ಬಿಜೆಪಿಗೆ ಮಾರಕ ಆಗಲಿದೆಯಾ ಮರಾಠ ಸಮುದಾಯದ ಮೀಸಲಾತಿ ಹೋರಾಟ?

ಮರಾಠ ಸಮುದಾಯವು ‌ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯ ಶೇ. 30 ರಷ್ಟಿದೆ. ಈಗಾಗಲೇ ಮುಂದಿನ ಲೋಕಸಭಾ ಚುನಾವಣೆಯ ತಯಾರಿ ಆರಂಭಿಸಿರುವ ಬಿಜೆಪಿಗೆ ಮರಾಠ ಸಮುದಾಯದ ಮೀಸಲಾತಿ ಹೋರಾಟ ರಾಜಕೀಯ ಹಿನ್ನಡೆ ಉಂಟುಮಾಡಲಿದೆ ಎಂಬ ಮಾತು ಕೇಳಿಬಂದಿದೆ

ಮಹಾರಾಷ್ಟ್ರದಲ್ಲಿ ತೀವ್ರಗೊಂಡಿರುವ ಮರಾಠ ಸಮುದಾಯದ ಮೀಸಲಾತಿ ಹೋರಾಟ ದೇವೇಂದ್ರ ಫಡ್ನವೀಸ್‌ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಂಗಳವಾರ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ಯುವಕನೊಬ್ಬ ಗೋದಾವರಿ ನದಿಗೆ ಹಾರಿ ಪ್ರಾಣ ತ್ಯಾಗ ಮಾಡಿದ ಕೆಲ ಕ್ಷಣಗಳ ನಂತರ ಸ್ಪೋಟಗೊಂಡ ಹಿಂಸಾಚಾರ ಪೇದೆಯೊಬ್ಬರನ್ನು ಬಲಿತೆಗೆದುಕೊಂಡಿದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದೆ. ಮರಾಠ ಕಾಂತ್ರಿ ಮೋರ್ಚಾ ಸಂಘಟನೆಯು ಬುಧವಾರ ಕರೆ ನೀಡಿದ್ದ ಮುಂಬೈ ಬಂದ್‌ ವೇಳೆ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಈ ಮೂಲಕ ಶಿಕ್ಷಣ ಹಾಗೂ ಸರ್ಕಾರಿ ನೌಕರಿಗಳಲ್ಲಿ ಮರಾಠ ಸಮುದಾಯದವರಿಗೆ ಮೀಸಲಾತಿ ನೀಡಬೇಕೆಂಬ ಒತ್ತಾಯಕ್ಕೆ ಮಹಾರಾಷ್ಟ್ರದಾದ್ಯಂತ ಪ್ರತಿಭಟನೆಗಳು ವ್ಯಾಪಕವಾಗಿವೆ. ಈ ಹಿನ್ನೆಲೆಯಲ್ಲಿ ಮರಾಠ ಸಮುದಾಯದ ಮೀಸಲಾತಿ ಹೋರಾಟ ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಬಿಜೆಪಿಗೆ ಹಿನ್ನೆಡೆ ಉಂಟುಮಾಡಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಈ ಹಿಂದೆ ಮೀಸಲಾತಿಗಾಗಿ ಜಾಟ್‌ ಸಮುದಾಯ ಹರ್ಯಾಣದಲ್ಲಿ ಆರಂಭಿಸಿದ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಜಾಟ್‌ ಸಮುದಾಯದ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದಾಗ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದು ಹತ್ತು ದಿನಗಳವರೆಗೂ ಮುಂದುವರೆಯಿತು. ಆ ಪ್ರತಿಭಟನೆ ವೇಳೆ 30 ಜನರು ಬಲಿಯಾಗಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯುಂಟಾಯಿತು. ಜಾಟ್‌ ಸಮುದಾಯದ ಪ್ರತಿಭಟನೆ ಉತ್ತರ ಪ್ರದೇಶ, ದೆಹಲಿ ಹಾಗೂ ರಾಜಸ್ಥಾನಕ್ಕೂ ಹಬ್ಬಿತು. ಆ ಪ್ರತಿಭಟನೆಗೆ ಮಣಿದ ಹರ್ಯಾಣ ಸರ್ಕಾರ ಜಾಟ್‌ ಸಮುದಾಯಕ್ಕೆ‌ ಮೀಸಲಾತಿ ನೀಡಲು ಸಮ್ಮತಿಸಿತ್ತು.

ಮೀಸಲಾತಿಗಾಗಿ ಒತ್ತಾಯಿಸಿ ಅದೇ ಮಾದರಿಯ ಹೋರಾಟವನ್ನು ಪಟೇಲ್‌ ಸಮುದಾಯ ಗುಜರಾತ್‌ನಲ್ಲಿ ಹಮ್ಮಿಕೊಂಡಿತು. ಹಾರ್ದಿಕ್‌ ಪಟೇಲ್‌ ನೇತೃತ್ವದಲ್ಲಿ ನಡೆದ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದು, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಅಂದಿನ ಗುಜರಾತ್‌ ಮುಖ್ಯಮಂತ್ರಿ ಆನಂದಿಬೆನ್‌‌ ಪಟೇಲ್‌ ಅವರನ್ನು ಚಿಂತೆಗೀಡು ಮಾಡಿತ್ತು. ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟವನ್ನು ಬಿಜೆಪಿ ರೂಪಿಸಿದ ಸಂಚು ಎಂದು ಆರಂಭದಲ್ಲಿ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರಾದರೂ, ಆ ನಂತರದ ಹೋರಾಟಗಳು ಪ್ರಧಾನಿ ಮೋದಿಯವರನ್ನೇ ಗುರಿಯಾಗಿಸಿ ನಡೆದವು. ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಪಟೇಲ್‌ ಸಮುದಾಯ ಮೀಸಲಾತಿ ಹೋರಾಟದ ಅಸ್ತ್ರವನ್ನು ತೀವ್ರವಾಗಿ ಬಳಸಿತ್ತು.

ಅದೇ ರೀತಿಯ ಹೋರಾಟವೀಗ ಮಹಾರಾಷ್ಟ್ರದಲ್ಲಿ ಆರಂಭವಾಗಿದ್ದು, ಫಡ್ನವೀಸ್‌ ಅವರು ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು, ಇಲ್ಲವೇ ಮರಾಠ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕು ಎನ್ನುವಂತಹ ಪರಿಸ್ಥಿತಿ ಬಂದೊದಗಿದೆ. ರಾಜಕೀಯವಾಗಿ ಬಲಿಷ್ಠವಾಗಿರುವ ಮರಾಠ ಸಮುದಾಯವು ‌ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯ ಶೇ. 30 ರಷ್ಟಿದೆ. ಈಗಾಗಲೇ ಮುಂದಿನ ಲೋಕಸಭಾ ಚುನಾವಣೆಯ ತಯಾರಿ ಆರಂಭಿಸಿರುವ ಬಿಜೆಪಿಗೆ ಮರಾಠ ಸಮುದಾಯದ ಮೀಸಲಾತಿ ಹೋರಾಟ ರಾಜಕೀಯ ಹಿನ್ನಡೆ ಉಂಟುಮಾಡಲಿದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಅತ್ತ ಬಿಜೆಪಿಯೊಂದಿಗೆ ಸುದೀರ್ಘ ಮೈತ್ರಿಯಲ್ಲಿದ್ದ, ಶಿವಸೇನೆಯು ಸ್ನೇಹ ಕಡಿದುಕೊಳ್ಳುವ ಮಾತನಾಡುತ್ತಿದೆ. ಇತ್ತ ಮರಾಠ ಸಂಘಟನೆಗಳು ದೇವೇಂದ್ರ ಫಡ್ನವೀಸ್‌ ಅವರು ತಮಗೆ ವಂಚಿಸಿದ್ದಾರೆಂದು ನೇರ ಆರೋಪ ಮಾಡುತ್ತಿವೆ. ಮರಾಠರ ಸಂಪ್ರದಾಯಿಕ ಪಕ್ಷವೆಂದೇ ಗುರುತಿಸಲಾಗುವ ಶಿವಸೇನೆಯ ಮುನಿಸು, ಮರಾಠ ಸಮುದಾಯದ ಮುಖಂಡರ ಆರೋಪಗಳು ಮಹಾರಾಷ್ಟ್ರದ ಬಿಜೆಪಿಯನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇದನ್ನೂ ಓದಿ : ಬಿಜೆಪಿ ಪ್ರತಿಪಾದಿಸುವ ಹಿಂದುತ್ವವೇ ನಕಲಿ ಎಂದ ಶಿವಸೇನೆಯ ಉದ್ದವ್‌ ಠಾಕ್ರೆ

ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗುತ್ತಿರುವ ಮೀಸಲಾತಿ ಹೋರಾಟಗಳು ಬಿಜೆಪಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇಕ್ಕಟ್ಟಿಗೆ ನೂಕುತ್ತಲಿರುವುದು ವಿಪರ್ಯಾಸ. ಈಗ ಮರಾಠ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿರುವ ಫಡ್ನವೀಸ್‌ ನೇತೃತ್ವದ ಸರ್ಕಾರದ ಮುಂದಿನ ಆಯ್ಕೆಗಳೇನು ಎಂಬುದನ್ನು ಬಿಜೆಪಿ ಹೈಕಮಾಂಡ್‌ ನಿರ್ಧರಿಸಬೇಕಿದೆ. ಒಂದು ವೇಳೆ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿ ಆದೇಶ ಹೊರಡಿಸಿದರೆ, ಮಹಾರಾಷ್ಟ್ರದ ನೆರೆಯ ರಾಜ್ಯ ಗುಜರಾತ್‌ನಲ್ಲಿ ಪಾಟೀದಾರ್‌ ಸಮುದಾಯ, ರಾಜಸ್ಥಾನದಲ್ಲಿ ಗುಜ್ಜರ್‌ ಸಮುದಾಯ, ಆಂಧ್ರಪ್ರದೇಶದಲ್ಲಿ ಕಾಪು ಸಮುದಾಯಗಳು ಮತ್ತೆ ಪ್ರತಿಭಟನೆಗೆ ಮುಂದಾಗಲಿವೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More