ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್, ನಿಫ್ಟಿ; ಹೂಡಿಕೆಗಿದು ಸಕಾಲವೇ?

ದೇಶದ ಬೃಹದಾರ್ಥಿಕತೆಯು ಹಣದುಬ್ಬರ, ಚಾಲ್ತಿ ಖಾತೆ ಕೊರತೆ, ವ್ಯಾಪಾರ ಕೊರತೆಯಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಈ ನಡುವೆಯೇ, ವಿಸ್ತೃತ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ನಿಫ್ಟಿ, ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿವೆ. ಹಾಗಾದರೆ ಹೂಡಿಕೆ ಮಾಡಲು ಇದು ಸಕಾಲವೇ?

ಹಣದುಬ್ಬರ ಹೆಚ್ಚಳ, ಚಾಲ್ತಿ ಖಾತೆ ಕೊರತೆ, ವ್ಯಾಪಾರ ಕೊರತೆಯಂತಹ ಆರ್ಥಿಕತೆ ಹಿನ್ನಡೆಗೆ ಕಾರಣವಾಗುವ ವಿದ್ಯಮಾನಗಳ ನಡುವೆಯೇ ವಿಸ್ತೃತ ಷೇರುಪೇಟೆಯ ಸೂಚ್ಯಂಕಗಳಾದ ನಿಫ್ಟಿ, ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿ ದಾಖಲೆ ಮಾಡಿವೆ.

ಷೇರುಪೇಟೆ ಸೂಚ್ಯಂಕಗಳು ಗರಿಷ್ಠ ಏರಿರುವುದರಿಂದ ಒಂದು ಸುತ್ತು ಶೇ.5-10ರಷ್ಟು ಕುಸಿಯುತ್ತವೆ ಎಂಬ ಮಾರುಕಟ್ಟೆ ತಜ್ಞರ ಭವಿಷ್ಯವನ್ನು ನಿಫ್ಟಿ ಮತ್ತು ಸೆನ್ಸೆಕ್ಸ್ ತಲೆಕೆಳಗು ಮಾಡುತ್ತವೇ ಇವೆ. ತಜ್ಞರು ಕುಸಿತ ಭವಿಷ್ಯ ನುಡಿದ ನಂತರವೂ ಶೇ.10-12ರಷ್ಟು ಏರಿವೆ. ಈಗ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದೆ. ಕಳೆದ 9 ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ನಾಲ್ಕುಬಾರಿ ಗರಿಷ್ಠ ಮಟ್ಟ ದಾಖಲಿಸಿದೆ. ನಿಫ್ಟಿ ಮಕ್ತಾಯ ಹಂತದಲ್ಲಿ ಹೊಸ ದಾಖಲೆ ಮುರಿದಿಲ್ಲ. ಆದರೆ, ದಿನದ ವಹಿವಾಟಿನಲ್ಲಿ ಸರ್ವಕಾಲಿಕ ಗರಿಷ್ಠ ಮಟ್ಟ ದಾಟಿ ವಹಿವಾಟು ನಡೆಸಿದೆ.

ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ, ಕಳೆದ ಕೆಲವು ತಿಂಗಳಿಂದ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಶೇ.25-30ರಷ್ಟು ಕುಸಿದಿವೆ. ಆದರೆ, ನಿಫ್ಟಿ ಮತ್ತು ಸೆನ್ಸೆಕ್ಸ್ ಮಾತ್ರ ಏರುಮುಖದಲ್ಲಿವೆ. ಆದರೆ, ಎರಡು ವಹಿವಾಟು ದಿನಗಳಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಶೇ.4ರಷ್ಟು ಏರಿಕೆ ದಾಖಲಿಸಿವೆ. ಇದು ಮತ್ತೆ ಉಭಯ ಸೂಚ್ಯಂಕಗಳು ಏರುಹಾದಿಗೆ ಸರಿದಿರುವ ಮುನ್ಸೂಚನೆ ಎನ್ನಲಾಗುತ್ತಿದೆ.

ಹಾಗಾದರೆ, ಇದು ಹೂಡಿಕೆಗೆ ಸಕಾಲವೇ ಅಥವಾ ಲಾಭ ನಗದೀಕರಣ ಮಾಡಿಕೊಳ್ಳುವುದೇ ಜಾಣತನವೇ? ಈ ಪ್ರಶ್ನೆಗಳಿಗೆ ಉತ್ತರ ಪಡೆಯುವುದಕ್ಕಿಂತ ಮುಂಚೆ, ದೇಶದ ಆರ್ಥಿಕತೆ ಹಣದುಬ್ಬರ, ಚಾಲ್ತಿ ಖಾತೆ ಕೊರತೆ, ವ್ಯಾಪಾರ ಕೊರತೆಯ ಬಿಕ್ಕಟ್ಟು ಎದುರಿಸುತ್ತಿರುವ ಹೊತ್ತಿನಲ್ಲೂ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗುತ್ತಿರುವ ಕಾರಣವಾದರೂ ಏನು ಎಂಬುದನ್ನು ತಿಳಿಯುವುದು ಒಳಿತು.

ಮಾರುಕಟ್ಟೆಗೆ ಹೂಡಿಕೆ ಪ್ರವಾಹವೇ ಹರಿದುಬರುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಮೀರಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮ್ಯೂಚುವಲ್ ಫಂಡ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಹೆಚ್ಚುತ್ತಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (ಎಸ್ಐಪಿ) ಹೂಡಿಕೆಯೇ ಮಾಸಿಕ 10,000 ಕೋಟಿ ರುಪಾಯಿ ದಾಟುತ್ತಿದೆ. ಅಂದರೆ, ಅಸೆಟ್ ಮ್ಯಾನೆಜ್ಮೆಂಟ್ ಕಂಪನಿಗಳು ದೊಡ್ಡ ಪ್ರಮಾಣದ ನಗದು ಹೊಂದಿವೆ. ಹೀಗಾಗಿ, ಪೇಟೆಗೆ ನಗದು ಹರಿವು ಹೆಚ್ಚುತ್ತಿದೆ. ವಿದೇಶಿ ಹೂಡಿಕೆದಾರರು ಹಿಂದಕ್ಕೆ ಪಡೆದ ಪ್ರಮಾಣಕ್ಕಿಂತ ಹೆಚ್ಚು ಮೊತ್ತವನ್ನು ದೇಶೀಯ ಹೂಡಿಕೆದಾರರು ಪೇಟೆಗೆ ತರುತ್ತಿದ್ದಾರೆ.

ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಮಟ್ಟಕ್ಕೆ ಏರಲು ಮತ್ತೊಂದು ಪ್ರಮುಖ ಕಾರಣ ಎಂದರೆ, ಪೇಟೆಗೆ ಬರುತ್ತಿರುವ ಹೂಡಿಕೆಯಲ್ಲಿ ಬಹುದೊಟ್ಟ ಪಾಲು ಆಯ್ದ ಹತ್ತು ಲಾರ್ಜ್ ಕ್ಯಾಪ್ ಷೇರುಗಳ ಮೇಲೆ ಹೂಡಿಕೆ ಆಗುತ್ತಿದೆ. ಮೊದಲ ಹತ್ತು ಲಾರ್ಜ್ ಕ್ಯಾಪ್ ಷೇರುಗಳು ನಿಫ್ಟಿ ಮತ್ತು ಸೆನ್ಸೆಕ್ಸ್ ನಲ್ಲಿ ಹೊಂದಿರುವ ವೇಯ್ಟೇಜ್ ಗರಿಷ್ಠ ಪ್ರಮಾಣದಲ್ಲಿದೆ.

ಅಂದರೆ, ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದರೂ, 30 ಷೇರುಗಳ ಸೆನ್ಸೆಕ್ಸ್‌ನಲ್ಲಿ 16 ಷೇರುಗಳು ಇಳಿಜಾರಿನಲ್ಲಿವೆ. ಅಂದರೆ, 14 ಷೇರುಗಳು ಮಾತ್ರ ಏರಿಕೆ ದಾಖಲಿಸಿವೆ. ಈ ಪೈಕಿ ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ, ಕೊಟಕ್ ಮಹಿಂದ್ರ ಬ್ಯಾಂಕ್, ಏಷಿಯನ್ ಪೇಂಟ್ಸ್, ಹಿಂದೂಸ್ತಾನ್ ಲಿವರ್, ಇನ್ಫೊಸಿಸ್ ಷೇರುಗಳು ಸೆನ್ಸೆಕ್ಸ್ ತ್ವರಿತ ಜಿಗಿಯಲು ಕಾರಣವಾಗಿವೆ.

2018ನೇ ಸಾಲಿನಲ್ಲಿ ಟಿಸಿಎಸ್ ಶೇ.50ರಷ್ಟು ಏರಿದೆ. ಕೋಟಕ್ ಮಹಿಂದ್ರ ಬ್ಯಾಂಕ್ ಶೇ.33, ಇನ್ಫೊಸಿಸ್ ಶೇ.31, ಹಿಂದೂಸ್ತಾನ್ ಲಿವರ್, ಏಷಿಯನ್ ಪೇಂಟ್ಸ್ ಶೇ.25ರಷ್ಟು ಏರಿವೆ. ಯೆಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಮಹಿಂದ್ರ ಅಂಡ್ ಮಹಿಂದ್ರ, ಇಂಡಸ್ ಇಂಡ್ ಬ್ಯಾಂಕ್, ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಐಟಿಸಿ, ಎಲ್ಅಂಡ್ ಟಿ, ಐಟಿಸಿ ಶೇ.1-24ರಷ್ಟು ಏರಿಕೆ ದಾಖಲಿಸಿವೆ.

ಧೀರ್ಷಕಾಲದ ಆದಾಯ, ಲಾಭ, ಹೂಡಿಕೆ ಮೇಲಿನ ಗಳಿಕೆ ಮತ್ತು ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ ಹೆಚ್ಚಳ ಮತ್ತು ಪ್ರತಿ ಷೇರಿನ ಮೇಲಿನ ಲಾಭ ಸ್ಥಿರವಾಗಿರುವ ಷೇರುಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ಹೀಗಾಗಿ, ಐಟಿ ಮತ್ತು ಹಣಕಾಸು ವಲಯದ ಷೇರುಗಳಿಗೆ ಬೇಡಿಕೆ ಇದೆ. ಮುಖ್ಯವಾಗಿ, ಖಾಸಗಿ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಲಾಭ ಗಳಿಕೆ ಭವಿಷ್ಯದಲ್ಲಿ ಹೆಚ್ಚುವ ನಿರೀಕ್ಷೆ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಜಿಎಸ್ಟಿ ಜಾರಿಗೆ ಬಂದ ನಂತರ ಎಫ್ಎಂಸಿಜಿ ಕಂಪನಿಗಳ ಆದಾಯ ಮತ್ತು ಲಾಭ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಈ ವಲಯದ ಕಂಪನಿಗಳ ಮೇಲೆ ಹೂಡಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಇನ್ಫಿ ಲಿಸ್ಟಾಗಿ 25 ವರ್ಷ; ಆಗ ₹100 ಹೂಡಿಕೆ ಮೌಲ್ಯ ಈಗ ₹6,80,000!

ಸಾಮಾನ್ಯ ಹೂಡಿಕೆದಾರರು ಏನು ಮಾಡಬೇಕು? ಈ ಹಂತದಲ್ಲಿ ಈಗಾಗಲೇ ವರ್ಷದ ಗರಿಷ್ಠ ಮತ್ತು ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿರುವ ಷೇರುಗಳ ಮೇಲಿನ ಲಾಭ ನಗದೀಕರಣ ಮಾಡಿಕೊಳ್ಳುವುದು ಈ ಹಂತದಲ್ಲಿ ಜಾಣತನ. ಪ್ರತಿಯೊಂದು ಷೇರುಗಳು, ಸೂಚ್ಯಂಕಗಳು ವರ್ಷದ ಅಥವಾ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ನಂತರ ಒಂದು ಹಂತದಲ್ಲಿ ಕೊಂಚ ಮಟ್ಟಿಗೆ ಇಳಿದು ಮತ್ತೆ ಏರಿ ಸ್ಥಿರಗೊಳ್ಳುತ್ತವೆ. ಈ ಹಂತದಲ್ಲಿ ಶೇ.10ರಷ್ಟು ಇಳಿದ ನಂತರ ಮರುಹೂಡಿಕೆ ಮಾಡಬಹುದು.

ಉಳಿದಂತೆ ಸ್ಮಾಲ್ ಮತ್ತು ಮಿಡ್ ಕ್ಯಾಪ್ ವಲಯದ ಹತ್ತಾರು ಷೇರುಗಳು ಗರಿಷ್ಠ ಮಟ್ಟದಿಂದ ಶೇ.30-60ರಷ್ಟು ಕುಸಿದಿವೆ. ಈ ಪೈಕಿ ಆಯ್ದ ಷೇರುಗಳ ಮೇಲೆ ಖರೀದಿಸಬಹುದು. ದೀರ್ಘಕಾಲದ ಹೂಡಿಕೆ ಮಾಡುವವರು ಇಂತಹ ಷೇರುಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More