾಲ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿಜುಕುಮಾರ್ ದಾಮೋದರನ್‌ ಈ ಕುರಿತು ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೋಹನ್‌ ಲಾಲ್‌ ಅವರು ಪ್ರಸ್ತುತ ಅಸೋಸಿಯೇಷನ್‌ ಆಫ್‌ ಮಲಯಾಳಂ ಮೂವೀ ಆರ್ಟಿಸ್ಟ್ಸ್‌ (AMMA) ಅಧ್ಯಕ್ಷರೂ ಹೌದು. ವಿವಾದಿತ ನಟ ದಿಲೀಪ್‌ರನ್ನು ಕಲಾವಿದರ ಸಂಘಕ್ಕೆ ಮರುಸೇರ್ಪಡೆಗೊಳಿಸಿಕೊಳ್ಳುವ ಮೋಹನ್ ಲಾಲ್‌ ನಡೆಯನ್ನು ಮಾಲಿವುಡ್‌ನ ಹಲವರು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ, ಪ್ರಶಸ್ತಿ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮೋಹನ್‌ ಲಾಲ್‌ ಅವರನ್ನು ಆಹ್ವಾನಿಸಿರುವ ಕೇರಳ ಸರ್ಕಾರದ ಕ್ರಮಕ್ಕೆ ಹಿನ್ನೆಡೆಯಾಗಿದೆ.

ದಕ್ಷಿಣ ಆಫ್ರಿಕಾಗೆ ಹೀನಾಯ ಸರಣಿ ಸೋಲು‌

ಶ್ರೀಲಂಕಾ ಸ್ಪಿನ್ನರ್‌ಗಳ ಚಮತ್ಕಾರಿ ಬೌಲಿಂಗ್‌ಗೆ ಮತ್ತೊಮ್ಮೆ ಮರುಳಾದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ, ಹನ್ನೆರಡು ವರ್ಷಗಳ ಬಳಿಕ ದ್ವೀಪರಾಷ್ಟ್ರದ ವಿರುದ್ಧ ಸೋಲಿನ ಆಘಾತ ಅನುಭವಿಸಿದೆ. ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಮುಕ್ತಾಯ ಕಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ೨೯೦ ರನ್‌ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್ ಆಯಿತು. ೪೯೦ ರನ್ ಗೆಲುವಿನ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾಗೆ ರಂಗನಾ ಹೆರಾತ್ (98ಕ್ಕೆ ೬) ರನ್‌ಗಳಿಗೆ ಮಾರಕರಾದರು. ಕೊಂಚ ಪ್ರತಿರೋಧ ನೀಡಿದ ಬ್ರೂಯ್ನ್ (೧೦೧) ಮತ್ತು ಟೆಂಬ ಬವುಮಾಗೂ (೬೩) ಹೆರಾತ್‌ ಉರುಳಾದರು. ಅಂತಿಮವಾಗಿ ೧೯೯ ರನ್ ಭಾರೀ ಸೋಲಿಗೆ ದಕ್ಷಿಣ ಆಫ್ರಿಕಾ ಪಕ್ಕಾಯಿತು. ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ದಿಮುತ್ ಕರುಣಾರತ್ನೆ ಆಯ್ಕೆಯಾದರು.

ಓಜಿಲ್ ಪರ ಬ್ಯಾಟ್ ಬೀಸಿದ ಸಾನಿಯಾ ಮಿರ್ಜಾ

ಜರ್ಮನಿಯಲ್ಲಿ ಜನಾಂಗೀಯ ತಾರತಮ್ಯಕ್ಕೆ ಸಿಲುಕಿ ತೀವ್ರ ಮನನೊಂದು ಜರ್ಮನ್ ಫುಟ್ಬಾಲ್ ತಂಡದಿಂದ ಹೊರಬಂದಿರುವ ಟರ್ಕಿ ಮೂಲದ ಜರ್ಮನ್ ಆಟಗಾರ ಮೆಸುಟ್ ಓಜಿಲ್ ನಿರ್ಧಾರವನ್ನು ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸ್ವಾಗತಿಸಿದ್ದಾರೆ. "ಓರ್ವ ಕ್ರೀಡಾಪಟುವಾಗಿ ಇಂಥದ್ದೊಂದು ಸಂಗತಿಯನ್ನು ಕೇಳುತ್ತಿರುವುದು ದುಃಖದ ಸಂಗತಿ. ಓರ್ವ ಮನುಷ್ಯನಾಗಿರುವುದು ಎಲ್ಲಕ್ಕಿಂತ ಮಿಗಿಲಾದುದು. ಜನಾಂಗೀಯ ಭೇದ ಇಲ್ಲವೇ ನಿಂದನೆಗೆ ಗುರಿಯಾಗುವುದಕ್ಕಿಂತ ನೀವು ತಳೆದಿರುವ ನಿರ್ಣಯ ಸರಿಯಾಗಿದೆ. ಯಾವುದೇ ಸಂದರ್ಭದಲ್ಲೂ ಜನಾಂಗೀಯ ಭೇದದಂಥ ಕೀಳುಮಟ್ಟದ ವರ್ತನೆಯನ್ನು ಸಹಿಸಿಕೊಳ್ಳಲಾಗದು,'' ಎಂದು ಟ್ವಿಟರ್‌ನಲ್ಲಿ ಓಜಿಲ್ ಅವರನ್ನು ಸಾನಿಯಾ ಬೆಂಬಲಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More