ಟ್ರಾಯ್‌ ಅಧ್ಯಕ್ಷರಿಗೆ ಮತ್ತೊಂದು ಆಘಾತ, ಹ್ಯಾಕರ್‌ಗಳಿಂದ ಬೆದರಿಕೆಯ ಇಮೇಲ್‌!

ಆಧಾರ್‌ ಸಂಖ್ಯೆ ನೀಡಿ ಸವಾಲು ಹಾಕಿದ್ದ ಟ್ರಾಯ್‌ ಅಧ್ಯಕ್ಷ ಶರ್ಮಾ ಅವರ ವೈಯಕ್ತಿಕ ಮಾಹಿತಿಗಳು ಕೆಲವೇ ಗಂಟೆಗಳಲ್ಲಿ ಬಯಲಾಗಿದ್ದವು. ಆದರೆ ಅವರು, ‘ಈ ಮಾಹಿತಿ ಎಲ್ಲೆಡೆ ಇದೆ, ನನಗೇನೂ ತೊಂದರೆ ಇಲ್ಲ’ ಎಂದಿದ್ದರು. ನಂತರದಲ್ಲಿ, ಭಾನುವಾರ ನಡುರಾತ್ರಿ ಅವರಿಗೆ ಬೆದರಿಕೆಯ ಇಮೇಲ್‌ ಬಂದಿದೆ!

‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಗಾದೆ ನಮಗೆ ಚಿರಪರಿಚಿತ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಮುಖ್ಯಸ್ಥ ರಾಮ್‌ ಸೇವಕ್‌ ಶರ್ಮಾ ಅವರು ಭಾನುವಾರ ತಡರಾತ್ರಿವರೆಗೂ ಹೀಗೇ ಇದ್ದರು. ಶನಿವಾರ ಟ್ವಿಟರ್‌ನಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ಪ್ರಕಟಿಸಿ, ತಮ್ಮ ಖಾಸಗಿ ಮಾಹಿತಿಯನ್ನು ಯಾರಾದರೂ ಬಯಲು ಮಾಡಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಕೆಲವೇ ಗಂಟೆಗಳಲ್ಲಿ ಅವರ ಜನ್ಮದಿನ, ಮೊಬೈಲ್‌ ಸಂಖ್ಯೆ, ವಿಳಾಸ, ಬ್ಯಾಂಕ್‌ ವಿವರಗಳು ಹೊರಬಿದ್ದಿದ್ದವು. ಆದರೂ ಅವರು ಜಗ್ಗಿರಲಿಲ್ಲ.

ಆದರೆ, ಭಾನುವಾರ ನಡುರಾತ್ರಿ ಶರ್ಮಾ ಮತ್ತು ಅವರು ಮಗಳು ಕವಿತಾ ಅವರಿಗೆ ಇಮೇಲ್‌ವೊಂದು ಬಂದಿದ್ದು, ಅದರಲ್ಲಿ ಹಣ ನೀಡದೆಹೋದರೆ ಶರ್ಮಾ ಅವರ ಫೋನಿನಲ್ಲಿ ಮಾಲ್‌ವೇರ್‌ ಇನ್‌ಸ್ಟಾಲ್‌ ಮಾಡಿ ಅವರ ಎಲ್ಲ ರೀತಿಯ ಖಾಸಗಿ ಮಾಹಿತಿಯನ್ನೂ ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಆಧಾರ್‌ ಅತ್ಯಂತ ಸುರಕ್ಷಿತ ಹಾಗೂ ಅದರ ಮಾಹಿತಿ ಗೌಪ್ಯ ಎಂಬುದನ್ನು ಶರ್ಮಾ ಸಾಬೀತು ಮಾಡುವುದಕ್ಕೆ ಹೊರಟಿದ್ದರು. ಅದು ಇಂಥ ದೊಡ್ಡ ತಿರುಗುಬಾಣ ಆಗಬಹುದು ಎಂದು ಅವರು ಊಹಿಸಿರಲಿಕ್ಕಿಲ್ಲ. ಶರ್ಮಾ ಅವರ ಪುತ್ರಿ ಕವಿತಾ ಅವರಿಗಲ್ಲದೆ, ಫ್ರೆಂಚ್‌ ಸೆಕ್ಯುರಿಟಿ ರಿಸರ್ಚರ್‌ ಎಂದು ಹೇಳಿಕೊಳ್ಳುವ ಅನಾಮಧೇಯ ವ್ಯಕ್ತಿ ಸೇರಿದಂತೆ ‘ದಿ ವೈರ್‌’ನ ಇಬ್ಬರು ಪತ್ರಕರ್ತರಿಗೂ ಇಂಥದ್ದೇ ಇಮೇಲ್‌ ಕಳಿಸಲಾಗಿದೆ.

ಇಮೇಲ್‌ನಲ್ಲಿರುವ ಸಂದೇಶವಿದು

ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣದಲ್ಲಿ ಸವಾಲನ್ನು ಪ್ರಕಟಿಸುವ ಮೂಲಕ ಆರ್ ಎಸ್ ಶರ್ಮಾ ದೇಶವನ್ನು ತಲೆತಗ್ಗಿಸುವಂತೆ ಮಾಡಿದ್ದಾರೆ. ಜೊತೆಗೆ ಹ್ಯಾಕರ್‌ಗಳಿಗೆ ಖಾತೆಗಳ ಉಡುಗೊರೆ ನೀಡಿದ್ದಾರೆ. ಅವರ ಬ್ಯಾಂಕ್‌ ಖಾತೆಗಳ ಸಂಖ್ಯೆ ಈಗ ಸಾಮಾಜಿಕ ಮಾಧ್ಯಮದಲ್ಲಿದೆ. ಅವರ ಪಿಎನ್‌ಬಿ ಖಾತೆಯಂತೂ ಹ್ಯಾಕ್‌ ಆಗುವ ಭೀತಿಯಲ್ಲಿದೆ. ಅವರ ಇಮೇಲ್‌ ಖಾತೆಗಳು ರಹಸ್ಯವಾಗಿ ಉಳಿದಿಲ್ಲ.

ಇದು ಎಚ್ಚರಿಕೆ. ಅವರು ಕೂಡಲೇ ತಮ್ಮೆಲ್ಲ ಖಾತೆಗಳನ್ನು ಡಿಲಿಟ್‌ ಮಾಡದೆಹೋದರೆ, ಅವರ ಎಲ್ಲ ಸೂಕ್ಷ್ಮ ಮಾಹಿತಿಯುಳ್ಳ ಫೈಲ್‌ಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ.

ಒಂದು ವೇಳೆ, ನಾವು ಹೇಳಿದ್ದಕ್ಕೆ ಒಪ್ಪದೆಹೋದಲ್ಲಿ, ಅವರ ಖಾಸಗಿ ಫೋನಿನಲ್ಲಿ ಮಾಲ್‌ವೇರ್‌ ಅನ್ನು ಇನ್‌ಸ್ಟಾಲ್‌ ಮಾಡಿ, ಎಲ್ಲ ಕಮ್ಯುನಿಕೇಷನ್‌ ಅನ್ನು ಕದ್ದು ದಾಖಲಿಸಲಾಗುವುದು.

ಅವರ ಇಮೇಲ್‌ಗಳನ್ನು ಎನ್‌ಕ್ರಿಪ್ಟ್‌ ಮಾಡಲಾಗುವುದು ಮತ್ತು ಹಣ ನೀಡದಿದ್ದಲ್ಲಿ, ಆ ಎಲ್ಲ ಮಾಹಿತಿ ಕೈಗೆಟುಕುವುದಿಲ್ಲ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು.

ಕವಿತಾ: ಮುಂದಿನ ೨೪ ಗಂಟೆಗಳಲ್ಲಿ ಇಮೇಲ್‌ಗೆ ಪ್ರತಿಕ್ರಿಯಿಸದಿದ್ದರೆ, ಅದರ ಪರಿಣಾಮಗಳು ಪಶ್ಚಾತ್ತಾಪ ಪಡುವಂತಾಗಬಹುದು.

ಯಾವುದೇ ಕಾನೂನು ಕ್ರಮಗಳಿಗೆ ಮುಂದಾಗುವುದು ಅಪಾಯಕಾರಿ. ಈ ಬಾರಿ ಎರಡನೆಯ ಅವಕಾಶವೆಂಬುದು ಇರದು. ಬುದ್ಧಿವಂತಿಕೆಯಿಂದ ನಡೆದುಕೊಳ್ಳುವುದು ಒಳಿತು.

ಆರ್ ಎಸ್‌ ಶರ್ಮಾ ಅವರ ಜಿಮೇಲ್‌ ಹಾಗೂ ಯಾಹೂ ಮೇಲ್‌ ಖಾತೆಗಳಿಗೆ ಈ ಇಮೇಲ್‌ ರವಾನೆಯಾಗಿದೆ.

‘ದಿ ವೈರ್‌’ನ ಪತ್ರಕರ್ತರು ಈ ಕುರಿತು ದೆಹಲಿ ಪೊಲೀಸ್‌ಗೆ ವೆಬ್‌ಸೈಟ್‌ ಮೂಲಕ ದೂರು ದಾಖಲಿಸಲು ಮಾಡಿದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಅನ್ನು ಸಂಪರ್ಕಿಸಿದರು. ಈ ನಡುವೆ, ಸೈಬರ್‌ ಕ್ರೈಮ್‌ ಸಂಪರ್ಕಿಸಿದಾಗ, "ಬೆಳಗ್ಗೆ ೧೦ರಿಂದ ಸಂಜೆ ೬ರವರೆಗೆ ದೂರು ದಾಖಲಿಸಿಕೊಳ್ಳಲಾಗುತ್ತದೆ. ದೂರು ದಾಖಲಿಸಿಕೊಳ್ಳುವವರು ಇಲ್ಲದಿರುವುದರಿಂದ ಬೆಳಗ್ಗೆ ಬನ್ನಿ,'' ಎಂಬ ಉತ್ತರ ಸಿಕ್ಕಿತೆಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ತನಗೂ ಈ ಬಗೆಯ ಇಮೇಲ್‌ ಬಂದಿದೆ ಎಂದಿರುವ ಫ್ರೆಂಚ್‌ ರಿಸರ್ಚರ್‌ ಏಲಿಯಟ್‌ ಆಲ್ಡರ್ಸನ್‌, “ಇದು ಮೂರ್ಖತನ. ಈ ಬಗೆಯ ಬೆದರಿಕೆಗಳನ್ನು ನಾನೆಂದೂ ಬೆಂಬಲಿಸುವುದಿಲ್ಲ,” ಎಂದಿದ್ದಾರೆ.

ಶರ್ಮಾ ಖಾತೆಗೆ ೧ ರು. ಹಣ ವರ್ಗಾವಣೆ!

ಶರ್ಮಾ ಅವರ ಮೊಬೈಲ್‌ ನಂಬರ್‌, ಇಮೇಲ್ ಮತ್ತಿತರ ಮಾಹಿತಿ ಹೊರಬೀಳುತ್ತಿದ್ದಂತೆ ಅವರ ಹೊಣಗೇಡಿತನ ಮನವರಿಕೆ ಮಾಡುವುದಕ್ಕೆ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿ ಮಾಡಿ ಟ್ವೀಟ್‌ ಮಾಡಲಾಗಿತ್ತು. ಇವೆಲ್ಲವೂ ಆಧಾರ್‌ ಸಂಖ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗ ಮಾಡುವುದರಿಂದ ಅಪಾಯ ಏನು ಎಂಬುದನ್ನು ಮನವರಿಕೆ ಮಾಡುವ ಕಾರಣಕ್ಕಾಗಿಯೇ ಮಾಡಿದ್ದಾಗಿ ಟ್ವೀಟ್‌ ಮಾಡಿದವರೆಲ್ಲ ಸ್ಪಷ್ಟಪಡಿಸಿದ್ದರು. ಆದರೂ ಶರ್ಮಾ ಅವರು ತಮ್ಮ ನಿಲುವಿಗೆ ಬದ್ಧರಾಗಿರುವಂತೆ ಟ್ವೀಟ್‌ ಮಾಡಿ, "ನನ್ನ ಆಧಾರ್‌ ನಂಬರ್‌ ನಿಮ್ಮ ಬಳಿ ಇದೆಯಲ್ಲ, ಅದರಿಂದ ನೀವೇನಾದರೂ ನನಗೆ ಹಾನಿ ಉಂಟು ಮಾಡಲು ಸಾಧ್ಯವಾಯಿತೇ?'' ಎಂದು ಮತ್ತೆ ಸವಾಲೆಸೆದಿದ್ದರು. ಇದಕ್ಕೆ ಉತ್ತರವೆಂಬಂತೆ ಟ್ವೀಟಿಗರೊಬ್ಬರು ಸರ್ಕಾರ ಪರಿಚಯಿಸಿದ ಭೀಮ್‌ ಆಪ್‌ ಬಳಸಿ ೧ ರುಪಾಯಿಯನ್ನು ಆರ್‌ ಎಸ್‌ ಶರ್ಮಾ ಅವರ ಖಾತೆಯೊಂದಕ್ಕೆ ಹಣ ವರ್ಗಾವಣೆ ಮಾಡಿದರು!

ಇದನ್ನೂ ಓದಿ : ಸವಾಲು ಸ್ವೀಕರಿಸಿ ಟ್ರಾಯ್ ಅಧ್ಯಕ್ಷರ ಮಾಹಿತಿ ಸೋರಿಕೆ ಮಾಡಿದ ಫ್ರೆಂಚ್ ಸಂಶೋಧಕ

ಸರ್ಕಾರದ ಉನ್ನತ ಸ್ಥಾನದಲ್ಲಿರುವ ಶರ್ಮಾ ಅವರು ಆಧಾರ್‌ ಪ್ರಾಧಿಕಾರದ ಸೂಚನೆಯನ್ನೂ ಪರಿಗಣಿಸದೆ ಸಾರ್ವಜನಿಕವಾಗಿ ಆಧಾರ್‌ ಸಂಖ್ಯೆಯನ್ನು ಪ್ರಕಟಿಸಿದ್ದು, ಅದರ ಬಳಿಕ ಮಾಹಿತಿ ಬಯಲಾದಾಗಲೂ ಅದನ್ನು ಗಂಭೀರವಾಗಿ ಪರಿಗಣಿಸದೆ ಹೊಣೆಗೇಡಿತನದಿಂದ ಟ್ವೀಟಿಸಿ ಮತ್ತಷ್ಟು ಕೆಣಕಿ ಇನ್ನಷ್ಟು ಅವಾಂತರಗಳಿಗೆ ಕಾರಣವಾಗಿದ್ದು ಎರಡು ದಿನಗಳಲ್ಲಿ ಬಯಲಾಗಿದೆ.

ಆಧಾರ್‌ ಅತ್ಯಂತ ಸುರಕ್ಷಿತ, ಗೌಪ್ಯ ಎಂದು ಸಮರ್ಥಿಸಿಕೊಂಡ ಸರ್ಕಾರ, ಈ ಮುಜುಗರವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಸದ್ಯದ ಕುತೂಹಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More