ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಹೆಲಿಕಾಪ್ಟರ್ ಖರೀದಿ ಹಗರಣ: ಆರೋಪ ಪಟ್ಟಿ ಭವಿಷ್ಯ ನಿರ್ಧರಿಸಲಿದೆ ದೆಹಲಿ ಹೈಕೋರ್ಟ್

ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಒಪ್ಪಿಕೊಳ್ಳುವ ಸಂಬಂಧ ಸೋಮವಾರ ದೆಹಲಿ ಹೈಕೋರ್ಟ್ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ತನಿಖಾಧಿಕಾರಿಯ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಪ್ರಕರಣ ಮುಂದೂಡಲಾಗಿತ್ತು. ಆರೋಪಕ್ಕೆ ಪೂರಕವಾಗಿ ಸೂಕ್ತ ದಾಖಲೆ ಸಂಗ್ರಹಿಸಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.

ಸ್ವಕ್ಷೇತ್ರಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ ಜೆಡಿಎಸ್ ವತಿಯಿಂದ ಆಯೋಜಿಸಲಾಗಿರುವ ಕೃತಜ್ಞತಾ ಸಮಾವೇಶದಲ್ಲೂ ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ.

ಇಂದಿನಿಂದ ಐದು ದಿನ ಪ್ರಧಾನಿ ಮೋದಿ ವಿದೇಶ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶ ಪ್ರವಾಸವನ್ನು ಮುಂದುವರಿಸಿದ್ದಾರೆ. ಜುಲೈ 23ರಿಂದ 27ರವರೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಅವರು ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಾರಿ ಮುಷ್ಕರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ

ಟೋಲ್ ಮುಕ್ತ, ಡೀಸೆಲ್ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆಗೆ ಆಗ್ರಹಿಸಿ ಅಖಿಲ ಭಾರತ ಮೋಟಾರು ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್ ಸಂಘಟನೆ ಕರೆ ನೀಡಿರುವ ದೇಶವ್ಯಾಪಿ ಮುಷ್ಕರ ರಾಜ್ಯದ ಹಲವೆಡೆ ನಡೆಯುತ್ತಿದ್ದು, ಭಾನುವಾರ ಮೂರು ದಿನ ಪೂರೈಸಿದೆ. ಇದರಿಂದಾಗಿ ಈಗಾಗಲೇ ಸರಕು ಸಾಗಣೆಯಲ್ಲಿ ಕೊಂಚ ವ್ಯತ್ಯಯ ಉಂಟಾಗಿದೆ. ಮುಷ್ಕರಕ್ಕೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಂದಿನಿಂದ ಮುಷ್ಕರವು ರಸ್ತೆ ತಡೆಗೆ ತಿರುಗಲಿದ್ದು ಪ್ರತಿಭಟನೆ ತೀವ್ರಗೊಳ್ಳಲಿದೆ. ಇದು ಮುಂದುವರಿದಲ್ಲಿ ಜನಜೀವನಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯೇ ಹೆಚ್ಚು.

ಕ್ಲೀನ್‌ಸ್ವೀಪ್ ತಪ್ಪಿಸಿಕೊಳ್ಳುವುದೇ ದಕ್ಷಿಣ ಆಫ್ರಿಕಾ?

ಆತಿಥೇಯರ ಸ್ಪಿನ್ ಸುಳಿಯಲ್ಲಿ ಸಿಲುಕಿ ತತ್ತರಿಸಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ, ಕೊಲಂಬೋದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಕೊನೇ ಟೆಸ್ಟ್ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಹೆಣಗುತ್ತಿದೆ. ಪಂದ್ಯದ ಮೂರನೇ ದಿನಾಂತ್ಯಕ್ಕೆ ೧೩೯ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡಿರುವ ಅದು ಇನ್ನೂ, ೩೫೧ ರನ್ ಪೇರಿಸಬೇಕಿದ್ದು, ಭಾರೀ ಸವಾಲು ಎದುರಾಗಿದೆ. ರಂಗನಾ ಹೆರಾತ್ ಹಾಗೂ ಅಕಿಲ ಧನಂಜಯ ಸ್ಪಿನ್ ಬೌಲಿಂಗ್‌ಗೆ ತಿಣುಕುತ್ತಿರುವ ಆಫ್ರಿಕಾ ಪಾಳೆಯದಲ್ಲಿ ಈಗಾಗಲೇ ಪ್ರಮುಖ ವಿಕೆಟ್‌ಗಳು ಪತನ ಕಂಡಿದೆ. ೪೫ ರನ್ ಗಳಿಸಿ ಕ್ರೀಸ್‌ನಲ್ಲಿರುವ ಬ್ರ್ಯೂಯ್ನ್ ಹಾಗೂ ೧೪ ರನ್ ಗಳಿಸಿರುವ ಟೆಂಬಾ ಬವುಮಾ ಜೋಡಿಯಲ್ಲದೆ, ಕ್ವಿಂಟಾನ್ ಡಿಕಾಕ್ ಮೇಲೆ ಹೆಚ್ಚಿನ ಒತ್ತಡವಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More