ಕೇವಿಯಟ್ ಮುಗಿದರೂ ಕಾನೂನು ಸಮರ ಅಭಾದಿತ ಎಂದ ಶಿರೂರು ಶ್ರೀ ಪರ ವಕೀಲ

ಶಿರೂರು ಶ್ರೀ ಸಾವಿನ ಬಳಿಕ ಸಹಜವಾಗಿಯೇ ಕೇವಿಯಟ್ ಮುಕ್ತಾಯಗೊಂಡಿದೆ. ಉತ್ತರಾಧಿಕಾರಿ ಆಯ್ಕೆಯನ್ನು ಪರಿಗಣಿಸಿ ಕಾನೂನಿನಂತೆ ಮುಂದುವರಿಯಲಾಗುವುದು ಎಂದು ‘ದಿ ಸ್ಟೇಟ್’ನೊಂದಿಗೆ ಶ್ರೀಗಳ ಪರ ವಕೀಲರು ಅಭಿಪ್ರಾಯ ಹಂಚಿಕೊಂಡಿದ್ದಾರೆ

“ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ಸಾವಿನ ಹಿನ್ನೆಲೆಯಲ್ಲಿ ಉಡುಪಿ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಕೇವಿಯಟ್ ಮುಕ್ತಾಯಗೊಂಡಿದೆ. ಇದು ಕಾನೂನಿನ ಸಹಜ ಪ್ರಕ್ರಿಯೆ. ಉತ್ತರಾಧಿಕಾರಿಗಳು ಒಲವು ತೋರಿದರೆ ಹೊಸ ಕೇವಿಯಟ್ ಹಾಕಲು ಅವಕಾಶವಿದೆ,” ಎಂದು ಶಿರೂರು ಶ್ರೀಗಳ ಪರ ವಕೀಲ ರವಿಕಿರಣ್ ಮುರ್ಡೇಶ್ವರ ‘ದಿ ಸ್ಟೇಟ್’ಗೆ ಸ್ಪಷ್ಟನೆ ನೀಡಿದ್ದಾರೆ.

“ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಕೇವಿಯಟ್ ಅನೂರ್ಜಿತಗೊಂಡಿಲ್ಲ ಅಥವಾ ರದ್ದಾಗಿಲ್ಲ. ಬದಲಿಗೆ ಅದು ಮುಕ್ತಾಯಗೊಂಡಿದೆ. ಇದು ಪ್ರಕರಣದ ಮೇಲೆ ಯಾವ ರೀತಿಯ ಪರಿಣಾಮ ಬೀರದು. ತಮ್ಮ ವಿರುದ್ಧ ಯಾರಾದರೂ ಕೇಸ್ ಹಾಕಿದ್ದರೆ ಅವರನ್ನು ಕೇಳದೇ ಆದೇಶ ನೀಡಬಾರದು ಎಂದು ಕೋರ್ಟಿಗೆ ಮನವಿ ಸಲ್ಲಿಸಲಾಗಿತ್ತು. ಇನ್ನು ಅವರ ವಿರುದ್ಧ ಕೇಸ್ ಹಾಕುವ ಪರಿಸ್ಥಿತಿ ಬರುವುದಿಲ್ಲ. ಹಾಗಾಗಿ ಕೇವಿಯಟ್ ಅಗತ್ಯವೂ ಇಲ್ಲ. ಅದು ಅವರ ಸಾವಿನೊಂದಿಗೆ ಮುಕ್ತಾಯವಾಗುತ್ತದೆ” ಎಂದು ಹೇಳಿದ್ದಾರೆ.

“ಪರಿಸ್ಥಿತಿ ನೋಡಿಕೊಂಡು ಇನ್ನು ಮುಂದುವರಿಯಬೇಕಾಗುತ್ತದೆ. ಮುಂದಿನ ಉತ್ತರಾಧಿಕಾರಿಯನ್ನು ಪರಿಗಣಿಸಿ ಅವರಿಗೆ ಅಸಮಾಧಾನವಾಗದಿದ್ದರೆ ಕಾನೂನಿನ ಪ್ರಕ್ರಿಯೆ ಅಗತ್ಯವಿರುವುದಿಲ್ಲ. (ಪಲಿಮಾರು ಮಠದ) ವಿದ್ಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲು ಅವರು ಬಯಸಿದ್ದರು. ಆ ವಿಚಾರದಲ್ಲಿ ಸ್ವಲ್ಪ ಪ್ರಭಾವ ಬೀರಬಹುದು,” ಎಂದು ತಿಳಿಸಿದ್ದಾರೆ.

ಕೇವಿಯಟ್ ಮುಕ್ತಾಯಗೊಂಡಿರುವುದು ಉಳಿದ ಮಠಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಉಳಿದ ಮಠಗಳಿಗೆ ಪರೋಕ್ಷವಾಗಿ ಅನುಕೂಲವಾದಂತೆ ಆಗಿದೆ. ಯಾವುದೇ ಪ್ರಕರಣದಲ್ಲಿ ವಿವಾದಾಸ್ಪದ ವ್ಯಕ್ತಿ ತೀರಿಕೊಂಡರೆ ಪ್ರತಿವಾದಿಗಳಿಗೆ ಲಾಭವೇ,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಶಿರೂರು ಶ್ರೀ ಸಾವು | ಊಹೆ ಮೀರಿದ ಸತ್ಯವೊಂದನ್ನು ಎದುರುನೋಡುತ್ತಿದೆ ಉಡುಪಿ

ಮುಂದಿನ ಕ್ರಮಗಳ ಕುರಿತಂತೆ ವಿವರಿಸಿದ ಅವರು “ಶ್ರೀಗಳ ಮರಣೋತ್ತರ ಪರೀಕ್ಷೆ ವರದಿಯನ್ನು ಕಾದು ನೋಡಬೇಕು. ಬುಧವಾರ ವರದಿ ಕೈಸೇರುವ ನಿರೀಕ್ಷೆ ಇದೆ. ಸ್ವಾಮೀಜಿಗಳು ನ್ಯಾಯ ಕೋರಿ ಬಂದಿದ್ದರು. ಹಾಗಾಗಿ ನಮಗೊಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅವರ ಹಿತಾಸಕ್ತಿಗೆ ಧಕ್ಕೆಯಾಗದ ಹಾಗೆ ನೋಡಿಕೊಳ್ಳಬೇಕಾಗುತ್ತದೆ,” ಎಂದಿದ್ದಾರೆ.

ಪಟ್ಟದ ದೇವರ ಹಸ್ತಾಂತರ ವಿಚಾರದಲ್ಲಿ ಇತ್ತೀಚೆಗೆ ಉಡುಪಿಯ ಅಷ್ಟಮಠಗಳಲ್ಲಿ ಬಂಡಾಯ ಎದುರಾಗಿತ್ತು. ಶಿರೂರು ಶ್ರೀಗಳು ಪೂಜೆ ಸಲ್ಲಿಸಲೆಂದು ಕೃಷ್ಣಮಠದ ಸುಪರ್ದಿಗೆ ನೀಡಿದ್ದ ಪಟ್ಟದ ದೇವರನ್ನು ಮರಳಿಸಲು ಇತರ ಮಠಾಧೀಶರು ನಿರಾಕರಿಸಿದ್ದರು. ಶಿಷ್ಯ ಸ್ವೀಕಾರ ಪಡೆಯದೇ ಪಟ್ಟದ ದೇವರನ್ನು ಮರಳಿಸುವುದಿಲ್ಲ ಎಂದು ಇತರ ಯತಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಠಾಧೀಶರ ವಿರುದ್ಧ ಶಿರೂರು ಶ್ರೀಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಜುಲೈ 4ರಂದು ಕೇವಿಯಟ್ ಸಲ್ಲಿಸಿ ಪಟ್ಟದ ದೇವರನ್ನು ಮರಳಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಜುಲೈ 19ರಂದು ಸ್ವಾಮೀಜಿ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More