ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ಐದು ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸುದ್ದಿಗಳು

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ

ಕುತೂಹಲ ಕೆರಳಿಸಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಪಾಕಿಸ್ತಾನದಾದ್ಯಂತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, 7000 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನದ ಮಾಜಿ ನಾಯಕ, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಪಿಎಂಎಲ್ ಎನ್ ಪಕ್ಷದ ನವಾಜ್ ಷರೀಫ್ ಅವರ ಸೋದರ ಶಹಬಾಜ್ ಶರೀಫ್ ಅವರ ವಿರುದ್ಧ ನೇರಾನೇರ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಬೆಂಗಳೂರು ಉಪನಗರ ಯೋಜನೆ: ಸಿಎಂ ಎಚ್ಡಿಕೆ-ಕಂದಾಯ ಸಚಿವರಿಂದ ಚರ್ಚೆ

ಬೆಂಗಳೂರು ಉಪನಗರ ರೈಲು ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರು ಬುಧವಾರ ಮಾತುಕತೆ ನಡೆಸಲಿದ್ದಾರೆ. ಈ ಯೋಜನೆಯು ಕೇ‌ಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಲಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರವು ಬಜೆಟ್ನಲ್ಲಿ ಇದಕ್ಕಾಗಿ ಮೊದಲ ಹಂತದಲ್ಲಿ 349 ಕೋಟಿ ಮೀಸಲಿಟ್ಟಿದೆ. ಇದೇ ಸಂದರ್ಭದಲ್ಲಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಕುರಿತೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಇಂದಿನಿಂದ ದಕ್ಷಿಣ ಆಫ್ರಿಕಾದಲ್ಲಿ ಮೂರು ದಿನಗಳ ಬ್ರಿಕ್ಸ್ ಸಭೆ

ಇಂದಿನಿಂದ ಮೂರು ದಿನಗಳ ಕಾಲ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ದಕ್ಷಿಣ ಆಫ್ರಿಕಾ ನೇತೃತ್ವದಲ್ಲಿ ಹತ್ತನೇ ಸಭೆ ನಡೆಯುತ್ತಿದ್ದು ಎಲ್ಲ ಐದು ದೇಶಗಳನ್ನು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಸ್ವಾಗತಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಮುಖ್ಯಸ್ಥರ ಜೊತೆಯಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ಬುಧವಾರ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಕ್ಸ್‌ ಒಕ್ಕೂಟದ 10ನೇ ಶೃಂಗಸಭೆಯು ಜುಲೈ25 ರಿಂದ 27ರವರೆಗೆ ನಡೆಯಲಿದೆ.

ಸರಕು ಸಾಗಣೆ ವಾಹನಗಳ ಮುಷ್ಕರ; ಇಂದು ಮಾತುಕತೆ

ಆರು ದಿನಗಳಿಂದ ನಡೆಯುತ್ತಿರುವ ಸರಕು ಸಾಗಣೆ ವಾಹನಗಳ ಮುಷ್ಕರದ ಪರಿಣಾಮ ದೇಶವ್ಯಾಪಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬುಧವಾರ ಆಲ್ ಇಂಡಿಯಾ ಮೋಟಾರ್ಸ್ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್ (ಎಐಎಂಟಿಸಿ) ಪ್ರತಿನಿಧಿಗಳ ಜತೆ ಕೇಂದ್ರ ಸರ್ಕಾರ ಮತ್ತೊಂದು ಸುತ್ತು ಮಾತುಕತೆ ನಡೆಸಲಿದ್ದು, ಮುಷ್ಕರ ನಿಲ್ಲುವ ನಿರೀಕ್ಷೆ ಇದೆ. ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆ ತಗ್ಗಿಸಬೇಕು, ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡಿಸೇಲ್ ತರಬೇಕು ಎಂಬುದು ಮುಷ್ಕರ ನಿರತರ ಪ್ರಮುಖ ಬೇಡಿಕೆ ಆಗಿದೆ. ಅವೈಜ್ಞಾನಿಕ ಟೋಲ್ ಸಂಗ್ರಹ ಮಾಡುವುದನ್ನು ಎಐಎಂಟಿಸಿ ವಿರೋಧಿಸಿದೆ. ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ. ಬಹುತೇಕ ಪ್ರದೇಶಗಳಲ್ಲಿ ಹಾಲು, ಹಣ್ಣು, ತರಕಾರಿಗಳ ಸರಬರಾಜು ವ್ಯತ್ಯಯವಾಗಿದೆ.

ರಷ್ಯಾ ಓಪನ್ ಬ್ಯಾಡ್ಮಿಂಟನ್: ಕಶ್ಯಪ್, ಅಜಯ್‌ ಆಕರ್ಷಣೆ

೨೦೧೪ರ ಗ್ಲಾಸ್ಗೊ ಕಾಮನ್ವೆಲ್ತ್ ಸ್ವರ್ಣ ಪದಕ ವಿಜೇತ ಪರುಪಳ್ಳಿ ಕಶ್ಯಪ್ ಹಾಗೂ ಯುವ ಆಟಗಾರ ಅಜಯ್ ಜಯರಾಮ್ ರಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿಂದು ಪ್ರಮುಖ ಆಕರ್ಷಣೆಯಾಗಿದ್ದಾರೆ. ಗ್ಲಾಸ್ಗೊ ಕೂಟದ ನಂತರದಲ್ಲಿ ಯಾವೊಂದು ಪ್ರಮುಖ ಟೂರ್ನಿಯಲ್ಲಿಯೂ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಕಶ್ಯಪ್, ಇಂದು ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಜಪಾನ್ ಆಟಗಾರ ರೈಟೊರೊ ಮರುವಾ ವಿರುದ್ಧ ಸೆಣಸಲಿದ್ದಾರೆ. ಅಂತೆಯೇ ಮತ್ತೊಂದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಭಾರತದವರೇ ಆದ ಶುಭಾಂಕರ್ ದೇ ವಿರುದ್ಧ ಅಜಯ್ ಜಯರಾಮ್ ಕಾದಾಡಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More