ರಫೇಲ್ ಹಗರಣ: ಗೌಪ್ಯತೆ ಒಪ್ಪಂದದ ಮಾಹಿತಿ ಬಹಿರಂಗಪಡಿಸಲು ಸರ್ಕಾರಕ್ಕೇಕೆ ಹಿಂಜರಿಕೆ?

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಣಕಾಸು ಅವ್ಯವಹಾರ, ಸರ್ಕಾರ ಮತ್ತು ಪ್ರಧಾನಿ ಮೋದಿಯವರ ವರ್ಚಸ್ಸುಗಳಷ್ಟೇ ಅಲ್ಲದೆ, ದೇಶದ ರಕ್ಷಣೆ ಮತ್ತು ಸುರಕ್ಷತೆಯಂತಹ ಸೂಕ್ಷ್ಮ ವಿಷಯ ಕೂಡ ಸಾರ್ವಜನಿಕ ಅಪನಂಬಿಕೆಗೆ ಈಡಾಗಿದೆ. ಹಾಗಾಗಿ, ಇದರ ಪರಿಹಾರಕ್ಕೆ ಉಳಿದಿರುವುದು ಒಂದೇ ಮಾರ್ಗ

‘ಪ್ರಧಾನಿ ನರೇಂದ್ರ ಮೋದಿಯವರ ಬೋಫೋರ್ಸ್’ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ಮತ್ತು ಆ ಕಾರಣಕ್ಕಾಗಿಯೇ ಈಗಾಗಲೇ ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡಲಾರಂಭಿಸಿರುವ ರಫೇಲ್ ಯುದ್ಧವಿಮಾನ ಖರೀದಿ ಹಗರಣ ಬಹುಶಃ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಹೆಚ್ಚಿದೆ. ಆ ಮೂಲಕ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಪಾಲಿಗೆ ಬಿಜೆಪಿ ಸರ್ಕಾರದ ವಿರುದ್ಧದ ಪ್ರಮುಖ ಅಸ್ತ್ರವಾಗಿಯೂ ಒದಗಿಬರುವ ಸಾಧ್ಯತೆಯೂ ಹೆಚ್ಚುತ್ತಿದೆ.

ಕಳೆದ ವಾರ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಮಂಡನೆಯ ವೇಳೆ ಮೋದಿ ಮತ್ತು ಬಿಜೆಪಿಯ ಭ್ರಷ್ಟಾಚಾರರಹಿತ ಆಡಳಿತದ ಹೆಗ್ಗಳಿಕೆಗೆ ಈ ಹಗರಣ ಸಾಕಷ್ಟು ಮಸಿ ಬಳಿದಾಗಿದೆ. ಇದೀಗ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪ್ರಧಾನಿ ಮತ್ತು ರಕ್ಷಣಾ ಸಚಿವರ ವಿರುದ್ಧ ಕಾಂಗ್ರೆಸ್ ಪಕ್ಷವು ಹಕ್ಕುಚ್ಯುತಿ ಮಂಡಿಸಿರುವ ಹಿನ್ನೆಲೆಯಲ್ಲಿ ವಾದ-ವಿವಾದದ ಮತ್ತೊಂದು ಮಜಲಿಗೆ ಬಡ್ತಿ ಪಡೆದುಕೊಂಡಿದೆ. ಅವಿಶ್ವಾಸ ಮಂಡನೆಯ ಮೇಲಿನ ಭಾಷಣದ ವೇಳೆ ಈ ಹಗರಣವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಭ್ರಷ್ಟಾಚಾರದ ನೇರ ಆರೋಪ ಮಾಡಿದ್ದರು.

ಆ ವೇಳೆ ರಕ್ಷಣಾ ಸಚಿವರು, “ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವೆ ೨೦೧೬ರಲ್ಲಿ ರಾಫೇಲ್ ಯುದ್ಧವಿಮಾನ ಖರೀದಿ ಸಂಬಂಧ ನಡೆದ ಅಂತರ್ ಸರ್ಕಾರಿ ಒಪ್ಪಂದ (ಐಜಿಎ) ೨೦೦೮ರಲ್ಲಿ ಉಭಯ ರಾಷ್ಟ್ರಗಳು ಸಹಿ ಮಾಡಿರುವ ಜನರಲ್ ಸೆಕ್ಯುರಿಟಿ ಒಪ್ಪಂದದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಯುದ್ಧ ವಿಮಾನಗಳ ಖರೀದಿಯ ಹಣಕಾಸು ವೆಚ್ಚವನ್ನು ಬಹಿರಂಗಪಡಿಸುವಂತಿಲ್ಲ,” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಆದರೆ, ರಾಹುಲ್ ಗಾಂಧಿಯವರು ಅದಕ್ಕೆ ಪ್ರತಿಕ್ರಿಯಿಸಿ, ತಾವು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರನ್ನು ಕಳೆದ ಮಾರ್ಚನಲ್ಲಿ ಭೇಟಿಯಾದಾಗ, ಗೌಪ್ಯತೆಯ ಕುರಿತ ಆ ಒಪ್ಪಂದದ ಬಗ್ಗೆ ಪ್ರಶ್ನಿಸಿದ್ದಾಗಿ. ಆಗ ಅವರು, ಅಂತಹ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ ಎಂದಿದ್ದಾಗಿಯೂ ಸದನದಲ್ಲಿ ಪ್ರಸ್ತಾಪಿಸಿದ್ದರು.

ಆದರೆ, ಕಾಕತಾಳೀಯ ಎಂಬಂತೆ ರಾಹುಲ್ ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಎತ್ತಿದ ದಿನವೇ ಅತ್ತ ಫ್ರಾನ್ಸ್‌ನಲ್ಲಿ ರಾಫೇಲ್ ವ್ಯವಹಾರದ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಫ್ರೆಂಚ್ ಸರ್ಕಾರ, ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖಿಸದೆಯೇ, ರಾಫೇಲ್ ಒಪ್ಪಂದ ಉಭಯ ರಾಷ್ಟ್ರಗಳ ನಡುವಿನ ೨೦೦೮ರ ಗೌಪ್ಯತೆಯ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ಅಂಶವನ್ನು ಸ್ವಯಂಪ್ರೇರಿತವಾಗಿ ಸ್ಪಷ್ಟಪಡಿಸಿತ್ತು. ಆದರೆ, ರಾಹುಲ್ ಅವರ ಹೇಳಿಕೆಯನ್ನು ಅದು ನಿರಾಕರಿಸಿರಲಿಲ್ಲ!

ಆ ಹಿನ್ನೆಲೆಯಲ್ಲಿ, ಗೌಪ್ಯತೆಯ ಕುರಿತ ೨೦೦೮ರ ಒಪ್ಪಂದ ಬಗ್ಗೆ ಇದೀಗ ಹಲವು ಅನುಮಾನಗಳು ಎದ್ದಿವೆ. ನಿಜವಾಗಿಯೂ ಆ ಒಪ್ಪಂದದ ಅಂಶಗಳಾವುವು? ಆ ಒಪ್ಪಂದ ವ್ಯಾಪ್ತಿಗೆ ರಕ್ಷಣಾ ಖರೀದಿಯ ಯಾವೆಲ್ಲ ವಿವರಗಳು ಬರುತ್ತವೆ? ತಾಂತ್ರಿಕ ವಿವರ, ವಿಮಾನಗಳ ಕಾರ್ಯಕ್ಷಮತೆಯ ಮಾಹಿತಿ, ತಂತ್ರಜ್ಞಾನ ಬೆಂಬಲ ಮತ್ತು ಸಹಕಾರದ ಕುರಿತ ಮಾಹಿತಿ, ಹೀಗೆ ಹಲವು ಬಗೆಯ ತಾಂತ್ರಿಕ ಮತ್ತು ಅಣ್ವಸ್ತ್ರ ಕುರಿತ ಸೂಕ್ಷ್ಮ ವಿವರಗಳು ಮಾತ್ರವೇ ಗೌಪ್ಯತೆಯ ಒಪ್ಪಂದದ ವ್ಯಾಪ್ತಿಗೆ ಬರುತ್ತವೆಯೇ ಅಥವಾ ಯುದ್ಧವಿಮಾನಗಳಿಗಾಗಿ ಗ್ರಾಹಕ ರಾಷ್ಟ್ರವೊಂದು ತೆರಬೇಕಾದ ಜನಸಾಮಾನ್ಯರ ತೆರಿಗೆ ಹಣವೂ ಈ ಗೌಪ್ಯತೆಯ ವ್ಯಾಪ್ತಿಗೊಳಪಟ್ಟಿದೆಯೇ? ಅಲ್ಲದೆ, ಒಂದು ವೇಳೆ, ವೆಚ್ಚ ಮತ್ತಿತರ ಹಣಕಾಸು ವಿವರಗಳು ಗೌಪ್ಯತೆಯ ವ್ಯಾಪ್ತಿಗೆ ಒಳಪಡುವುದೇ ಆದರೆ, ಯುದ್ಧವಿಮಾನಗಳ ಅಂದಾಜು ವೆಚ್ಚದ ಮಾಹಿತಿ ಈಗಾಗಲೇ ರಕ್ಷಣಾ ಸಚಿವಾಲಯಗಳನ್ನು ಉಲ್ಲೇಖಿಸಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಿರಂಗವಾಗಿರುವುದು ಹೇಗೆ? ಹಾಗೆ ಬಹಿರಂಗವಾದ ಬಳಿಕ ಕೂಡ ಸರ್ಕಾರ ಆ ವಿವರಗಳು ಗೌಪ್ಯತೆಯ ಒಪ್ಪಂದದ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಯಾಕೆ ನೆನಪಿಸಿಲ್ಲ? ಈ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಒಮ್ಮೆ ಬೆಲೆ ವಿವರಗಳನ್ನು ನೀಡುವುದಾಗಿ ಸಂಸತ್ತಿನಲ್ಲೇ ಹೇಳಿದ್ದರು; ಆಗ ಅವರಿಗೆ ಈ ಒಪ್ಪಂದದ ಅರಿವಿರಲಿಲ್ಲವೇ? ಅಷ್ಟಾದ ಬಳಿಕವೂ, ಒಂದು ವೇಳೆ ಸರ್ಕಾರ ಹೇಳುತ್ತಿರುವಂತೆ ಇಡೀ ಬೆಲೆ ಮತ್ತು ವೆಚ್ಚದ ಮಾಹಿತಿ ಗೌಪ್ಯತೆಯ ವ್ಯಾಪ್ತಿಗೆ ಒಳಪಡುವುದೇ ಆದರೆ, ಅದನ್ನು ಸ್ಪಷ್ಟಪಡಿಸಲಿಲ್ಲವೇಕೆ? ಹಾಗೆ ಹೇಳುವ ಮೂಲಕ ಬೆಲೆ ಕುರಿತ ಚರ್ಚೆಗೆ ಈ ಹಿಂದೆಯೇ ಅಂತ್ಯ ಹಾಡಬಹುದಿತ್ತಲ್ಲವೇ?

ಹೀಗೆ ಸಾಲು-ಸಾಲು ಪ್ರಶ್ನೆಗಳು ಏಳುತ್ತಿವೆ. ಆದರೆ, ಸದ್ಯಕ್ಕೆ ಅ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಸರ್ಕಾರ ಈ ವಿಷಯದಲ್ಲಿ ಮುಗುಮ್ಮಾಗಿದೆ. ಹಾಗಾಗಿ, ಸರ್ಕಾರದ ಈ ಮೊಂಡುತನ ಮತ್ತು ಜಾಣಮೌನ ಇಂತಹ ಪ್ರಶ್ನೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ ಮತ್ತು ಆ ಜಟಿಲತೆಯೇ ಇಡೀ ವಿವಾದಕ್ಕೆ ಒಂದು ರೀತಿಯಲ್ಲಿ ಪರೋಕ್ಷ ಅಧಿಕೃತತೆಯನ್ನು ನೀಡುತ್ತಿದೆ.

ಈ ನಡುವೆ, ಬಿಜೆಪಿ ಸರ್ಕಾರ ಪ್ರಮುಖವಾಗಿ ಈ ಹಗರಣದ ವಿಷಯದಲ್ಲಿ ತನ್ನ ಸಮರ್ಥನೆಗೆ ಬಳಸಿಕೊಳ್ಳುತ್ತಿರುವುದು ೨೦೦೮ರ ಈ ಗೌಪ್ಯತೆಯ ಕಾಯ್ದೆ, ರಾಹುಲ್ ಗಾಂಧಿ ಲೋಕಸಭಾ ಹೇಳಿಕೆಯ ಬಳಿಕದ ಫ್ರೆಂಚ್ ಸರ್ಕಾರದ ಸ್ವಯಂಪ್ರೇರಿತ ಸ್ಪಷ್ಟೀಕರಣ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರ ಈ ಹಿಂದಿನ ಮಾಧ್ಯಮ ಸಂದರ್ಶನದ ಹೇಳಿಕೆಗಳನ್ನು. ಆದರೆ, ಆ ಪೈಕಿ ಗೌಪ್ಯತೆಯ ಒಪ್ಪಂದ ವಿಷಯದಲ್ಲಿ ಸರ್ಕಾರದ ನಡೆಗಳೇ ಅನುಮಾನ ಹುಟ್ಟಿಸಿವೆ. ಇನ್ನು, ಫ್ರೆಂಚ್ ಸರ್ಕಾರದ ಸ್ಪಷ್ಟೀಕರಣದಲ್ಲಿ ಅದು ಎಲ್ಲಿಯೂ ಸ್ಪಷ್ಟವಾಗಿ ಬೆಲೆ ಮತ್ತು ವೆಚ್ಚ ಮಾಹಿತಿಯ ಬಗ್ಗೆಯಾಗಲೀ, ರಾಹುಲ್ ಗಾಂಧಿ ಪ್ರಸ್ತಾಪಿಸಿದ ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯ ಬಗ್ಗೆಯಾಗಲೀ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ.

ಇನ್ನು, ಈ ಹಿಂದೆ ಮಾಧ್ಯಮ ಸಂದರ್ಶನದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ಕೂಡ, ಗೌಪ್ಯತೆ ಒಪ್ಪಂದ ವಿವರಗಳನ್ನಾಗಲೀ, ಬೆಲೆ ಮತ್ತು ವೆಚ್ಚದ ಕುರಿತ ಮಾಹಿತಿ ಆ ಒಪ್ಪಂದದ ವ್ಯಾಪ್ತಿಗೆ ಒಳಪಟ್ಟಿದೆಯೇ ಎಂಬ ಬಗ್ಗೆಯಾಗಲೀ ಏನನ್ನೂ ಹೇಳಿಲ್ಲ. “ವ್ಯವಹಾರಿಕ ಒಪ್ಪಂದವಾಗಿ ಅದರಲ್ಲಿ ಯಾವೆಲ್ಲ ಮಾಹಿತಿಗಳನ್ನು ಉಭಯ ರಾಷ್ಟ್ರಗಳು ಬಹಿರಂಗಪಡಿಸಬಾರದು ಮತ್ತು ಯಾವುದನ್ನು ಬಹಿರಂಗಪಡಿಸಬಹುದು ಎಂಬ ಅಂಶಗಳಿವೆ. ಅವು ಪ್ರಮುಖವಾಗಿ ವ್ಯವಹಾರಿಕ ಹಿತಾಸಕ್ತಿಯ ಕಾರಣಕ್ಕಾಗಿ ಇರುವಂತಹವು. ತನ್ನ ಪ್ರತಿಪಕ್ಷಗಳು ಮತ್ತು ಸಂಸತ್ತಿಗೆ ಈ ಕುರಿತ ಯಾವ ಮಾಹಿತಿಯನ್ನು ನೀಡಬೇಕು ಮತ್ತು ಯಾವುದನ್ನು ನೀಡಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರ ಅಂತಿಮವಾಗಿ ಭಾರತೀಯ ಸರ್ಕಾರಕ್ಕೆ ಬಿಟ್ಟದ್ದು,” ಎಂದಿದ್ದರು ಮ್ಯಾಕ್ರನ್.

ಇದನ್ನೂ ಓದಿ : ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಯುದ್ಧವಿಮಾನವಾದ ರಫೇಲ್ ಡೀಲ್

ಅಂದರೆ, ಈಗ ಈ ವಿಷಯದಲ್ಲಿ ಸರ್ಕಾರ ತನ್ನ ಸಮರ್ಥನೆಗಾಗಿ ಅವಲಂಬಿಸಿರುವ ಎಲ್ಲ ಅಂಶಗಳೂ ಈಗಾಗಲೇ ದುರ್ಬಲಗೊಂಡಿವೆ. ಜೊತೆಗೆ, ಇಡೀ ಬಹುಕೋಟಿ ರಕ್ಷಣಾ ವ್ಯವಹಾರದಲ್ಲಿ ಈಗ ಹಣಕಾಸು ಅವ್ಯವಹಾರ, ಸರ್ಕಾರ ಮತ್ತು ಪ್ರಧಾನಿ ಮೋದಿಯವರ ವರ್ಚಸ್ಸುಗಳಷ್ಟೇ ಅಲ್ಲದೆ, ದೇಶದ ರಕ್ಷಣೆ ಮತ್ತು ಸುರಕ್ಷತೆಯಂತಹ ಸೂಕ್ಷ್ಮ ವಿಷಯವೇ ಈಗ ಸಾರ್ವಜನಿಕ ಅಪನಂಬಿಕೆಗೆ ಈಡಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ೨೦೦೮ರ ಗೌಪ್ಯತೆಯ ಒಪ್ಪಂದ ಸ್ಥೂಲ ಮಾಹಿತಿಯನ್ನು ಬಹಿರಂಗಪಡಿಸಬೇಕಿದೆ. ಆ ಮೂಲಕ, ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವಷ್ಟೇ ಅಲ್ಲದೆ, ಒಟ್ಟಾರೆ ಫ್ರಾನ್ಸ್‌ನೊಂದಿಗೆ ಭಾರತ ನಡೆಸಿರುವ ಮತ್ತು ಭವಿಷ್ಯದಲ್ಲಿ ನಡೆಸಲಿರುವ ರಕ್ಷಣಾ ಖರೀದಿ ವ್ಯವಹಾರಗಳ ಯಾವೆಲ್ಲ ಅಂಶಗಳು ಒಪ್ಪಂದದ ವ್ಯಾಪ್ತಿಗೆ ಬರುತ್ತವೆ ಮತ್ತು ಇದೀಗ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಎತ್ತಿರುವ ಈ ವಿವಾದದ ಕುರಿತ ಶಂಕೆ ಎಷ್ಟರಮಟ್ಟಿಗೆ ನೈಜ ಕಾಳಜಿಯದ್ದು ಮತ್ತು ಎಷ್ಟರಮಟ್ಟಿಗೆ ರಾಜಕೀಯ ಪ್ರೇರಿತ ಎಂಬುದನ್ನು ದೇಶದ ಜನರ ನಿರ್ಧಾರಕ್ಕೆ ಬಿಡಬೇಕಿದೆ.

ಅಂತಹ ವಿವೇಚನೆಯ ನಡೆಯನ್ನು ಭ್ರಷ್ಟಮುಕ್ತ ಭಾರತ ನಿರ್ಮಾಣದ ವಿಷಯದಲ್ಲಿ ಕಟಿಬದ್ಧರಾಗಿರುವ ನಮ್ಮ ಪ್ರಧಾನಿ ಮೋದಿ ಹಾಗೂ ಪ್ರಾಮಾಣಿಕತೆಯನ್ನೇ ಹೊದ್ದು ನಡೆದಾಡುವಂತೆ ಕಾಣುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷಿಸಬಹುದೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More