ಡಾಲರ್ ವಿರುದ್ಧ ರುಪಾಯಿ ಕುಸಿತ ಪರಿಣಾಮ; ವಿದೇಶಿ ಕಾರು, ಮೊಬೈಲ್ ದುಬಾರಿ

ಜಾಗತಿಕ ವ್ಯಾಪಾರ ಸಮರ, ಕಚ್ಚಾ ತೈಲ ಬೆಲೆ ಏರಿಕೆಯಿಂದ ಅಮೆರಿಕದ ಡಾಲರ್ ಗೆ ಬೇಡಿಕೆ ಹೆಚ್ಚಿದೆ. ಅಂತಾರಾಷ್ಟ್ರೀಯ ವಹಿವಾಟು ಡಾಲರ್ ಮೂಲಕವೇ ನಡೆಯುತ್ತಿರುವುದರಿಂದ ಎಲ್ಲರೂ ಡಾಲರ್ ಖರೀದಿಸುತ್ತಿದ್ದಾರೆ. ಭಾರತದ ರುಪಾಯಿ, ಚೀನಾದ ಯಾನ್ ಸೇರಿ ಎಲ್ಲಾ ಕರೆನ್ಸಿ ಮೌಲ್ಯ ಕುಸಿದಿದೆ

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತದ ಪರಿಣಾಮ ನಿಧಾನವಾಗಿ ಜನರ ಮೇಲಾಗತೊಡಗಿದೆ. ಕಚ್ಚಾ ತೈಲ ಏರಿಕೆಯಿಂದಾಗಿ ಆಮದು ಬಿಲ್ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತಿದ್ದು, ಅದರ ಪರಿಣಾಮ ಚಾಲ್ತಿ ಖಾತೆ ಕೊರತೆ ಮತ್ತು ವಿತ್ತೀಯ ಕೊರತೆಗೆ ಕಾರಣವಾಗುತ್ತಿದೆ. ಜತೆಗೆ ಹಣದುಬ್ಬರವೂ ಏರುತ್ತಿದೆ.

ರುಪಾಯಿ ಕುಸಿತದದಿಂದ ಕಾರು ಮತ್ತು ಟೀವಿಗಳ ಬೆಲೆ ಏರಲಿದೆ. ಸರಕು ಮತ್ತು ಸೇವಾ ತೆರಿಗೆ ದರ ಕಡಿತ ಮಾಡಿದ್ದರಿಂದ ಟಿವಿಗಳ ದರ ಇಳಿಯಲಿದೆ ಎಂಬ ಸಂತಸದ ಬೆನ್ನಲ್ಲೇ ರುಪಾಯಿ ಮೌಲ್ಯ ಕುಸಿತದಿಂದಾಗಿ ಟಿವಿ ಬೆಲೆ ಏರಲಿದೆ ಎಂಬ ಸುದ್ದಿಯೂ ಹೊರಬಿದ್ದಿದೆ.

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಸಹ ರುಪಾಯಿ ಮೌಲ್ಯ ಕುಸಿತದಿಂದಾಗಿ ಕಾರುಗಳ ಬೆಲೆ ಏರಿಸಲಿದೆ. ಅದಕ್ಕೆ ಕಾರಣ ಮಾರುತಿ ಕಾರಿಗೆ ಬಳಸುವ ಕೆಲವು ಬಿಡಿ ಭಾಗಗಳನ್ನು ಡಾಲರ್ ಪಾವತಿಸಿ ವಿದೇಶಗಳಿಂದ ಖರೀದಿಸಲಾಗುತ್ತಿದೆ. ರುಪಾಯಿ ಮೌಲ್ಯ ಕುಸಿತದಿಂದಾಗಿ ವಿದೇಶಿ ವಿನಿಮಯದ ಹೊರೆ ಹೆಚ್ಚಾಗಿದೆ. ಇದು ಮಾರುತಿ ಕಂಪನಿಗಷ್ಟೇ ಸೀಮಿತವಾಗಿಲ್ಲ. ಎಲ್ಲಾ ಕಾರು ತಯಾರಿಕಾ ಕಂಪನಿಗಳೂ ಬೆಲೆ ಏರಿಸಲಿವೆ.

ದೇಶದಲ್ಲಿ ಟಿವಿ ಉತ್ಪಾದಿಸುತ್ತಿರುವ ಕಂಪನಿಗಳದ್ದು ಇದೇ ಸಮಸ್ಯೆ. ಟಿವಿಗಳು ದೇಶದಲ್ಲೇ ತಯಾರಾದರೂ ಬಿಡಿ ಭಾಗಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ಹೀಗಾಗಿ ಪಾವತಿ ಡಾಲರ್ ಮೂಲಕವೇ ಆಗುವುದರಿಂದ ಕಂಪನಿಗಳ ಆಮದು ವೆಚ್ಚ ಹೆಚ್ಚುತ್ತದೆ. ಅಂತಿಮವಾಗಿ ಅದರ ಹೊರೆಯನ್ನು ಸಿದ್ದ ಉತ್ಪನ್ನ ಖರೀದಿಸುವ ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ.

ಇದು ಆರಂಭ ಮಾತ್ರ. ಕಾರು, ಟಿವಿಗಳಿಗೆ ಮಾತ್ರ ಬೆಲೆ ಏರಿಕೆ ಸೀಮಿತವಾಗುವುದಿಲ್ಲ. ವಿದೇಶಿ ಬಿಡಿಭಾಗಗಳನ್ನು ಆಧರಿಸಿ ತಯಾರಿಸುವ ಎಲ್ಲಾ ಉತ್ಪನ್ನಗಳ ದರ ಏರಿಕೆ ಆಗಲಿದೆ. ದರ ಏರಿಕೆ ಪ್ರಮಾಣವನ್ನು ಇನ್ನೂ ಯಾವ ಕಂಪನಿಗಳೂ ನಿರ್ಧರಿಸಿಲ್ಲ.

ರುಪಾಯಿ ಡಾಲರ್ ವಿರುದ್ಧ 68ರ ಗಡಿದಾಟಿದಾಗ ಅದು ತಾತ್ಕಾಲಿಕ ಬೆಳವಣಿಗೆ ಎಂದೇ ಎಲ್ಲರೂ ಭಾವಿಸಿದ್ದರು. 68ರಿಂದ 67-66ಕ್ಕೆ ಇಳಿದು ಸ್ಥಿರವಾಗುತ್ತದೆಂದು ಎಲ್ಲರೂ ಅಂದಾಜಿಸಿದ್ದರು. ಅದರೆ, ರುಪಾಯಿ 68ರ ಗಡಿಯಿಂದ ಕೆಳಕ್ಕೆ ಇಳಿಯಲೇ ಇಲ್ಲ. ಅಲ್ಲದೇ ಜೂನ್ 28 ಮತ್ತು ಜುಲೈ 19ರ ದಿನದ ವಹಿವಾಟಿನಲ್ಲಿ ರುಪಾಯಿ 69ರ ಗಡಿ ದಾಟಿತು.

ಕಚ್ಚಾ ತೈಲ ದರ ಏರಿಕೆ ನಂತರ ಉದ್ಭವಿಸಿದ ವ್ಯಾಪಾರ ಸಮರದಿಂದಾಗಿ ಡಾಲರ್ ಬೇಡಿಕೆ ಹೆಚ್ಚಿದೆ. ಅಲ್ಲದೇ ಫೆಡರಲ್ ರಿಸರ್ವ್ ಬಡ್ಡಿದರ ಏರಿಸಿದೆ. ಉದಯಿಸುತ್ತಿರುವ ಮಾರುಕಟ್ಟೆ ದೇಶಗಳಿಗೆ ಹರಿಯುತ್ತಿದ್ದ ಡಾಲರ್ ರೂಪದ ಹೂಡಿಕೆ ಈಗ ಸ್ಥಗಿತಗೊಂಡಿದೆ. ಹೀಗಾಗಿ ಆ ದೇಶಗಳು ಖುದ್ದು ಡಾಲರ್ ಖರೀದಿಗೆ ಇಳಿದಿವೆ. ಹೀಗಾಗಿ ಡಾಲರ್ ಮೌಲ್ಯ ಏರುತ್ತಲೇ ಇದೆ.

ಇದನ್ನೂ ಓದಿ : ರುಪಾಯಿ ಮೌಲ್ಯ ಕುಸಿತದಿಂದ ಆರ್ಥಿಕತೆ ಮೇಲಾಗುವ ಪರಿಣಾಮಗಳೇನು ಗೊತ್ತೇ?

ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿರುವ ಅಂಶ ಎಂದರೆ ರುಪಾಯಿ 68-69ರ ಆಜುಬಾಜಿನಲ್ಲಿ ಸ್ಥಿರವಾಗಿ ಬಿಟ್ಟಿದೆ. ಮತ್ತು ಈಗಿನ ಪರಿಸ್ಥಿತಿ ಮುಂದುವರೆದರೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ 70ಕ್ಕೆಕುಸಿಯಬಹುದು. ಆ ದಿನಗಳು ದೂರವಿಲ್ಲ. ಸಾಮಾನ್ಯವಾಗಿ ಡಾಲರ್ ಮೌಲ್ಯ ಹೆಚ್ಚಿದರೆ ರಫ್ತು ಉದ್ಯಮಕ್ಕೆ ಹೆಚ್ಚಿನ ಲಾಭವಾಗುತ್ತದೆ. ಈಗಲೂ ಭಾರತದ ರಫ್ತು ಉದ್ಯಮಕ್ಕೆ ಲಾಭವಾಗುತ್ತದೆ. ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ವಲಯಕ್ಕೆ ಹೆಚ್ಚಿನ ಅನುಕೂಲ.

ಆದರೆ, ನಮ್ಮ ರಫ್ತು ಮತ್ತು ಆಮದುಗಳ ನಡುವೆ ಸಮತೋಲನ ಇಲ್ಲ. ದೇಶಕ್ಕೆ ಬೇಕಾಗಿರುವ ಕಚ್ಚಾ ತೈಲದ ಪೈಕಿ ಶೇ.85ರಷ್ಟು ಆಮದಿನಿಂದಲೇ ಪೂರೈಕೆಯಾಗುತ್ತದೆ. ಹೀಗಾಗಿ ನಮ್ಮದು ಆಮದು ಹೆಚ್ಚು ಮತ್ತು ರಫ್ತು ಪ್ರಮಾಣ ಕಡಮೆ ಇರುವ ದೇಶ. ಆಮದು ಆಧಾರಿತ ಉದ್ಯಮಗಳಿವೆ. ಹೀಗಾಗಿ ರುಪಾಯಿ ದರ ಕುಸಿತವು ಕೇವಲ ಕಾರು, ಟಿವಿಗಳಿಗೆ ಅಷ್ಟೇ ಅಲ್ಲ, ದೀರ್ಘಾವಧಿಯಲ್ಲಿ ನಮ್ಮ ಬೃಹದಾರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More