ಶಿರೂರು ಶ್ರೀ ಸಾವು | ರಮ್ಯಾ ಶೆಟ್ಟಿ ಬಂಧನ ಎಂಬ ಗೊಂದಲದ ಗೂಡು

ಜು.19ರಂದು ಅಸಹಜ ರೀತಿಯಲ್ಲಿ ಸಾವಿಗೀಡಾದ ಶಿರೂರು ಶ್ರೀಗಳ ಆಪ್ತವರ್ಗದಲ್ಲಿ ರಮ್ಯಾ ಶೆಟ್ಟಿಯವರೂ ಒಬ್ಬರು ಎನ್ನಲಾಗಿತ್ತು. ಸದ್ಯ, ಬೆಳ್ತಂಗಡಿ ತಾಲೂಕಿನ ನಾರವಿಯಲ್ಲಿ ರಮ್ಯಾ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಕುರಿತು ಗೊಂದಲಗಳು ಮುಂದುವರಿದಿವೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರವಿಯಲ್ಲಿ ರಮ್ಯಾ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ಬೆಳಗ್ಗಿನಿಂದಲೂ ವರದಿ ಪ್ರಸಾರ ಮಾಡುತ್ತಿದ್ದವು. ಇತ್ತ ಪತ್ರಿಕೆಗಳು ರಮ್ಯಾ ಶೆಟ್ಟಿ ಕಳೆದ ಮೂರು ದಿನಗಳಿಂದ ಪೊಲೀಸರ ವಶದಲ್ಲಿದ್ದಾರೆ ಎಂದು ಮಂಗಳೂರು ಮೂಲದ ಮಾಹಿತಿಯನ್ನು ಉಲ್ಲೇಖಿಸಿ ತಮ್ಮ ಜಾಲತಾಣದಲ್ಲಿ ಪ್ರಕಟಿಸಿದ್ದವು.

“ಭಾನುವಾರ ಮಧ್ಯಾಹ್ನ ಆಳದಂಗಡಿಯ ದೇವಸ್ಥಾನವೊಂದರ ಬಳಿ ರಮ್ಯಾ ಇದ್ದ ಕಾರಿನ ಟಯರ್ ಪಂಕ್ಚರ್ ಆಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ರಮ್ಯಾರನ್ನು ಪತ್ತೆ ಮಾಡಿದ್ದರು. ಅವರೊಂದಿಗೆ ಕಾರಿನಲ್ಲಿ ನಾಲ್ವರು ಇದ್ದರು. ರಮ್ಯಾ ಬುರ್ಖಾ ಧರಿಸಿದ್ದರು,” ಎಂಬ ಸುದ್ದಿಗಳು ವರದಿಯಾಗಿದ್ದವು. ಆದರೆ, ಮಂಗಳವಾರ ಮಧ್ಯಾಹ್ನ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಮಾಧ್ಯಮಗಳ ವರದಿಯನ್ನು ನಿರಾಕರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಕೂಡ, "ಅದೆಲ್ಲ ಸುಳ್ಳು ಸುದ್ದಿ,” ಎಂದಿದ್ದಾರೆ.

“ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಮುಂದುವರಿದಿದೆ. ಸಿಸಿ ಟಿವಿ ಫೂಟೇಜ್ ವಿಚಾರವಾಗಿಯೂ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ಬಳಿಕ ಉಳಿದ ವಿಚಾರಗಳನ್ನು ತಿಳಿಸಲಾಗುವುದು,” ಎಂದು ಅವರು ಹೇಳಿದ್ದಾರೆ.

ಕೆಲವು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಿಂಬರಗಿ, “ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಊಹಾಪೋಹದ ಸುದ್ದಿ,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ನನ್ನ ವಿರುದ್ಧದ ಆರೋಪಗಳ ಬಹಿರಂಗ ವಿಚಾರಣೆಗೆ ಸಿದ್ಧ: ಪೇಜಾವರ ಶ್ರೀ

“ಲಕ್ಷ್ಮೀವರ ತೀರ್ಥ ಶ್ರೀಗಳ ಸಾವಿಗೆ ರಮ್ಯಾ ಶೆಟ್ಟಿ ಕಾರಣ,” ಎಂದು ಶಿರೂರು ಮಠದ ಮ್ಯಾನೇಜರ್ ಸುನಿಲ್ ಸಂಪಿಗೆತ್ತಾಯ ಜುಲೈ 20ರಂದು ಆರೋಪಿಸಿದ್ದರು. “ಒಂದೂವರೆ ವರ್ಷದ ಹಿಂದೆ ಬಂದ ಪುತ್ತೂರಿನ 32 ವರ್ಷದ ರಮ್ಯಾ, ಮಠವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರು. ಸ್ವಾಮೀಜಿ ಮಾತುಗಳಿಗಿಂತ ಆಕೆಯ ಮಾತುಗಳು ನಡೆಯುತ್ತಿದ್ದವು,” ಇತ್ಯಾದಿ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಅದರ ಬೆನ್ನಿಗೇ, ಸ್ವಾಮೀಜಿಗಳ ಚಿನ್ನಾಭರಣಗಳನ್ನು ಧರಿಸಿದ ರಮ್ಯಾ ಚಿತ್ರಗಳು ವೈರಲ್ ಆಗಿದ್ದವು. ಕೆಲವರು ಅದು ಸ್ವಾಮೀಜಿಯವರ ಚಿನ್ನಾಭರಣಗಳಲ್ಲ ಎಂದು ಚಿತ್ರಗಳಲ್ಲಿರುವ ಆಭರಣದ ವ್ಯತ್ಯಾಸಗಳನ್ನು ಉಲ್ಲೇಖಿಸಿ ವಾದಿಸಿದ್ದರು.

ಈ ಮಧ್ಯೆ, ರಮ್ಯಾ ಶೆಟ್ಟಿಯನ್ನು ಮಠಕ್ಕೆ ಪರಿಚಯಿಸಿದ ಸಂಶಯದ ಮೇಲೆ ಜಗ್ಗು (ಜಗದೀಶ್ ಪೂಜಾರಿ) ಎಂಬಾತನನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರು ಖಚಿತಪಡಿಸಿಲ್ಲ. ಇದರಿಂದಾಗಿ ರಮ್ಯಾ ಶೆಟ್ಟಿ ಬಂಧನದ ಬಗ್ಗೆ ಇರುವ ಗೊಂದಲ ಮುಂದುವರಿದಿದೆ.

ರಮ್ಯಾ ಸ್ವಂತ ಊರಿನ ಬಗ್ಗೆಯೂ ಊಹಾಪೋಹಗಳಿದ್ದು, ಕೆಲವರು ಆಕೆ ಪುತ್ತೂರು ಮೂಲದವರು ಎಂದರೆ, ಮತ್ತೆ ಕೆಲವರು ಸುಳ್ಯ ತಾಲೂಕಿನವರು ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಆಕೆಯ ಸ್ವಂತ ಸ್ಥಳ ಉತ್ತರ ಕನ್ನಡ ಎಂದರೆ, ಮತ್ತಷ್ಟು ಮಂದಿ ಮುಂಬೈ ಮೂಲದವರು ಎಂದು ಹೇಳುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More