ಲೋಕಪಾಲ್ ನೇಮಕಕ್ಕೆ ಕೇಂದ್ರ ಸರ್ಕಾರದ ಉದಾಸೀನ ಮತ್ತೊಮ್ಮೆ ಬಯಲು!

ಒಂದು ಕಡೆ ಭ್ರಷ್ಟಾಚಾರ ನಿರ್ಮೂಲನೆಯ ಆಶಯದ ಲೋಕಪಾಲ ನೇಮಕಕ್ಕೆ ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರ, ಭ್ರಷ್ಟಾಚಾರ ತಡೆ ಕಾಯ್ದೆ ತಿದ್ದುಪಡಿ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಇನ್ನಷ್ಟು ರಕ್ಷಣೆ ಒದಗಿಸುವ ಯತ್ನ ಮಾಡಿದೆ.  ಸದ್ಯ ಲೋಕಪಾಲ ನೇಮಕ ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ

ಲೋಕಪಾಲ್ ಕಾಯ್ದೆ ಜಾರಿಗೆ ಬಂದು ನಾಲ್ಕೂವರೆ ವರ್ಷ ಕಳೆದರೂ ಲೋಕಪಾಲರ ನೇಮಕಕ್ಕೆ ಆಸಕ್ತಿ ವಹಿಸದೇ ಕಾಲಹರಣ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಛೀಮಾರಿ ಹಾಕಿದೆ. ತನ್ನ ನಿರ್ದೇಶನ, ಕಾಲಮಿತಿಯ ಗಡುವುಗಳನ್ನು ಹೊರತುಪಡಿಸಿಯೂ, ದೇಶದ ಭ್ರಷ್ಟಾಚಾರರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ದೊಡ್ಡ ಬಲ ನೀಡುವ ಲೋಕಪಾಲ ನೇಮಕ ಪ್ರಕ್ರಿಯೆಯನ್ನೇ ವಿಳಂಬಗೊಳಿಸುತ್ತಿರುವ ಸರ್ಕಾರದ ವರಸೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

೨೦೧೪ರ ಲೋಕಸಭಾ ಚುನಾವಣೆಗೆ ಮುನ್ನ ಅಣ್ಣಾ ಹಜಾರೆ ಅವರ ನೇತೃತ್ವದ ಲೋಕಪಾಲ ಹೋರಾಟದಿಂದಲೂ ಬಿಜೆಪಿ ಲೋಕಪಾಲ ಮಸೂದೆಯ ಪರ ಪ್ರಬಲ ದನಿ ಎತ್ತಿತ್ತು. ಅಣ್ಣಾ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲಿಸುವ ಮೂಲಕ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಜನಸಾಮಾನ್ಯರ ಕಣ್ಣಲ್ಲಿ ಭ್ರಷ್ಟಾಚಾರದ ಪರ ಇರುವ ಪಕ್ಷ ಎಂಬಂತೆ ಬಿಂಬಿಸುವಲ್ಲಿಯೂ ಯಶಸ್ವಿಯಾಗಿತ್ತು. ಅದೇ ಹೊತ್ತಿಗೆ, ತಾನು ಅಧಿಕಾರಕ್ಕೆ ಬಂದರೆ, ಲೋಕಪಾಲ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ, ಸಮರ್ಥರನ್ನು ಲೋಕಪಾಲರನ್ನಾಗಿ ನೇಮಿಸಿ, ದೇಶದ ಭ್ರಷ್ಟಾಚಾರದ ಪಿಡುಗನ್ನು ಮೂಲೋತ್ಪಾಟನೆ ಮಾಡುವುದಾಗಿಯೂ ಹೇಳಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಗಿನ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿ, ಅಧಿಕಾರಕ್ಕೆ ಬರುತ್ತಲೇ ತಮ್ಮ ಅಚ್ಛೇದಿನ ಭರವಸೆಯ ಭಾಗವಾಗಿ ಲೋಕಪಾಲ ನೇಮಕ ಮಾಡಲಾಗುವುದು ಎಂದು ಸ್ವತಃ ಪ್ರಧಾನಿ ಮೋದಿಯವರೇ ಭರವಸೆ ನೀಡಿದ್ದರು.

ಆದರೆ, ಲೋಕಪಾಲ ಆಯ್ಕೆ ಸಮಿತಿಯಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕರೂ ಇರಬೇಕು ಎಂಬ ಲೋಕಪಾಲ ಕಾಯ್ದೆಯ ಅಂಶವನ್ನೇ ಮುಂದಿಟ್ಟುಕೊಂಡು ಮೋದಿಯವರ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಭ್ರಷ್ಟ ವ್ಯವಸ್ಥೆಗೆ ಮದ್ದು ಅರೆಯಬಲ್ಲ ಪ್ರಮುಖ ಹುದ್ದೆಯನ್ನು ಖಾಲಿ ಬಿಟ್ಟುಕೊಂಡೇ ಬಂದಿದೆ. ಲೋಕಸಭೆಯಲ್ಲಿ ಸದ್ಯ ಯಾವುದೇ ಪಕ್ಷಕ್ಕೆ ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡುವ ಮಟ್ಟಿಗಿನ ಸ್ಥಾನ ಬಲ ಇರದಿರುವ ತಾಂತ್ರಿಕ ಕಾರಣವನ್ನೇ ಮುಂದಿಟ್ಟುಕೊಂಡು ಸರ್ಕಾರ ಕಾಲಹರಣ ಮಾಡಿದೆ. ಸರ್ಕಾರದ ಈ ಧೋರಣೆಯಿಂದ ಬೇಸತ್ತ ಸುಪ್ರೀಂಕೋರ್ಟ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಹಿನ್ನೆಲೆಯಲ್ಲಿ, ಕಳೆದ ಏಪ್ರಿಲ್ನಲ್ಲಿ ಆದೇಶ ನೀಡಿ, ಪ್ರತಿಪಕ್ಷ ನಾಯಕರ ಸ್ಥಾನ ಖಾಲಿ ಇರುವುದನ್ನೇ ನೆಪ ಮಾಡಿ ಲೋಕಾಪಾಲ್ ನೇಮಕ ತಡೆಯಲಾಗದು. ಪ್ರತಿಪಕ್ಷ ನಾಯಕನ ಬದಲು, ಲೋಕಸಭೆಯ ಅತಿದೊಡ್ಡ ಪಕ್ಷದ ನಾಯಕರನ್ನೇ ಸಮಿತಿಯಲ್ಲಿ ಸೇರಿಸಿಕೊಂಡು ಲೋಕಪಾಲ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಎಂದು ತಾಕೀತು ಮಾಡಿತ್ತು.

ಆದರೆ, ಕಳೆದ ವಾರ ಜುಲೈ ೧೯ರಂದು, ಮೊದಲ ಸಭೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಅವರನ್ನೊಳಗೊಂಡ ಆಯ್ಕೆ ಸಮಿತಿ, ಸುಪ್ರೀಂಕೋರ್ಟಿನ ನಿರ್ದೇಶನಗಳ ಕುರಿತು ಚರ್ಚೆ ನಡೆಸಿದೆ ಎಂದು ಸರ್ಕಾರದ ಪರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ, ಪ್ರಧಾನಿ ನೇತೃತ್ವದ ಆ ಆಯ್ಕೆ ಸಮಿತಿ, ಪ್ರಮುಖವಾಗಿ ಲೋಕಪಾಲ್ ಮತ್ತು ಲೋಕಪಾಲ ಸದಸ್ಯರ ನೇಮಕದ ಕುರಿತ ಶೋಧನಾ ಸಮಿತಿ ರಚನೆಗೆಯ ಬಗ್ಗೆ ಹೆಚ್ಚಿನ ಗಮನವನ್ನೇ ಹರಿಸಿಲ್ಲ ಎಂಬುದು ಅದೇ ಪ್ರಮಾಣಪತ್ರದ ವಿವರಗಳಿಂದ ಗೊತ್ತಾಗುತ್ತದೆ. ಹಾಗಾಗಿ ಸರ್ಕಾರದ ಉದ್ದೇಶವೇ ಲೋಕಪಾಲ ನೇಮಕವನ್ನು ವಿಳಂಬ ಮಾಡುವುದು. ಆದ್ದರಿಂದ ನ್ಯಾಯಾಲಯ ತನ್ನ ಅಧಿಕಾರವನ್ನು ಬಳಸಿ, ತಾನೇ ಲೋಕಪಾಲಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಬೇಕು, ಇಲ್ಲವೇ ಲೋಕಪಾಲ ನೇಮಕಕ್ಕೆ ಅಗತ್ಯ ಶೋಧನಾ ಸಮಿತಿಯನ್ನಾದರೂ ರಚಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಕಾಮನ್ ಕಾಸ್ ಎಂಬ ಸ್ವಯಂ ಸೇವಾ ಸಂಸ್ಥೆ ಪರ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಆದರೆ, ನ್ಯಾಯಾಲಯ ನಾಲ್ಕು ವಾರಗಳ ಒಳಗೆ ಲೋಕಪಾಲ ನೇಮಕ ಕುರಿತ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿ ತೆಗೆದುಕೊಂಡ ಕ್ರಮಗಳ ಕುರಿತು ಸಂಪೂರ್ಣ ವಿವರ ಸಹಿತ ಪ್ರಮಾಣಪತ್ರ ಸಲ್ಲಿಸುವಂತೆ ಮತ್ತೊಮ್ಮೆ ತಾಕೀತು ಮಾಡಿದೆ.

ಇದನ್ನೂ ಓದಿ : ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತೇ ಲೋಕಪಾಲ ಆಯ್ಕೆ ಸಮಿತಿ ಸಭೆ?

ವಾಸ್ತವವಾಗಿ ೨೦೧೪ರ ಜನವರಿ ೧೬ರಂದು ಜಾರಿಗೆ ಬಂದ ಲೋಕಾಪಾಲ ಕಾಯ್ದೆಯ ಕಲಂ ೩(೧)ರ ಪ್ರಕಾರ, ಕಾಯ್ದೆ ಜಾರಿಯ ದಿನದಿಂದಲೇ ಲೋಕಪಾಲರು ಕೂಡ ಕರ್ತವ್ಯದಲ್ಲಿರಬೇಕು. ಆದರೆ, ನಾಲ್ಕೂವರೆ ವರ್ಷಗಳ ಬಳಿಕವೂ ಅಂತಹದ್ದೊಂದ ಮಹತ್ವದ ಹುದ್ದೆಗೆ ಸೂಕ್ತ ವ್ಯಕ್ತಿಯ ನೇಮಕವಾಗಿಲ್ಲ. ಅದೂ ಭ್ರಷ್ಟಾಚಾರಮುಕ್ತ ಭಾರತ ನಿರ್ಮಾಣದ ಘೋಷಣೆಯನ್ನೇ ತನ್ನ ಟ್ರಂಪ್ ಕಾರ್ಡ್ ಮಾಡಿಕೊಂಡು ಮತಪಡೆದು ಅಧಿಕಾರಕ್ಕೆ ಬಂದ ಒಂದು ಸರ್ಕಾರವೇ ಆ ಹುದ್ದೆಯ ನೇಮಕವನ್ನು ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ. ಕಾನೂನು ನೆಪಗಳನ್ನು ಮುಂದೊಡ್ಡಿಕೊಂಡು ಮಾಡುತ್ತಿರುವ ಈ ವಿಳಂಬವನ್ನು; ಸ್ವತಃ ಕಾಯ್ದೆಗಾಗಿ ಹೋರಾಟ ಮಾಡಿದ ಅಣ್ಣಾ ಹಜಾರೆ ಹೊರತುಪಡಿಸಿ, ಬಾಬಾ ರಾಮ್‌ದೇವ್ ಆದಿಯಾಗಿ ಯಾವೊಬ್ಬ ಅಂದಿನ ವೀರಾವೇಶದ ಹೋರಾಟಗಾರರು ಪ್ರಶ್ನಿಸುತ್ತಿಲ್ಲ.

ಈ ನಡುವೆ, ಸುಪ್ರೀಂಕೋರ್ಟಿನಲ್ಲಿ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಪೀಠದ ಮುಖ್ಯಸ್ಥರಾದ ಹಿರಿಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಅವರು, ಹಾಲಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಬಳಿಕ ಆ ಸ್ಥಾನಕ್ಕೆ ಏರುವ ಸಾಧ್ಯತೆ ಹೆಚ್ಚಿದೆ. ಅಕ್ಬೋಬರ್ಗೆ ನ್ಯಾ. ಮಿಶ್ರಾ ನಿವೃತ್ತರಾಗಲಿದ್ದು, ಆ ಬಳಿಕ ನ್ಯಾ. ಗೋಗಾಯ್ ಅವರೇ ಸಿಜೆಐ ಆಗಲಿದ್ದಾರೆ ಎನ್ನಲಾಗುತ್ತಿದೆ. ಸಿಜೆಐ ಅವರೂ ಆಯ್ಕೆ ಸಮಿತಿಯ ಒಬ್ಬ ಸದಸ್ಯರಾಗುವುದರಿಂದ ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶವಾಗುವ ಹಿನ್ನೆಲೆಯಲ್ಲಿ ಅವರು ಈ ಪ್ರಕರಣದ ವಿಚಾರಣೆಯಲ್ಲಿ ಮುಂದುವರಿಯುವ ಸಾಧ್ಯತೆ ಕೂಡ ಕಡಿಮೆ. ಈ ಎಲ್ಲಾ ಲೆಕ್ಕಾಚಾರದ ಹಿನ್ನೆಲೆಯಲ್ಲೇ ಬಹುಶಃ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದ್ದು, ತನ್ನ ಈ ಅವಧಿಯನ್ನು ಲೋಕಪಾಲ ಇಲ್ಲದೇ ಪೂರೈಸುವ ಇರಾದೆ ಹೊಂದಿರಬಹುದು ಎಂದು ‘ದ ವೈರ್’ ಮಾಧ್ಯಮ ವಿಶ್ಲೇಷಿಸಿದೆ.

ಅದೇ ಹೊತ್ತಿಗೆ, ಒಂದು ಕಡೆ ಭ್ರಷ್ಟಾಚಾರ ನಿರ್ಮೂಲನೆಯ ಆಶಯದ ಲೋಕಪಾಲ ನೇಮಕಕ್ಕೆ ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರ, ಭ್ರಷ್ಟಾಚಾರ ತಡೆ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಇನ್ನಷ್ಟು ರಕ್ಷಣೆ ಒದಗಿಸುವ ಯತ್ನವನ್ನೂ ಮಾಡಿದೆ. ಲಂಚ ಪಡೆದವನಿಗಿಂತ ಲಂಚ ಕೊಟ್ಟವನಿಗೆ ಕಠಿಣ ಶಿಕ್ಷೆ ಎಂಬುದೂ ಸೇರಿದಂತೆ, ಲಂಚ ಆರೋಪದಲ್ಲಿ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಕ್ತ ಪ್ರಾಧಿಕಾರದ ಅನುಮತಿ ಕಡ್ಡಾಯ, ಲಂಚ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ, ಅಧಿಕಾರ ದುರ್ಬಳಕೆ, ಸಾರ್ವಜನಿಕ ಹಿತಾಸಕ್ತಿ ಕಡಗಣನೆಯಂತಹ ವಿಷಯಗಳನ್ನು ದುರ್ನಡತೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಸೇರಿದಂತೆ ಹಲವು ಮಹತ್ವದ ಅನುಕೂಲಗಳನ್ನು ಭ್ರಷ್ಟ ಅಧಿಕಾರಿಗಳಿಗೆ ದಯಪಾಲಿಸಲಾಗಿದೆ.

ಅಂದರೆ; ಪ್ರತಿ ಭಾರತೀಯರ ಬ್ಯಾಂಕ್ ಖಾತೆಗೆ ತಲಾ ಹದಿನೈದು ಲಕ್ಷ ರೂ. ಜಮಾ, ‘ಅಚ್ಛೇದಿನ್’, ‘ಸಬಕಾ ಸಾಥ್ ಸಬ್‌ ಕಾ ವಿಕಾಸ್’ ಮೋದಿಯವರ ಬಹುತೇಕ ಲೋಕಸಭಾ ಚುನಾವಣಾ ಪೂರ್ವ ಭರವಸೆಗಳಂತೆ ಭ್ರಷ್ಟಾಚಾರ ಮುಕ್ತ ಭಾರತ ಕೂಡ ಜನರ ಕಣ್ಣಿಗೆ ಮಣ್ಣೆರಚುವ ಒಂದು ವರಸೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆ ಹಿನ್ನೆಲೆಯಲ್ಲಿ; ನ್ಯಾಯಾಲಯವೇ ಸ್ವಯಂಪ್ರೇರಿತವಾಗಿ ತನ್ನ ಅಧಿಕಾರ ಬಳಸಿ ನೇಮಕ ಮಾಡದ ಹೊರತು, ಈ ಸರ್ಕಾರದ ಅವಧಿಯಲ್ಲಿ ಲೋಕಪಾಲ ನೇಮಕ ಎಂಬುದು ಒಂದು ನಗೆಪಾಟಲಿನ ಪ್ರಹಸನವಷ್ಟೇ ಎಂದರೆ ತಪ್ಪಾಗಲಾರದು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More