ರಫೇಲ್ ಡೀಲ್ ಪ್ರಕಟವಾಗುವ 10 ದಿನ ಮುನ್ನಾ ಹುಟ್ಟಿತ್ತು ಅಂಬಾನಿ ಡಿಫೆನ್ಸ್ ಕಂಪನಿ!

ಭಾರತಕ್ಕೆ 36 ರಫೇಲ್ ಯುದ್ಧ ವಿಮಾನ ಪೂರೈಸಲು ಫ್ರಾನ್ಸ್ ಕಂಪನಿ ಜೊತೆ ರಕ್ಷಣಾ ಒಪ್ಪಂದವನ್ನು ಪ್ರಧಾನಿ ಮೋದಿ 2015ರ ಏಪ್ರಿಲ್ 10ರಂದು ಪ್ರಕಟಿಸಿದರು. ಈ ಕಂಪನಿ ಅನಿಲ್ ಅಂಬಾನಿ ಸ್ಥಾಪಿಸಿದ ಹೊಸ ರಕ್ಷಣಾ ಕಂಪನಿ ಜತೆ ವ್ಯವಹಾರಕ್ಕೆ ಕೈಹಾಕಿತು. ಈ ಕುರಿತ ನ್ಯಾಷನಲ್ ಹೆರಾಲ್ಡ್ ಲೇಖನದ ಭಾವಾನುವಾದ

‘35,000 ಕೋಟಿ ರೂಪಾಯಿ ಸಾಲ’ದ ಹೊರೆ ಹೊತ್ತಿದ್ದ ಮಾತೃಕಂಪನಿಯೊಂದು ಮೋದಿ ಸರ್ಕಾರದ ರಫೇಲ್ ಡೀಲ್‍ನಿಂದ 45,000 ಕೋಟಿ ರೂಪಾಯಿ ಲಾಭ ಮಾಡಿಕೊಂಡಿತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2015ರ ಏಪ್ರಿಲ್ ತಿಂಗಳಿನಲ್ಲಿ ಫ್ರಾನ್ಸಿಗೆ ಭೇಟಿ ನೀಡುವ ಹತ್ತು ದಿನಗಳ ಹಿಂದೆಯಷ್ಟೇ ಅನಿಲ್ ಅಂಬಾನಿಯವರು ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಎಂಬ ಹೊಸ ರಕ್ಷಣಾ ಕಂಪನಿಯೊಂದನ್ನು ಹುಟ್ಟುಹಾಕಿರುವುದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಈ ಸಚಿವಾಲಯದ ಅಂತರ್ಜಾಲ ತಾಣವೂ ಸಹ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಕಂಪನಿಯನ್ನು ಕೇವಲ ಐದು ಲಕ್ಷ ರೂಪಾಯಿಗಳ ಪಾವತಿತ ಬಂಡವಾಳದೊಂದಿಗೆ ಸ್ಥಾಪಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವುದಕ್ಕೆ ಫ್ರಾನ್ಸ್ ಮೂಲದ ದ ಸಾಲ್ಟ್ ಏವಿಯೇಷನ್ ಲಿಮಿಟೆಡ್ ಎಂಬ ಕಂಪನಿಯು ಜೊತೆ ಭಾರತ ಮಾಡಿಕೊಂಡ ಹೊಸ ರಕ್ಷಣಾ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿಯವರು 2015ರ ಏಪ್ರಿಲ್ 10ರಂದು ಪ್ರಕಟಿಸಿದರು. ಫ್ರಾನ್ಸಿನ ಈ ಕಂಪನಿಯು ತದನಂತರದಲ್ಲಿ ಅನಿಲ್ ಅಂಬಾನಿ ಸ್ಥಾಪಿಸಿದ ಹೊಸ ರಕ್ಷಣಾ ಕಂಪನಿಯೊಂದಿಗೆ ಸೇರಿ ಹೊಸ ಜಂಟಿ ವ್ಯವಹಾರಕ್ಕೆ ಕೈಹಾಕಿತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫ್ರಾನ್ಸಿಗೆ ನಿಡಿದ ಅಧಿಕೃತ ಸರ್ಕಾರಿ ಭೇಟಿಯ ಮೊದಲ ದಿನದಂದು, ಅಂದರೆ 2015ರ ಏಪ್ರಿಲ್ 10ರಂದು ರಫೇಲ್ ಕಂಪನಿಯೊಂದಿಗಿನ ಒಪ್ಪಂದವನ್ನು ಪ್ರಕಟಿಸಲಾಯಿತು.

ಫ್ರಾನ್ಸಿನ ಸಚಿವಾಲವೊಂದರ ಸುದ್ದಿಮೂಲವನ್ನು ಉಲ್ಲೇಖಿಸಿರುವ ರಾಯಿಟರ್ಸ್ ಸುದ್ದಿ ಸಂಸ್ಥೆ"2015ರಲ್ಲಿ ಪ್ರಕಟಿಸಲಾದ ಒಪ್ಪಂದವು ಮೂಲ ಒಪ್ಪಂದಕ್ಕಿಂತ ಭಿನ್ನವಾದದ್ದು" ಎಂದು ವರದಿ ಮಾಡಿತು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಅನಿಲ್ ಅಂಬಾನಿಯವರು ಸ್ಥಾಪಿಸಿದ ಹೊಸ ರಕ್ಷಣಾ ಕಂಪನಿಯ ಸೂಚಿತ ಬಂಡವಾಳ ಕೂಡ 5,00,000 ರೂಪಾಯಿ. ಇದು ಕಂಪನಿಯ ಉತ್ತೇಜಕರ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸುತ್ತದೆ ಎಂದು ಒಬ್ಬ ವಿಶ್ಲೇಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕಂಪನಿಯೊಂದರ ಸೂಚಿತ ಬಂಡವಾಳ ಎಂದರೆ ಷೇರುದಾರರಿಗೆ ನೀಡುವುದಕ್ಕಾಗಿ ಆ ಕಂಪನಿಗೆ ಮಂಜೂರಾದ ನಿಗದಿತ ಬಂಡವಾಳದ ಮೊತ್ತ ಎಂದರ್ಥ.

ಇಷ್ಟೊಂದು ಕಡಿಮೆ ಮಂಜೂರಾದ ಬಂಡವಾಳವನ್ನು ಹೊಂದಿರುವ ಕಂಪನಿಯೊಂದು ಸಾವಿರಾರು ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಒಪ್ಪಂದಕ್ಕೆ ಸಹಿ ಮಾಡುವುದಕ್ಕೆ ಅವಕಾಶ ಕೊಟ್ಟಿರುವುದು ತೀರಾ ವಿರಳ ಸಂಗತಿಯಾಗಿದ್ದು ಈ ವ್ಯವಹಾರದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿರಬಹುದೆಂಬ ಅನುಮಾನಗಳನ್ನು ಹುಟ್ಟುತ್ತವೆ.

ಒಬ್ಬ ವ್ಯಕ್ತಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಮೋದಿ ಸರ್ಕಾರವು 5,00,000 ರೂಪಾಯಿ ಮಂಜೂರಾದ ಬಂಡವಾಳ ಹೊಂದಿದ ಕಂಪನಿಯೊಂದಕ್ಕೆ ಸಾವಿರಾರು ಕೋಟಿ ರೂಪಾಯಿ ಮೊತ್ತದ ಒಪ್ಪಂದಕ್ಕೆ ಸಹಿ ಮಾಡಲು ಅವಕಾಶ ಕೊಟ್ಟು ನಂತರ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದ ನಿಯಮಾವಳಿಗಳನ್ನು ಬದಲಾಯಿಸಿದೆ ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

"35,000 ಕೋಟಿ ರೂಪಾಯಿ ಸಾಲ"ದ ಹೊರೆ ಹೊತ್ತಿದ್ದ ಮಾತೃಕಂಪನಿಯೊಂದು (ಎಡಿಎಜಿ) ಮೋದಿ ಸರ್ಕಾರದ ರಫೇಲ್ ಡೀಲ್‍ನಿಂದ "45,000 ಕೋಟಿ ರೂಪಾಯಿ ಲಾಭ ಮಾಡಿಕೊಂಡಿತು" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ಜುಲೈ 20ರಂದು ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಚರ್ಚೆಯ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ರಫೇಲ್ ಒಪ್ಪಂದಲ್ಲಿ ಮೋದಿಯವರೂ "ಶಾಮೀಲಾಗಿದ್ದಾರೆ" ಎಂದು ಆಪಾದಿಸಿದರು.

"ತಾವು ದೇಶದ ಆಸ್ತಿಪಾಸ್ತಿಗಳನ್ನು ಕಾಯುವ ಕಾವಲುಗಾರನಾಗಲು ಬಯಸುತ್ತೇನೆ ಎಂದು ಮೋದಿಯವರು ಹೇಳಿದ್ದರು. ಆದರೆ, ಅವರು ಕಾವಲುಗಾರರಲ್ಲ. [ಕೊಳ್ಳೆ ಹೊಡೆಯುವಲ್ಲಿ] ಅವರೂ ಪಾಲುದಾರ," ಎಂದು ರಾಹುಲ್ ತಮ್ಮ ಭಾಷಣದಲ್ಲಿ ಆಪಾದಿಸಿದರು.

ಇದನ್ನೂ ಓದಿ : ರಾಫೇಲ್ ಒಪ್ಪಂದ | ಮೊದಲು ಬಿಜೆಪಿ, ಈಗ ಫ್ರೆಂಚ್ ಸರ್ಕಾರದಿಂದ ಯುಟರ್ನ್

45,000 ಕೋಟಿ ರೂಪಾಯಿ ಮೊತ್ತದ ಈ ಮೂಲ ಒಪ್ಪಂದವನ್ನು ಸರ್ಕಾರಿ ಒಡೆತನದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಕಂಪನಿಯಿಂದ ಕಿತ್ತುಕೊಂಡು "ಯಾವತ್ತೂ ಒಂದು ವಿಮಾನವನ್ನೂ ನಿರ್ಮಾಣ ಮಾಡಿರದ" "ಕಾರ್ಪೊರೇಟ್ ಗೆಳೆಯನಿಗೆ" ನೀಡಿದ್ದೇಕೆ ಎಂಬುದನ್ನು ದಯವಿಟ್ಟು ದೇಶಕ್ಕೆ ವಿವರಿಸಿ ಎಂದು ರಾಹುಲ್ ಗಾಂಧಿಯವರು ಯಾರ ಹೆಸರನ್ನೂ ಹೇಳದೆ ಮೋದಿಯವರನ್ನುಉದ್ದೇಶಿಸಿ ಕೇಳಿದರು. ಅವರು ಯಾರ ಹೆಸರನ್ನೂ ಹೇಳಲಿಲ್ಲವಾದರೂ ಅನಿಲ್ ಅಂಬಾನಿ ಬಗ್ಗೆಯೇ ಮಾತಾಡಿದರೆಂಬುದು ಎಲ್ಲರಿಗೂ ಸ್ಪಷ್ಟವಾಗಿತ್ತು.

ಇದನ್ನು ಮ್ಯಾಜಿಕ್ ಎಂದು ಕರೆದ ರಾಹುಲ್ ರಫೇಲ್ ಯುದ್ಧ ವಿಮಾನದ ಬೆಲೆಯನ್ನು ಗಗನಕ್ಕೇರಿಸಲಾಗಿದೆ ಎಂದರು. "ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ ಒಂದು ರಫೇಲ್ ಯುದ್ಧ ವಿಮಾನದ ಬೆಲೆ 570 ಕೋಟಿ ರೂಪಾಯಿ ಎಂದು ನಿರ್ಧರಿಸಲಾಗಿತ್ತು. ಮೋದಿಯವರು ಫ್ರಾನ್ಸಿಗೆ ಹೋಗಿ ಮ್ಯಾಜಿಕ್ ಮಾಡಿ ಅದರ ಬೆಲೆಯನ್ನು 1,670 ಕೋಟಿ ರೂಪಾಯಿಗೆ ಏರಿಸಿಬಂದರು." ಎಂದು ರಾಹುಲ್ ಆಪಾದಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More