ಫ್ರಾನ್ಸ್‌ ಜಿಡಿಪಿಯನ್ನು ಭಾರತ ಹಿಂದಿಕ್ಕಿದೆ ಎಂಬುದು ಪ್ರಚಾರಕ್ಕಾಗಿ ಕಟ್ಟಿದ ಕನಸು!

ಜಿಡಿಪಿ ಅಭಿವೃದ್ಧಿಯಲ್ಲಿ ಭಾರತವು ಫ್ರಾನ್ಸ್ ಅನ್ನು ಹಿಂದಿಕ್ಕಿದೆ ಎಂದು ಬಿಜೆಪಿ ಸರ್ಕಾರ ಸಾರುತ್ತಿದೆ. ಆದರೆ, ಫ್ರಾನ್ಸಿನ ಜಿಡಿಪಿಯನ್ನು ಭಾರತ ಹಿಂದಿಕ್ಕಿದೆ ಎಂಬುದು ಪ್ರಚಾರಕ್ಕಾಗಿ ಕಟ್ಟಿದ ಕತೆ. ಈ ಕುರಿತು ‘ಡೈಲಿ ಒ’ ಜಾಲತಾಣಕ್ಕೆ ಸಲ್ಮಾನ್ ಅನೀಸ್ ಸೋಜ್ ಬರೆದ ವಿಶ್ಲೇಷಣೆಯ ಭಾವಾನುವಾದ ಇಲ್ಲಿದೆ

ಭಾರತವು ಫ್ರಾನ್ಸ್ ದೇಶವನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು ಎಂಬುದು ಕಳೆದ ವಾರವಿಡೀ ಸುದ್ದಿಯಾಗಿದ್ದ ವಿಷಯ. ೨೦೧೭ರಲ್ಲಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ೨.೫೯೭ ಟ್ರಿಲಿಯನ್ ಡಾಲರ್ ಆಗಿದ್ದು, ೨.೫೮೨ ಟ್ರಿಲಿಯನ್ ಡಾಲರ್ ಜಿಡಿಪಿಯನ್ನು ಹೊಂದಿರುವ ಫ್ರಾನ್ಸ್ ದೇಶವನ್ನು ಹಿಂದಿಕ್ಕಿದೆ ಎಂದು ಇತ್ತೀಚಿನ ವಿಶ್ವಬ್ಯಾಂಕಿನ ಮಾಹಿತಿ ಹೇಳುತ್ತದೆ. ಈ ವರ್ಷ, ಭಾರತವು ಆರ್ಥಿಕ ಉತ್ಪನ್ನದ ವಿಷಯದಲ್ಲಿ ಇಂಗ್ಲೆಂಡ್ ದೇಶವನ್ನೂ ಹಿಂದಿಕ್ಕುವ ಸಾಧ್ಯತೆ ಇದೆ ಎಂಬುದು ಮತ್ತೊಂದು ಲೆಕ್ಕಾಚಾರ

ಈ ವಿಷಯ ಹೊರಬಿದ್ದಿದ್ದೇ ತಡ ಮೋದಿ ಸರ್ಕಾರವು ಈ ಸಾಧನೆ ಮಾಡಿದ ಶ್ರೇಯಸ್ಸನ್ನು ಪಡೆದುಕೊಳ್ಳುವುದಕ್ಕೆ ತ್ವರಿತವಾಗಿ ಪ್ರಯತ್ನಿಸಿತು. ಈ ಗುರಿ ಮುಟ್ಟುವುದಕ್ಕೆ ಹಿಂದಿನ ಹಲವು ಸರ್ಕಾರಗಳು ಮಾಡಿದ ಸಂಚಯಿತ ಪ್ರಯತ್ನಗಳು ಕಾರಣ ಎಂಬುದು ಸುಳ್ಳಲ್ಲ. ಆದರೆ, ಪ್ರಚಾರದ ಗೀಳಿಗೆ ಬಿದ್ದಿರುವ ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತದೆ ಎಂದು ನಿರೀಕ್ಷಿಸುವುದು ಸರಿಯಲ್ಲ.

ಭಾರತದ ಮುಂದಿರುವ ಗಣನೀಯ ಅಭಿವೃದ್ಧಿ ಸವಾಲುಗಳನ್ನು ಈ ಸಾಧನೆ ಮಸುಕುಗೊಳಿಸುತ್ತದೆ ಎಂದು ವಾದಿಸುವುದಕ್ಕೆ ನಾನು ಈ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ. ಭಾರತವು ಫ್ರಾನ್ಸಿನಂತಹ ಮುಂದುವರಿದ ದೇಶಗಳಿಗಿಂತ ಮಾತ್ರವಲ್ಲದೆ, ಚೀನಾದಂತಹ ಮುಂದುವರಿಯುತ್ತಿರುವ ಆರ್ಥಿಕತೆಗಳಿಗಿಂತಲೂ ಬಹಳಷ್ಟು ಹಿಂದೆ ಇದೆ ಎಂಬ ಸತ್ಯವನ್ನು ಬೆಟ್ಟು ಮಾಡಿ ತೋರಿಸುತ್ತಿರುವ ಸಾಂದರ್ಭಿಕ ಅಂಕಿ-ಅಂಶಗಳನ್ನು ಕೈಬಿಟ್ಟು ಈ ಮೈಲುಗಲ್ಲಿನ ಬಗ್ಗೆ ಮಾತ್ರ ಚರ್ಚೆ ಮಾಡುವುದು ಕಪಟತನವಾಗುತ್ತದೆ.

ಪೂರ್ಣಾರ್ಥದಲ್ಲಿ ಹೇಳುವುದಾದರೆ, ಭಾರತದ ಆರ್ಥಿಕತೆ ಬೆಳೆದಿದೆ. ಚಾರಿತ್ರಿಕವಾಗಿ ಸಂಪದ್ಭರಿತವಾದ ಮತ್ತು ಬೃಹತ್ತಾದ ಆರ್ಥಿಕತೆಯಾಗಿರುವ ಫ್ರಾನ್ಸ್ ದೇಶವನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವುದು ಸಾಮಾನ್ಯ ಸಂಗತಿಯಲ್ಲ. ಅದು ಖುಷಿಪಡಬೇಕಾದ ವಿಷಯವೇ. ಆದರೆ, ಜಿಡಿಪಿಯನ್ನು ತಲಾವಾರು ಹಂಚಿ ನೋಡಿದರೆ ವಾಸ್ತವವು ಖುಷಿಗಿಂತ ಬಹಳ ದೂರ ಇರುವುದು ಮನವರಿಕೆಯಾಗುತ್ತದೆ. ಫ್ರಾನ್ಸಿನ ತಲಾವಾರು ಜಿಡಿಪಿ ೪೨,೫೬೮ ಡಾಲರ್ ಇದ್ದರೆ ೧೩೦ ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ತಲಾವಾರು ಜಿಡಿಪಿ ೧,೯೬೪ ಡಾಲರ್ ಇದೆ.

ಇದನ್ನೂ ಓದಿ : ಜಿಡಿಪಿ ಶೇ.7ರ ಗಡಿ ದಾಟಲಿದೆಯೇ? ಸಿಎಸ್ಒ ನಿಖರ ಅಂಕಿ-ಅಂಶ ನೀಡಲಿದೆಯೇ?

ಬೇರೆ ಮಾತಿನಲ್ಲಿ ಹೇಳುವುದಾದರೆ, ಪ್ರಸ್ತುತ ಭಾರತದ ತಲಾವಾರು ಜಿಡಿಪಿಯು ಫ್ರಾನ್ಸಿನ ತಲಾವಾರು ಜಿಡಿಪಿಯ ಶೇಕಡ ೪.೬ರಷ್ಟಿದೆಯಷ್ಟೆ. ಅದೇ ರೀತಿಯಲ್ಲಿ ಭಾರತದ ತಲಾವಾರು ಜಿಡಿಪಿಯು ಅಮೆರಿಕದ ತಲಾವಾರು ಜಿಡಿಪಿಯ ಶೇಕಡ ೪ರಷ್ಟಿದೆ.

ತನ್ನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವುದಕ್ಕೆ ಭಾರತ ನಡೆಸಿದ ಹೋರಾಟವನ್ನು ನೋಡುವುದಾದರೆ, ೧೯೬೦ರಲ್ಲಿ ಭಾರತದ ತಲಾವಾರು ಜಿಡಿಪಿಯು ಅಮೆರಿಕ ಅಥವಾ ಫ್ರಾನ್ಸಿನ ತಲಾವಾರು ಜಿಡಿಪಿಯ ಶೇಕಡ ೨ರಷ್ಟು ಮಾತ್ರ ಇತ್ತು. ೫೭ ವರ್ಷಗಳಲ್ಲಿ ಅಭಿವೃದ್ಧಿಯ ದರವು ನಿಧಾನವಾಗಿ ಏರಿಕೆಯಾಗಿದ್ದರಿಂದ ಈಗ ಭಾರತದ ತಲಾವಾರು ಜಿಡಿಪಿಯು ಅಮೆರಿಕದ ತಲಾವಾರು ಜಿಡಿಪಿಯ ಶೇಕಡ ೩.೭ರಷ್ಟು ಹಾಗೂ ಫ್ರಾನ್ಸಿನ ತಲಾವಾರು ಜಿಡಿಪಿಯ ಶೇಕಡ ೪.೬ರಷ್ಟು ಆಗುವುದಕ್ಕೆ ಸಾಧ್ಯವಾಗಿದೆ.

ಇದೇ ಅವಧಿಯಲ್ಲಿ, ತ್ವರಿತ ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಹೆಚ್ಚೂಕಡಿಮೆ ಹೊರಗೇ ಇದ್ದ ಚೀನಾವು ಅಮೆರಿಕ ಮತ್ತು ಫ್ರಾನ್ಸ್‌ಗಳ ಶೇಕಡ ೧೪ರಷ್ಟಿದ್ದ ತನ್ನ ತಲಾವಾರು ಜಿಡಿಪಿಯನ್ನು ಶೇಕಡ ೧೭.೨ಕ್ಕೆ ಏರಿಸಿಕೊಳ್ಳುವಲ್ಲಿ ಸಫಲವಾಗಿದೆ.

ಮುಂದುವರಿದ ದೇಶಗಳ ಆದಾಯ ಮಟ್ಟಗಳಿಗೆ ಏರುವುದಕ್ಕೆ ಒಂದಿಷ್ಟು ಮಟ್ಟಿಗೆ ಸಾಧ್ಯವಿದೆಯಾದರೂ ಅದೊಂದು ಸುದೀರ್ಘವಾದ ತ್ರಾಸದಾಯಕ ಪ್ರಕ್ರಿಯೆ ಆಗಿರುತ್ತದೆ ಎಂಬುದನ್ನು ಭಾರತ ಮತ್ತು ಚೀನಾಗಳ ಅನುಭವಗಳು ತೋರಿಸಿಕೊಟ್ಟಿವೆ.

ಚೀನಾಕ್ಕೆ ಹೋಲಿಸಿದರೆ ಭಾರತದ ಪರಿಸ್ಥಿತಿ ಹೆಚ್ಚು ಸವಾಲಿನದ್ದಾಗಿರುವುದಕ್ಕೆ ಪ್ರಧಾನ ಕಾರಣ ಏನೆಂದರೆ, ವೇಗವಾಗಿ ಬೆಳೆಯುತ್ತಿರುವ ಆದಾಯ ಮತ್ತು ಸಂಪತ್ತಿನ ಅಸಮಾನತೆ. ಥಾಮಸ್ ಪಿಕೆಟಿಯಂತಹ ತಜ್ಞರ ಪ್ರಕಾರ, ೧೯೮೦ ಮತ್ತು ೨೦೧೫ರ ನಡುವಿನ ಅವಧಿಯಲ್ಲಿ, ಭಾರತದ ಬೆಳವಣಿಗೆಯ ಪಾಲಿನಲ್ಲಿ ತುತ್ತತುದಿಯಲ್ಲಿರುವ ಶೇಕಡ ೦.೧ರಷ್ಟು ಭಾರತೀಯರ ಪಾಲು ಬುಡಮಟ್ಟದಲ್ಲಿರುವ ಶೇಕಡ ೫೦ರಷ್ಟು ಭಾರತೀಯರ ಪಾಲಿಗಿಂತ ಹೆಚ್ಚಾಗಿತ್ತು. ೧೯೮೦ರ ದಶಕದಿಂದ ಈಚೆಗಿನ ಅವಧಿಯನ್ನು ಪರಿಗಣಿಸಿದರೆ ಈಗ ಭಾರತದ ಸಂಪತ್ತಿನ ಅಸಮಾನ ಹಂಚಿಕೆ ತೀರಾ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಜಾಗತಿಕ ಅಸಮಾನತೆ ಕುರಿತ ತನ್ನ ಇತ್ತೀಚಿನ ವರದಿಯಲ್ಲಿ ಆಕ್ಸ್ಫಾಮ್ ಸಂಸ್ಥೆ ಗುರುತಿಸಿದೆ. ಕಳೆದ ವರ್ಷ ಭಾರತದಲ್ಲಿ ಸೃಷ್ಟಿಯಾದ ಸಂಪತ್ತಿನಲ್ಲಿ ಶೇಕಡ ೭೩ರಷ್ಟನ್ನು ತುತ್ತತುದಿಯಲ್ಲಿರುವ ಶೇಕಡ ೧ರಷ್ಟು ಮಂದಿ ಬಾಚಿಕೊಂಡಿದ್ದರೆ ಬುಡದಲ್ಲಿರುವ ಶೇಕಡ ೫೦ರಷ್ಟು ಮಂದಿಯ ಸಂಪತ್ತು (ಅದನ್ನು ಸಂಪತ್ತು ಅಂತ ಕರೆಯುವುದೇ ಆದರೆ) ಕೇವಲ ಶೇಕಡ ೧ರಷ್ಟು ಮಾತ್ರ ಏರಿಕೆಯಾಗಿದೆ.

ಇಲ್ಲಿ ಗಮನಿಸಬೇಕಿರುವ ಇನ್ನೊಂದು ಅಂಶ ಎಂದರೆ, ಬುಡದಲ್ಲಿರುವ ಈ ಶೇಕಡ ೫೦ರಷ್ಟು ಮಂದಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವುದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಲಾವಾರು ಆದಾಯ ಮತ್ತು ಸಂಪತ್ತುಗಳನ್ನು ಪಡೆಯುತ್ತಿರುವ ವಿಷಯದಲ್ಲಿ ಮಾತ್ರ ಅಲ್ಲ, ಜೊತೆಗೆ ಅದರ ಪರಿಣಾಮವಾಗಿರುವ ಮೂಲ ಮಾನವ ಅಭಿವೃದ್ಧಿ ಸೂಚ್ಯಂಕಗಳ ವಿಷಯದಲ್ಲೂ ಕೂಡ. ಈ ಜನರಿಗೆ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕತೆಗಳಂತಹ ಮೂಲ ಅಗತ್ಯಗಳೂ ಕೂಡ ಅತ್ಯಂತ ಸೀಮಿತ ಪ್ರಮಾಣದಲ್ಲಿ ದೊರೆಯುತ್ತಿವೆ.

ವಿಶ್ವದಲ್ಲಿ ಅತ್ಯಂತ ಹೆಚ್ಚು ಬಡವರನ್ನು ಹೊಂದಿರುವ ದೇಶ ಎಂಬ ಹಣೆಪಟ್ಟಿಯನ್ನು ಭಾರತ ಕಳಚಿಕೊಂಡಿದ್ದು ನಿಜವಾದರೂ, ಕೋಟ್ಯಂತರ ಜನ ಇನ್ನೂ ಬಡತನದ ಕೂಪದಲ್ಲೇ ಇರುವುದು ಸುಳ್ಳಲ್ಲ. ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ (ಯುಎನ್ಡಿಪಿ) ಪ್ರಕಾರ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕವು ಕಳೆದ ಮೂರುವ ವರ್ಷಗಳಲ್ಲಿ ೧೩೧ನೇ ಸ್ಥಾನದಲ್ಲೇ ಗಟ್ಟಿಯಾಗಿ ನಿಂತುಕೊಂಡಿದೆ. ಇನ್ನೊಂದೆಡೆಗೆ, ಚೀನಾವು ಈ ವಿಷಯದಲ್ಲಿ ಭಾರತಕ್ಕಿಂತ ೪೧ ಅಂಕಗಳಷ್ಟು ಮೇಲಿದ್ದು ಬಹಳಷ್ಟು ಉತ್ತಮ ಪರಿಸ್ಥಿತಿಯಲ್ಲಿದೆ.

ಭಾರತವು ಇದೇ ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳದ, ಉದ್ಯೋಗರಹಿತ ಬೆಳವಣಿಗೆಯ ಹಾದಿಯಲ್ಲೇ ಮುಂದುವರಿದರೆ ಭಾರತಕ್ಕೆ ಮುಂದುವರಿದ ದೇಶಗಳ ತಲಾವಾರು ಆದಾಯದ ಅರ್ಧದಷ್ಟು ಸಾಧಿಸುವುದಕ್ಕೂ ಶತಮಾನಗಳೇ ಬೇಕಾಗುತ್ತವೆ.

ಸರ್ಕಾರದ ಪ್ರಚಾರ ಗೀಳಿನಿಂದ ಏನೂ ಅಪಾಯ ಇಲ್ಲ ಎಂದು ಹೇಳಲಾಗುವುದಿಲ್ಲ. ಆರ್ಥಿಕತೆಯ ಆಂತರಿಕ ಆಯಾಮಗಳನ್ನು ಬಿಚ್ಚಿಡದೇ ಕೇವಲ ಜಿಡಿಪಿ ಅಭಿವೃದ್ಧಿಯ ಮೇಲಷ್ಟೇ ಒತ್ತು ಕೊಡುವುದು ಅಲ್ಪತೃಪ್ತಿ ನೀಡಿ ಅಂತಿಮವಾಗಿ ನಿರಾಶೆಗೆ ಕಾರಣವಾಗುತ್ತದೆ. ನಮ್ಮ ಸಂಸ್ಥೆಗಳು 'ಎಲ್ಲವೂ ಚೆನ್ನಾಗಿದೆ' ಎಂಬ ಮನಸ್ಥಿತಿಯಲ್ಲೇ ಇದ್ದುಬಿಟ್ಟರೆ ನಮ್ಮ ನೀತಿಚೌಕಟ್ಟು ಹಾಳಾಗಿಹೋಗುವ ಸಂಭವ ಹೆಚ್ಚಾಗುತ್ತದೆ.

ಭಾರತವು ಸಾಂಸ್ಥಿಕ ಅಭಿವೃದ್ಧಿಗೆ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣಗಳಂತಹ ಮಾನವ ಬಂಡವಾಳದ ಬೆಳವಣಿಗೆಗೆ ಹೆಚ್ಚೆಚ್ಚು ಗಮನ ಕೊಡಬೇಕು ಎಂದು ನನಗನ್ನಿಸುತ್ತದೆ. ಇಂತಹ ಮಧ್ಯಪ್ರವೇಶಿಕೆಗಳಿಂದ ಉತ್ತಮ ಫಲಿತಾಂಶಗಳು ಬರುತ್ತವೆ; ಮುಂದುವರಿದ ದೇಶಗಳ ಆದಾಯ ಮಟ್ಟಗಳನ್ನು ಮುಟ್ಟುವುದಕ್ಕೆ ನಾವು ಪ್ರಯತ್ನಿಸುತ್ತಿರುವಾಗ ನಮ್ಮ ಜನರು ಒಂದಿಷ್ಟು ಅನುಕೂಲಕರವಾಗಿ ಘನತೆಯಿಂದ ಬಾಳುವುದಕ್ಕೆ ನೆರವಾಗುತ್ತದೆ.

ಬೇಸರದ ವಿಷಯ ಏನೆಂದರೆ, ಈಗಿರುವ ಸರ್ಕಾರಕ್ಕೆ ಮಾನವ ಬಂಡವಾಳದ ಬೆಳವಣಿಗೆ ಆದ್ಯತೆಯ ವಿಷಯವಾಗಿಲ್ಲ. ಉದಾಹರಣೆಗೆ, ಶಿಕ್ಷಣದ ಅಭಿವೃದ್ಧಿಗಾಗಿನ ಸಾರ್ವಜನಿಕ ವೆಚ್ಛವನ್ನು ಜಿಡಿಪಿಯ ಶೇಕಡ ೬ರಷ್ಟಕ್ಕೆ ಏರಿಸಲಾಗುವುದು ಎಂಬ ಭರವಸೆಗಳ ನಡುವೆಯೇ ಅದು ಜಿಡಿಪಿಯ ಶೇಕಡ ೩ಕ್ಕಿಂತ ಕೆಳಗೆ ಕುಸಿದಿದೆ. ನಾವು ಚೀನಾದ ಉತ್ಪಾದನಾ ಯಶಸ್ಸನ್ನು ಅನುಕರಿಸುವುದಕ್ಕೇ ಹೆಚ್ಚಿನ ಸಮಯವನ್ನು ವಿನಿಯೋಗ ಮಾಡುತ್ತಿದ್ದೇವೆಯೇ ಹೊರತು ಆ ದೇಶ ಆ ಯಶಸ್ಸಿಗೆ ಕಾಋಣವಾಗಿರುವ ಶಿಕ್ಷಣ ಕ್ಷೇತ್ರಕ್ಕೆ ಯಾವ ರೀತಿಯ ಮಹತ್ವ ಕೊಟ್ಟಿದೆ ಎಂಬುದನ್ನು ನೋಡುವ ಗೋಜಿಗೆ ಹೋಗುವುದಿಲ್ಲ. ಇಂತಹ ವ್ಯೂಹತಾಂತ್ರಿಕ ಪ್ರಮಾದಗಳು ನಮಗೆ ದುಬಾರಿಯಾಗಿ ಪರಿಣಮಿಸುತ್ತವೆ. ಮುಂದಿನ ಸರ್ಕಾರವು ಮಾನವ ಬಂಡವಾಳ ಅಭಿವೃದ್ಧಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸುತ್ತದೆ ಎಂದು ನಾನು ಆಶಿಸುತ್ತೇನೆ.

ಅತ್ಯಾಕರ್ಷಕ ಶೀರ್ಷಿಕೆಗಳು ನಮ್ಮಲ್ಲಿ ಸುರಕ್ಷಿತ ಭ್ರಾಂತಿ ಮೂಡಿಸುವುದಕ್ಕೆ ಅವಕಾಶ ನೀಡಕೂಡದು. ನಾವು ಸತ್ಯವನ್ನು ಕಂಡುಕೊಳ್ಳಬೇಕು; ನಮ್ಮೆದುರು ಇರುವ ಅಗಾಧ ಸವಾಲುಗಳನ್ನು ಒಪ್ಪಿಕೊಳ್ಳಬೇಕು; ಹಾಗೂ ಹಂಚಿತ ಸಾಮಾಜೋ-ಆರ್ಥಿಕ ಪ್ರಗತಿಗೆ ನೆರವಾಗಬಲ್ಲ ಕೀಲಕ ಕ್ಷೇತ್ರಗಳನ್ನು ಸುಧಾರಿಸುವುದಕ್ಕೆ ಶ್ರಮವಹಿಸಿ ದುಡಿಯಬೇಕು. ಬಹಳಷ್ಟು ನಾಗರಿಕರಿಗೆ ಅಚ್ಚೇ ದಿನ್ (ಸುದಿನಗಳು) ಇನ್ನೂ ದೂರದಲ್ಲೇ ಇರುವ ಇಂತಹ ಪರಿಸ್ಥಿತಿಯಲ್ಲಿ ತನ್ನೆದುರಿಗಿರುವ ಸವಾಲುಗಳನ್ನು ನಿಭಾಯಿಸಲು ಭಾರತಕ್ಕೆ ಬೇಕಿರುವುದು ಕಡಿಮೆ ಪ್ರಚಾರ, ಹೆಚ್ಚು ಹೊಸ ಆಲೋಚನೆಗಳು ಮತ್ತು ದೃಢ ನೀತಿಗಳು ಎಂಬುದನ್ನು ನಾವು ಮರೆಯಬಾರದು.

ಲೇಖಕ ಸಲ್ಮಾನ್ ಅನೀಸ್ ಸೋಜ್ ಅಂತಾರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳ ವಿಶ್ಲೇಷಕ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More