ಹೆಸರಿಗಷ್ಟೇ ತಾಲೂಕು ಪಂಚಾಯ್ತಿಗಳು, ಜವಾಬ್ದಾರಿ ಇಲ್ಲದೆ ಹಣ ಪೋಲು!

ರಾಜ್ಯದಲ್ಲಿ ಹೊಸದಾಗಿ ೪೯ ತಾಲೂಕು ರಚನೆಗೆ ಚಾಲನೆ ಸಿಕ್ಕಿದೆ. ತಾಲೂಕು ರಚನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಾಲೂಕು ಪಂಚಾಯ್ತಿಗಳು ರಚನೆಯಾಗಲಿದ್ದು, ಒಟ್ಟು ಸಂಖ್ಯೆ ೨೨೫ ಆಗಲಿದೆ. ಆದರೆ, ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತಾಲೂಕು ಪಂಚಾಯ್ತಿಗಳ ಪಾತ್ರವೇ ಕನಿಷ್ಠವಾಗಿದೆ

ಜಿಲ್ಲಾ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ತಾಲೂಕು ಪಂಚಾಯ್ತಿಗಳ ಪಾತ್ರ ಮತ್ತಷ್ಟು ಗೌಣವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಮುಖ್ಯ ಪಾತ್ರವನ್ನು ವಹಿಸದ ತಾಲೂಕು ಪಂಚಾಯ್ತಿಗಳು ಯಾರಿಗೂ ಉತ್ತರದಾಯಿಗಳಾಗಿ ಉಳಿದಿಲ್ಲ. ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಇವುಗಳ ಪಾತ್ರ ಕನಿಷ್ಠ ಮಟ್ಟದ್ದಾಗಿದೆ.

ಪಂಚಾಯತ್‌ ರಾಜ್‌ ಸಂಸ್ಥೆಗಳ ಹಣಕಾಸಿನ ಸ್ಥಿತಿಗತಿ ಕುರಿತು ರಾಜ್ಯದ ೪ನೇ ಹಣಕಾಸು ಆಯೋಗ ನೀಡಿರುವ ವರದಿಯು ತಾಲೂಕು ಪಂಚಾಯ್ತಿಗಳ ಹೊಣೆಗಾರಿಕೆ ಕುರಿತೂ ಚರ್ಚಿಸಿದೆ. ಹೊಸದಾಗಿ ೪೯ ತಾಲೂಕು ಪಂಚಾಯ್ತಿಗಳ ರಚನೆಗೆ ರಾಜ್ಯ ಸರ್ಕಾರ ಮುಂದಡಿಯಿಟ್ಟಿರುವ ಹೊತ್ತಿನಲ್ಲೇ ತಾಲೂಕು ಪಂಚಾಯ್ತಿಗಳ ಕಾರ್ಯನಿರ್ವಹಣೆ, ಅಧಿಕಾರದ ಮೇಲೆ ಹಣಕಾಸು ಆಯೋಗ ಬೆಳಕು ಚೆಲ್ಲಿದೆ. ಹಾಗೆಯೇ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ ಜಾರಿಗೆ ಬಂದು ೨ ವರ್ಷಗಳಾದರೂ ತಾಲೂಕು ಪಂಚಾಯ್ತಿಗಳ ಅಸ್ತಿತ್ವವನ್ನು ಬಲಪಡಿಸುವಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿಲ್ಲ.

ಇದನ್ನೂ ಓದಿ : ಹಣ ನೀರಿನಂತೆ ಖರ್ಚಾದರೂ ಕುಡಿಯುವ ನೀರು ಸಿಕ್ಕಿದ್ದು 8,000 ಜನವಸತಿ ಪ್ರದೇಶಗಳಿಗಷ್ಟೆ!

ಅಧಿಕಾರ ವಿಕೇಂದ್ರೀಕರಣ ನೀತಿ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಲಿಕ್ಕಾಗಿಯೇ ತಾಲೂಕು ಪಂಚಾಯ್ತಿಗಳು ರಚನೆಯಾಗಿವೆ. ತಾಲೂಕಿನ ಹೆದ್ದಾರಿಗಳ ದುರಸ್ತಿ, ಪ್ರಾಥಮಿಕ ಶಿಕ್ಷಣ, ಗ್ರಂಥಾಲಯ ರಚನೆ, ಆಸ್ಪತ್ರೆಗಳ ಮೂಲಕ ವೈದ್ಯಕೀಯ ನೆರವು, ಸಣ್ಣ ನೀರಾವರಿ ಯೋಜನೆ ಕಾರ್ಯಗತ ಮಾಡುವುದು, ರೈತರಿಗೆ ಬೀಜ, ಗೊಬ್ಬರ ವಿತರಣೆ ಮಾಡುವುದು ಸೇರಿದಂತೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವ ಉದ್ದೇಶದೊಂದಿಗೆ ರಚನೆಯಾಗಿವೆ. ಆದರೆ ಈವರೆಗೂ ಈ ಕಾರ್ಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಜವಾಬ್ದಾರಿಯನ್ನಾಗಲೀ, ಯೋಜನೆ ಅನುಷ್ಠಾನದ ಹೊಣೆಗಾರಿಕೆಯನ್ನಾಗಲೀ ನೀಡಿಲ್ಲ. ಹೀಗಾಗಿಯೇ ತಾಲೂಕು ಪಂಚಾಯ್ತಿಗಳಿಗೆ ವಾರ್ಷಿಕವಾಗಿ ನೀಡುತ್ತಿರುವ ಅನುದಾನದ ಬಹುತೇಕ ಪಾಲು ಸಿಬ್ಬಂದಿಯ ವೇತನಕ್ಕೆ ಪಾವತಿಯಾಗುತ್ತಿದೆ. ಅಲ್ಲದೆ, ಅನುದಾನವೂ ಪೋಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾತುಗಳಿಗೀಗ ೪ನೇ ರಾಜ್ಯ ಹಣಕಾಸು ಆಯೋಗ ಪುಷ್ಟಿ ನೀಡಿದೆ.

ಜಿಲ್ಲಾ ಮತ್ತು ಗ್ರಾಮ ಪಂಚಾಯ್ತಿಗೆ ಇರುವ ಅಧಿಕಾರಕ್ಕೆ ಹೋಲಿಸಿದರೆ ತಾಲೂಕು ಪಂಚಾಯ್ತಿಗಳಿಗೆ ಕಡಿಮೆ ಅಧಿಕಾರ ಇದೆ. ವಾರ್ಡ್‌ ಮತ್ತು ಗ್ರಾಮ ಸಭೆಗಳಲ್ಲಿ ತಾಪಂ ಸದಸ್ಯರು ಭಾಗವಹಿಸಬೇಕು. ಜವಾಬ್ದಾರಿ ಯಾರೂ ಕೊಡುವುದಿಲ್ಲ, ತೆಗೆದುಕೊಳ್ಳಬೇಕು. ನೇರ ಅನುದಾನ ಇಲ್ಲವೆಂಬುದನ್ನು ಒಪ್ಪುತ್ತೇನೆ. ಇದರ ಬಗ್ಗೆ ದನಿ ಎತ್ತಬೇಕಿದೆ.
ಡಿ ಆರ್‌ ಪಾಟೀಲ್, ಮಾಜಿ ಶಾಸಕ

“ತಾಲೂಕು ಪಂಚಾಯ್ತಿಗಳ ರಚನೆ ಮತ್ತು ಅಧಿಕಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಶಾಸನಗಳಿದ್ದರೂ ಅವುಗಳಿಗೆ ತಮ್ಮದೇ ಆದ ಗುರುತು ಇಲ್ಲದಂತಾಗಿದೆ. ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ನೀಡುವ ಅನುದಾನದಲ್ಲಿ ಅರ್ಧಕ್ಕಿಂತ ಅಧಿಕ ಮೊತ್ತ ತಾಲೂಕು ಪಂಚಾಯ್ತಿಗಳಿಗೆ ಹಂಚಿಕೆಯಾಗುತ್ತದೆ. ಆದರೆ, ಹೀಗೆ ದೊರೆತ ಅನುದಾನದಲ್ಲಿ ಶೇ.೭೦ರಷ್ಟು ಅನುದಾನ ವೇತನಕ್ಕೆ ಹೋಗುತ್ತದೆ. ಹೀಗಾಗಿ, ತಾಲೂಕು ಪಂಚಾಯ್ತಿಗಳಿಗೆ ವಹಿಸಿಕೊಡಬಹುದಾದ ಚಟುವಟಿಕೆಗಳ ಬಗ್ಗೆ ಹೊಸದಾಗಿ ಚಿಂತನೆ ನಡೆಸಬೇಕು,” ಎಂದು ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಗ್ರಾಮೀಣ ರಸ್ತೆ ಮತ್ತು ನೀರು ಸರಬರಾಜು ಯೋಜನೆಗಳಿಗೆ ಕಡಿಮೆ ವೆಚ್ಚ ಮಾಡುತ್ತಿದೆ. ವಿವಿಧ ಇಲಾಖೆಗಳು ಜಾರಿಗೊಳಿಸಿರುವ ಯೋಜನೆಗಳನ್ನು ಉಸ್ತುವಾರಿ ಮಾಡುವುದಕ್ಕಷ್ಟೇ ತಾಲೂಕು ಪಂಚಾಯ್ತಿಗಳ ಪಾತ್ರ ಸೀಮಿತವಾಗಿದೆ. ಜಿಲ್ಲಾ ಪಂಚಾಯ್ತಿಗೆ ವಾರ್ಷಿಕ ೪ ಕೋಟಿ ರು. ಅನುದಾನ ಹಂಚಿಕೆಯಾದರೆ, ತಾಲೂಕು ಪಂಚಾಯ್ತಿಗೆ ೧ ಕೋಟಿ ರು. ಅನುದಾನ ಲಭ್ಯವಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಂದ ಅನುದಾನ ಮತ್ತು ತೀರಾ ಸ್ವಲ್ಪ ಪ್ರಮಾಣದಲ್ಲಿ ಬಾಡಿಗೆ ರೂಪದಲ್ಲಿ ಬಂದ ಸ್ವಂತ ರಾಜಸ್ವವನ್ನಷ್ಟೇ ಅವಲಂಬಿಸಿದೆ ಎಂದು ವರದಿ ಹೇಳಿದೆ.

ಅದೇ ರೀತಿ, ತಾಲೂಕು ಪಂಚಾಯ್ತಿಗಳು ಸಾಕಷ್ಟು ಸಂಖ್ಯೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೊಂದಿವೆ. ಆದರೆ ಅಧಿಕಾರಿ, ಸಿಬ್ಬಂದಿ ಮೇಲೆ ಆಡಳಿತಾತ್ಮಕ ನಿಯಂತ್ರಣದ ಕುರಿತು ಸ್ಪಷ್ಟಪಡಿಸಿಕೊಂಡಿಲ್ಲ. ಹೀಗಾಗಿಯೇ, ತಾಲೂಕು ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಸದಸ್ಯರು, ಅಧಿಕಾರಿ, ಸಿಬ್ಬಂದಿಯಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಮಾತ್ರವಲ್ಲದೆ, ಮೇಲ್ವಿಚಾರಣೆ ಅಧಿಕಾರವೂ ಇಲ್ಲವಾಗಿದೆ ಎಂದು ವರದಿ ತಿಳಿಸಿದೆ.

ಅಧಿಕಾರ ವಿಕೇಂದ್ರೀಕರಣ ನೀತಿ ಫಲವಾಗಿಯೇ ತಾಲೂಕು ಪಂಚಾಯ್ತಿಗಳು ರಚನೆಗೊಂಡಿವೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕೆಲಸ ಮಾಡಬಲ್ಲ ಮತ್ತು ಸಮರ್ಥ ಅಧಿಕಾರಿಗಳನ್ನು ಸರಿಯಾದ ಸ್ಥಾನಗಳಿಗೆ ನಿಯುಕ್ತಿಗೊಳಿಸಿಲ್ಲ. ಇದಕ್ಕೆ ಬದಲಾಗಿ, ವಿಕೇಂದ್ರೀಕೃತ ಪದ್ಧತಿಯ ಆಡಳಿತಕ್ಕೆ ಸಂಬಂಧವಿಲ್ಲದ ಇತರ ಇಲಾಖೆಗಳ ಅಧಿಕಾರಿಗಳನ್ನು ಕಾರ್ಯನಿರ್ವಾಹಕ ಅಧಿಕಾರಿಗಳನ್ನಾಗಿ ನಿಯೋಜಿಸುತ್ತಿದೆ. ಇದು ತಾಲೂಕು ಪಂಚಾಯ್ತಿಗಳ ಒಟ್ಟಾರೆ ಕಾರ್ಯನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ವರದಿ ವಿಶ್ಲೇಷಿಸಿದೆ.

ಅಲ್ಲದೆ, ರಾಷ್ಟ್ರೀಯ ತೋಟಗಾರಿಕೆ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಸೇರಿದಂತೆ ಇನ್ನಿತರ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುವುದರಲ್ಲಿ ಮತ್ತು ಮೇಲ್ವಿಚಾರಣೆಯಲ್ಲಿ ಹಲವು ಗೊಂದಲಗಳಿವೆ. ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಕನಿಷ್ಟ ಮಟ್ಟದ ಪಾತ್ರ ವಹಿಸುವ ತಾಲೂಕು ಪಂಚಾಯ್ತಿಗಳ ಯೋಜನಾ ವೆಚ್ಚದ ಪಾಲು ಶೇ.೧೫ರಷ್ಟಿದೆಯಷ್ಟೆ. ಗಂಗಾ ಕಲ್ಯಾಣದಂತಹ ಯೋಜನೆಯಲ್ಲಿ ತಾಲೂಕು ಪಂಚಾಯ್ತಿಯ ಪಾತ್ರವೇನೂ ಇಲ್ಲ. ಅಂಗನವಾಡಿ ಮತ್ತು ಆಸ್ಪತ್ರೆಗಳಿಗೆ ಸಂಬಂಧಿಸಿದ ಸ್ಥಿತಿಯೂ ಇದೇ ಆಗಿದೆ ಎಂದು ವರದಿ ವಿವರಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More