ವಿಡಿಯೋ ಸ್ಟೋರಿ | ಲೋಕಾಯುಕ್ತ ಕಚೇರಿಯಲ್ಲಿ ದಿನವೂ ಲಲಿತಾ ಸಹಸ್ರನಾಮ ಪಠಣ!

ರಾಜ್ಯದ ವಿಧಾನಸೌಧ ಒಂದು ರೀತಿಯಲ್ಲಿ ಧಾರ್ಮಿಕ ಅಚರಣೆಯ ಸ್ಥಳವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಇದರ ಬೆನ್ನಲ್ಲೇ, ಸರ್ಕಾರಿ ಕಚೇರಿಯಾಗಿರುವ ಕರ್ನಾಟಕ ಲೋಕಾಯುಕ್ತ ಕಟ್ಟಡದಲ್ಲಿ ನಿತ್ಯವೂ ಸಹಸ್ರಮನಾಮ ಪಠಣ ಸೇರಿದಂತೆ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ!

ಸರ್ಕಾರಿ ಕಚೇರಿಗಳು ಜಾತ್ಯತೀತ ಕೇಂದ್ರಗಳು. ಇಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ವಿವಿಧ ಧರ್ಮ, ಜಾತಿಗಳಿಗೆ ಸೇರಿದವರಾಗಿದ್ದರೂ ನಿರ್ದಿಷ್ಟ ಧರ್ಮ, ಜಾತಿಗೆ ಸೇರಿದ ಧಾರ್ಮಿಕ ಆಚರಣೆಗಳನ್ನು ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಧಾರ್ಮಿಕ ಆಚರಣೆಗಳನ್ನು ಆಚರಿಸುವ ಸಂಬಂಧ ಈವರೆಗೂ ಸುತ್ತೋಲೆಗಳನ್ನು ಹೊರಡಿಸಿಲ್ಲವಾದರೂ ಪೂಜೆ, ಪುನಸ್ಕಾರ, ಸಹಸ್ರನಾಮ ಪಠಣವನ್ನು ಸರ್ಕಾರಿ ಕಚೇರಿಗಳ ಆವರಣದಲ್ಲಿ ಕೈಗೊಳ್ಳುವಂತಿಲ್ಲ.

ಆದರೆ, ಸರ್ಕಾರಿ ಕಚೇರಿಯಾಗಿರುವ ಕರ್ನಾಟಕ ಲೋಕಾಯುಕ್ತ ಕಟ್ಟಡದಲ್ಲಿ ಲೋಕಾಯುಕ್ತದ ಮಹಿಳಾ ಸಿಬ್ಬಂದಿ ನಿರಂತರವಾಗಿ ಸಹಸ್ರನಾಮ ಪಠಣ ಸೇರಿದಂತೆ ಪೂಜಾ ಕಾರ್ಯಗಳನ್ನು ನಡೆಸುತ್ತಿದ್ದಾರೆ! ಇದೇ ಕಟ್ಟಡದ ನೆಲಮಹಡಿಯಲ್ಲಿನ ನಗದು ಶಾಖೆ ವಿಭಾಗದಲ್ಲಿ ದೇವರ ಫೋಟೋಗಳನ್ನಿಟ್ಟು ನಿತ್ಯವೂ ಪೂಜೆ, ಪುನಸ್ಕಾರ ನಡೆಯುತ್ತಿದೆ. ಮಹಿಳಾ ನೌಕರರು ನಡೆಸುತ್ತಿರುವ ಧಾರ್ಮಿಕ ಚಟುವಟಿಕೆಗಳಿಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

ಬಹುಮಹಡಿ ಕಟ್ಟಡಕ್ಕೆ ಹೊಂದಿಕೊಂಡಿರುವ ಲೋಕಾಯುಕ್ತ ಕಟ್ಟಡದ ೫ನೇ ಮಹಡಿಯ ಕಾರಿಡಾರ್‌ನಲ್ಲಿ ನಿತ್ಯವೂ ಮಹಿಳಾ ನೌಕರರು ಸಹಸ್ರನಾಮ ಪಠಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಊಟದ ವಿರಾಮದ ಹೊತ್ತಿನಲ್ಲಿ ಒಂದಷ್ಟು ಮಹಿಳಾ ನೌಕರರು ಸಹಸ್ರನಾಮ ಪಠಿಸುತ್ತಿರುವ ವಿಡಿಯೋ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಸಹಸ್ರನಾಮ ಪಠಣ ಸೇರಿದಂತೆ ನಿರ್ದಿಷ್ಟ ಧಾರ್ಮಿಕ ಆಚರಣೆ ನಡೆಸುವುದು ಸಂವಿಧಾನದಲ್ಲಿ ಉಲ್ಲೇಖಿಸಿರುವ ಜಾತ್ಯತೀತ ತತ್ವದ ಆಶಯಕ್ಕೆ ವಿರುದ್ಧವಾದದ್ದು. ಆದರೂ ಲೋಕಾಯುಕ್ತ ರಿಜಿಸ್ಟ್ರಾರ್‌ ಆಗಲೀ, ಲೋಕಾಯುಕ್ತರಾಗಲೀ ಈ ಬಗ್ಗೆ ಯಾವುದೇ ಸುತ್ತೋಲೆಯನ್ನಾಗಲೀ ಹೊರಡಿಸಿಲ್ಲ; ಧಾರ್ಮಿಕ ಆಚರಣೆ ನಡೆಸುತ್ತಿರುವ ಮಹಿಳಾ ನೌಕರರ ವಿರುದ್ಧ ಕ್ರಮ ಕೈಗೊಂಡಿಲ್ಲ.

“ಸಹಸ್ರನಾಮ ಪಠಣ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ. ಮಹಾತ್ಮ ಗಾಂಧಿ ಜಯಂತಿಯಂದು ಭಜನೆ ಹೊರತುಪಡಿಸಿದರೆ ಬೇರೆ ಇನ್ನಾವುದೇ ದಿನಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಕಚೇರಿ ಆವರಣದೊಳಗೆ ಅವಕಾಶಗಳಿಲ್ಲ,” ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ ನಂಜುಂಡಸ್ವಾಮಿ ಅವರು ‘ದಿ ಸ್ಟೇಟ್‌’ಗೆ ಪ್ರತಿಕ್ರಿಯಿಸಿದ್ದಾರೆ.

ಲೋಕಾಯುಕ್ತ ಕಟ್ಟಡ ಸೇರಿದಂತೆ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಆಚರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ನಿಖರ ಶಿಷ್ಟಾಚಾರಗಳಿಲ್ಲ.

ಇದನ್ನೂ ಓದಿ : ‘ಬಿ’ ರಿಪೋರ್ಟ್ ಹಾಕುವುದರಲ್ಲಿ ಲೋಕಾಯುಕ್ತ ಪೊಲೀಸರು ನಿಸ್ಸೀಮರು!

ಸಾರ್ವಜನಿಕ ಕಟ್ಟಡವಾಗಿರುವ ರಾಷ್ಟ್ರಪತಿ ಭವನದ ಜಾಗದಲ್ಲಿ ಧಾರ್ಮಿಕ ಆಚರಣೆಗಳನ್ನು ಅಥವಾ ಧಾರ್ಮಿಕತೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿಲ್ಲ. ಹೀಗಾಗಿ, ಯಾವುದೇ ತರಹದ ಧಾರ್ಮಿಕ ಆಚರಣೆಗಳನ್ನು ಲೋಕಾಯುಕ್ತ ಕಟ್ಟಡದಲ್ಲಿ ಆಚರಿಸಲು ಲೋಕಾಯುಕ್ತರಾದಿಯಾಗಿ ರಿಜಿಸ್ಟ್ರಾರ್ ಕೂಡ ಪ್ರೋತ್ಸಾಹಿಸಬಾರದು ಎಂಬ ಸಲಹೆ ಕೂಡ ಪ್ರಜ್ಞಾವಂತರಿಂದ ಕೇಳಿಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More