ವಿವಾದಕ್ಕೆ ಕಾರಣವಾದ ಅಸ್ಸಾಂ ನಾಗರಿಕರ ಪೌರತ್ವ ಪರಿಷ್ಕೃತ ಕರಡಿನಲ್ಲಿ ಏನಿದೆ?

ಅಸ್ಸಾಂನಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಗುರುತಿಸಲು ರಾಷ್ಟ್ರೀಯ ನಾಗರಿಕರ ರಿಜಿಸ್ಟರ್ (ಎನ್‌ಆರ್‌ಸಿ) ಪರಿಷ್ಕೃತ ಕರಡು ಪ್ರತಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ. ಅಸ್ಸಾಂನಲ್ಲಿ ನೆಲೆಸಿರುವ 40 ಲಕ್ಷ ಜನರು ಪೌರತ್ವ ಹೊಂದಲು ಅರ್ಹರಲ್ಲವೆಂದು ಎನ್‌ಆರ್‌ಸಿ ತಿಳಿಸಿದೆ

ಅಸ್ಸಾಂನಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಗುರುತಿಸಲು ರಾಷ್ಟ್ರೀಯ ನಾಗರಿಕರ ರಿಜಿಸ್ಟರ್ (ಎನ್‌ಆರ್‌ಸಿ) ಪರಿಷ್ಕೃತ ಕರಡು ಪ್ರತಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ. ಅಸ್ಸಾಂನಲ್ಲಿ ನೆಲೆಸಿರುವ 40 ಲಕ್ಷ ಜನರು ಪೌರತ್ವ ಹೊಂದಲು ಅರ್ಹರಲ್ಲವೆಂದು ಎನ್‌ಆರ್‌ಸಿ ತಿಳಿಸಿದೆ. ಕರಡಿನ ಪ್ರಕಾರ, ಅಸ್ಸಾಂನಲ್ಲಿ ನೆಲೆಸಿರುವ 3.29 ಕೋಟಿ ಜನರಲ್ಲಿ 2.09 ಕೋಟಿ ಜನರು ಅಧಿಕೃತ ಪೌರತ್ವ ಹೊಂದಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎನ್‌ಆರ್‌ಸಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ಅಸ್ಸಾಂನಲ್ಲಿ ಒಟ್ಟು 3.29 ಕೋಟಿ ಜನರು ತಮ್ಮ ಪೌರತ್ವ ಸಾಬೀತುಪಡಿಸಲು ದಾಖಲೆಗಳುಳ್ಳ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಎನ್ಆರ್‌‌ಸಿ ಅಸ್ಸಾಂ ಸಂಯೋಜಕ ಅಧಿಕಾರಿ ಪ್ರತೀಕ್ ಹಲೇಜಾ ಅವರು, “ಒಟ್ಟು 3,29,91,385 ಅರ್ಜಿದಾರರ ಪೈಕಿ 2,89,83,677 ಅರ್ಜಿದಾರರು ತಮ್ಮ ಪೌರತ್ವ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ 40,07,708 ಮಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ 40 ಲಕ್ಷ ಮಂದಿಯು ಪೌರತ್ವ ಹೊಂದಲು ಏಕೆ ಅರ್ಹರಲ್ಲ ಎನ್ನುವ ವಿಚಾರವಾಗಿ ಮಾತನಾಡಲು ಸಾಧ್ಯವಿಲ್ಲ. ಇದು ರಾಷ್ಟ್ರದ ಆಂತರಿಕ ಭದ್ರತೆಯ ವಿಚಾರವಾಗಿದೆ. ಅಂತೆಯೇ ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿ ಅಂತಿಮವೇನೂ ಅಲ್ಲ. ಪಟ್ಟಿಯಲ್ಲಿ ಹೆಸರಿಲ್ಲದ ಮಾತ್ರಕ್ಕೇ ನಾಗರಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ತಕರಾರು ಇರುವವರು ಮರು ಅರ್ಜಿ ಸಲ್ಲಿಸಿ ಪರಿಶೀಲನೆಗೆ ಮನವಿ ಮಾಡಬಹುದು. ಅಂತಿಮ ಪಟ್ಟಿಯನ್ನು 2018ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ,” ಎಂದು ತಿಳಿಸಿದ್ದಾರೆ.

1971ರ ನಂತರ ಬಾಂಗ್ಲಾದೇಶದಿಂದ ಅಸ್ಸಾಂನೊಳಗೆ ಅಕ್ರಮವಾಗಿ ಪ್ರವೇಶಿಸಿದವರನ್ನು ವಾಪಸ್ ಕಳುಹಿಸುವ ಉದ್ದೇಶದಿಂದ ಕರಡನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. 1951ರ ಎನ್ಆರ್‌ಸಿ ಪಟ್ಟಿಯಲ್ಲಿರುವ ವ್ಯಕ್ತಿಗಳು ಅಥವಾ 1971 ರ ಮಾ.25ರವರೆಗೆ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿರುವ ಹೆಸರುಗಳನ್ನು ಪರಿಷ್ಕೃತ ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕರಡನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು, “ಅಸ್ಸಾಂ ಪ್ರಜೆಗಳ ರಾಷ್ಟ್ರೀಯ ಕರಡು ದಾಖಲೆ ಸಂಪೂರ್ಣವಾಗಿ ನಿಷ್ಪಕ್ಷಪಾತದಿಂದ ಕೂಡಿದೆ. ಪೌರತ್ವ ಪಟ್ಟಿಯಲ್ಲಿ ಹೆಸರಿಲ್ಲದ ನಾಗರಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಅವರಿಗೆ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಲಾಗುವುದು,” ಎಂದು‌ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ಆನಂದ್‌ ಶರ್ಮಾ ಅವರು, “ಪೌರತ್ವ ವಿಚಾರವನ್ನು ಚರ್ಚಿಸಲು ಕೇಂದ್ರ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು. ಯಾವ ಕಾರಣಕ್ಕೂ ಭಾರತೀಯ ನಾಗರಿಕರನ್ನು ಪಟ್ಟಿಯಿಂದ ಹೊರಗಿಡಲಾಗಿಲ್ಲ ಎಂದು ಖಚಿತಪಡಿಸಬೇಕು,” ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, “ಬಿಡುಗಡೆಗೊಳಿಸಲಾಗಿರುವ ಪೌರತ್ವದ ಕರಡು ಕೇಂದ್ರ ಸರ್ಕಾರದ ಒಡೆದು ಆಳುವ ನೀತಿಯನ್ನು ಎತ್ತಿ ತೋರಿಸುತ್ತದೆ. ತಮ್ಮ ಪಕ್ಷಕ್ಕೆ ಮತ ಹಾಕದ ಜನರನ್ನು ಕೇಂದ್ರ ಸರ್ಕಾರ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ. ಅಸ್ಸಾಂ ನಾಗರಿಕರಲ್ಲದ 40 ಲಕ್ಷ ಜನರು ಈಗ ಎಲ್ಲಿ ವಾಸಿಸಬೇಕು?” ಎಂದು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಕೇಂದ್ರದ ಹೊಸ ಪೌರತ್ವ ಮಸೂದೆಗೆ ಈಶಾನ್ಯ ರಾಜ್ಯಗಳಲ್ಲಿ ಭಾರಿ ವಿರೋಧ

ಪೌರತ್ವ ಕಾಯ್ದೆ, 1955ರ ಪ್ರಕಾರ, ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳ ಅಲ್ಪಸಂಖ್ಯಾತರು ಭಾರತದಲ್ಲಿ ಕನಿಷ್ಠ 11 ವರ್ಷಗಳ ಕಾಲ ನೆಲೆಸಿದ ಬಳಿಕ ಈ ದೇಶದ ಪೌರತ್ವ ಹೊಂದಲು ಅರ್ಹರಾಗಿದ್ದಾರೆ. ಮುಸ್ಲಿಮರನ್ನು ಹೊರತುಪಡಿಸಿ ಹಿಂದೂ, ಕ್ರಿಶ್ಚಿಯನ್, ಸಿಖ್‌, ಬೌದ್ಧ, ಪಾರಸಿ ಮುಂತಾದ ಸಮುದಾಯಗಳಿಗೆ ಸೇರಿದವರು ಅಲ್ಪಸಂಖ್ಯಾತರಾಗಿದ್ದಾರೆ. ಈಗ ಕೇಂದ್ರ ಸರ್ಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಮಸೂದೆ (2016) ಪ್ರಕಾರ, ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳ ಅಲ್ಪಸಂಖ್ಯಾತರು ಕನಿಷ್ಟ 6 ವರ್ಷಗಳ ಕಾಲ ಭಾರತದಲ್ಲಿ ವಾಸಿಸಿದ್ದರೆ, ಈ ದೇಶದ ಪೌರತ್ವ ಹೊಂದಬಹುದಾಗಿದೆ.

ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಈಶಾನ್ಯ ರಾಜ್ಯಗಳಲ್ಲಿ ಅಭಿಪ್ರಾಯ ಸಂಗ್ರಹಿಸಲು ರಾಜೇಂದ್ರ ಅಗರ್‌ವಾಲ್ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿತ್ತು. ಮೇ 7ರಿಂದ ಆರಂಭವಾದ ಅಭಿಪ್ರಾಯ ಸಂಗ್ರಹ ಸಮೀಕ್ಷೆಯಲ್ಲಿ ಅಸ್ಸಾಂನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಇದನ್ನು ವಿರೋಧಿಸಿ ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More