ರಾಜ್ಯದ ಎಲ್ಲ ಕಡೆಯೂ ಮಳೆ ಆಗಿಲ್ಲ; ಎದುರಾಗಿದೆ ಕುಡಿಯುವ ನೀರಿಗೆ ತತ್ವಾರ

ರಾಜ್ಯದಲ್ಲಿ ಕಳೆದೊಂದು ದಶಕದಲ್ಲೇ ದಾಖಲೆ ಮಳೆಯಾಗಿದೆ. ಬಹುಪಾಲು ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಿದೆ. ಮಳೆ ಕೊರತೆ ಎದುರಿಸಿರುವ ರಾಜ್ಯದ ೧೭೩ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜಾಗುತ್ತಿದೆ

ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಎಂಬುದು ಎಲ್ಲ ಕಡೆ ವ್ಯಕ್ತವಾಗಿರುವ ಅಭಿಪ್ರಾಯ. ಆದರೆ ರಾಜ್ಯದ ಎಲ್ಲಾ ಭಾಗಗಳಲ್ಲಿ ವಾಡಿಕೆ ಮಳೆ ಆಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವುದು ನಿಂತಿಲ್ಲ ಎನ್ನುವುದು ನಿಜ ಚಿತ್ರ. ಉತ್ತರ ಕರ್ನಾಟಕವೂ ಸೇರಿದಂತೆ ತುಮಕೂರು ಜಿಲ್ಲೆಯ ಶಿರಾ, ಚಿತ್ರದುರ್ಗದ ಚಳ್ಳಕೆರೆ, ಯಾದಗಿರಿಯ ಶೋಹರಾಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಮಳೆ ಆಭಾವ ತಲೆದೋರಿದೆ.

ಕಳೆದ ಜನವರಿ ೨೦೧೮ರಿಂದ ಜುಲೈ ೨೪ರ ಅಂತ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತಲೂ ಕಡಿಮೆ ಮಳೆಯಾಗಿದೆ. ಇದೇ ಅವಧಿಯಲ್ಲಿ ಮಲೆನಾಡು, ಕರಾವಳಿ ತೀರದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಮಳೆ ಕೊರತೆ ಎದುರಿಸುತ್ತಿರುವ ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು ೧೦ ಜಿಲ್ಲೆಗಳಲ್ಲಿನ ೧೭೩ ಹಳ್ಳಿಗಳಿಗೆ ಈಗಲೂ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜಾಗುತ್ತಿದೆ.

ರಾಜ್ಯದಲ್ಲಿ ಕಳೆದ ೭ ತಿಂಗಳಲ್ಲಿ ೬೬೦ ಮಿಲಿ ಮೀಟರ್‌(ಸಾಮಾನ್ಯ ೫೪೪) ಪ್ರಮಾಣದಲ್ಲಿ ಮಳೆಯಾಗಿದೆಯಾದರೂ ರಾಯಚೂರು(೧೩೧) ಕಲ್ಬುರ್ಗಿ(೨೭೨) ಯಾದಗಿರಿ(೨೨೨) ಬೀದರ್‌(೩೦೩) ಬೆಳಗಾವಿ(೪೦೯),ಬಾಗಲಕೋಟೆ(೨೦೧) ವಿಜಯಪುರದಲ್ಲಿ (೧೮೯) ಸಾಮಾನ್ಯ ಪ್ರಮಾಣಕ್ಕಿಂತಲೂ ಕಡಿಮೆ ಮಳೆಯಾಗಿದೆ. ರಾಯಚೂರು ಜಿಲ್ಲೆಯೊಂದರಲ್ಲಿ ಸಾಮಾನ್ಯ ಪ್ರಮಾಣಕ್ಕಿಂತಲೂ ಶೇ.೪೦ರಷ್ಟು ಕಡಿಮೆ ಮಳೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗ ‘ದಿ ಸ್ಟೇಟ್‌’ಗೆ ಮಾಹಿತಿ ನೀಡಿದೆ.

ಕುಡಿಯುವ ನೀರಿನ ಕೊರತೆ; ಉತ್ತರ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಿರುವ ಕಾರಣ ಒಟ್ಟು ೧೭೩ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಬವಣೆ ಎದುರಾಗಿದೆ. ಹೀಗಾಗಿ ದಿನಕ್ಕೆ ೨ ಮತ್ತು ೩ ಬಾರಿ ಟ್ಯಾಂಕರ್‌ ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ ೬೨ ಹಳ್ಳಿ, ದಾವಣಗೆರೆ ಜಿಲ್ಲೆಯಲ್ಲಿ ೪೨ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಇನ್ನು ಚಿಕ್ಕಮಗಳೂರಿನಲ್ಲಿ ೧,೪೧೮ ಮಿಲಿ ಮೀಟರ್‌ ಪ್ರಮಾಣದಲ್ಲಿ ಮಳೆಯಾಗಿದ್ದರೂ ಈ ಜಿಲ್ಲೆಯ ೩೦ ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ ಎಂದು ವಿಪತ್ತು ನಿರ್ವಹಣಾ ವಿಭಾಗ ಮಾಹಿತಿ ನೀಡಿದೆ.

ಇದನ್ನೂ ಓದಿ : ಹಣ ನೀರಿನಂತೆ ಖರ್ಚಾದರೂ ಕುಡಿಯುವ ನೀರು ಸಿಕ್ಕಿದ್ದು 8,000 ಜನವಸತಿ ಪ್ರದೇಶಗಳಿಗಷ್ಟೆ!

ಮಲೆನಾಡಿನಲ್ಲಿ ಶೇ.೪೦ ಮತ್ತು ಕರಾವಳಿ ತೀರ ಪ್ರದೇಶಗಳಲ್ಲಿ ಶೇ.೨೦ರಷ್ಟು (೧,೪೪೦ ಮಿಲಿ ಮೀಟರ್) ಏರಿಕೆಯಾಗಿದೆ.ಶಿವಮೊಗ್ಗದಲ್ಲಿ ೧,೪೬೪ ಮಿಲಿ ಮೀಟರ್‌, ಹಾಸನದಲ್ಲಿ ೮೯೫, ಚಿಕ್ಕಮಗಳೂರಿನಲ್ಲಿ ೧,೪೧೮, ಕೊಡಗಿನಲ್ಲಿ ೨,೩೨೫ ಮಿ.ಮೀ.ಮಳೆಯಾಗಿದೆ. ಹಾಗೆಯೇ ದಕ್ಷಿಣ ಕನ್ನಡದಲ್ಲಿ ೨,೭೦೨, ಉಡುಪಿಯಲ್ಲಿ ೨,೭೯೯, ಉತ್ತರ ಕನ್ನಡದಲ್ಲಿ ೧,೮೯೬ ಮಿ.ಮೀ.ಮಳೆಯಾಗಿದೆ.

ಬೆಳೆ ನಷ್ಟ

ಜೂನ್‌ ೨೦೧೮ರ ಅಂತ್ಯಕ್ಕೆ ರಾಜ್ಯದಲ್ಲಿ ೨೯.೭೧ ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ.ಅದೇ ರೀತಿ ಮಳೆಯಿಂದಾಗಿ ಒಟ್ಟು ೨೧೮೬.೯೮ ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆಗಳಿಗೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಇದರಲ್ಲಿ ೧,೬೨೪.೪೯ ಹೆಕ್ಟೇರ್‌ ಪ್ರದೇಶದಲ್ಲಿದ್ದ ಭತ್ತ, ೩೭.೮೩ ಹೆಕ್ಟೇರ್‌ನಲ್ಲಿದ್ದ ಮೆಕ್ಕೆಜೋಳ, ೦.೩೪ ಹೆಕ್ಟೇರ್‌ನಲ್ಲಿನ ರಾಗಿ, ೪.೦ ಹೆಕ್ಟೇರ್‌ನಲ್ಲಿದ್ದ ಹತ್ತಿ, ೦.೮೨ ಹೆಕ್ಟೇರ್‌ನಲ್ಲಿದ್ದ ಕಬ್ಬು, ೩೩೦.೦ ಹೆಕ್ಟೇರ್‌ನಲ್ಲಿದ್ದ ತಂಬಾಕು ಬೆಳೆಗೆ ಹಾನಿಯಾಗಿದೆ. ಒಟ್ಟಾರೆ ಎಷ್ಟು ನಷ್ಟವಾಗಿದೆ ಎಂಬ ಕುರಿತು ವಿಪತ್ತು ನಿರ್ವಹಣಾ ವಿಭಾಗದೊಂದಿಗೆ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಕೃ‍ಷಿ ಇಲಾಖೆ ತನ್ನ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

ಹಾಗೆಯೇ ಏಪ್ರಿಲ್‌ ೨೦೧೮ರಿಂದ ಈವರೆವಿಗೆ ೧೮೬.೩೫ ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ೧೪.೩೫ ಕೋಟಿ ರೂ.ನಷ್ಟು ನಷ್ಟ ಸಂಭವಿಸಿದ್ದರೆ, ಕೊಡಗು ಜಿಲ್ಲೆಯಲ್ಲಿ ೧೦ ಕೋಟಿ ರೂ ನಷ್ಟವಾಗಿರುವುದು ಗೊತ್ತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More