ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ

ವಾಯುಮಾಲಿನ್ಯ ನಿಯಂತ್ರಣ, ಕೃಷಿಗೆ ನೆರವಾಗಲು ವಿಪ್ರೊ ಒಪ್ಪಿಗೆ

ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ವಿವಿಧ ವಿಚಾರಗಳ ಕುರಿತು ಚರ್ಚಿಸಿದರು. “ಬೆಂಗಳೂರಿನಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆ ಕೆಲಸ ಮಾಡಲು ವಿಪ್ರೊ ಸಿದ್ಧವಿದೆ. ಇದಕ್ಕಾಗಿ ಸರ್ಕಾರದಿಂದ ನೋಡಲ್‌ ಅಧಿಕಾರಿ ನೇಮಿಸಬೇಕು,” ಎಂದು ಪ್ರೇಮ್‌ಜಿ ಮನವಿ ಮಾಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರನ್ನು ಇದಕ್ಕೆ ನಿಯುಕ್ತಿಗೊಳಿಸಿದರು. ಉಳಿದಂತೆ, ಆಂಧ್ರಪ್ರದೇಶದಲ್ಲಿ ಕೃಷಿಗೆ ಪೂರಕ ಕೆಲಸ ಮಾಡುತ್ತಿದ್ದು, ಕರ್ನಾಟಕದಲ್ಲೂ ಅದನ್ನು ಮುಂದುವರಿಸಲಾಗುವುದು ಎಂದು ಪ್ರೇಮ್‌ಜಿ ತಿಳಿಸಿದ್ದಾಗಿ ಮುಖ್ಯಮಂತ್ರಿ ಸಚಿವಾಲಯ ಹೇಳಿದೆ

ರಷ್ಯಾ ಜೊತೆ ಸ್ನೇಹ ಸಂಬಂಧ ಅಸಾಧ್ಯದ ಮಾತು: ನಿಕ್ಕಿ ಹ್ಯಾಲೆ

ರಷ್ಯಾ ಹಾಗೂ ಅದರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರನ್ನು ಅಮೆರಿಕ ಎಂದಿಗೂ ನಂಬುವುದಿಲ್ಲ, ರಷ್ಯಾ ಜೊತೆ ಸ್ನೇಹ ಸಂಬಂಧ ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಇಂದು ಮಾಧ್ಯಮದೆದುರು ಅಭಿಪ್ರಾಯಪಟ್ಟಿದ್ದಾರೆ. ಜುಲೈ ೧೬ರಂದು ರಷ್ಯಾ ಹಾಗೂ ಅಮೆರಿಕ ಫಿನ್‌ಲ್ಯಾಂಡಿನಲ್ಲಿ ನಡೆಸಿದ ಶೃಂಗಸಭೆಯಲ್ಲಿ, “ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸರ್ಕಾರ 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ಒಂದು ಸುಳ್ಳು,” ಎಂದು ಹೇಳುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಉನ್ನತ ಗೂಢಚಾರ ಸಂಸ್ಥೆಯ ಅಭಿಪ್ರಾಯವನ್ನು ತಿರಸ್ಕರಿಸಿರುವುದು ದೊಡ್ಡ ವಿವಾದ ಸೃಷ್ಟಿಸಿತ್ತು.

ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ರಾಹುಲ್ ಒಬ್ಬರೇ ಇಲ್ಲ: ತೇಜಸ್ವಿ ಯಾದವ್

2019ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಅಭ್ಯರ್ಥಿಗಳು ಯಾರೆಂಬುದನ್ನು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ. ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಮಾತ್ರವಲ್ಲದೆ ಇತರ ನಾಯಕರೂ ಇದ್ದು, ಪ್ರತಿಪಕ್ಷಗಳೆಲ್ಲವೂ ಒಂದೆಡೆ ಕುಳಿತು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್, ಬಿಎಸ್‌ಸಿಪಿ ನಾಯಕಿ ಮಾಯಾವತಿ ಅವರೂ ಪ್ರಧಾನಿ ರೇಸ್‌ನಲ್ಲಿದ್ದಾರೆ,” ಎಂದಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ: ದೆಹಲಿಯಲ್ಲಿ ಡ್ರೋನ್, ಪ್ಯಾರಾಗ್ಲೈಡರ್ ನಿಷೇಧ

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಬಿಗಿಭದ್ರತೆ ಕೈಗೊಂಡಿರುವ ದೆಹಲಿ ಪೊಲೀಸರು, ಮುನ್ನೆಚ್ಚರಿಕೆ ಕ್ರಮವಾಗಿ ಡ್ರೋನ್ ಮತ್ತು ಪ್ಯಾರಾ ಗ್ಲೈಡರ್ ಹಾರಾಟ ನಿಷೇಧಿಸಿದ್ದಾರೆ. ಜುಲೈ 25ರಿಂದ ಆಗಸ್ಟ್ 15ರವರೆಗೆ ಡ್ರೋನ್, ಪ್ಯಾರಾಗ್ಲೈಡರ್ ಮತ್ತು ಹಾಟ್ ಬಲೂನ್ ಹಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ದೆಹಲಿ ಪೊಲೀಸ್ ಕಮೀಷನರ್ ಅಮೂಲ್ಯ  ಪಟ್ನಾಯಕ್ ಅಧಿಸೂಚನೆ ಹೊರಡಿಸಿದ್ದಾರೆ. ಭಯೋತ್ಪಾದಕರ ಸಂಭಾವ್ಯ ದಾಳಿ, ಸೇರಿದಂತೆ ಭದ್ರತೆಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಶೇ.34.5ರಷ್ಟು ಕುಸಿತ

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಡುವ ಠೇವಣಿಯು 2017ರಲ್ಲಿ ಶೇ.34.5ರಷ್ಟು ಕುಸಿದಿದೆ. ನರೇಂದ್ರ ಮೋದಿ ಪ್ರಧಾನಿ ಆದ ನಂತರ ಶೇ.80ರಷ್ಟು ಇಳಿದಿದೆ ಎಂದು ಹಂಗಾಮಿ ವಿತ್ತ ಸಚಿವ ಪಿಯುಶ್ ಗೋಯಲ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. 2017ರಲ್ಲಿ ಶೇ.50ರಷ್ಟು ಠೇವಣಿ ಹೆಚ್ಚಳವಾಗಿದೆ ಎಂಬ ಸ್ವಿಸ್ ನ್ಯಾಷನಲ್ ಬ್ಯಾಂಕ್ ಮಾಹಿತಿ ಆಧರಿಸಿ ಕಳೆದ ತಿಂಗಳು ಪ್ರಕಟವಾಗಿದ್ದ ವರದಿಯನ್ನು ಪಿಯುಶ್ ಗೋಯಲ್ ಅಲ್ಲಗಳೆದಿದ್ದಾರೆ. ಜಾಗತಿಕ ಕೇಂದ್ರ ಬ್ಯಾಂಕುಗಳ ಸಂಸ್ಥೆಯಾಗಿರುವ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ (ಬಿಐಎಸ್) ನೀಡಿರುವ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಸಚಿವರು, ಸ್ವಿಸ್ ನ್ಯಾಷನಲ್ ಬ್ಯಾಂಕ್ ನೀಡಿರುವ ಅಂಕಿ-ಅಂಶಗಳು ಸರಿಯಾಗಿಲ್ಲ. ಅವುಗಳನ್ನು ಸರಿಯಾಗಿ ಅರ್ಥೈಸಬೇಕು ಎಂದು ಹೇಳಿದ್ದಾರೆ. ಕಳೆದ ತಿಂಗಳು ಸ್ವಿಸ್ ನ್ಯಾಷನಲ್ ಬ್ಯಾಂಕ್ ಅಂಕಿ-ಅಂಶಗಳನ್ನು ಆಧರಿಸಿ ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ 7,000 ಕೋಟಿಗೆ ಏರಿದೆ ಎಂದು ಪಿಟಿಐ ವರದಿ ಮಾಡಿತ್ತು.

ನೇಪಾಳದ ಭಾರತೀಯ ರಾಯಭಾರ ಕೇಂದ್ರದ ತಾತ್ಕಾಲಿಕ ಕ್ಯಾಂಪ್ ಅ.೧ರಿಂದ ಬಂದ್

ಪ್ರಧಾನಿ ಮೋದಿಯವರ ನೇಪಾಳ ಭೇಟಿ ವೇಳೆ ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿಯವರು, ನೇಪಾಳದ ಬಿರಾಟ್ ನಗರದಲ್ಲಿ ಸ್ಥಾಪಿಸಲಾಗಿದ್ದ ಭಾರತಿಯ ರಾಯಭಾರ ಕೇಂದ್ರದ ತಾತ್ಕಾಲಿಕ ಕ್ಯಾಂಪ್ ಕಚೇರಿಯೊಂದನ್ನು ಮುಚ್ಚುವುಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸಮ್ಮತಿ ಸೂಚಿಸಿರುವ ಭಾರತೀಯ ರಾಯಭಾರ ಕಚೇರಿ, ಆಗಸ್ಟ್ 1ರಿಂದ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಾಗುವುದಾಗಿ ಅಧಿಕೃತ ಹೇಳಿಕೆ ನೀಡಿದ್ದು, ವಾಹನ ಪರವಾನಗಿಗಳ ವಿತರಣೆ, ದಾಖಲಾತಿಗಳ ದೃಢೀಕರಣ ಹಾಗೂ ಇತರ ಸೇವೆಗಳು ಅಂದಿನಿಂದ ಸ್ಥಗಿತಗೊಳಿಸಲಾಗುವುದೆಂದು ತಿಳಿಸಿದೆ. ಕೋಶಿ ಪ್ರವಾಹದಿಂದಾಗಿ ಭಾರತ ಹಾಗೂ ನೇಪಾಳ ಗಡಿಭಾಗದ ಪೂರ್ವ ಪಶ್ಚಿಮ ಹೆದ್ದಾರಿಯ 17 ಕಿಮೀ ರಸ್ತೆ ಹಾನಿಗೊಳಗಾದ ಹಿನ್ನೆಲೆಯಲ್ಲಿ, ಭಾರತೀಯ ವಾಹನಗಳ ಸಂಚಾರಕ್ಕೆ ಪರವಾನಗಿ ನೀಡಲು ನೇಪಾಳದ ಬಿರಾಟ್ ನಗರದಲ್ಲಿ ಸ್ಥಾಪಿಸಲಾಗಿತ್ತು.

‘ಎಂಟರ್‌ ದಿ ಡ್ರ್ಯಾಗನ್’ ರೀಮೇಕ್‌

ಬ್ರೂಸ್‌ ಲೀ ಅಭಿನಯದ ‘ಎಂಟರ್‌ ದಿ ಡ್ರ್ಯಾಗನ್‌’ ಸೂಪರ್‌ಹಿಟ್‌ ಚಿತ್ರವನ್ನು ವಾರ್ನರ್ ಬ್ರದರ್ಸ್‌ ಸಂಸ್ಥೆ ರೀಮೇಕ್‌ ಮಾಡಲು ನಿರ್ಧರಿಸಿದೆ. ‘ಡೆಡ್‌ಪೂಲ್‌ 2’ ನಿರ್ದೇಶಕ ಡೇವಿಡ್‌ ಲೀಚ್‌ ಸಿನಿಮಾ ನಿರ್ದೇಶಿಸಲಿದ್ದಾರೆ. ರಾಬರ್ಟ್‌ ಕ್ಲೌಸ್‌ ನಿರ್ದೇಶನದ ‘ಎಂಟರ್‌ ದಿ ಡ್ರ್ಯಾಗನ್‌’ (1973) ಬ್ರೂಸ್ ಲೀ ಅಭಿನಯದ ಕೊನೆಯ ಸಿನಿಮಾ. ಲೀ ಅಗಲಿದ ಆರು ದಿನಗಳ ನಂತರ ಹಾಂಗ್‌ಕಾಂಗ್‌ನಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಜಗತ್ತಿನಾದ್ಯಂತ ಸಿನಿಪ್ರಿಯರನ್ನು ಸೆಳೆದ ಈ ಮಾರ್ಷಲ್‌ ಆರ್ಟ್ಸ್‌ ಸಿನಿಮಾ ಬ್ರೂಸ್‌ ಲೀ ಅವರ ಅತ್ಯಂತ ಜನಪ್ರಿಯ ಚಿತ್ರವೂ ಹೌದು. ಭಾರತದಲ್ಲೂ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳೆದ ವರ್ಷ ‘ಆಟಾಮಿಕ್‌ ಬ್ಲಾಂಡ್‌’ ಚಿತ್ರದೊಂದಿಗೆ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ ಡೇವಿಡ್ ಲೀಚ್‌ಗೆ ‘ಡೆಡ್‌ಪೂಲ್‌ 2’ ಜನಪ್ರಿಯತೆ ತಂದುಕೊಟ್ಟಿತು. ಸದ್ಯ ಅವರೀಗ ಮತ್ತೆರೆಡು ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ.

ಮುಂದಿನ ಆದೇಶದವರೆಗೂ ಕೆ ಸಿ ವ್ಯಾಲಿಗೆ ನೀರು ಬಿಡುವಂತಿಲ್ಲ: ಹೈಕೋರ್ಟ್

ಕೆ ಸಿ ವ್ಯಾಲಿ ಯೋಜನೆಯ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಬಿಡಲಾಗುತ್ತಿರುವ ನೀರಿನಿಂದ ಜಿಲ್ಲೆಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಅಂತರ್ಜಲವೂ ಮಾಲಿನ್ಯಗೊಳ್ಳುತ್ತಿದೆ ಎಂಬ ಕಾರಣಕ್ಕೆ, ಮುಂದಿನ ವಿಚಾರಣೆವರೆಗೂ ಶುದ್ಧೀಕರಿಸಿದ ನೀರನ್ನು ಹರಿಬಿಡದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ವಿಭಾಗೀಯ ಪೀಠವು ಮಧ್ಯಂತರ ಆದೇಶ ನೀಡಿದೆ. ಯೋಜನೆಯನ್ನು ಪ್ರಾರಂಭಿಸುವ ಮೊದಲು ಅಂತರ್ಜಲ ಸಂರಕ್ಷಣೆಯ ಅಗತ್ಯ ಕಾರ್ಯವಿಧಾನಗಳು ಅನುಸರಿಸಲ್ಪಟ್ಟಿವೆ ಎಂದು ಹೇಳುವ ಮೂಲಕ ಸರ್ಕಾರದ ಪರ ವಕೀಲರು ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಯುವ ಭಾರತದ ಬೃಹತ್ ಮೊತ್ತ

ದ್ವೀಪರಾಷ್ಟ್ರ ಶ್ರೀಲಂಕಾ ಪ್ರವಾಸದಲ್ಲಿರುವ ಹತ್ತೊಂಬತ್ತು ವರ್ಷದೊಳಗಿನವರ ಯುವ ಭಾರತ ತಂಡ ಶ್ರೀಲಂಕಾ ೧೯ ವರ್ಷದೊಳಗಿನವರ ತಂಡದ ವಿರುದ್ಧ ಮೊದಲ ದಿನವೇ ಬೃಹತ್ ಮೊತ್ತ ದಾಖಲಿಸಿತು. ಹಂಬಾಂಟೋಟಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯಕ್ಕೆ ೯೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೨೮ ರನ್ ಗಳಿಸಿದೆ. ಆರಂಭಿಕ ಆಟಗಾರ ಅಥರ್ವ ಟೈಡ್ ೧೭೨ ಎಸೆತಗಳಲ್ಲಿ ೧೭೭ ರನ್ ಗಳಿಸಿದರೆ, ಪವನ್ ಶಾ ಕೂಡಾ ಶತಕ ಬಾರಿಸಿದರು. ೧೭೭ ರನ್ ಗಳಿಸಿ ಔಟಾಗದೆ ಉಳಿದಿರುವ ಶಾ ದ್ವಿಶತಕದ ಮೇಲೆ ಕಣ್ಣಿಟ್ಟಿದ್ದಾರೆ. ಈ ಜೋಡಿ ಎರಡನೇ ವಿಕೆಟ್‌ಗೆ ೨೬೩ ರನ್ ಗಳಿಸಿದ್ದರು. ಅಂದಹಾಗೆ, ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಅಥರ್ವ ೧೧೩ ರನ್ ಗಳಿಸಿದ್ದರು.

ಐಸಿಸಿ ಶ್ರೇಯಾಂಕ: ಅಶ್ವಿನ್ ಹಿಂದಿಕ್ಕಿದ ಜಡೇಜಾ

ನೂತನ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಪಿನ್‌ದ್ವಯರಾದ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಮೂರು ಮತ್ತು ಐದನೇ ಸ್ಥಾನ ಗಳಿಸಿದ್ದಾರೆ. ೮೧೧ ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ಅಶ್ವಿನ್ ಅವರಿಗಿಂತ ೮೬೬ ಪಾಯಿಂಟ್ಸ್ ಗಳಿಸಿರುವ ಜಡೇಜಾ ಮುಂಚೂಣಿಯಲ್ಲಿದ್ದಾರೆ. ಇನ್ನು, ಬೌಲರ್‌ಗಳ ವಿಭಾಗದಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ (೮೯೨) ಮೊದಲ ಸ್ಥಾನದಲ್ಲಿದ್ದಾರೆ. ಇತ್ತ, ಬ್ಯಾಟಿಂಗ್ ವಿಭಾಗದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನಿಂದ ಅಮಾನತುಗೊಂಡಿರುವ ಸ್ಟೀವ್ ಸ್ಮಿತ್ (೯೨೯ ಪಾಯಿಂಟ್ಸ್) ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (೯೦೩) ಎರಡನೇ ಸ್ಥಾನದಲ್ಲಿದ್ದರೆ ಇಂಗ್ಲೆಂಡ್‌ನ ಜೋ ರೂಟ್ (೮೫೫) ತೃತೀಯ ಸ್ಥಾನದಲ್ಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More