ಎಪಿಪಿ ನೇಮಕ ಹಗರಣ; ಸರ್ಕಾರಿ ವಕೀಲರ ಕೊರತೆ ನೆಪದಲ್ಲಿ ಅಕ್ರಮ ಫಲಾನುಭವಿಗಳ ರಕ್ಷಣೆ!

ಅಕ್ರಮ ಎಸಗಿದ್ದಾರೆನ್ನಲಾದ ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್‌ಗಳ (ಎಪಿಪಿ) ಅಮಾನತು ಕುರಿತು ಸರ್ಕಾರದಿಂದ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಈ ನಡುವೆ, ಆರೋಪಿತ ಎಪಿಪಿಗಳನ್ನು ಅಮಾನತು ಮಾಡಿದರೆ ಕೋರ್ಟ್ ಕಲಾಪಗಳಿಗೆ ತೊಂದರೆಯಾಗಲಿದೆ ಎಂಬ ಸಬೂಬು ಮುಂದೊಡ್ಡಲಾಗಿದೆ

ಅಕ್ರಮ ಮಾರ್ಗಗಳ ಮೂಲಕ ನೇಮಕವಾಗಿರುವ ೬೧ ಮಂದಿ ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್ ಮತ್ತು ಅಸಿಸ್ಟೆಂಟ್‌ ಗೌರ್ನಮೆಂಟ್‌ ಪ್ಲೀಡರ್ರ್ಸ್ (ಎಪಿಪಿ) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ. ಈ ನಡುವೆ, ಪ್ರಾಸಿಕ್ಯೂಷನ್‌ ಇಲಾಖೆಯು ಅಕ್ರಮ ಫಲಾನುಭವಿಗಳ ರಕ್ಷಣೆಗೆ ನಿಂತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಈ ಸಂಬಂಧ ಇಲಾಖೆಯ ನಿರ್ದೇಶಕರು ನೀಡಿರುವ ಸಮರ್ಥನೆ ಚರ್ಚೆಗೆ ಗ್ರಾಸವಾಗಿದೆ.

ಎಪಿಪಿಗಳ ನೇಮಕಾತಿ ಸಂಬಂಧ ರಚಿಸಿದ್ದ ನೇಮಕಾತಿ ಸಮಿತಿಯಲ್ಲಿದ್ದವರ ವಿರುದ್ಧವೇ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದ್ದರೂ ೧೦೦ ಎಪಿಪಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮತ್ತೊಂದು ನೇಮಕಾತಿ ಸಮಿತಿ ರಚಿಸಿದೆ ಎಂದು ತಿಳಿದುಬಂದಿದೆ. ಯಾವ ನೇಮಕಾತಿ ಸಮಿತಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆಯೋ ಅಂತಹದ್ದೇ ಸಮಿತಿಯನ್ನು ರಚಿಸಿರುವ ಸರ್ಕಾರದ ಈ ಕ್ರಮಕ್ಕೂ ಆಕ್ಷೇಪ ವ್ಯಕ್ತವಾಗಿದೆ. ನೇಮಕಾತಿ ಸಮಿತಿಯಲ್ಲಿದ್ದವರಿಂದಲೇ ಉತ್ತರ ಪತ್ರಿಕೆಗಳಲ್ಲಿನ ಅಂಕ ತಿದ್ದುಪಡಿ ಆಗಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ಸಮಿತಿ ರಚನೆ ಕೈಬಿಟ್ಟು ನೇಮಕಾತಿ ಜವಾಬ್ದಾರಿಯನ್ನು ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ’ ವಹಿಸಬಹುದಾಗಿತ್ತು ಎಂಬ ಅಭಿಪ್ರಾಯಗಳು ಇಲಾಖೆಯಲ್ಲಿಯೇ ವ್ಯಕ್ತವಾಗಿವೆ.

ಇಲಾಖೆಯ ವಾದವೇನು?: ಆರೋಪ ಸಾಬೀತಾಗಿರುವ ೬೧ ಮಂದಿಯನ್ನು ಅಮಾನತುಗೊಳಿಸಿದರೆ ನ್ಯಾಯಾಲಯಗಳ ಕಾರ್ಯಕಲಾಪಗಳಿಗೆ ಅಡಚಣೆ ಉಂಟಾಗಲಿದೆ ಎಂದು ಪ್ರಾಸಿಕ್ಯೂಷನ್ ಇಲಾಖೆ ನೆಪ ಹೇಳಿದೆ. ಈ ಅಭಿಪ್ರಾಯಕ್ಕೆ ಒಂದಷ್ಟು ಕಾರಣಗಳನ್ನೂ ಮುಂದೊಡ್ಡಿದೆ. ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್ ಮತ್ತು ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳು ಭರ್ತಿಯಾಗದ ಕಾರಣ ಖಾಲಿ ಇವೆ. ೪೧೧ ಹುದ್ದೆಗಳ ಪೈಕಿ ನ್ಯಾಯಾಲಯಗಳಿಗೆ ೧೨೧ ಹುದ್ದೆಗಳು ಸೃಜನೆ ಆಗಬೇಕಿವೆ. ಒಟ್ಟು ೫೩೨ ಹುದ್ದೆಗಳ ಪೈಕಿ ಕೇವಲ ೨೩೧ ಹುದ್ದೆಗಳಿಗಷ್ಟೇ ನೇಮಕವಾಗಿದೆ. ಇವರು ಕೂಡ ಹೆಚ್ಚುವರಿ ಪ್ರಭಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ೩೦೧ ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಿದೆ.

“ಇಂತಹ ಪರಿಸ್ಥಿತಿಯಲ್ಲಿ ೬೧ ಎಪಿಪಿಗಳನ್ನು ಅಮಾನತುಗೊಳಿಸಿದರೆ ೩೬೨ ಹುದ್ದೆ ಖಾಲಿ ಉಳಿಯಲಿವೆ. ಹೀಗಾಗಿ, ನ್ಯಾಯಾಲಯಗಳ ಕಾರ್ಯಕಲಾಪಗಳಿಗೆ ಮತ್ತು ಸಾರ್ವಜನಿಕರಿಗೆ ಅಡಚಣೆ ಉಂಟಾಗಲಿದೆ,” ಎಂದು ಇಲಾಖೆಯ ನಿರ್ದೇಶಕರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.

ಪ್ರಾಸಿಕ್ಯೂಷನ್‌ ಇಲಾಖೆ ನಿರ್ದೇಶಕರು ನೀಡಿರುವ ಅಭಿಪ್ರಾಯದ ಪ್ರತಿ
ಇದನ್ನೂ ಓದಿ : ಎಪಿಪಿ ನೇಮಕ ಹಗರಣ: ಶೂನ್ಯ ಸಂಪಾದನೆಯು ‘8’ ಅಂಕವಾಗಿ ಬದಲಾದ ರಹಸ್ಯ

ಇಲಾಖೆ ವಿಚಾರಣೆಗೆ ಆಕ್ಷೇಪ: ಈ ಬೆಳವಣಿಗೆಗಳ ನಡುವೆಯೇ ೬೧ ಮಂದಿ ಎಪಿಪಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆ ಕಾಯ್ದೆ ೧೨(೩) ಅಡಿಯಲ್ಲಿ ಇಲಾಖೆ ವಿಚಾರಣೆ ನಡೆಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಕ್ರಮಕ್ಕೂ ಆಕ್ಷೇಪ ಕೇಳಿಬಂದಿದೆ. ಸೇವೆಯಿಂದಲೇ ವಜಾಗೊಳ್ಳಬೇಕಾದ ಪ್ರಕರಣಗಳನ್ನು ಇಲಾಖೆ ವಿಚಾರಣೆ ನಡೆಸುವ ಮೂಲಕ ಅವರ ರಕ್ಷಣೆಗೆ ಲೋಕಾಯುಕ್ತ ಸಂಸ್ಥೆ ಪರೋಕ್ಷವಾಗಿ ನೆರವಾಗಲಿದೆ ಎಂಬ ವಾದವೂ ಕೇಳಿಬಂದಿದೆ. ಈಗಾಗಲೇ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ಆರೋಪಗಳನ್ನು ಸಾಬೀತುಗೊಳಿಸಿದ ನಂತರವೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಹೀಗಿರುವಾಗ ಮಾತೃ ಇಲಾಖೆಯಾಗಿರುವ ಪ್ರಾಸಿಕ್ಯೂಷನ್‌ ಇಲಾಖೆಯಿಂದ ಪುನಃ ತನಿಖೆ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳೂ ಕೇಳಿಬಂದಿವೆ.

ಇನ್ನು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಇಲಾಖೆ ವಿಚಾರಣೆ ನಡೆಸಲು ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಶಿಫಾರಸು ಮಾಡುತ್ತಿದೆಯಾದರೂ, ಬಹುತೇಕ ಪ್ರಕರಣಗಳಿಗೆ ಸಂಬಂಧಿತ ಸಚಿವರು ಅನುಮೋದನೆಯನ್ನೇ ನೀಡುತ್ತಿಲ್ಲ. ಅನೇಕ ವರ್ಷಗಳಿಂದ ಹಲವು ಪ್ರಕರಣಗಳು ಅನುಮೋದನೆಗೆ ಬಾಕಿ ಉಳಿದಿವೆ. ಹೀಗಾಗಿ, ೬೧ ಮಂದಿ ಎಪಿಪಿಗಳ ವಿರುದ್ಧ ಇಲಾಖೆ ವಿಚಾರಣೆಗೆ ಗುರಿ ಮಾಡುವುದು ತಿಪ್ಪೆ ಸಾರಿಸುವುದಷ್ಟೇ ವಿನಾ ಇದರಿಂದ ಯಾವೊಬ್ಬ ತಪ್ಪಿತಸ್ಥರೂ ಯಾವ ಶಿಕ್ಷೆಗೂ ಗುರಿಯಾಗುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More