ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಎಷ್ಟು ಬಡ್ಡಿದರ ಏರಿಸಲಿದೆ?

ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಮಾಡಲಿದೆ. ಜೂನ್ ತಿಂಗಳಲ್ಲಿ ಶೇ.0.25ರಷ್ಟು ಬಡ್ಡಿದರ ಏರಿಸಿದ್ದ ಆರ್‌ಬಿಐ, ಈಗಲೂ ಬಡ್ಡಿದರ ಏರಿಸುವುದು ಖಚಿತವಾಗಿದೆ. ಏರಿಕೆ ಪ್ರಮಾಣ ಎಷ್ಟೆಂಬುದಷ್ಟೇ ಈಗ ಉಳಿದಿರುವ ಕುತೂಹಲ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆ.1ರಂದು ದ್ವೈಮಾಸಿಕ ಹಣಕಾಸು ಪರಾಮರ್ಶೆ ನಡೆಸಲಿದೆ. ಇದು ಮುಂದಿನ ಎರಡು ತಿಂಗಳ ಅವಧಿಗೆ ಬಡ್ಡಿದರ ಏರಿಸಬೇಕೇ, ಇಳಿಸಬೇಕೇ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬೇಕೇ ಎಂಬುದನ್ನು ನಿರ್ಧರಿಸಲಿರುವ ಸುಧೀರ್ಘ ಪ್ರಕ್ರಿಯೆ. ಆರ್‌ಬಿಐ ಹಣಕಾಸು ಸಮಿತಿಯ ಎಲ್ಲ ಆರು ಸದಸ್ಯರೂ ಹನ್ನೆರಡು ತಾಸುಗಳಿಗೂ ಹೆಚ್ಚು ಹೆಚ್ಚು ಕೂತು ಚರ್ಚಿಸಿ, ಅಳೆದು ತೂಗಿ ನಿರ್ಧಾರ ಕೈಗೊಳ್ಳುತ್ತಾರೆ.

ಜೂನ್ ತಿಂಗಳ ದ್ವೈಮಾಸಿಕ ಹಣಕಾಸು ಪರಾಮರ್ಶೆ ವೇಳೆ ಶೇ.0.25ರಷ್ಟು ರೆಪೋ ದರ ಏರಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. ರೆಪೋ ದರ ಎಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಇತರೆಲ್ಲ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ ದರ. ರಿವರ್ಸ್ ರೆಪೋ ಎಂದರೆ ಈ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಇಟ್ಟ ಹಣಕ್ಕೆ ವಿಧಿಸುವ ಬಡ್ಡಿದರ.

ಇದು ವಾಸ್ತವವಾಗಿ ಬಡ್ಡಿದರವೇ ಆಗಿದ್ದರೂ ಹಣಕಾಸು ವಲಯದಲ್ಲಿ ‘ರೆಪೊ ದರ’ ಎಂದೇ ಕರೆಯಲಾಗುತ್ತದೆ. ಕಳೆದ ದ್ವೈಮಾಸಿಕ ಹಣಕಾಸು ಸಮಿತಿ ಸಭೆಯಲ್ಲಿ ರೆಪೊ ದರವನ್ನು ಶೇ.6.25ಕ್ಕೆ ಹೆಚ್ಚಿಸಲಾಗಿತ್ತು. ಇದು ನಾಲ್ಕು ವರ್ಷಗಳ ನಂತರದ ಮೊದಲ ಏರಿಕೆ. ಹಾಗೆ ರಿವರ್ಸ್ ರೆಪೋ ದರವನ್ನು ಶೇ.5.75ರಿಂದ ಶೇ.6ಕ್ಕೆ ಏರಿಸಲಾಗಿತ್ತು.

ಈಗಾಗಲೇ ಶೇ.6.25ರಷ್ಟಿರುವ ರೆಪೋ ದರವನ್ನು ಮತ್ತೆ ಏರಿಸಬೇಕೇಕೆ? ಜೂನ್ ತಿಂಗಳಿನಲ್ಲಿ ಬಡ್ಡಿದರ ಏರಿಸಲು ಇದ್ದ ಪರಿಸ್ಥಿತಿಗಿಂತ ದೇಶದಲ್ಲಿ ಭಿನ್ನ ಪರಿಸ್ಥಿತಿ ಏನಿಲ್ಲ. ಬಡ್ಡಿದರ ಅನಿವಾರ್ಯವಾಗಿ ಏರಿಸಲೇಬೇಕಾಗುವಂತಹ ಪರಿಸ್ಥಿತಿ ಇದೆ. ಜೂನ್ ತಿಂಗಳ ಚಿಲ್ಲರೆದರ ಹಣದುಬ್ಬರ ಶೇ.5ರ ಗಡಿ ದಾಟಿದೆ. ಹಣದುಬ್ಬರವನ್ನು ಶೇ.4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಆರ್‌ಬಿಐ ಹೊಣೆಗಾರಿಕೆ ಕೂಡ. ಆದರೆ, ಬರುವ ತಿಂಗಳಲ್ಲಿ ಹಣದುಬ್ಬರ ಏರಿಕೆ ತಗ್ಗಲಿದೆ ಎಂಬ ನಿರೀಕ್ಷೆ ಇದೆ. ಹಣದುಬ್ಬರಕ್ಕೆ ಪ್ರಮುಖ ಕಾರಣವಾಗುವ ಆಹಾರ ಪದಾರ್ಥಗಳು ಮತ್ತು ಇಂಧನಗಳನ್ನು ಚಿಲ್ಲರೆದರ ಸೂಚ್ಯಂಕದಿಂದ ಹೊರಗಿಡಲಾಗಿದೆ.

ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರ ಏರಿಕೆಯೂ ಒಂದು ಪ್ರಮುಖ ಮಾರ್ಗೊಪಾಯ. ಆದರೆ, ಬಡ್ಡಿದರ ಏರಿಸಿದ ಕೂಡಲೇ ಹಣದುಬ್ಬರವೇನೂ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರುವುದಿಲ್ಲ. ಬಡ್ಡಿ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ನಗದು ಹರಿವಿನ ಪ್ರಮಾಣಕ್ಕೆ ನಿಯಂತ್ರಣ ಬೀಳುವುದರಿಂದ ಕೊಂಚ ಮಟ್ಟಿಗೆ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು.

ಹಣದುಬ್ಬರದ ಜೊತೆ ಆಹಾರ ಪದಾರ್ಥಗಳ ದರ ಏರುವ ಸಾಧ್ಯತೆಯೂ ಇದೆ. ಕೇಂದ್ರ ಸರ್ಕಾರವು ಪ್ರಮುಖ 23 ಆಹಾರಧಾನ್ಯಗಳ ಕನಿಷ್ಠ ಬೆಂಬಲ ಬಲೆಯನ್ನು ಏರಿಕೆ ಮಾಡಿದೆ. ಇದು ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಏರಿಕೆ. ರೈತರ ಕೃಷಿ ಉತ್ಪನ್ನಗಳಿಗೆ ಮಾಡಿದ ವೆಚ್ಚದ ಮೇಲೆ ಶೇ.50ರಷ್ಟು ಲಾಭಾಂಶ ಬರುವಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಕನಿಷ್ಠ ಬೆಂಬಲ ಬೆಲೆ ಏರಿಕೆಯಿಂದಾಗಿ ಆಗಬಹುದಾದ ನಿರೀಕ್ಷಿತ ಹಣದುಬ್ಬರವು ಶೇ.1.1ರಷ್ಟಾಗಬಹುದು.

ಒಂದು ಕಡೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಿದೆ. ಮತ್ತೊಂದು ಕಡೆ, ಕಚ್ಚಾತೈಲ ಬೆಲೆಯು ಏರುತ್ತಿದೆ. ಒಂದು ಹಂತದಲ್ಲಿ 79 ಡಾಲರ್‌ಗೆ ಏರಿದ್ದ ಕಚ್ಚಾತೈಲ ಈಗ 74 ಡಾಲರ್ ಆಜುಬಾಜಿನಲ್ಲಿದೆ. ಇರಾನ್ ಮೇಲೆ ಅಮೆರಿಕ ವಿಧಿಸಿರುವ ದಿಗ್ಭಂಧನದಿಂದಾಗಿ ಭಾರತವು ಮುಕ್ತ ಮಾರುಕಟ್ಟೆಯಲ್ಲೇ ಹೆಚ್ಚಿನ ಕಚ್ಚಾತೈಲ ಖರೀದಿ ಮಾಡಬೇಕಿರುವುದು, ಅದಕ್ಕಾಗಿ ದುಬಾರಿ ಡಾಲರ್ ವಿನಿಯೋಗಿಸಬೇಕಿರುವುದು ಹಣದುಬ್ಬರಕ್ಕೆ ಕಾರಣವಾಗಲಿದೆ. ಇದುವರೆಗೆ ತೈಲ ಮತ್ತು ಚಿನ್ನದ ಆಮದು ಹೆಚ್ಚಿನ ಪ್ರಮಾಣದಲ್ಲಿತ್ತು. ಈಗ ತೈಲೇತರ ಆಮದು ಪ್ರಮಾಣವೂ ಹೆಚ್ಚುತ್ತಿದೆ.

ಇದು ಚುನಾವಣೆ ವರ್ಷ. 2019ರ ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಅಂದಾಜಿದೆ. ಕೇಂದ್ರ ಸರ್ಕಾರ ಅಧಿಕಾರ ಮರಳಿ ಪಡೆಯಲು ಜನಪ್ರಿಯ ಯೋಜನೆಗಳನ್ನು ಘೋಷಿಸುವುದು ಸಹಜ. ಇದು ಬೊಕ್ಕಸದ ಮೇಲೆ ಭಾರಿ ಹೊರೆಗೆ ಕಾರಣವಾಗುತ್ತದೆ. ಅಂದರೆ, ವಿತ್ತೀಯ ಕೊರತೆ ಹಿಗ್ಗುತ್ತದೆ. ಈಗಾಗಲೇ ವ್ಯಾಪಾರ ಕೊರತೆಯಿಂದಾಗಿ ಚಾಲ್ತಿ ಖಾತೆ ಕೊರತೆ ಹೆಚ್ಚಿದೆ.

ಇದನ್ನೂ ಓದಿ : ನಾಲ್ಕು ವರ್ಷಗಳ ನಂತರ ರೆಪೊ ದರ 0.25% ಏರಿಸಿದ ರಿಸರ್ವ್‌ಬ್ಯಾಂಕ್‌

ವಿತ್ತೀಯ ಕೊರತೆ ಹಿಗ್ಗುವುದು ಸಹ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಚುನಾವಣೆ ಮೇಲೆ ಕಣ್ಣಿಟ್ಟಿರುವ ಎನ್‌ಡಿಎ ಸರ್ಕಾರ, ಜು.28ರಿಂದ 100ಕ್ಕೂ ಹೆಚ್ಚು ಸರಕು ಮತ್ತು ಸೇವೆಗಳ ಮೇಲಿನ ಜಿಎಸ್ಟಿ ದರ ತಗ್ಗಿಸಿದೆ. ಇದರಿಂದ ಆದಾಯ ಸಂಗ್ರಹ ಕೊರತೆ ಹೆಚ್ಚಾಗಲಿದೆ. ಅಲ್ಲದೆ, ವಿವಿಧ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುತ್ತಿವೆ. ಇದು ಕೂಡ ವಿತ್ತೀಯ ಕೊರತೆ ಹಿಗ್ಗಲು ಕಾರಣವಾಗಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ತಾನೇ ವಿಧಿಸಿಕೊಂಡಿರುವ ಶೇ.4ರ ಹಣದುಬ್ಬರ ಮಿತಿಯನ್ನು ಕಾಯ್ದುಕೊಳ್ಳಲಾಗಿಲ್ಲ. ಜೂನ್ ತಿಂಗಳಲ್ಲಿ ಆ ದರ ಐದರ ಗಡಿ ದಾಟಿದೆ. ಮತ್ತಷ್ಟು ಏರುವ ಎಲ್ಲ ಸಾಧ್ಯತೆಗಳು ನಿಚ್ಚಳ ಆಗಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡುವುದು ಅನಿವಾರ್ಯ. ಆದರೆ, ಎಲ್ಲರ ನಿರೀಕ್ಷೆಯಂತೆ ಶೇ.0.25ರಷ್ಟು ಮಾತ್ರ ಹೆಚ್ಚಳ ಮಾಡುತ್ತದೆಯೋ ಅಥವಾ ಶೇ.0.50ರಷ್ಟು ಹೆಚ್ಚಳ ಮಾಡುತ್ತದೆಯೋ ಕಾಯ್ದು ನೋಡಬೇಕಷ್ಟೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More