ಶಿರೂರು ಶ್ರೀ ಸಾವು| ಅಷ್ಟಮಠಗಳಿಂದ ಬೇರೆಡೆಗೆ ಗಮನಸೆಳೆಯಲಾಗುತ್ತಿದೆಯೇ?

“ನಮಗೆ ಅಷ್ಟಮಠಗಳ ಎಲ್ಲಾ ಸ್ವಾಮೀಜಿಗಳ ಬಗ್ಗೆ ಗೌರವವಿದೆ. ಆದರೆ ಮೊದಲ ಕೆಲವು ದಿನಗಳು ಎಲ್ಲರ ದೃಷ್ಟಿ ಮಠಗಳತ್ತ ನೆಟ್ಟಿತ್ತು. ಬಳಿಕ ಅದು ಬೇರೆಡೆ ಹರಿಯಿತು ಎನ್ನುವುದು ಅಚ್ಚರಿಯ ವಿಚಾರ,” ಎನ್ನುತ್ತಾರೆ ಉಡುಪಿಯ ಮಂದಿ

ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳ ಅಸಹಜ ಸಾವಿನ ವಿಚಾರವಾಗಿ ಕೆಲವು ಮಠಾಧೀಶರ ವಿರುದ್ಧ ಉಡುಪಿಯಲ್ಲಿ ಎದ್ದಿದ್ದ ಅನುಮಾನ ದೃಷ್ಟಿ ಕಳೆದ ಮೂರು ದಿನಗಳಿಂದ ಬೇರೆಡೆಗೆ ನೆಟ್ಟಂತಿದೆ. ಮಾಧ್ಯಮಗಳೂ ಸೇರಿದಂತೆ ಬಹುತೇಕರು ಈಗ ರಮ್ಯಾ ಶೆಟ್ಟಿ ಎಂಬಾಕೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಮಂಗಳವಾರ ಇಡೀ ದಿನ ಆಕೆಯ ಬಂಧನದ ಸುತ್ತ ಸಾಕಷ್ಟು ಚರ್ಚೆಗಳು ನಡೆದವು. ದಕ್ಷಿಣ ಕನ್ನಡದ ಆಳದಂಗಡಿ ಸಮೀಪ ರಮ್ಯಾ ಮತ್ತು ಇತರ ನಾಲ್ವರು ಚಲಿಸುತ್ತಿದ್ದ ಕಾರಿನ ಟಯರ್ ಪಂಕ್ಚರ್ ಆಗಿದ್ದು; ಬಳಿಕ ಆಕೆಯನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಒಪ್ಪಿಸಿದ್ದು; ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಉಡುಪಿ ಪೊಲೀಸರಿಗೆ ಹಸ್ತಾಂತರಿಸಿದ್ದು; ಈ ನಡುವೆ ಆಕೆ ಬುರ್ಖಾ ತೊಟ್ಟಿದ್ದರು ಎಂಬ ವರದಿಗಳು ಪ್ರಸಾರವಾಗಿವೆ. ಅಲ್ಲದೆ ಮಾಧ್ಯಮಗಳು ಮಂಗಳವಾರ ಸಂಜೆಯ ಹೊತ್ತಿಗೆ ಶಿರೂರು ಮಠದಲ್ಲಿ ಕಾಂಡೋಮ್, ಸ್ಯಾನಿಟರಿ ಪ್ಯಾಡುಗಳು ಪತ್ತೆಯಾಗಿವೆ ಎಂಬ ವರದಿಯನ್ನು ಬಿತ್ತರಿಸಿದವು. ಪೊಲೀಸ್ ಇಲಾಖೆಯ ಕೆಳಹಂತದ ಮೂಲಗಳಿಂದ ಮಾಹಿತಿಯನ್ನು ಪಡೆದು ಸುದ್ದಿ ಪ್ರಸಾರ ಮಾಡಲಾಯಿತು.

ಇತ್ತ ಉಡುಪಿಯಿಂದ 20 ಕಿಮೀ ದೂರದಲ್ಲಿರುವ ಶಿರೂರು ಮೂಲ ಮಠ ಹಾಗೂ ಉಡುಪಿಯ ಕೃಷ್ಣಮಠದ ಸಮೀಪವೇ ಇರುವ ಶಿರೂರು ಮಠಕ್ಕೂ ಭೇಟಿ ನೀಡಿದ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳನ್ನು ನಿರಾಕರಿಸಿದರು. ಅಲ್ಲದೆ ಪ್ರಕರಣದಲ್ಲಿ “ಯಾರನ್ನೂ ಬಂಧಿಸಿಲ್ಲ. ಶಿರೂರು ಮಠದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ,” ಎಂದರು.

ಮಠಗಳೆಡೆಗೆ ಮೂಡಿದ್ದ ಸಂಶಯ ಹಠಾತ್ತಾಗಿ ಬೇರೆಡೆ ತಿರುಗಿದ್ದು ಹೇಗೆ ಎಂಬುದರ ಸುತ್ತ ಈಗ ಉಡುಪಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಮಾತನಾಡಿದ ಹೆಸರು ಬಹಿರಂಗಪಡಿಸಲು ಬಯಸದ ಉಡುಪಿಯ ನಿವಾಸಿಯೊಬ್ಬರು, “ನಮಗೆ ಅಷ್ಟಮಠಗಳ ಎಲ್ಲಾ ಸ್ವಾಮೀಜಿಗಳ ಬಗ್ಗೆ ಗೌರವವಿದೆ. ಶಿರೂರು ಶ್ರೀಗಳ ಸಾವಿನ ನಂತರ ಮೊದಲ ಕೆಲವು ದಿನಗಳು ಎಲ್ಲರ ಕಣ್ಣು ಉಡುಪಿಯ ಅಷ್ಟಮಠಗಳತ್ತ ನೆಟ್ಟಿತ್ತು. ಬಳಿಕ ಅದು ಬೇರೆಡೆ ಹರಿಯಿತು! ಎಂದು ಅಚ್ಚರಿ ಪಡುತ್ತಾರೆ. “ಶಿರೂರು ಶ್ರೀಗಳು ಪಟ್ಟದ ದೇವರನ್ನು ಹಿಂಪಡೆಯುವ ವಿಷಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದ ವಿಚಾರ, ಅದಾದ ಕೆಲ ದಿನಗಳಲ್ಲೇ ಅವರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದ ಮುಂತಾದ ಮಠಕ್ಕೆ ಸಂಬಂಧಿಸಿದ ವಿಚಾರಗಳ ಸುತ್ತ ನಡೆಯುತ್ತಿದ್ದ ಚರ್ಚೆ ಹಿನ್ನೆಲೆಗೆ ಸರಿದಿದೆ. ಇದಕ್ಕೆ ಕಾರಣಗಳೇನು ಎಂದು ತಿಳಿಯುತ್ತಿಲ್ಲ,” ಎಂದು ಅವರು ಅಭಿಪ್ರಾಯಪಡುತ್ತಾರೆ.

ಶಿರೂರು ಮಠದ ಪಟ್ಟದ ದೇವರಾದ ವಿಠಲನ ಮೂರ್ತಿಯನ್ನು ಪಡೆಯಲು ಪಟ್ಟು ಹಿಡಿದಿದ್ದ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಅವಶ್ಯವಾದರೆ ಕ್ರಿಮಿನಲ್ ಕೇಸು ದಾಖಲಿಸಲೂ ಸಿದ್ಧ ಎಂದು ಸಾವನ್ನಪ್ಪುವ ಮೂರು ದಿನಗಳ ಮೊದಲು (ಜುಲೈ 17) ಹೇಳಿದ್ದರು. “ಪರ್ಯಾಯ ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಗನ್ ಮ್ಯಾನ್ ನೇಮಕ ಮಾಡಿಕೊಂಡಿದ್ದಾರೆ. ಆದರೆ ನಿಜವಾಗಿ ಗನ್ ಮ್ಯಾನ್ ಅವಶ್ಯಕತೆ ಇರುವುದು ನನಗೆ” ಎಂದು ಆತಂಕ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬೇಕಿದೆ. ಆದರೆ ಎಲ್ಲ ಚರ್ಚೆಗಳು ಒಮ್ಮೆಲೇ ಹಿನ್ನೆಲೆಗೆ ಸರಿದಿದ್ದು ಶಿರೂರು ಸ್ವಾಮೀಜಿಯವರ ಆಪ್ತೆ ಎನ್ನಲಾದ ರಮ್ಯಾ ಶೆಟ್ಟಿಯವರ ಸುತ್ತಲೇ ಚರ್ಚೆಗಳು ಕೇಂದ್ರಿತವಾಗಿರುವುದರ ಬಗ್ಗೆಯೂ ಸ್ಥಳೀಯರು ಅನುಮಾನದಿಂದ ನೋಡುವಂತಾಗಿದೆ.

ಇದನ್ನೂ ಓದಿ : ಶಿರೂರು ಶ್ರೀ ಸಾವು | ರಮ್ಯಾ ಶೆಟ್ಟಿ ಬಂಧನ ಎಂಬ ಗೊಂದಲದ ಗೂಡು

“ಅಷ್ಟಮಠಗಳ ಬಗ್ಗೆ ಅನೇಕ ವಿಚಾರಗಳಲ್ಲಿ ಅನುಮಾನಗಳು ಮೂಡಿವೆ. ಆದರೆ ಆ ಬಗ್ಗೆ ಚರ್ಚೆಗಳು ಹಿನ್ನೆಲೆಗೆ ಸರಿದಿವೆ. ಶಿರೂರು ಸ್ವಾಮೀಜಿಯವರ ವಿವಾದಾಸ್ಪದ ವ್ಯಕ್ತಿತ್ವದ ಸುತ್ತಲೇ ಚರ್ಚೆ ನಡೆಯುತ್ತಿದೆ. ವಿವಾದಗಳು ಎದ್ದ ಹೊತ್ತಿನಲ್ಲಿ ಅವರ ಸಾವು ಸಂಭವಿಸಿದ್ದು ಕಾಕತಾಳೀಯವೂ ಇರಬಹುದು,” ಎಂದು ಮಠವನ್ನು ಹತ್ತಿರದಿಂದ ಬಲ್ಲವರೊಬ್ಬರ ಅನಿಸಿಕೆ

ಈ ನಡುವೆ ಮರಣೋತ್ತರ ಪರೀಕ್ಷೆ ವರದಿ ಬುಧವಾರ ಅಥವಾ ಗುರುವಾರ ಪೊಲೀಸರ ಕೈಸೇರುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಶ್ರೀಗಳ ಸಾವು ಹೈಪ್ರೊಫೈಲ್ ಪ್ರಕರಣವಾಗಿರುವುದರಿಂದ ವಿಧಿವಿಜ್ಞಾನ ಪರೀಕ್ಷೆಯ ವರದಿಯೂ ಬಹುಮುಖ್ಯ ಪಾತ್ರ ವಹಿಸಲಿದೆ. ಇದು ಹೊರಬರಲು ಕನಿಷ್ಠ ಇನ್ನೂ ಹತ್ತು ದಿನಗಳ ಕಾಲ ಕಾಯಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More