ಸಂಶಯಾತ್ಮಕ ಸುದ್ದಿಗಳ ಮೇಲೆ ರೆಡ್ ಲೇಬಲ್ ಹಾಕಲಿದೆ ವಾಟ್ಸ್‌ಆ್ಯಪ್‌

ಹೊಸ ಫೀಚರ್ ಅಪ್‌ಡೇಟ್ ಮಾಡಿದ ನಂತರ ವಾಟ್ಸ್‌ಆ್ಯಪ್‌ ಮೂಲಕ ಹರಿದಾಡುವ ನಕಲಿ ಸುದ್ದಿಗಳ ಯುಆರ್‌ಎಲ್‌ಗಳ ಮೇಲೆ ‘ಸಂಶಯಾತ್ಮಕ ಲಿಂಕ್’ ಎನ್ನುವ ಲೇಬಲ್ ಕಾಣಿಸಲಿದೆ. ಸುಳ್ಳು ಸುದ್ದಿಗಳನ್ನು ವೇದಿಕೆಯಿಂದ ತೆಗೆದುಹಾಕಲು ಸಂಸ್ಥೆ ಇಟ್ಟಿರುವ ಮಹತ್ವದ ಹೆಜ್ಜೆ ಇದು

ವಾಟ್ಸ್‌ಆ್ಯಪ್‌ ಮೂಲಕ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಪ್ರಸಾರವಾಗುವ ಸಮಸ್ಯೆಯನ್ನು ಪರಿಹರಿಸಲು ಸಾಮಾಜಿಕ ಜಾಲತಾಣದ ಸಂಸ್ಥೆ ಒಂದು ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ. ಈ ಫೀಚರ್ ಅಪ್‌ಡೇಟ್ ಮಾಡಿದ ನಂತರ ವಾಟ್ಸ್‌ಆ್ಯಪ್‌ ಮೂಲಕ ಹರಿದಾಡುವ ನಕಲಿ ಸುದ್ದಿಗಳ ಯುಆರ್‌ಎಲ್‌ಗಳ ಮೇಲೆ ಕೆಂಪು ಬಣ್ಣದಲ್ಲಿ ‘ಸಂಶಯಾತ್ಮಕ ಲಿಂಕ್’ ಎನ್ನುವ ಲೇಬಲ್ ಸಂದೇಶ ಕಾಣಿಸಲಿದೆ. ಸುಳ್ಳು ಸುದ್ದಿಗಳನ್ನು ವೇದಿಕೆಯಿಂದ ತೆಗೆದುಹಾಕುವ ನಿಟ್ಟಿನಲ್ಲಿ ಸಂಸ್ಥೆ ಇಟ್ಟಿರುವ ಮಹತ್ವದ ಹೆಜ್ಜೆ ಇದಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಸ್ಪಾಮ್ ಅಥವಾ ಸಂಶಯಾತ್ಮಕ ಸುದ್ದಿಗಳಿಗೆ ಇದು ಅನ್ವಯಿಸಲಿದೆ.

“ವಾಟ್ಸ್‌ಆ್ಯಪ್‌ ಸಂಪೂರ್ಣ ಎನ್‌ಸ್ಕ್ರಿಪ್ಷನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಕಾರಣ ವ್ಯಕ್ತಿಗತ ಸಂದೇಶವನ್ನು ನೋಡುವ ಅವಕಾಶ ಸಂಸ್ಥೆಗೆ ಇರುವುದಿಲ್ಲ. ಹೀಗಾಗಿ, ಸ್ವಯಂಚಾಲಿತವಾಗಿ ಬಳಕೆದಾರದ ಡಿವೈಸ್‌ನಲ್ಲಿ ಈ ಪರಿಶೀಲನೆ ನಡೆಯಲಿದೆ,” ಎಂದು ವಾಟ್ಸ್‌ಆ್ಯಪ್‌ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಒಂದು ಲಿಂಕ್ ಜೊತೆಗೆ ‘ಸಂಶಯಾತ್ಮಕ’ ಎಂದು ಗುರುತು ಬಿದ್ದ ಕೂಡಲೇ ಬಳಕೆದಾರರು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಒಂದು ಸಂದೇಶ ಮೂಡಿ ಆ ಲಿಂಕ್‌ನೊಂದಿಗೆ ಇರುವ ಸಂಶಯಗಳ ವಿವರವನ್ನು ನೀಡಲಿದೆ. ಹೀಗಾಗಿ, ಬಳಕೆದಾರ ಲಿಂಕ್ ತೆರೆಯಬಹುದು ಅಥವಾ ಅದನ್ನು ಓದದೆ ಇರಲು ನಿರ್ಧರಿಸಬಹುದು.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಗಂಡಾಂತರಕಾರಿ ಪ್ರಯೋಗಗಳಿಗೆ ವಾಟ್ಸ್‌ಆ್ಯಪ್‌ ಮಾಧ್ಯಮವಾಗುತ್ತಿದೆಯೇ?

ಕೆಲವೊಮ್ಮೆ ಬಳಕೆದಾರರು ವಾಟ್ಸ್‌ಆ್ಯಪ್‌ಗೆ ಸಂಬಂಧಿಸದೆ ಇರುವ ಸ್ಪಾಮ್ ಲಿಂಕ್‌ಗಳಿಗೆ ತೆರಳುವಂತೆ ತಂತ್ರವನ್ನು ಸಂದೇಶದಲ್ಲಿ ಕಳುಹಿಸುತ್ತಿರುತ್ತಾರೆ. ಆದರೆ, ಈ ಫೀಚರ್‌ನಲ್ಲಿ ಸುಳ್ಳು ಸುದ್ದಿಗಳ ವೆಬ್‌ಸೈಟ್‌ಗಳನ್ನು ಪತ್ತೆ ಮಾಡುವ ಅವಕಾಶ ಇರುವುದಿಲ್ಲ. ಮುಖ್ಯವಾಗಿ, ಭಾರತದಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಸುಳ್ಳು ಸುದ್ದಿಗಳು ಮತ್ತು ನಕಲಿ ಸುದ್ದಿಗಳು ಪ್ರಚಾರ ಆಗುತ್ತಿರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು ವಾಟ್ಸ್‌ಆ್ಯಪ್‌, ಒಂದು ಬಾರಿಗೆ ಐದು ಮಂದಿಗಷ್ಟೇ ಸಂದೇಶ ಫಾರ್ವರ್ಡ್ ಮಾಡುವ ನಿಯಂತ್ರಣವನ್ನು ಹೇರಿದ್ದು, ಇನ್ನಷ್ಟೇ ಜಾರಿಗೆ ಬರಬೇಕಿದೆ. ಸಂದೇಶಗಳು ವೈರಲ್ ಆಗಿ ಬದಲಾಗುವುದನ್ನು ತಪ್ಪಿಸಲು ವಾಟ್ಸ್‌ಆ್ಯಪ್‌ ಈ ಕ್ರಮ ಕೈಗೊಂಡಿದೆ.

ಮಕ್ಕಳ ಕಳ್ಳತನದ ಆರೋಪದಲ್ಲಿ ಇತ್ತೀಚೆಗೆ ಭಾರತದಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಹರಡಿದ ನಕಲಿ ಸುದ್ದಿಗಳ ಪರಿಣಾಮವಾಗಿ ೨೪ ಮಂದಿ ದೊಂಬಿಹತ್ಯೆಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಟ್ಸ್‌ಆ್ಯಪ್‌ ಸಂಸ್ಥೆಗೆ ನಿಯಂತ್ರಣ ಹೇರದಿದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಪತ್ರ ಬರೆದಿತ್ತು. ಈ ಪತ್ರಕ್ಕೆ ಪ್ರತಿಕ್ರಿಯೆಯಾಗಿ ವಾಟ್ಸ್‌ಆ್ಯಪ್‌ ಸುಳ್ಳು ಸುದ್ದಿಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More