ಎಪಿಪಿ ನೇಮಕ ಹಗರಣ: ಶೂನ್ಯ ಸಂಪಾದನೆಯು ‘8’ ಅಂಕವಾಗಿ ಬದಲಾದ ರಹಸ್ಯ

ಅಸಿಸ್ಟೆಂಟ್ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್‌ ಹುದ್ದೆಯ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಹೇಗೆಲ್ಲ ಉತ್ತರ ಬರೆದಿದ್ದಾರೆ ಎಂದು ಗೊತ್ತಾದರೆ ದಂಗಾಗುತ್ತೀರಿ. ಅಭ್ಯರ್ಥಿಗಳು ತಪ್ಪಾಗಿ ಬರೆದ ಉತ್ತರಗಳಿಗೂ ಅಂಕ ನೀಡಲಾಗಿದೆ. ಇದು ಎಪಿಪಿ ನೇಮಕಾತಿಯ ಅಕ್ರಮಗಳ ಒಂದು ಮಗ್ಗುಲಷ್ಟೆ

ಭಾರತದ ರಾಷ್ಟ್ರಪತಿಗಳನ್ನು ಯಾರು ಚುನಾಯಿಸುತ್ತಾರೆ?

-ಇಂತಹ ಸಾಮಾನ್ಯ ಪ್ರಶ್ನೆಗೆ ಪ್ರೌಢಶಾಲೆ ಮೆಟ್ಟಿಲು ಹತ್ತಿದ ಯಾರೂ ಬೇಕಾದರೂ ಸರಿಯಾಗಿ ಉತ್ತರಿಸಬಲ್ಲರು. ಆದರೆ, ಇಲ್ಲೊಬ್ಬ ಕಾನೂನು ಪದವೀಧರ ಅಸಿಸ್ಟೆಂಟ್‌‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್(ಎಪಿಪಿ) ಲಿಖಿತ ಪರೀಕ್ಷೆಯಲ್ಲಿ ಉತ್ತರಿಸಿರುವುದನ್ನು ನೋಡಿದರೆ ನೀವು ದಂಗಾಗುವುದು ನಿಶ್ಚಿತ. ಆತ ಬರೆದಿದ್ದ ತಪ್ಪು ಉತ್ತರಕ್ಕೆ ಮೂಲ ಮೌಲ್ಯಮಾಪಕರು ನೀಡಿದ್ದು ‘ಶೂನ್ಯ’ ಅಂಕವನ್ನು. ಆ ನಂತರ ಉತ್ತರ ಪತ್ರಿಕೆಯಲ್ಲಿ ಶೂನ್ಯ ಅಂಕವನ್ನೇ ತಿದ್ದಿ '8’ ಎಂದು ತಿದ್ದಲಾಗಿದೆ. ಮೂಲ ಮೌಲ್ಯಮಾಪನದ ನಂತರ ಆಗಿರುವ ತಿದ್ದುಪಡಿ ಪ್ರಕ್ರಿಯೆಯಲ್ಲಿನ ಈ ಅಕ್ರಮದ ಲಾಭ ಪಡೆದಿರುವ ಆತ ಈಗ ಎಪಿಪಿ ಹುದ್ದೆಗೇರಿದ್ದಾನೆ!

ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್‌ ಹುದ್ದೆಗಳಿಗೆ ನಡೆದಿದ್ದ ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ನಡೆದಿರುವ ಅಕ್ರಮಗಳ ಕುರಿತು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ದೋಷಾರೋಪಣ ಪಟ್ಟಿಯಲ್ಲಿ ಇಂತಹ ಹಲವು ಕುತೂಹಲಕರ ವಿಷಯಗಳಿವೆ. ಸಾಮಾನ್ಯ ಜ್ಞಾನದ ಉತ್ತರ ಬೇಡುವ ಪ್ರಶ್ನೆಗಳಿಗೆ ತಪ್ಪುತಪ್ಪಾಗಿ ಉತ್ತರಿಸಿರುವುದಲ್ಲದೆ, ಅಂಕಗಳನ್ನು ತಿದ್ದುಪಡಿ ಮಾಡಿಸಿಕೊಂಡಿರುವ ಹಲವು ಉದಾಹರಣೆಗಳು ಕಂಡುಬಂದಿವೆ. ಕೆಲ ಉತ್ತರ ಪತ್ರಿಕೆಗಳು ‘ದಿ ಸ್ಟೇಟ್‌’ಗೆ ಲಭ್ಯವಾಗಿವೆ.

ಎಪಿಪಿ ಹುದ್ದೆ ನೇಮಕಾತಿಯ ಪ್ರಶ್ನೆಪತ್ರಿಕೆ ಪ್ರತಿ

“ದೋಷಾರೋಪಣೆ ಪಟ್ಟಿಯಲ್ಲಿ ಹೆಸರಿಸಿರುವ ೬೧ ಮಂದಿ ಪೈಕಿ ಬಹುತೇಕ ಅಭ್ಯರ್ಥಿಗಳು ಬರೆದಿರುವ ಉತ್ತರಗಳು ತಪ್ಪುಗಳಿಂದ ಕೂಡಿವೆ. ಮೂಲ ಮೌಲ್ಯಮಾಪಕರು ಆ ಉತ್ತರಗಳಿಗೆ ಯಾವುದೇ ಅಂಕ ನೀಡದೆ ಇದ್ದರೂ ಆ ನಂತರ ನಡೆದ ತಿದ್ದುಪಡಿಯಿಂದಾಗಿ ಅಕ್ರಮವಾಗಿ ಅಂಕಗಳು ಸಿಕ್ಕಿವೆ. ಈ ಅಂಕಗಳಿಂದಲೇ ಎಪಿಪಿ ಹುದ್ದೆಗೆ ನೇಮಕವಾಗಲು ರಹದಾರಿ ಪಡೆದಂತಾಗಿದೆ,” ಎನ್ನುತ್ತಾರೆ ಅಭಿಯೋಜನಾ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಅಧಿಕಾರಿಯೊಬ್ಬರು.

ಇದನ್ನೂ ಓದಿ : ಎಪಿಪಿಗಳ ನೇಮಕ ಹಗರಣ; ಅಕ್ರಮ ಒಂದೇ, ಆದರೆ ಕಾನೂನು ಇಲಾಖೆ ಭಿನ್ನ ನಿಲುವು

ಎಪಿಪಿ ಲಿಖಿತ ಪರೀಕ್ಷೆಯಲ್ಲಿ ಕಾನೂನು ವಿಷಯ-೩ನೇ ಪ್ರಶ್ನೆಪತ್ರಿಕೆಯಲ್ಲಿ ಭಾರತದ ರಾಷ್ಟ್ರಾಧ್ಯಕ್ಷರನ್ನು ಚುನಾಯಿಸುವ ಬಗೆ ಯಾವುದು? ಎಂಬ ಪ್ರಶ್ನೆಯನ್ನು ೧೦ ಅಂಕಕ್ಕೆ ಕೇಳಲಾಗಿತ್ತು. ಅದಕ್ಕೆ ಕಾನೂನು ಪದವೀಧರ ಉತ್ತರಿಸಿರುವುದು ಹೀಗೆ: “ಭಾರತದ ಪ್ರಧಾನಮಂತ್ರಿಯವರು ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಂದ ಭಾರತದ ರಾಷ್ಟ್ರಾಧ್ಯಕ್ಷರು ಚುನಾಯಿಸಲ್ಪಡುತ್ತಾರೆ. ಭಾರತದ ಪ್ರಧಾನಮಂತ್ರಿಯು ಮಂತ್ರಿಮಂಡಲದ ಬಹುಮತವನ್ನು ಪಡೆದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಕಳಿಸುತ್ತಾರೆ. ತದನಂತರ ಮುಖ್ಯ ನ್ಯಾಯಮೂರ್ತಿಯವರು ಪ್ರಧಾನ ಮಂತ್ರಿಯವರ ಜೊತೆ ಸಮಾಲೋಚಿಸಿ ಒಂದು ನಿರ್ಣಯಕ್ಕೆ ಬರುತ್ತಾರೆ. ಮುಖ್ಯವಾಗಿ, ಪ್ರಧಾನಮಂತ್ರಿಯವರು ಮಂತ್ರಿಮಂಡಲದ ಬಹುಮತವನ್ನು ಪಡೆದ ಅವರೆಲ್ಲರ ಅಭಿಮತದ ಮೇರೆಗೆ ಅದನ್ನೂ ಮುಖ್ಯ ನ್ಯಾಯಮೂರ್ತಿಯವರಿಗೆ ಕಳಿಸಿದ ನಂತರ ಪ್ರಧಾನಮಂತ್ರಿ ಮತ್ತು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರು ರಾಷ್ಟ್ರಾಧ್ಯಕ್ಷರನ್ನು ಚುನಾಯಿಸುತ್ತಾರೆ,” ಎಂದು ಉತ್ತರಿಸಿರುವುದು ಉತ್ತರ ಪತ್ರಿಕೆಯಿಂದ ಗೊತ್ತಾಗಿದೆ.

ರಾಷ್ಟ್ರಾಧ್ಯಕ್ಷರನ್ನು ಚುನಾಯಿಸುವ ಕುರಿತು ಅಭ್ಯರ್ಥಿಯೊಬ್ಬರ ಉತ್ತರ ಪತ್ರಿಕೆಯ ಪ್ರತಿ

ಈ ಉತ್ತರಕ್ಕೆ ಮೌಲ್ಯಮಾಪಕರು ‘ಶೂನ್ಯ’ ಅಂಕ ನೀಡಿದ್ದಾರೆ. ಆದರೆ, ಅದೇ ಉತ್ತರ ಪತ್ರಿಕೆಯಲ್ಲಿ ನಮೂದಾಗಿದ್ದ ‘0’ಯನ್ನು ಆ ನಂತರ ‘8’ ಎಂದು ತಿದ್ದಲಾಗಿದೆ. ಅಲ್ಲಿಗೆ ತಪ್ಪು ಉತ್ತರ ಬರೆದಿದ್ದ ಅಭ್ಯರ್ಥಿಗೆ ಅಕ್ರಮವಾಗಿ ಸಿಕ್ಕಿದ್ದು 8 ಅಂಕ.

ಅದೇ ಪ್ರಶ್ನೆ ಪತ್ರಿಕೆಯಲ್ಲಿ ಭಾರತ ಸಂವಿಧಾನದ ೫೧-೩ ಪರಿಚ್ಛೇದದಲ್ಲಿ ಭಾರತದ ನಾಗರಿಕರ ಮೂಲಭೂತ ಕರ್ತವ್ಯಗಳು ಯಾವುದು? ಎಂಬ ಪ್ರಶ್ನೆಗೆ ಮತ್ತೊಬ್ಬ ಕಾನೂನು ಪದವೀಧರ ಉತ್ತರಿಸಿರುವುದನ್ನು ನೋಡಿದರೆ ನೀವು ಚಕಿತರಾಗುತ್ತೀರಿ. “ರಾಷ್ಟ್ರ ನಾಯಕರ ಯಾವುದೇ ಬಿರುದು ಬಾವಲಿಗಳಿಗೆ ಧಕ್ಕೆಯಾಗದಂತೆ ಕಾಪಾಡುವುದು,” ಎಂದು ಬರೆದಿರುವ ಉತ್ತರವನ್ನು ಉತ್ತರ ಪತ್ರಿಕೆಯಲ್ಲಿಯೇ ಮೌಲ್ಯಮಾಪಕರು ‘ತಪ್ಪು’ ಎಂದು ಬರೆದಿದ್ದಾರೆ. ಆದರೂ ಅದೇ ಉತ್ತರ ಪತ್ರಿಕೆಯಲ್ಲಿ 8 ಅಂಕಗಳನ್ನು ನೀಡಲಾಗಿದೆ. ಇನ್ನು, ‘ಬಲಪ್ರಯೋಗ’ದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಗೆ ತಪ್ಪು ಉತ್ತರ ಬರೆದಿದ್ದರೂ ಅಂಕಗಳನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಅಕ್ರಮವಾಗಿ ಪಡೆದ ಅಂಕಗಳ ಆಧಾರದ ಮೇಲೆ ಸರ್ಕಾರಿ ನೌಕರರಿಗೆ ಸೇರಿರುವ ಇವರನ್ನು ಅಮಾನತುಗೊಳಿಸುವ ಸಂಬಂಧ ಲೋಕಾಯುಕ್ತ ಎಡಿಜಿಪಿ ಅವರು, “ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗದಂತೆ ಒಳಸಂಚು ರೂಪಿಸಿಕೊಂಡು ಅಕ್ರಮ ಅಂಕಗಳನ್ನು ಗಳಿಸುವ ಮೂಲಕ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾರೆ. ಸರ್ಕಾರಿ ನೌಕರನಿಗೆ ತಕ್ಕುದಲ್ಲದ ಕೃತ್ಯ ಮಾಡುವ ಮೂಲಕ ಸರ್ಕಾರಿ ನೌಕರರಾಗಿದ್ದಾರೆ. ನೇಮಕಾತಿ ಪರೀಕ್ಷೆಯಲ್ಲಿ ಅನುಚಿತ ಮಾರ್ಗಗಳ ಮೂಲಕ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ. ಇವರನ್ನು ಈಗಾಗಲೇ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಗುರಿಪಡಿಸಲಾಗಿರುತ್ತದೆ,” ಎಂದು ಸರ್ಕಾರದ ಗಮನಕ್ಕೆ ತಂದಿದ್ದನ್ನು ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More