ದೊಂಬಿ ಹತ್ಯೆಗಳ ಬಗ್ಗೆ ಎನ್‌ಸಿಆರ್‌ಬಿ ಬಳಿ ವಿವರಗಳೇ ಲಭ್ಯವಿಲ್ಲ!

ದೊಂಬಿ ಹತ್ಯೆ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರವೂ ಹಲ್ಲೆ ಮತ್ತು ಹತ್ಯೆಗಳು ದೇಶದಲ್ಲಿ ಮುಂದುವರಿದೇ ಇವೆ. ಆದರೆ, ರಾಷ್ಟ್ರೀಯ ಅಪರಾದ ದಾಖಲೆಗಳ ಮಂಡಳಿ ಬಳಿ ಈವರೆಗೆ ದೊಂಬಿ ನ್ಯಾಯದ ದಾಳಿಗಳಿಗೆ ಬಲಿಯಾದವರ ಅಂಕಿ-ಅಂಶಗಳೇ ಇಲ್ಲ! 

ದೊಂಬಿ ಹತ್ಯೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಅತೀ ಪ್ರಮುಖ ತೀರ್ಪು ನೀಡಿದ ದಿನದಂದೇ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಸ್ವಾಮಿ ಅಗ್ನಿವೇಶ್ ಮೇಲೆ ದೊಂಬಿ ಹಲ್ಲೆ ನಡೆದಿತ್ತು. ಎರಡು ದಿನಗಳ ನಂತರ ರಾಜಸ್ಥಾನದ ಅಲ್ವರ್‌ನಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ೮-೧೦ ಮಂದಿಯ ಗುಂಪು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ದೊಂಬಿ ಹತ್ಯೆ ಪ್ರಕರಣಗಳನ್ನು ದೇಶದಾದ್ಯಂತ ಜನರು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಅಪರಾದ ದಾಖಲೆಗಳ ಮಂಡಳಿ ಬಳಿ ದೊಂಬಿ ನ್ಯಾಯದ ದಾಳಿಗಳಿಗೆ ಬಲಿಯಾದವರ ಅಂಕಿ ಅಂಶಗಳೇ ಇಲ್ಲ! “ದೇಶದ ಹಲವು ಭಾಗಗಳಲ್ಲಿ ಹೆಚ್ಚಾಗುತ್ತಿರುವ ದೊಂಬಿ ನ್ಯಾಯದ ಹತ್ಯೆ ಪ್ರಕರಣಗಳ ಅಂಕಿ ಅಂಶಗಳನ್ನು ಸರ್ಕಾರ ಹೊಂದಿದೆಯೇ?” ಎಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಹಂಸರಾಜ್ ಆಹಿರ್ ಅವರನ್ನು ಪ್ರಶ್ನಿಸಿದಾಗ “ಇಲ್ಲ,” ಎನ್ನುವ ಉತ್ತರವನ್ನು ಅವರು ಕೊಟ್ಟಿದ್ದಾರೆ. “ದೇಶದಲ್ಲಿ ನಡೆಯುತ್ತಿರುವ ದೊಂಬಿ ಹತ್ಯೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾದ ದಾಖಲೆಗಳು ತಮ್ಮ ಬಳಿ ಇಲ್ಲ,” ಎಂದು ಸರ್ಕಾರ ಕೈ ಎತ್ತಿರುವುದು ನಿಜಕ್ಕೂ ವಿಪರ್ಯಾಸ.

ವಾಸ್ತವದಲ್ಲಿ ೨೦೧೮ ಮಾರ್ಚ್‌ನಲ್ಲಿ ಲೋಕಸಭೆಗೆ ಗೃಹಸಚಿವಾಲಯ ನೀಡಿದ ದಾಖಲೆಗಳ ಪ್ರಕಾರ ಗೃಹ ಸಚಿವಾಲಯದ ಬಳಿ ಹಲವು ರಾಜ್ಯಗಳಲ್ಲಿ ದಾಖಲಾಗಿರುವ ದೊಂಬಿ ನ್ಯಾಐದ ಹತ್ಯೆಗಳ ವಿವರಗಳಿದ್ದವು. ೨೦೧೪ ಮತ್ತು ೨೦೧೮ ಮಾರ್ಚ್ ೩ರ ನಡುವೆ ೪೦ ದೊಂಬಿ ನ್ಯಾಯದ ಹತ್ಯೆಗಳು ನಡೆದು ೪೫ ಮಂದಿ ಹತ್ಯೆಯಾಗಿದ್ದಾರೆ. ಕನಿಷ್ಠ ೨೧೭ ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಗೃಹಸಚಿವಾಲಯದ ದಾಖಲೆಗಳು ತಿಳಿಸುತ್ತವೆ. ಆದರೆ ಈ ಅಂಕಿ ಅಂಶಗಳಲ್ಲೂ ಹತ್ಯೆಗಳ ಉದ್ದೇಶವೇನು ಎನ್ನುವುದನ್ನು ವಿವರವಾಗಿ ತಿಳಿಸಿಲ್ಲ. ಗೋ ಹತ್ಯೆ, ಜಾತಿ ಧ್ವೇಷದ ಅಥವಾ ಧರ್ಮದ್ವೇಷದ ಹತ್ಯೆಯೇ, ಅಥವಾ ಮಕ್ಕಳ ಕಳ್ಳತನದ ಸುಳ್ಳು ಸುದ್ದಿಗಳ ಹತ್ಯೆಯೇ ಎನ್ನುವ ವಿವರಗಳಿಲ್ಲ. ದಾಳಿಯ ಸ್ಥಳ, ದಾಳಿ ಮಾಡಿರುವ ವ್ಯಕ್ತಿ ಮತ್ತು ಹತ್ಯೆಯಾದವರ ವಿವರಗಳೂ ಲಭ್ಯವಿಲ್ಲ.

ಬಿಹಾರ, ಛತ್ತೀಸಗಢ, ಗೋವಾ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಒಡಿಶಾ, ಸಿಕ್ಕಿಂ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಾಗರ್ ಹವೇಲಿ, ದೆಹಲಿ ಮತ್ತು ಪಾಂಡಿಚೇರಿಗಳಲ್ಲಿ ನಡೆದಿರಬಹುದಾದ ದೊಂಬಿ ನ್ಯಾಯದ ಹತ್ಯೆಗಳ ವಿವರಗಳು ಲೋಕಸಭೆಗೆ ಗೃಹಸಚಿವಾಲಯ ನೀಡಿದ್ದ ಮಾಹಿತಿಗಳಲ್ಲಿರಲಿಲ್ಲ ಎಂದು ‘ಫಸ್ಟ್‌ ಪೋಸ್ಟ್‌’ ವರದಿ ಮಾಡಿದೆ.

ಆದರೆ ಅದೇ ಸಂದರ್ಭದಲ್ಲಿ ಕೆಲವು ಮಾಧ್ಯಮ ಸಂಸ್ಥೆಗಳು ದೊಂಬಿ ನ್ಯಾಯದ ಹತ್ಯೆಗಳ ಕುರಿತಂತೆ ತಮ್ಮದೇ ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದವು. ‘ಇಂಡಿಯಾ ಸ್ಪೀಡ್’ ಸಂಸ್ಥೆಯ ಎರಡು ಡಾಟಾಬೇಸ್‌ಗಳ ಪ್ರಕಾರ ಮಕ್ಕಳ ಕಳ್ಳಸಾಗಣೆಯಾಗುತ್ತಿರುವ ಸುಳ್ಳು ಸುದ್ದಿಗಳು ಮತ್ತು ಗೋವಿಗೆ ಸಂಬಂಧಿಸಿದ ದ್ವೇಷದ ಹತ್ಯೆಗಳಿಂದಾಗಿ ಸುಮಾರು ೮೦ ದೊಂಬಿ ನ್ಯಾಯದ ಪ್ರಕರಣಗಳು ದಾಖಲಾಗಿವೆ ಮತ್ತು ಅವುಗಳಲ್ಲಿ ದೊಂಬಿ ಹತ್ಯೆಗಳಿಗೆ ೪೧ ಮಂದಿ ಬಲಿಯಾಗಿದ್ದಾರೆ. ಈ ಅಂಕಿ ಅಂಶದೊಳಗೆ ಜಾತಿ ಕಾರಣದಿಂದ ಮತ್ತು ನೈತಿಕ ಪೊಲೀಸಗಿರಿಯ ಹೆಸರಲ್ಲಿ ನಡೆದ ದೊಂಬಿ ಹತ್ಯೆಗಳು ಸೇರಿಲ್ಲ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ದೊಂಬಿ ನ್ಯಾಯ ವಿರುದ್ಧ ಸುಪ್ರೀಂ ತೀರ್ಪಿನ ದಿನ ನಡೆದ ಹಲ್ಲೆಗೆ ವಿರೋಧ

ಆದರೆ ೨೦೧೭ ಜುಲೈ ೯ರಂದು ಮಂಡಳಿ ಅಧಿಕಾರಿ ‘ಇಂಡಿಯನ್ ಎಕ್ಸ್ಪ್ರೆಸ್’ಗೆ ನೀಡಿದ ವಿವರಗಳ ಪ್ರಕಾರ ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ ಆಗಷ್ಟೇ ದೊಂಬಿ ಹತ್ಯೆಗಳ ಬಗ್ಗೆ ರಾಷ್ಟ್ರದಾದ್ಯಂತ ಅಂಕಿ ಅಂಶಗಳನ್ನು ಸಂಗ್ರಹಿಸಲು ನಿರ್ಧರಿಸಿತ್ತು. ವರ್ಷದ ನಂತರವೂ ಮಂಡಳಿ ತನ್ನ ವರದಿಯನ್ನು ಇನ್ನೂ ಸಲ್ಲಿಸಿಲ್ಲ. ಆದರೆ ಮಾಧ್ಯಮಗಳು ದ್ವೇಷ ಟ್ರಾಕರ್ಗಳ ಮೂಲಕ ಪ್ರತಿಯೊಂದು ಪ್ರಕರಣದ ವಿವರಗಳನ್ನು ಮುಂದಿಡುತ್ತಲೇ ಬಂದಿವೆ. ಇಂಡಿಯಾಸ್ಪೆಂಡ್ ವರದಿಗಳ ಪ್ರಕಾರ ೨೦೧೦ರಿಂದೀಚೆಗೆ ಈವರೆಗೆ ಗೋವಿನ ರಕ್ಷಣೆಯ ವಿಚಾರವಾಗಿ ಸಂಬಂಧಿಸಿ ೮೬ ದಾಳಿಗಳು ರಾಷ್ಟ್ರದಾದ್ಯಂತ ನಡೆದಿವೆ. ಈ ದಾಳಿಗಳಲ್ಲಿ ಶೇ. ೯೮ರಷ್ಟು ಪ್ರಕರಣಗಳು ೨೦೧೪ ಮೇ ನಂತರವೇ ನಡೆದಿದೆ. ಅಂದರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ನಂತರವೇ ಗೋಹತ್ಯೆಗೆ ಸಂಬಂಧಿಸಿ ದೊಂಬಿ ನ್ಯಾಯಕ್ಕೆ ಇಳಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ದಾಳಿಗಳಲ್ಲಿ ೩೩ ಮಂದಿ ಹತ್ಯೆಯಾಗಿದ್ದಾರೆ. ಹತ್ಯೆಯಾದವರಲ್ಲಿ ೨೯ ಮಂದಿ ಅಂದರೆ ಶೇ. ೮೮ರಷ್ಟು ಮಂದಿ ಮುಸ್ಲಿಮರು ಎನ್ನುವ ಸತ್ಯ ಗೋವು ದಾಳಿ ಪ್ರಕರಣದ ದೊಂಬಿ ನ್ಯಾಯದ ತೀರ್ಪುಗಾರರು ಯಾರನ್ನು ಗುರಿ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವೇ ಉಳಿಯುವುದಿಲ್ಲ. ಅಲ್ಲದೆ ಈ ಗೋಹತ್ಯೆ ತಡೆಯುವ ನೆಪದಲ್ಲಿ ನಡೆದಿರುವ ದಾಳಿ ಪ್ರಕರಣಗಳು ಶೇ. ೫೬ರಷ್ಟು ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿಯೇ ನಡೆದಿವೆ.

ಹಿರಿಯ ವಕೀಲರಾಗಿರುವ ಇಂದಿರಾ ಜೈಸಿಂಗ್ ಅವರು ಸುಪ್ರೀಂಕೋರ್ಟ್ಗೆ ಗೋಹತ್ಯೆ ದಾಳಿಗಳ ಪ್ರಕರಣಕ್ಕೆ ಸಂಬಂಧಿಸಿ ನೀಡಿರುವ ಅರ್ಜಿಯಲ್ಲಿ, “ಆರಂಭದಲ್ಲಿ ಗೋವುಗಳ ರಕ್ಷಣೆಗೆ ಕಾವಲುಪಡೆಗಳೆಂಬಂತೆ ದೊಂಬಿ ಹತ್ಯೆಗಳು ನಡೆದವು. ಆದರೆ ಇದೇ ದೊಂಬಿ ನ್ಯಾಯಗಳು ಈಗ ಇನ್ನಷ್ಟು ಹಿಂಸಾತ್ಮಕವಾಗಿ ಬದಲಾಗಿವೆ. ದೊಡ್ಡ ಕಾರಣಗಳ ಬದಲಾಗಿ ಕ್ಷುಲ್ಲಕ ಕಾರಣಗಳಲ್ಲೂ ದೊಂಬಿ ನ್ಯಾಯದ ಹಲ್ಲೆ/ಹತ್ಯೆಗಳು ನಡೆಯುತ್ತಿವೆ,” ಎಂದು ಹೇಳಿದ್ದರು.

೨೦೧೮ರಲ್ಲಿ ನಡೆದ ೬೬ ದೊಂಬಿ ನ್ಯಾಯದ ಹಲ್ಲೆ ಪ್ರಕರಣಗಳಲ್ಲಿ ಈಗಾಗಲೇ ೨೭ ಮಂದಿ ಹತ್ಯೆಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರ ಕುರಿತಂತೆ ಪ್ರಚಾರ ಪಡೆಯುತ್ತಿರುವ ಸುಳ್ಳು ಸುದ್ದಿಗಳು ಈ ಹತ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ೨೦೧೭ಕ್ಕೆ ಹೋಲಿಸಿದಲ್ಲಿ ಈ ದೊಂಬಿ ಹತ್ಯೆ ಸಂಖ್ಯೆ ಎಂಟು ಪಟ್ಟು ಹೆಚ್ಚಿನದ್ದಾಗಿದೆ. ೨೦೧೭ರಲ್ಲಿ ಎಂಟು ದೊಂಬಿ ಹಲ್ಲೆ ಪ್ರಕರಣದಲ್ಲಿ ೯ ಮಂದಿ ಹತ್ಯೆಯಾಗಿದ್ದರು. ಆದರೆ ಒಟ್ಟಾರೆಯಾಗಿ ೨೦೧೭ ಜನವರಿಯಿಂದ ಜುಲೈ ೨೦೧೮ವರೆಗೆ ೭೪ ದೊಂಬಿ ಹಲ್ಲೆ ಪ್ರಕರಣಗಳಲ್ಲಿ ೩೬ ಮಂದಿ ಬಲಿಯಾಗಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More