ನಿಷ್ಕ್ರಿಯ ಸಾಲ ತ್ವರಿತ ನಿರ್ವಹಣೆಗೆ ಅಂತರ್ ಬ್ಯಾಂಕರುಗಳ ಒಪ್ಪಂದಕ್ಕೆ ಸಹಿ

ಒತ್ತಡದಲ್ಲಿರುವ 50 ಕೋಟಿ ರುಪಾಯಿ ಮೀರಿದ ಸಾಲಗಳ ತ್ವರಿತ ನಿರ್ವಹಣೆಗಾಗಿ ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಅಂತರ್ ಬ್ಯಾಂಕರುಗಳ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಸಶಕ್ತ್ ಯೋಜನೆಯ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ

50 ಕೋಟಿ ರುಪಾಯಿ ಮೀರಿದ ಒತ್ತಡದ ಸಾಲಗಳ ನಿರ್ವಹಣೆಗಾಗಿ ಸೋಮವಾರ (ಜು.23) ಅಂತರ್ ಬ್ಯಾಂಕುಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿಷ್ಕ್ರಿಯ ಸಾಲ ನಿರ್ವಹಣೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 22 ಸಾರ್ವಜನಿಕ ವಲಯದ ಬ್ಯಾಂಕುಗಳು, 19 ಖಾಸಗಿ ವಲಯದ ಬ್ಯಾಂಕುಗಳು, 32 ವಿದೇಶಿ ಬ್ಯಾಂಕುಗಳು ಸಹಿ ಹಾಕಿವೆ. ಎಲ್ಐಸಿ, ಹುಡ್ಕೊ, ಆರ್‌ಇಸಿ ಮತ್ತು ಪಿಎಫ್‌ಸಿ ಸೇರಿದಂತೆ 12 ಬೃಹತ್ ಹಣಕಾಸು ಸಂಸ್ಥೆಗಳು ಈ ಒಪ್ಪಂದದಲ್ಲಿ ಭಾಗಿಯಾಗಿವೆ. ಇದುವರೆಗೆ ಸಾಲ ವಸೂಲಾತಿ ಸಮನ್ವಯತೆಗಾಗಿ ಇದ್ದ ಜಂಟಿ ಸಾಲಗಾರರ ವೇದಿಕೆ (ಜೆಎಲ್ಎಫ್) ಬದಲಿಗೆ ಅಂತರ್ ಬ್ಯಾಂಕುಗಳ ಸಮಿತಿಯು ಕಾರ್ಯನಿರ್ವಹಿಸಲಿದೆ.

ಬೃಹತ್ ಪ್ರಮಾಣದ ಸಾಲವನ್ನು ಒಂದೇ ಬ್ಯಾಂಕು ನೀಡುವುದಿಲ್ಲ. ವಿವಿಧ ಬ್ಯಾಂಕುಗಳು ಸೇರಿ ಕನ್ಸಾರ್ಟಿಯಂ (ಸಮೂಹ) ರಚಿಸಿಕೊಂಡು ಸಾಲ ನೀಡುತ್ತವೆ. ಈ ಪೈಕಿ, ಒಂದು ಬ್ಯಾಂಕು ಲೀಡ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಲೀಡ್ ಬ್ಯಾಂಕ್ ಸಾಲದ ಪಾಲು ಹೆಚ್ಚಿರುತ್ತದೆ. ಸಾಲ ಸುಸ್ತಿಯಾದಾಗ ಎಲ್ಲ ಬ್ಯಾಂಕುಗಳಿಗೂ ಹಿನ್ನಡೆಯಾಗುತ್ತದೆ.

ಸಾಲ ವಸೂಲಾತಿಗೆ ಬ್ಯಾಂಕುಗಳು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಜಂಟಿ ಸಾಲಗಾರರ ವೇದಿಕೆ ರಚಿಸಲಾಗಿತ್ತು. ಆದರೆ, ಫೆಬ್ರವರಿಯಲ್ಲಿ ಆರ್‌ಬಿಐ ಸುತ್ತೋಲೆ ಮೂಲಕ ಒತ್ತಡದ ಸಾಲ ನಿರ್ಹಹಣೆಗೆ ಕಾಲಮಿತಿ ವಿಧಿಸಿತ್ತು. 180 ದಿನಗಳಲ್ಲಿ ಒತ್ತಡದ ಸಾಲನಿರ್ವಹಣೆ ಮಾಡಬೇಕು, ಇಲ್ಲವೇ ದಿವಾಳಿ ಸಂಹಿತೆ ವ್ಯಾಪ್ತಿಗೆ ತರಬೇಕು ಎಂದು ಹೇಳಿತ್ತು.

ಈಗ ಅಂತರ್ ಬ್ಯಾಂಕುಗಳ ಒಪ್ಪಂದದ ಮೂಲಕ ಸಾಲ ವಸೂಲಾತಿಗೆ ಸಂಘಟಿತವಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ನೂತನ ಒಪ್ಪಂದದ ಪ್ರಕಾರ, ಲೀಡ್ ಬ್ಯಾಂಕ್ ಒತ್ತಡ ಸಾಲ ನಿರ್ವಹಣೆಯ ಕಾರ್ಯಯೋಜನೆ ಸಿದ್ದಪಡಿಸುತ್ತದೆ. ಉಳಿದ ಬ್ಯಾಂಕುಗಳು ಅದಕ್ಕೆ ಒಪ್ಪಿಗೆ ನೀಡಬೇಕು. ಒಂದು ವೇಳೆ, ಯಾವುದೇ ಇತರ ಬ್ಯಾಂಕು ತಗಾದೆ ತೆಗೆದರೆ ಆ ಬ್ಯಾಂಕ್ ತನ್ನ ಸಾಲವನ್ನು ಶೇ.15ರಷ್ಟು ರಿಯಾಯ್ತಿ ದರದಲ್ಲಿ ಲೀಡ್ ಬ್ಯಾಂಕ್ ಗೆ ಮಾರಾಟ ಮಾಡಬೇಕು.

ಆದರೆ, ಯಾವುದೇ ಆಸ್ತಿ ನಿರ್ವಹಣಾ ಕಂಪನಿಗೆ (ಎಎಂಸಿ) ಮಾರಾಟ ಮಾಡುವಂತಿಲ್ಲ. ನೂತನ ಒಪ್ಪಂದದಂತೆ ಲೀಡ್ ಬ್ಯಾಂಕ್ ಶೇ.66ರಷ್ಟು ಸಾಲ ನೀಡಿದ ಬ್ಯಾಂಕುಗಳ ಸಮ್ಮತಿಯೊಂದಿಗೆ ಸಾಲ ನಿರ್ವಹಣೆ ಕಾರ್ಯಯೋಜನೆ ಸಿದ್ಧಪಡಿಸಬಹುದು. ಇದರಿಂದಾಗಿ, ತ್ವರಿತವಾಗಿ ಸಾಲ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.

ನೂತನ ಒಪ್ಪಂದ ಮಾರ್ಗಸೂಚಿ ಪ್ರಕಾರ, ಒಂದು ಬಾರಿ ಲೀಡ್ ಬ್ಯಾಂಕ್ ಶೇ.66ರಷ್ಟು ಸಾಲ ನೀಡಿದವರ ಅನುಮತಿ ಪಡೆದು ಸಾಲ ನಿರ್ವಹಣೆಗೆ ಮುಂದಾದರೆ, ಸಾಲ ನೀಡಿರುವ ಎಲ್ಲರೂ ಈ ಸಾಲ ನಿರ್ವಹಣೆಗೆ ಬಾಧ್ಯಸ್ಥರಾಗಿರುತ್ತಾರೆ. ಆದರೆ, ಪ್ರತಿಯೊಂದು ಒತ್ತಡ ಸಾಲ ನಿರ್ವಹಣೆ ಕಾರ್ಯಸೂಚಿಗಳು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ನಿಯಮಗಳು ಮತ್ತು ಹಾಲಿ ಇರುವ ಕಾನೂನುಗಳ ಅನ್ವಯವೇ ಇರಬೇಕು.

ಲೀಡ್ ಬ್ಯಾಂಕ್ ಒತ್ತಡ ಸಾಲ ನಿರ್ವಹಣೆ ಕಾರ್ಯಯೋಜನೆಯನ್ನು ಶೇ.66ರಷ್ಟು ಸಾಲ ನೀಡಿದ ಬ್ಯಾಂಕರುಗಳ ಒಪ್ಪಿಗೆಯೊಂದಿಗೆ ನಿಗಾ ಸಮಿತಿ ಅನುಮೋದನೆ ಪಡೆದು ಎಲ್ಲ ಬ್ಯಾಂಕರುಗಳ ಮುಂದೆ ಮಂಡಿಸಬೇಕು. ನಂತರ ಲೀಡ್ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಗೊಳಿಸಿರುವ 180 ದಿನಗಳೊಳಗೆ ಒತ್ತಡ ಸಾಲ ನಿರ್ವಹಣೆ ಕೈಗೊಳ್ಳಬೇಕು.

ಇದನ್ನೂ ಓದಿ : ನಿಷ್ಕ್ರಿಯ ಸಾಲ ತ್ವರಿತ ಇತ್ಯರ್ಥಕ್ಕೆ ಮಾರ್ಗಸೂಚಿ ರೂಪಿಸಿದ ಆರ್‌ಬಿಐ

ಇದುವರೆಗೆ ನಿಷ್ಕ್ರಿಯ ಸಾಲಗಳ ಆಸ್ತಿ ಮೌಲ್ಯ ನಿರ್ಧರಿಸುವಾಗ ಕಡಿಮೆ ಸಾಲ ನೀಡಿದ ಬ್ಯಾಂಕುಗಳು ತಕರಾರು ತೆಗೆಯುತ್ತಿದ್ದರಿಂದ ವಿಲೇವಾರಿ ವಿಳಂಬವಾಗುತ್ತಿತ್ತು. ಒಪ್ಪಂದದ ನಂತರ ಲೀಡ್ ಬ್ಯಾಂಕ್ ನಿರ್ಧರಿಸಿದ ಮೌಲ್ಯವನ್ನುಇತರ ಬ್ಯಾಂಕುಗಳು ಒಪ್ಪುವುದರಿಂದ ತ್ವರಿತ ನಿರ್ವಹಣೆ ಸಾಧ್ಯ ಆಗಲಿದೆ.

2017ರ ಡಿಸೆಂಬರ್ ಅಂತ್ಯದಲ್ಲಿ ಭಾರತದ ವಿವಿಧ ಬ್ಯಾಂಕುಗಳ ನಿಷ್ಕ್ರಿಯ ಸಾಲವು 9 ಲಕ್ಷ ಕೋಟಿ ರುಪಾಯಿ ಮೀರಿತ್ತು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಈ ಪ್ರಮಾಣ 10 ಲಕ್ಷ ಕೋಟಿ ದಾಟುವ ಅಂದಾಜು ಇದೆ. ಬ್ಯಾಂಕಿಂಗ್ ವಲಯ ಎದುರಿಸುತ್ತಿರುವ ಬೃಹತ್ ಪ್ರಮಾಣದ ನಿಷ್ಕ್ರಿಯ ಸಾಲ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಈ ಒಪ್ಪಂದ ಐತಿಹಾಸಿಕವಾಗಿದೆ. ಸಂಪೂರ್ಣವಲ್ಲದಿದ್ದರೂ ಬಹುತೇಕ ಒತ್ತಡದ ಸಾಲ ವಸೂಲಾತಿಗೆ ಈ ಒಪ್ಪಂದವು ನೆರವಾಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More