ಟ್ವಿಟರ್ ಸ್ಟೇಟ್ | ಅಲ್ವರ್ ದೊಂಬಿ ಗಾಯಾಳು ಸಾವು, ಆಕ್ರೋಶಕ್ಕೆ ಗುರಿಯಾದ ಪೊಲೀಸರು

ರಕ್ಬರ್ ಖಾನ್‌ರನ್ನು ಆಸ್ಪತ್ರೆಗೆ ಸಾಗಿಸಲು ರಾಜಸ್ಥಾನದ ಪೊಲೀಸರು ತಡ ಮಾಡಿದ ಕಾರಣ ಆತ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಈಗ ಟ್ವಿಟರ್ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ, ಬಿಜೆಪಿ ಮುಖಂಡರು ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ಟ್ವಿಟರ್‌ನಲ್ಲಿ ಜಟಾಪಟಿಯಾಗಿದೆ

ರಾಜಸ್ಥಾನದ ಅಲ್ವರ್‌ನಲ್ಲಿ ಇತ್ತೀಚೆಗೆ ಗೋವು ಸಾಗಾಟದ ಸಂಶಯದ ದೊಂಬಿ ಹಲ್ಲೆಯಲ್ಲಿ ಗಾಯಗೊಂಡಿದ್ದ ರಕ್ಬರ್ ಖಾನ್‌ರನ್ನು ಆಸ್ಪತ್ರೆಗೆ ಸಾಗಿಸಲು ರಾಜಸ್ಥಾನದ ಪೊಲೀಸರು ತಡ ಮಾಡಿದ್ದಾರೆ ಎನ್ನುವ ಸುದ್ದಿ ಈಗ ಟ್ವಿಟರ್ ಚರ್ಚೆಗೆ ಕಾರಣವಾಗಿದೆ. ಅಲ್ವರ್ ದೊಂಬಿ ಹತ್ಯೆಗೆ ಸಂಬಂಧಿಸಿ ಎನ್‌ಡಿಟಿವಿ ಲೇಖನದಲ್ಲಿ, “ಪೊಲೀಸರು ದೊಂಬಿ ಹತ್ಯೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡುವುದಕ್ಕೆ ಮೊದಲು ಗೋವುಗಳನ್ನು ಸಾಗಾಟ ಮಾಡಲು ವಾಹನ ವ್ಯವಸ್ಥೆ ಮಾಡಿದ್ದರು. ಅಲ್ಲದೆ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಚಹಾ ಸೇವನೆಗಾಗಿ ವಾಹನವನ್ನು ನಿಲ್ಲಿಸಿದ್ದರು. ತಡವಾಗಿ ಆಸ್ಪತ್ರೆಗೆ ತಲುಪಿದ ರಕ್ಬರ್ ಖಾನ್ ಬದುಕುಳಿಯಲಿಲ್ಲ,” ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, “ರಕ್ಬರ್ ಖಾನ್ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಸಾವನ್ನಪ್ಪಿದ್ದಾನೆ. ದೊಂಬಿ ಹತ್ಯೆಗೆ ಸಂಬಂಧಿಸಿ ಅಲ್ವರ್‌ನ ಲಾಲವಂಡಿ ಗ್ರಾಮದಿಂದ ಮೂವರನ್ನು ಬಂಧಿಸಲಾಗಿದೆ. ‘ಎನ್‌ಡಿಟಿವಿ’ ವರದಿಯ ನಂತರ ತನಿಖೆಯನ್ನು ಸ್ಥಳೀಯ ಠಾಣೆಯಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ.” “ಪೊಲೀಸರು ರಕ್ಬರ್ ಖಾನ್‌ರ ವೈದ್ಯಕೀಯ ನೆರವಿಗೆ ತಡವಾಗಿರುವ ವಿಚಾರದ ಬಗ್ಗೆಯೂ ವಿಚಾರಣೆ ನಡೆಸಲಿದ್ದಾರೆ,” ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ಪ್ರಿಯದರ್ಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್‌ನಲ್ಲಿ, “ಬಲಪಂಥೀಯ ಸಂಘಟನೆಯ ವ್ಯಕ್ತಿ ನವಲ್ ಕಿಶೋರ್ ಅವರಿಂದ ಪೊಲೀಸರಿಗೆ ರಾತ್ರಿ ೧೨.೪೧ಕ್ಕೆ ದೊಂಬಿ ಹಲ್ಲೆಗೆ ಸಂಬಂಧಿಸಿದ ಕರೆ ಬಂದಿದೆ. ಪೊಲೀಸರು ಮಧ್ಯರಾತ್ರಿ ೧.೧೫-೧.೨೦ರ ನಡುವೆ ಸ್ಥಳಕ್ಕೆ ತಲುಪಿದ್ದರು,” ಎಂಬ ವಿವರವಿದೆ ಎಂದು ‘ಎನ್‌ಡಿಟಿವಿ’ ವರದಿ ಹೇಳಿದೆ.

ನವಲ್ ಕಿಶೋರ್ ಹೇಳಿರುವ ಪ್ರಕಾರ, ಪೊಲೀಸರು ಮೊದಲಿಗೆ ಕಿಶೋರ್ ಮನೆಗೆ ಹೋಗಿ ಗೋವುಗಳನ್ನು ಸ್ಥಳೀಯ ಗೋಶಾಲೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ. ವಾಹನದೊಳಗೇ ವ್ಯಕ್ತಿಯೊಬ್ಬನನ್ನು ಹೊಡೆಯುವುದನ್ನು ನೋಡಿರುವುದಾಗಿ ಕಿಶೋರ್ ಸಂಬಂಧಿ ಮಾಯಾ ಎನ್ನುವವರು ವರದಿಗಾರನಿಗೆ ತಿಳಿಸಿದ್ದಾರೆ. ಆಗ ರಕ್ಬರ್ ಖಾನ್ ಜೀವಂತವಾಗಿದ್ದರು ಎನ್ನುವುದನ್ನೂ ಆಕೆ ಖಚಿತಪಡಿಸಿದ್ದಾರೆ. ಗೋವುಗಳ ಸಾಗಾಟಕ್ಕೆ ವಾಹನ ವ್ಯವಸ್ಥೆಯಾದ ಮೇಲೆ ಪೊಲೀಸರು ಚಹಾ-ತಿಂಡಿ ಸೇವನೆಗೆ ಹೋದರು. ಗಾಯಗೊಂಡ ವ್ಯಕ್ತಿ ತನ್ನ ನೋವನ್ನು ಹೇಳಿಕೊಳ್ಳುತ್ತಿದ್ದರೂ ಕೇಳಿಸಿಕೊಳ್ಳದ ಪೊಲೀಸರು, ಸಮೀಪದ ಅಂಗಡಿಯಲ್ಲಿ ಚಹಾ ಸೇವನೆಯಲ್ಲಿ ನಿರತರಾಗಿದ್ದರು. ಚಹಾ ಕುಡಿದ ನಂತರ ಗಾಯಗೊಂಡ ವ್ಯಕ್ತಿಯ ದೇಹವನ್ನು ಸ್ವಚ್ಛ ಮಾಡಲಾಗಿದೆ. ನಂತರ ಪೊಲೀಸರು ಠಾಣೆಗೆ ಅವರನ್ನು ಕರೆದೊಯ್ದರು. ಕಿಶೋರ್ ಗೋವುಗಳನ್ನು ಗೋಶಾಲೆಗೆ ಕರೆದೊಯ್ದಿದ್ದಾರೆ. ಎನ್‌ಡಿಟಿವಿಗೆ ಈ ವಿವರಗಳನ್ನು ಸ್ವತಃ ನವಲ್ ಕಿಶೋರ್ ಅವರೇ ನೀಡಿದ್ದಾರೆ.

ಸುಮಾರು ಬೆಳಗಿನ ಜಾವ ೪ ಗಂಟೆಗೆ ಗಾಯಾಳುವನ್ನು ಪೊಲೀಸರು ಒಂದು ಕಿಮೀ ದೂರದಲ್ಲಿರುವ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪಿದಾಗ ರಕ್ಬರ್ ಖಾನ್ ಅದಾಗಲೇ ಪ್ರಾಣ ಕಳೆದುಕೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ. ರಕ್ಬರ್ ಖಾನ್ ಮತ್ತು ಆತನ ಸ್ನೇಹಿತ ಸಮೀಪದ ಗ್ರಾಮದಲ್ಲಿ ಖರೀದಿಸಿದ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾಗ ಹಲ್ಲೆಗೆ ಒಳಗಾಗಿದ್ದರು. ಲಾಲವಂಡಿ ಗ್ರಾಮದ ನಿವಾಸಿಗಳು ಇವರಿಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೇ ರೀತಿಯಲ್ಲಿ ವರ್ಷದ ಹಿಂದೆ ಪೆಹ್ಲು ಖಾನ್ ಸಾವನ್ನಪ್ಪಿರುವ ವಿಚಾರವೂ ಟ್ವಿಟರ್ ಚರ್ಚೆಗೆ ಕಾರಣವಾಗಿದೆ. ರಕ್ಬರ್ ಖಾನ್ ಹತ್ಯೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರವನ್ನು ಟೀಕಿಸಿರುವುದು ಆಡಳಿತ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾದ-ವಿವಾದಗಳಿಗೆ ಕಾರಣವಾಗಿದೆ. “ದೊಂಬಿ ಹಲ್ಲೆಗೆ ಒಳಗಾಗಿದ್ದ ರಕ್ಬರ್ ಖಾನ್ ಅವರನ್ನು ಆರು ಕಿಮೀ ದೂರದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲು ಮೂರು ಗಂಟೆ ತಡ ಮಾಡುವ ಮೂಲಕ ಅಲ್ವರ್‌ನ ಪೊಲೀಸರು ಆತನ ಸಾವಿಗೆ ಕಾರಣರಾಗಿದ್ದಾರೆ. ಹೇಗೆ? ಅವರು ದಾರಿ ಮಧ್ಯೆ ಚಹಾ ಸೇವನೆಗೆಂದು ನಿಂತಿದ್ದರು. ಮೋದಿಯವರ ಕ್ರೂರ ‘ನವಭಾರತದ’ ಕಲ್ಪನೆಯಲ್ಲಿ ಮಾನವೀಯತೆಯ ಜಾಗದಲ್ಲಿ ದ್ವೇಷವೇ ತುಂಬಿಕೊಂಡಿದೆ. ಜನರನ್ನು ಹೊಡೆದು ಬಡಿದು ಸಾಯಲು ಬಿಡಲಾಗುತ್ತದೆ,” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ದೊಂಬಿ ಹತ್ಯೆ ಅರಾಜಕತೆ ಸೂಚಿಸುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಸಿದ ಸುಪ್ರೀಂ ಕೋರ್ಟ್

ಈ ಟ್ವೀಟ್‌ಗೆ ಉತ್ತರವಾಗಿ ಕೇಂದ್ರ ಸಚಿವ ಪಿಯೂಶ್ ಗೋಯಲ್, “ಪ್ರತಿ ಬಾರಿ ಅಪರಾಧ ಆದ ಕೂಡಲೇ ಖುಷಿಪಡುವುದನ್ನು ಬಿಡಿ ರಾಹುಲ್ ಗಾಂಧಿ. ರಾಜ್ಯ ಸರ್ಕಾರ ಕಠಿಣ ಮತ್ತು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಚುನಾವಣಾ ಲಾಭಕ್ಕಾಗಿ ನೀವು ಸಾಧ್ಯವಾದ ಎಲ್ಲ ರೀತಿಯಲ್ಲಿಯೂ ಸಮಾಜವನ್ನು ಒಡೆಯುತ್ತಿದ್ದೀರಿ. ನಂತರ ಮೊಸಳೆ ಕಣ್ಣೀರು ಸುರಿಸುತ್ತೀರಿ. ಸಾಕು ಮಾಡಿ, ನೀವು ದ್ವೇಷದ ವ್ಯಾಪಾರಿ,” ಎಂದು ಹರಿಹಾಯ್ದಿದ್ದಾರೆ. ಪ್ರತಿ ಬಾರಿ ಕಾಂಗ್ರೆಸಿಗರನ್ನು ಟೀಕಿಸಲು ಸಿಖ್‌ ಹತ್ಯಾಕಾಂಡವನ್ನು ನೆನಪಿಸಿಕೊಳ್ಳುವ ಬಿಜೆಪಿ, ಈ ಬಾರಿಯೂ ಅದೇ ಮಾಡಿದೆ. ಸ್ಮೃತಿ ಇರಾನಿ ಟ್ವೀಟ್ ಮಾಡಿ, ರಾಹುಲ್ ಗಾಂಧಿ ಅಲ್ವರ್ ಪ್ರಕರಣವನ್ನು ಟೀಕಿಸಿರುವುದನ್ನು 'ವಲ್ಚರ್ ಪಾಲಿಟಿಕ್ಸ್‌ (ಹದ್ದು ರಾಜಕೀಯ)‘ ಎಂದು ವಿಮರ್ಶಿಸಿದ್ದಾರೆ.

ರಾಜಸ್ಥಾನ ಪೊಲೀಸ್ ಟ್ವೀಟ್ ಮಾಡಿ, ಪ್ರಕರಣದ ವಿಚಾರಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿರುವುದಾಗಿ ಹೇಳಿ, ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಎನ್‌ಡಿಟಿವಿಯಲ್ಲಿ ಸಂಪೂರ್ಣ ಪ್ರಕರಣದ ವಿವರಗಳನ್ನು ಓದಿದ ಅನೇಕರು, ಪೊಲೀಸರು ರಕ್ಬರ್ ಖಾನ್‌ರಿಗೆ ವೈದ್ಯಕೀಯ ನೆರವು ನೀಡಲು ತಡ ಮಾಡಿರುವ ಬಗ್ಗೆ ಟೀಕಿಸಿದ್ದಾರೆ. ಇತಿಹಾಸತಜ್ಞ ಸುಧೀಂದ್ರ ಕುಲಕರ್ಣಿ ಟ್ವೀಟ್ ಮಾಡಿ, “ಅಲ್ವರ್‌ನ ದೊಂಬಿ ಹಲ್ಲೆ ಅಥವಾ ಇತರ ದ್ವೇಷದ ದೊಂಬಿ ಹಲ್ಲೆಗಳ ವಿಚಾರದಲ್ಲಿ ಬಿಜೆಪಿ ಸರ್ಕಾರ ನಿರಾಕರಣೆಯ ನಿಲುವನ್ನು ತೊರೆಯುವ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ಸುನೀಲ್ ಜೈನ್ ಟ್ವೀಟ್ ಮಾಡಿ, “ಮುಖ್ಯಮಂತ್ರಿ ವಸುಂಧರಾ ರಾಜೆ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ, ಅಲ್ವರ್ ಪೊಲೀಸರು ರಕ್ಬರ್ ಖಾನ್ ಸಾವನ್ನು ಬಯಸಿದ್ದದ್ದು ಖಚಿತವಾಗಿದೆ. ಗೋವುಗಳು ಸತ್ತ ಉದಾಹರಣೆಗಳೇ ಇಲ್ಲ. ದೊಂಬಿ ಹತ್ಯೆಯ ವಿಚಾರವಾಗಿ ಗಂಭೀರ ಕ್ರಮದ ಭರವಸೆ ನೀಡಬೇಕೆಂದರೆ, ರಕ್ಬರ್ ಖಾನ್ ಸಾವಿಗೆ ಕಾರಣರಾದ ಪೊಲೀಸರನ್ನು ಜೈಲಿಗಟ್ಟಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಲ್ವರ್ ಪ್ರಕರಣದ ಚರ್ಚೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರವೂ ಎಚ್ಚೆತ್ತಿದೆ. ಕೇಂದ್ರ ಗೃಹ ಸಚಿವಾಲಯವು ವಸುಂಧರಾ ರಾಜೆ ಸರ್ಕಾರದ ಬಳಿ ಅಲ್ವರ್ ದೊಂಬಿ ಹತ್ಯೆಗೆ ಸಂಬಂಧಿಸಿದ ವರದಿ ನೀಡುವಂತೆ ತಿಳಿಸಿದೆ. ಈ ವಿಚಾರವಾಗಿ ಅಭಿಪ್ರಾಯ ಪ್ರಕಟಿಸಿರುವ ಸುಪ್ರೀಂ ಕೋರ್ಟ್‌ನ ವಕೀಲರಾದ ಇಂದಿರಾ ಜೈಸಿಂಗ್, “ಸುಪ್ರೀಂ ಕೋರ್ಟ್ ದೊಂಬಿ ಹತ್ಯೆಯ ಮೇಲೆ ನೀಡಿದ ತೀರ್ಪು ಪರಿಣಾಮ ಬೀರಿದೆ. ಅಲ್ವರ್ ದೊಂಬಿ ಹತ್ಯೆಯ ವಿಚಾರದಲ್ಲಿ ಕನಿಷ್ಠ ಕೇಂದ್ರ ಸರ್ಕಾರ ವರದಿಯನ್ನು ಕೇಳುವ ಜವಾಬ್ದಾರಿ ಪ್ರಕಟಿಸಿದೆ,” ಎಂದು ಟ್ವೀಟ್ ಮಾಡಿದ್ದಾರೆ.

ಮುಖ್ಯವಾಗಿ, ಪೊಲೀಸರು ಈ ವಿಚಾರವಾಗಿ ತನಿಖೆಗೆ ತಡ ಮಾಡಿದ್ದಾರೆ ಎನ್ನುವುದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪತ್ರಕರ್ತೆ ಸಾನ್ಯಾ ಧಿಂಗ್ರಾ ಅವರು ಟ್ವೀಟ್ ಮಾಡಿ, “ಪೊಲೀಸರು ಗಾಯಗೊಂಡ ವ್ಯಕ್ತಿಯನ್ನು ತಮ್ಮ ಜೊತೆಗೇ ಕರೆದುಕೊಂಡು ಹೋಗಿದ್ದಾರೆ. ಆದರೆ, ಆತನನ್ನು ಆಸ್ಪತ್ರೆಗೆ ಸಾಗಿಸಲು ಮೂರು ಗಂಟೆ ತೆಗೆದುಕೊಂಡಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, “ವಸುಂಧರಾ ಅವರ ರಾಜ್ಯದಲ್ಲಿ ದೊಂಬಿ ಹತ್ಯೆಯಾಗಿದೆ. ಆದರೆ ಪೊಲೀಸರು ಮೊದಲಿಗೆ ಗೋವನ್ನು ಸಾಗಾಟ ಮಾಡುತ್ತಾರೆ. ನಂತರ ತಮ್ಮ ಜೀಪು ಹಾಳಾಗಬಾರದು ಎಂದು ಗಾಯಾಳುವನ್ನು ಸ್ವಚ್ಛಗೊಳಿಸುತ್ತಾರೆ. ನಂತರ ಆತನಿಗೆ ಹೊಡೆಯುತ್ತಾರೆ. ಕೊನೆಗೆ ಆತ ಆಸ್ಪತ್ರೆ ತಲುಪಿದಾಗ ಪ್ರಾಣ ಹೋಗಿರುತ್ತದೆ. ಆದರೆ, ಪ್ರಧಾನಿ ಮೋದಿ ಸಚಿವ ಸಂಪುಟದ ಸದಸ್ಯರು ಇದನ್ನು ‘ಪಿತೂರಿ’ ಎಂದು ಹೇಳುತ್ತಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಬದಲಾಗಿ ಗೋವುಗಳ ಸಾಗಾಟಕ್ಕೆ ವ್ಯವಸ್ಥೆ ಮಾಡಿದ ಪೊಲೀಸರ ಕಾರ್ಯವೈಖರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದೆ. ಪತ್ರಕರ್ತ ಬೆನ್ ನಾರ್ಟನ್ ಟ್ವೀಟ್ ಮಾಡಿ, “ಅತಿ ಬಲಪಂಥೀಯ ಭಾರತ ಸರ್ಕಾರ ವ್ಯಕ್ತಿಗಿಂತ ಹೆಚ್ಚಾಗಿ ಗೋವುಗಳ ರಕ್ಷಣೆ ಬಗ್ಗೆಯೇ ಹೆಚ್ಚು ಮುತುವರ್ಜಿ ತೋರಿಸಿದೆ. ಖರೀದಿಸಿದ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಮೇಲೆ ಸಂಘಿ ಫ್ಯಾಸಿಸ್ಟ್‌ಗಳು ರಾಜಸ್ಥಾನದ ಅಲ್ವರ್‌ನಲ್ಲಿ ದೊಂಬಿ ಹಲ್ಲೆ ನಡೆಸಿದ್ದಾರೆ. ಗಾಯಾಳುವನ್ನು ರಕ್ಷಿಸುವ ಬದಲಾಗಿ ಪೊಲೀಸರು ಗೋವುಗಳನ್ನು ಗೋಶಾಲೆಗೆ ತಲುಪಿಸುವಲ್ಲಿ ಹೆಚ್ಚು ಶ್ರಮಪಟ್ಟಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ.

ವಕೀಲ ಸಿದ್ ಟ್ವೀಟ್ ಮಾಡಿ, “ಭಾರತದಲ್ಲಿ ದೊಂಬಿ ಹತ್ಯೆ ಮತ್ತು ಅತ್ಯಾಚಾರ ಪ್ರಕರಣಗಳಿಗೆ ಪೊಲೀಸರು ಹೇಗೆ ಪ್ರತಿಕ್ರಿಯಿಸುತ್ತಾರೆ? ಹರ್ಯಾಣದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ದೂರು ದಾಖಲಿಸುವುದಿಲ್ಲ. ಮುಜಫರ್‌ ನಗರದಲ್ಲಿ ಕ್ರಮ ಕೈಗೊಳ್ಳುವುದು ತಡವಾಗುತ್ತದೆ. ಅಲ್ವರ್‌ನಲ್ಲಿ ಗಾಯಾಳು ವ್ಯಕ್ತಿಯನ್ನು ಆಸ್ಪತ್ರಗೆ ಸಾಗಿಸುವ ಬದಲಾಗಿ ಗೋವುಗಳನ್ನು ಸಾಗಿಸಲಾಗುತ್ತದೆ. ಅಚ್ಛೆ ದಿನ್ ನಮಗೆ ಕಣ್ಣು ಕುಕ್ಕುತ್ತಿದೆ,” ಎಂದು ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಹಲವು ಪತ್ರಕರ್ತರು ಪೊಲೀಸರ ಕರ್ತವ್ಯಪ್ರಜ್ಞೆ ಇಲ್ಲದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ವಿರೋಧ ಪಕ್ಷಗಳು ಮಾತ್ರವಲ್ಲ. ವ್ಯಂಗ್ಯಚಿತ್ರಕಾರರು ಕೂಡ, ಅಲ್ವರ್ ಘಟನೆಯಲ್ಲಿ ಪೊಲೀಸರು ಊರಿಡೀ ಸುತ್ತಾಡಿ ಕೊನೆಗೆ ರಕ್ಬರ್ ಖಾನ್ ಮರಣದ ನಂತರ ಆಸ್ಪತ್ರೆ ತಲುಪಿರುವುದನ್ನು ಟೀಕಿಸಿದ್ದಾರೆ. ಆದರೆ, ಬಿಜೆಪಿ ಪರ ಟ್ವೀಟಿಗರು ಮಾತ್ರ ಗೋವು ಕಳ್ಳಸಾಗಾಟ ಅತಿ ದೊಡ್ಡ ಸಮಸ್ಯೆ ಎನ್ನುವಂತೆ ಬಿಂಬಿಸಿ ಟ್ವೀಟ್ ಮಾಡುತ್ತಿದ್ದಾರೆ. ಬಿಜೆಪಿ ಪರ ಟ್ವೀಟಿಗರ ಇಂತಹ ಸಮರ್ಥನೆ ಟ್ವೀಟ್‌ಗಳ ಬಗ್ಗೆಯೂ ಟ್ವೀಟಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಟಿ ಕೊಯ್ನಾ ಮಿತ್ರಾ ಅವರು ಟ್ವೀಟ್ ಮಾಡಿ ದೊಂಬಿ ಹಲ್ಲೆ, ಹತ್ಯೆಗಳಿಗೆ ಸಂಬಂಧಿಸಿದ ಕಠಿಣ ಕಾನೂನು ರೂಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More