ರಾಷ್ಟ್ರವಿರೋಧದ ನೆಪದಲ್ಲಿ ಬಿಜೆಪಿ ವಿರೋಧಿ ವಿಚಾರಗಳನ್ನು ತಡೆಯುವ ಪ್ರಯತ್ನ

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಇರುವ ಧ್ವನಿಗಳನ್ನು ವಿವಿಧ ರೀತಿಯಲ್ಲಿ ಹತ್ತಿಕ್ಕಲಾಗುತ್ತಿದೆ. ಹಾಸ್ಯಗಾರ ಕುಣಾಲ್ ಕರ್ಮಾ ಕಾರ್ಯಕ್ರಮವನ್ನು ವಡೋದರದ ಎಂ ಎಸ್ ವಿಶ್ವವಿದ್ಯಾನಿಲಯ ರದ್ದು ಮಾಡಿರುವುದು ಇದಕ್ಕೆ ತಾಜಾ ನಿದರ್ಶನ

ಗುಜರಾತ್‌ನ ವಡೋದರದ ಎಂ ಎಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹಾಸ್ಯಗಾರ ಕುಣಾಲ್ ಕರ್ಮಾ ಅವರ ಕಾರ್ಯಕ್ರಮವನ್ನು ವಿವಿ ರದ್ದು ಮಾಡಿದೆ. ಕಾರಣ? ಕಾಲೇಜಿನ ೧೧ ಮಾಜಿ ವಿದ್ಯಾರ್ಥಿಗಳು ಉಪಕುಲಪತಿಗಳಿಗೆ ಪತ್ರ ಬರೆದು ಕುಣಾಲ್ ಕರ್ಮಾರ ಕಾರ್ಯಕ್ರಮಗಳಲ್ಲಿ ರಾಷ್ಟ್ರವಿರೋಧಿ ಅಂಶಗಳು ಇರುತ್ತವೆ ಎಂದು ದೂರು ಕೊಟ್ಟಿರುವುದು.

ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಹಾಸ್ಯಗಾರ ಕುಣಾಲ್ ಕರ್ಮಾ ಅವರು ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. “ಆಡಿಟೋರಿಯಂ ಖಾಲಿ ಬಿದ್ದಿರುವ ಹಿನ್ನೆಲೆಯಲ್ಲಿ ನಾನು ಭ್ರಮೆಯಲ್ಲಿ ತೇಲುವ ಈ ವ್ಯಕ್ತಿಯ ಕಾರ್ಯಕ್ರಮ ಆಯೋಜಿಸುವಂತೆ ಶಿಫಾರಸು ಮಾಡುತ್ತೇನೆ. ಆತ ಹಾಸ್ಯ, ಕವಿತೆ, ನಾಟಕಗಳನ್ನು ಪ್ರದರ್ಶಿಸಬಹುದು, ಸಂಗೀತ ನುಡಿಸಬಹುದು ಮತ್ತು ನೃತ್ಯವನ್ನೂ ಮಾಡಬಹುದು. ಈ ವ್ಯಕ್ತಿ ವಿದೇಶದಲ್ಲೂ ಮ್ಯಾಡಿಸನ್ ಸ್ಕ್ವೇರ್‌ನಂತಹ ಸ್ಥಳದಲ್ಲಿ ಇಂತಹ ಕಾರ್ಯಕ್ರಮಗಳನ್ನು ನೀಡಿದ್ದಾನೆ. ಆತನ ಆಡಿಶನ್ ಟೇಪ್ ಇಲ್ಲಿದೆ ನೋಡಿ,” ಎಂಬ ಸಂದೇಶದ ಜೊತೆಗೆ ನರೇಂದ್ರ ಮೋದಿಯವರ ಭಾಷಣದ ತುಣುಕುಗಳಿರುವ ವಿಡಿಯೋ ಒಂದನ್ನು ತಮ್ಮ ಟ್ವೀಟ್‌ನಲ್ಲಿ ಕುಣಾಲ್ ಕರ್ಮಾ ಹಾಕಿದ್ದಾರೆ.

ಕುಣಾಲ್ ಕರ್ಮಾ ಅವರ ಕಾರ್ಯಕ್ರಮವನ್ನು ವಿರೋಧಿಸಿರುವುದು ಇತರ ಹಾಸ್ಯನಟರ ಆಕ್ರೋಶಕ್ಕೂ ಕಾರಣವಾಗಿದೆ. ಮತ್ತೊಬ್ಬ ಹಾಸ್ಯಗಾರ ಆಕಾಶ್ ಬ್ಯಾನರ್ಜೀ ಅವರು ಈ ಪ್ರಕರಣದ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟೀಕಿಸಿದ್ದಾರೆ. “ಒಬ್ಬ ಹಾಸ್ಯಗಾರನ ಮಾತುಗಳಿಗೆ ಹೆದರುತ್ತೀರಿ ಎಂದರೆ ನೀವೆಷ್ಟು ಅಭದ್ರತೆ, ಭಯ, ತಾರತಮ್ಯದ ಭಾವ ಮತ್ತು ಕೀಳರಿಮೆಯಲ್ಲಿ ಬದುಕುತ್ತಿದ್ದೀರಿ ಎಂದು ಆಶ್ಚರ್ಯವಾಗುತ್ತಿದೆ. ಎಂ ಎಸ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳೇ, ಪಾಕಿಸ್ತಾನಿಗಳ ಹಾಗೆ ವರ್ತಿಸುವುದನ್ನು ಬಿಟ್ಟುಬಿಡಿ. ಅಷ್ಟು ಬೇಗ ಭಯದಲ್ಲಿ ಮೂತ್ರ ಹೊಯ್ಯದಂತಹ ಭಾರತೀಯರಂತೆ ಬೆನ್ನುಹುರಿ ಬೆಳೆಸಿಕೊಳ್ಳಿ,” ಎಂದು ಆಕಾಶ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಮೋದಿ ಕುರಿತ ಟೀಕೆ ಹತ್ತಿಕ್ಕಲು ಪ್ರಯತ್ನಿಸುವ ಮಾಧ್ಯಮಗಳ ವಿರುದ್ಧ ಕಿಡಿ

ಕುಣಾಲ್ ಕರ್ಮಾ ಅವರಿಗೆ ಕಾರ್ಯಕ್ರಮ ರದ್ದಾಗಿರುವ ಸೂಚನೆ ನೀಡಿರುವುದನ್ನು ವಿಶ್ವವಿದ್ಯಾಲಯದ ಸಿಸಿ ಮೆಹ್ತಾ ಆಡಿಟೋರಿಯಂ ಸಂಯೋಜಕರಾದ ರಾಕೇಶ್ ಮೋದಿ ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಕುಣಾಲ್ ಕರ್ಮಾ ಅವರಿಗೆ ಕಾರ್ಯಕ್ರಮ ರದ್ದಾದ ಬಗ್ಗೆ ಮಾಹಿತಿ ನೀಡಿದ್ದೇವೆ. ಅವರು ಹಾಸ್ಯ ಮಾಡುವಾಗ ಬಳಸುವ ವಿಚಾರಗಳು ರಾಷ್ಟ್ರವಿರೋಧಿ ಮತ್ತು ವಿವಾದಾತ್ಮಕವಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರಿಗೆ ತಿಳಿಸಿದ್ದೇವೆ,” ಎಂದು ರಾಕೇಶ್ ಮೋದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಮೂಲಗಳ ಪ್ರಕಾರ, ಹಳೆ ವಿದ್ಯಾರ್ಥಿಗಳು ಬರೆದ ಪತ್ರವನ್ನು ನೋಡಿದ ನಂತರ ಉಪಕುಲಪತಿಗಳು ಸಭಾಭವನದ ಸಂಯೋಜಕ ಸಿಸಿ ಮೆಹ್ತಾ ಅವರಿಗೆ ಕಾರ್ಯಕ್ರಮ ರದ್ದು ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದ್ದರು. ಉಪಕುಲಪತಿಗಳಿಗೆ ಹಳೆ ವಿದ್ಯಾರ್ಥಿಗಳು ಬರೆದ ಪತ್ರದ ಒಕ್ಕಣೆ ಹೀಗಿದೆ: “ನಾವು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ರಾಷ್ಟ್ರವಿರೋಧಿ ಹಾಸ್ಯಗಾರನ ಕಾರ್ಯಕ್ರಮವೊಂದನ್ನು ರದ್ದು ಮಾಡುವಂತೆ ವಿನಂತಿಸಿಕೊಳ್ಳುತ್ತೇವೆ. ಗುಜರಾತ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದ ಆವರಣದಲ್ಲಿ ಇಂತಹ ರಾಷ್ಟ್ರವಿರೋಧಿ ಯುವ ಹಾಸ್ಯಗಾರನ ಕಾರ್ಯಕ್ರಮವನ್ನು ಆಯೋಜಿಸಿ ಯಾವ ಸಂದೇಶವನ್ನು ನೀಡಲು ಬಯಸಿದ್ದೇವೆ? ನಾನು ಆ ಹಾಸ್ಯಗಾರನ ಹೆಸರು ಉಲ್ಲೇಖಿಸಲು ಬಯಸುವುದಿಲ್ಲ. ಆತನ ಹೆಸರು ಹೇಳಿ ಪ್ರಚಾರ ನೀಡಲು ಬಯಸುವುದಿಲ್ಲ. ಆದರೆ, ಆತ ರಾಷ್ಟ್ರಗೀತೆಯನ್ನು ಅಣಕಿಸಿದ್ದಾನೆ. ಆತ ಬಹಿರಂಗವಾಗಿ ತುಕ್ಡೆ ತುಕ್ಡೆ ಗ್ಯಾಂಗ್‌ಗೆ (ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ ವಿದ್ಯಾರ್ಥಿಗಳಿಗೆ ಸಂಘ ಪರಿವಾರ/ ಬಿಜೆಪಿ ಪರ ವ್ಯಕ್ತಿಗಳು ಬಳಸುವ ಪರ್ಯಾಯ ಪದ) ಬೆಂಬಲ ನೀಡಿದ್ದಾನೆ. ರಾಷ್ಟ್ರವನ್ನು ಪ್ರೀತಿಸುವ ಎಲ್ಲ ವಿಶ್ವವಿದ್ಯಾಲಯವೂ ಆತನನ್ನು ವಿರೋಧಿಸಬೇಕು. ಹಾಗಿರುವಾಗ ಆತನ ಕಾರ್ಯಕ್ರಮಕ್ಕೆ ನಾವೇಕೆ ಅವಕಾಶ ಕೊಡಬೇಕು? ೨೦೧೯ರ ಲೋಕಸಭಾ ಚುನಾವಣೆಗೆ ಮೊದಲು ಬರೋಡದ ಯುವಕರ ಮನಸ್ಸನ್ನು ಬದಲಿಸುವ ಸೈದ್ಧಾಂತಿಕ ಪಿತೂರಿ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿದೆ ಎಂದು ನಮಗೆ ಗಂಭೀರ ಸಂಶಯವಿದೆ.”

ಹಾಸ್ಯಗಾರ ಕುಣಾಲ್ ಕರ್ಮಾ ಅವರ ಸ್ಟಾಂಡ್ ಅಪ್ ಹಾಸ್ಯದ ಕ್ಲಿಪ್ ವರ್ಷದ ಹಿಂದೆ ಯುಟ್ಯೂಬ್‌ನಲ್ಲಿ ಮೊತ್ತಮೊದಲಿಗೆ ಪ್ರಸಾರವಾದಾಗ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದವು. ೮ ನಿಮಿಷಗಳ ಕ್ಲಿಪ್‌ನಲ್ಲಿ ಅವರು ರಾಷ್ಟ್ರಭಕ್ತಿ ಮತ್ತು ಸರ್ಕಾರದ ಬಗ್ಗೆ ಮಾತನಾಡಿದ್ದರು. ಆಡಳಿತ ಸರ್ಕಾರದ ನ್ಯೂನತೆಗಳನ್ನು ಮುಚ್ಚಿಡಲು ರಾಷ್ಟ್ರೀಯತೆಯನ್ನು ಮುಂದೊಡ್ಡುತ್ತಿದ್ದ ಅತಿರಾಷ್ಟ್ರವಾದಿ ಭಾರತೀಯರಿಗೆ ಆ ಮಾತುಗಳು ಸರಿಕಂಡಿರಲಿಲ್ಲ. ಆದರೆ, ಕೆಲವೇ ತಿಂಗಳಲ್ಲಿ ವಿಡಿಯೋ ವೈರಲ್ ಆದಾಗ ಕುಣಾಲ್ ಕರ್ಮಾ ಅವರಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ ಎರಡೂ ಕಡೆ ವಿರೋಧಿಗಳು ಹುಟ್ಟಿಕೊಂಡರು. ಈಗ ಅವರ ‘ಶಟಪ್ ಯಾ ಕುಣಾಲ್’ ಎನ್ನುವ ಯುಟ್ಯೂಬ್ ಪಾಡ್ಕಾಸ್ಟ್ ಬಹಳ ಜನಪ್ರಿಯ ಕಾರ್ಯಕ್ರಮ. ಸರ್ಕಾರವನ್ನು ಕಟುವಾಗಿ ಟೀಕಿಸುವ ಕುಣಾಲ್ ಕರ್ಮಾರ ಕಾರ್ಯಕ್ರಮಗಳು ಬಿಜೆಪಿ ಬೆಂಬಲಿಗರಿಗೆ ಹಿಡಿಸದೆ ಇರುವುದು ಸಹಜವೇ. ವಾಸ್ತವದಲ್ಲಿ ವಿಶ್ವವಿದ್ಯಾಲಯ ಸ್ವತಃ ಕುಣಾಲ್ ಕರ್ಮಾ ಅವರಿಗೆ ಕಾರ್ಯಕ್ರಮ ರದ್ದಾದ ವಿಷಯ ತಿಳಿಸಿದೆ ಎಂದು ಹೇಳುತ್ತಿದೆ. ಆದರೆ, ಕುಣಾಲ್ ಅವರು ಟ್ವೀಟ್ ಮಾಡಿ ಕಾರ್ಯಕ್ರಮ ರದ್ದಾದ ವಿಚಾರ ಮಾಧ್ಯಮಗಳಿಂದ ತಿಳಿದಿರುವುದಾಗಿ ಹೇಳಿದ್ದಾರೆ.

ವಾಸ್ತವದಲ್ಲಿ ವಿಶ್ವವಿದ್ಯಾಲಯ ಸ್ವತಃ ಕುಣಾಲ್ ಕರ್ಮಾ ಅವರಿಗೆ ಕಾರ್ಯಕ್ರಮ ರದ್ದಾದ ವಿಷಯ ತಿಳಿಸಿದೆ ಎಂದು ಹೇಳುತ್ತಿದೆ. ಆದರೆ, ಕುಣಾಲ್ ಅವರು ಟ್ವೀಟ್ ಮಾಡಿ, ಕಾರ್ಯಕ್ರಮ ರದ್ದಾದ ವಿಚಾರ ಮಾಧ್ಯಮಗಳಿಂದ ತಿಳಿದಿರುವುದಾಗಿ ಹೇಳಿದ್ದಾರೆ.

ವಾಸ್ತವದಲ್ಲಿ ಬಿಜೆಪಿ ಮತ್ತು ಮುಖ್ಯವಾಗಿ, ಮೋದಿ-ಶಾ ಜೋಡಿ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರೋಧಿ ಸುದ್ದಿಗಳು ಹೆಚ್ಚು ಪ್ರಸಾರವಾಗದಂತೆ ತಡೆಯಲು ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಸ್ಪಷ್ಟವಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ನಿಯಂತ್ರಿಸುವುದು, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಬಿಜೆಪಿ ವಿರೋಧಿ ಸುದ್ದಿಗಳ ಮೇಲೆ ಕಣ್ಣಿಡಲು ಸಾಕಷ್ಟು ಯೋಜನೆಗಳನ್ನು ಈಗಾಗಲೇ ಬಿಜೆಪಿ ರೂಪಿಸಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ಬಗ್ಗೆ ಸರಿಯಾದ ಮಾಹಿತಿಯೇ ರವಾನೆಯಾಗುತ್ತಿದೆ ಎಂದು ಕಣ್ಣಿಡಲು ಅಮಿತ್ ಶಾ ಸ್ವತಃ ೧,೮೦೦ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಸದಸ್ಯರಾಗಿದ್ದಾರೆ. ಫೇಸ್ಬುಕ್ ಮತ್ತು ಟ್ವಿಟರ್ ಸಾಮಾಜಿಕ ಜಾಲತಾಣಗಳಿಗೆ ಸರ್ಕಾರ ಈಗಾಗಲೇ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ವಿರುದ್ಧ ಕೇಳಿಬರುವ ಮಾತುಗಳನ್ನು ರಾಷ್ಟ್ರವಿರೋಧದ ಹೆಸರಲ್ಲಿ ತಡೆಯುವ ಪ್ರಯತ್ನ ಮುಂಬರುವ ದಿನಗಳಲ್ಲಿ ತೀವ್ರಗೊಳ್ಳುವುದನ್ನು ನಿರೀಕ್ಷಿಸಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More