ದೊಂಬಿ ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಲು ಉನ್ನತ ಸಮಿತಿ ರಚಿಸಿದ ಕೇಂದ್ರ

ದೊಂಬಿ ಹತ್ಯೆ ವಿರುದ್ಧ ಕಠಿಣ ಕಾನೂನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ ನಾಲ್ಕು ಜನರ ಉನ್ನತ ಸಮಿತಿಯೊಂದನ್ನು ರಚಿಸಿದೆ. ಈ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ

ದೊಂಬಿ ಹಲ್ಲೆ ಮತ್ತು ಹತ್ಯೆ ವಿರುದ್ಧ ಕಠಿಣ ಕಾನೂನುಗಳನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ (ಜು.223) ನಾಲ್ಕು ಜನರ ಉನ್ನತ ಸಮಿತಿಯೊಂದನ್ನು ರಚಿಸಿದೆ. ಗೃಹ ಕಾರ್ಯದರ್ಶಿ ರಾಜೀವ್ ಗೌಬಾ‌ ಅಧ್ಯಕ್ಷತೆಯ ಸಮಿತಿಯು ತನ್ನ ಶಿಫಾರಸುಗಳನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಲಿದೆ ಎಂದು ಸಮಿತಿಯ ನೇತೃತ್ವ ವಹಿಸಿರುವ ಗೃಹ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ. ದೊಂಬಿ ಹತ್ಯೆ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಜು.20ರಂದು ರಾಜಸ್ಥಾನದ ಆಳ್ವಾರ್‌ ಜಿಲ್ಲೆಯಲ್ಲಿ ಗೋರಕ್ಷಕರಿಂದ ರಕ್ಬರ್‌ ಖಾನ್‌ ಎಂಬುವವರ ಮೇಲೆ ಹಲ್ಲೆ ನಡೆದು ಸಾವನ್ನಪ್ಪಿದರು. ಈ ವಿಷಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ, ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವಿನ ವಾಗ್ಯುದ್ದಕ್ಕೆ ನಾಂದಿ ಹಾಡಿದೆ.

“ಇದು ಮೋದಿಯವರ ಕ್ರೂರ ‘ನವ ಭಾರತ’ವಾಗಿದ್ದು, ಇಲ್ಲಿ ಮಾನವತೆಯ ಜಾಗವನ್ನು ದ್ವೇಷ ಆವರಿಸಿಕೊಂಡಿದೆ,” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದಲ್ಲಿ ನಡೆದ ದೊಂಬಿ ಹತ್ಯೆಯ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, “ಸಾಮೂಹಿಕ ಹಲ್ಲೆಗೆ ಒಳಗಾಗಿ ತೀವ್ರ ಗಾಯಗೊಂಡಿದ್ದ ಆಲ್ವಾರ್‌ ಜಿಲ್ಲೆಯ ರಕ್ಬರ್‌ ಖಾನ್‌ ಅವರನ್ನು 6 ಕಿಮೀ ದೂರವಿರುವ ಆಸ್ಪತ್ರೆಗೆ ಸಾಗಿಸಲು ಪೊಲೀಸರು 3 ಗಂಟೆ ತೆಗೆದುಕೊಂಡಿದ್ದೇಕೆ?” ಎಂದು ಪ್ರಶ್ನಿಸಿದ್ದಾರೆ. ಮುಂದುವರಿದ ಅವರು, “ವ್ಯಕ್ತಿ ಗಾಯಗೊಂಡು ವಾಹನದಲ್ಲಿ ಮಲಗಿದ್ದರೂ, ಪೊಲೀಸರು ಮಾರ್ಗ ಮಧ್ಯೆ ಚಹಾ ವಿಶ್ರಾಂತಿ ಪಡೆಯಲು ವಾಹನ ನಿಲ್ಲಿಸಿದ್ದಾರೆ. ಇದು ಮೋದಿಯವರ ಕ್ರೂರ 'ನವ ಭಾರತ'ವಾಗಿದ್ದು, ಇಲ್ಲಿ ಮಾನೀಯತೆಯ ಜಾಗವನ್ನು ದ್ವೇಷ ಆವರಿಸಿಕೊಂಡಿದೆ. ಇಲ್ಲಿ ಜನರನ್ನು ಹಲ್ಲೆ ಮಾಡಿ ಕೊಲ್ಲಲಾಗುತ್ತಿದೆ,” ಎಂದು ತಿಳಿಸಿದ್ದಾರೆ.

ರಾಜಸ್ಥಾನದ ಆಳ್ವಾರ್‌ ಜಿಲ್ಲೆಯಲ್ಲಿ ಜು.20 ರಂದು ರಕ್ಬಾರ್‌ ಖಾನ್‌ ಎಂಬುವವರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ್ದರು. ಬಯಲಿನಲ್ಲಿ ಗಾಯಗೊಂಡು ಬಿದ್ದಿದ್ದ ಸಂತಸ್ತ್ರನನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಪೊಲೀಸರು ತಡಮಾಡಿದ ಕಾರಣ ರಕ್ಬರ್‌ ಖಾನ್‌ ನಿಧನ ಹೊಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಘಟನೆ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದ್ದು, ರಾಜಕೀಯ ಪಕ್ಷಗಳ ನಡುವಿನ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸಂಸತ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌, “ಇದು ಮೋದಿ ವಿರುದ್ಧದ ರಾಜಕೀಯ ಸಂಚು,” ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

“ಪ್ರಧಾನಿ ಮೋದಿಯವರ ಜನಪ್ರಿಯತೆ ದಿನೇದಿನೇ ಹೆಚ್ಚಾಗುತ್ತಿದೆ. ಅವರ ಯೋಜನೆಗಳು ಜನಸಮೂಹದ ಮೇಲೆ ಪ್ರಭಾವ ಬೀರುತ್ತಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್‌ ಪಕ್ಷವು ರಾಜಕೀಯ ಸಂಚನ್ನು ರೂಪಿಸಿದೆ. ದೊಂಬಿ ಹತ್ಯೆಗಳ ತಡೆಯಲು ಸಲಹಾ ಸಮಿತಿಯೊಂದನ್ನು ರಚಿಸಿದ್ದೇವೆ. ಈ ಬಗ್ಗೆ ಪ್ರಧಾನಿಯವರು ಮಾತನಾಡಿದ್ದಾರೆ. ಪ್ರಧಾನಿ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ಇಂತಹ ಘಟನೆಗಳು ಅಧಿಕವಾಗುತ್ತವೆ. ಬಿಹಾರದ ಚುನಾವಣೆಗೂ ಮುನ್ನ ಪ್ರಶಸ್ತಿಗಳನ್ನು ಮರಳಿಸುವ ಕಾರ್ಯ ನಡೆಯಿತು. ಯುಪಿ ಚುನಾವಣೆಗಳು ಹತ್ತಿರದಲ್ಲಿದ್ದಾಗ ದೊಂಬಿ ಹತ್ಯೆಗಳು ನಡೆದವು. 2019ರ ವೇಳೆಗೆ ಅಸಹಿಷ್ಟುತೆ ವಿಚಾರ ಮತ್ತೆ ಮುಂದೆ ಬರುತ್ತದೆ. ಇದು ಮೋದಿಯವರ ಜನಪರ ಯೋಜನೆಗಳಿಗೆ ವಿರೋಧಿಗಳ ಪ್ರತಿಕ್ರಿಯೆ,” ಎಂದಿದ್ದಾರೆ ಮೇಘವಾಲ್‌.

ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭ ದೊಂಬಿ ಹತ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನೇ ಮತ್ತೆ ಪುನರಾವರ್ತಿಸಿದ ಮೇಘವಾಲ್‌, “ದೊಂಬಿ ಹತ್ಯೆಯಂತಹ ಘಟನೆಗಳು ನಡೆಯಬಾರದು. ಅದನ್ನು ನಾವು ಖಂಡಿಸುತ್ತೇವೆ. ದೊಂಬಿ ಹತ್ಯೆಯ ವಿಚಾರದಲ್ಲಿ ನಾವು ಇತಿಹಾಸವನ್ನೊಮ್ಮೆ ತಿರುಗಿ ನೋಡಬೇಕಿದೆ. 1984ರಲ್ಲಿ ಸಿಖ್ಖರ ಮೇಲೆ ನಡೆದದ್ದು ಅತಿ ದೊಡ್ಡ ದೊಂಬಿ ಹತ್ಯೆ,” ಎಂದು ಹೇಳಿದ್ದಾರೆ.

ಕೇಂದ್ರ ಮಂತ್ರಿಗಳ ಈ ಧೋರಣೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು, “ಭಾರತದಲ್ಲಿ ಮಾತೆಗಿಂತ ಗೋಮಾತೆ ಸುರಕ್ಷಿತವಾಗಿದ್ದಾಳೆ. ಇಂದು ದೇಶದಲ್ಲಿ ಅನುಸರಿಸಲಾಗುತ್ತಿರುವ ಹಿಂದುತ್ವವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾರಾದರೂ ಸರ್ಕಾರದ ಕಾರ್ಯವೈಖರಿ ಪ್ರಶ್ನಿಸಿದರೆ, ಅವರು ರಾಷ್ಟ್ರದ್ರೋಹಿಗಳಾಗುವುದಿಲ್ಲ. ಸರ್ಕಾರವನ್ನು ಟೀಕಿಸುವ ಸಂಸದರು ಜನರಿಂದ ಆಯ್ಕೆಯಾಗಿದ್ದಾರೆ. ಅವರು ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ (ಜು.23) ಸಂಸತ್‌ ಅಧಿವೇಶನಕ್ಕೆ ತೆರಳುವ ಮುನ್ನ ಕೇಂದ್ರ ಸಚಿವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, “ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದೊಂಬಿ ಹತ್ಯೆಗಳು ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ,” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಅಲ್ವರ್ ದೊಂಬಿ ಗಾಯಾಳು ಸಾವು, ಆಕ್ರೋಶಕ್ಕೆ ಗುರಿಯಾದ ಪೊಲೀಸರು

ಆಳ್ವಾರ್‌ ಪ್ರಕರಣ ಹಾಗೂ ಕೇಂದ್ರ ಸಚಿವರ ಹೇಳಿಕೆಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರು, “ಈ ದೇಶದ ಹಲವು ಜಾಗಗಳಲ್ಲಿ ಮುಸ್ಲಿಮನಾಗಿ ಹುಟ್ಟುವುದಕ್ಕಿಂತ, ಹಸುವಾಗಿ ಜನಿಸಿಸುವುದೇ ಸುರಕ್ಷಿತ,” ಎಂದು ಹೇಳಿದ್ದಾರೆ.

ಕ್ರೂರ 'ನವ ಭಾರತ' ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರದ ಕೆಲ ಸಚಿವರು ರಾಹುಲ್‌ ಗಾಂಧಿಯವರನ್ನು ಗುರಿಯಾಗಿಸಿ ವಾಕ್ಸಮರ ಸಾರಿದ್ದಾರೆ. ಕೇಂದ್ರ ಸಚಿವ ಪಿಯೂಷ್‌ ಗೋಯಲ್, ಸಚಿವೆ ಸ್ಮೃತಿ ಇರಾನಿ ಅವರು 1984ರಲ್ಲಿ ನಡೆದ ಸಿಖ್ಖ್ ಹತ್ಯಾಕಾಂಡವನ್ನು ರಾಹುಲ್‌ ಗಾಂಧಿಯವರು ನೆನಪಿಸಿಕೊಳ್ಳಲಿ. ಈ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡುವುದು ನಿಲ್ಲಿಸಲಿ ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More