ದೊಂಬಿ ಹತ್ಯೆಗಳ ಬಗ್ಗೆ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದ ಸ್ವಾಮಿ ಅಗ್ನಿವೇಶ್‌

ಜಾರ್ಖಂಡ್‌ನಲ್ಲಿ ತಮ್ಮ ಮೇಲೆ ನಡೆದ ದಾಳಿಯ ವಿಚಾರವಾಗಿ ಸ್ವಾಮಿ ಅಗ್ನಿವೇಶ್‌ ಅವರು ‘ದಿ ಕ್ವಿಂಟ್‌’ ಜೊತೆ ಮಾತನಾಡಿದ್ದು, ‘ದೊಂಬಿಹಲ್ಲೆಗಳ ಬಗ್ಗೆ ಪ್ರಧಾನಿ ಮೋದಿಯವರು ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಹರಿಹಾಯ್ದಿದ್ದಾರೆ. ಈ ಸಂದರ್ಶನದ ಭಾವಾನುವಾದ ಇಲ್ಲಿದೆ

“‌‌ಪ್ರಧಾನಿಯವರು ಜಗತ್ತಿಗೆ ಕೇಳುವ ಹಾಗೆ ಭಾಷಣ ಮಾಡುತ್ತಾರೆ. ‘ಮನ್‌ ಕಿ ಬಾತ್‌’ನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ದೊಂಬಿ ಹತ್ಯೆಯಂತಹ ದುರಂತಮಯ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ. ಇದು ನಾಚಿಕೆಗೇಡಿನ ವಿಷಯವಲ್ಲವೇ?” ಎಂದು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಅವರು ಪ್ರಶ್ನಿಸಿದ್ದಾರೆ. ಕಳೆದ ವಾರ ಜಾರ್ಖಂಡ್‌ನಲ್ಲಿ ತಮ್ಮ ಮೇಲೆ ಹಿಂದುತ್ವವಾದಿಗಳು ಮಾಡಿದ ಮಾರಣಾಂತಿಕ ದಾಳಿ ಹಾಗೂ ದೇಶದಲ್ಲಿ ನಡೆಯುತ್ತಿರುವ ದೊಂಬಿ ಹತ್ಯೆಗಳ ವಿಚಾರವಾಗಿ ‘ದಿ ಕ್ವಿಂಟ್‌’ ಜೊತೆ ಅವರು‌ ಮಾತನಾಡಿದ್ದಾರೆ.

“ಆಕ್ರೋಶಭರಿತ ಯುವಕರ ಗುಂಪೊಂದು ನನ್ನ ಕಡೆಗೆ ಸಮೀಪಿಸುತ್ತಿರುವುದನ್ನು ನೋಡಿದೆ. ಅವರು ನನ್ನ ಮೇಲೆ ಆಕ್ರಮಣ ಮಾಡಲೆಂದೇ ಬರುತ್ತಿದ್ದಾರೆಂದು ನನಗೆ ತಿಳಿಯಿತು. ನಾನು ನನ್ನ ಎರಡು ಕೈಗಳನ್ನು ಜೋಡಿಸಿ ಆ ಯುವಕರ ಮುಂದೆ ನಿಂತುಕೊಂಡೆ. ಏನು ಸಮಸ್ಯೆ ಎಂದು ಅವರನ್ನು ವಿನಮ್ರಪೂರ್ವಕವಾಗಿ ಕೇಳಿದೆ. ಅವರು ನನ್ನ ಮೇಲೆ ದಾಳಿ ಮಾಡಲು ಮುಂದಾಗಿಯೇಬಿಟ್ಟರು. ನೂರರಿಂದ ನೂರೈವತ್ತು ಜನರ ಗುಂಪಿನಲ್ಲಿದ್ದ ಕೆಲ ಯುವಕರು ನನ್ನ ದೇಹ, ತಲೆ ಹಾಗೂ ಬೆನ್ನಿಗೆ ಗುದ್ದತೊಡಗಿದರು. ನನ್ನ ಬಟ್ಟೆಗಳನ್ನು ಹರಿದರು. ಆಳವಾದ ಗುಂಡಿಯೊಂದರಲ್ಲಿ ಎಸೆದರು. ಈ ಎಲ್ಲ ಘಟನೆಗಳು ಜರುಗುತ್ತಿರುವಾಗ ‘ಜೈಶ್ರೀರಾಮ್‌’ ಎಂಬ ಘೋಷಣೆಗಳು ಮೊಳಗುತ್ತಿದ್ದವು. ಎಷ್ಟು ಬೇಡಿಕೊಂಡರೂ ಆ ಜನಸಮೂಹ ಮತ್ತೆ ದಾಳಿಗೆ ಮುಂದಾಗುತ್ತಲೇ ಇತ್ತು. ಆಗ ನನ್ನಲ್ಲಿ ಬದುಕುವ ಆಸೆಯೇ ಮಾಯವಾಯಿತು. ಅದೊಂದು ದೊಂಬಿ ಹತ್ಯೆಯಂತೆ ಭಾಸವಾಗುತ್ತಿತ್ತು,” ಎಂದು ಕಳೆದ ವಾರ ತಮ್ಮ ಮೇಲೆ ನಡೆದ ದೊಂಬಿ ದಾಳಿಯ ಬಗ್ಗೆ ಸ್ವಾಮಿ ಅಗ್ನಿವೇಶ್‌ ಅವರು ಹೇಳಿದ್ದಾರೆ.

ಎಬಿವಿಪಿಗೆ ಸೇರಿದ ನೂರಾರು ಯುವಕರು ತಮ್ಮ ಮೇಲೆ ದಾಳಿ ಮಾಡಿದ ನಂತರ ಯಾವುದೇ ಪೊಲೀಸ್‌ ರಕ್ಷಣೆ ದೊರೆಯದಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ವಾಮಿ ಅಗ್ನಿವೇಶ್‌, “ತಮ್ಮ ಮೇಲೆ ಹಲ್ಲೆ ನಡೆದ ತಕ್ಷಣ ತಾವು ಭಾಗವಹಿಸಿದ್ದ ಕಾರ್ಯಕ್ರಮದ ಆಯೋಜಕರು ಪೊಲೀಸರು ಹಾಗೂ ಜಿಲ್ಲಾಡಳಿತವನ್ನು ಸಂಪರ್ಕಿಸಿದರು. ಅಲ್ಲಿನ ಎಸ್‌ಪಿ ಬರ್ನ್ವಾಲ್‌ ಅವರಿಗೆ ನಾನು ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದೆ. ಆದರೆ, ಅವರು ಸ್ಥಳಕ್ಕೆ ಬರಲು ನಿರಾಕರಿಸಿದರು. ನಾನು ಜಿಲ್ಲಾಧಿಕಾರಿಗೆ ಕರೆ ಮಾಡಿದೆ. ಅವರೂ ಸಹಾಯಕ್ಕೆ ಮುಂದಾಗಲಿಲ್ಲ. ಹಲ್ಲೆಯಿಂದ ಆಘಾತಕ್ಕೀಡಾಗಿದ್ದ ನಾನು, ಅಧಿಕಾರಗಳ ಅಂತಹ ವರ್ತನೆಯಿಂದ ಮತ್ತಷ್ಟು ಕುಸಿದುಹೋದೆ,” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಅಗ್ನಿವೇಶ್ ಹಲ್ಲೆಗಾರರ ಮುಂದಿದ್ದದ್ದು ಪ್ರಧಾನಿ ಮೋದಿ ಮಾದರಿಯೇ ?

ಈ ತರಹದ ಸಾಮೂಹಿಕ ಹಲ್ಲೆ ಹಾಗೂ ಹತ್ಯೆಗಳು ದೇಶದಲ್ಲಿ ಹೆಚ್ಚಾಗುತ್ತಿರುವುದರ ಬಗ್ಗೆ ಸ್ವಾಮಿ ಅಗ್ನಿವೇಶ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ. “ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ದೊಂಬಿ ಹತ್ಯೆಗಳು ನಡೆಯುತ್ತಿದ್ದು, ಪ್ರಧಾನಿಯವರು ಈ ಬಗ್ಗೆ ಬಾಯಿ ಬಿಡದಿರುವುದು ನಾಚಿಕಗೇಡಿನ ಸಂಗತಿ,” ಎಂದು ಹರಿಹಾಯ್ದಿದ್ದಾರೆ.

“ಗೋರಕ್ಷಣೆ ಹೆಸರಿನಲ್ಲಿ ಈ ಹಿಂದೆ ದಾದ್ರಿಯ ಅಕ್ಲಾಕ್‌ ಅವರನ್ನು ಸಾಮೂಹಿಕ ಹಲ್ಲೆಯ ಮೂಲಕ ಹತ್ಯೆ ಮಾಡಲಾಯಿತು. ಈಗ ಅಲ್ವಾರ್‌ನ ರಖ್ಬರ್‌ ಖಾನ್‌‌ ಅವರನ್ನು ಕೊಲೆಗೈಯಲಾಗಿದೆ. ಸ್ವಯಂಘೋಷಿತ ಗೋರಕ್ಷಕರಿಂದ ಹತ್ಯೆಯಾದ ರಕ್ಬಾರ್‌ ಖಾನ್‌ ಅವರ ಪತ್ನಿ ಹಾಗೂ ಮಕ್ಕಳ ಚಿತ್ರಗಳನ್ನು ಮಾಧ್ಯಮಗಳು ಬಿತ್ತರಿಸಲಿ. ಈ ಮೂಲಕ, ಮತ್ತೊಬ್ಬರ ತಂದೆ, ಗಂಡನನ್ನು ಯಾರಿಗಾದರೂ ಕೊಲ್ಲುವ ಅಧಿಕಾರವಿದೆಯೇ ಎಂದು ಪ್ರಶ್ನಿಸಲಿ. ‌‌ಪ್ರಧಾನಿಯವರು ಜಗತ್ತಿಗೆ ಕೇಳುವ ಹಾಗೆ ಭಾಷಣ ಮಾಡುತ್ತಾರೆ. ‘ಮನ್‌ ಕಿ ಬಾತ್‌’ನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಇಂತಹ ದುರಂತಮಯ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ. ಇದು ನಾಚಿಕೆಗೇಡಿನ ವಿಷಯವಲ್ಲವೇ?” ಎಂದು ಸ್ವಾಮಿ ಅಗ್ನಿವೇಶ್‌ ಪ್ರಶ್ನಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More