ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ

ಸಾಲಮನ್ನಾ ಯೋಜನೆ ಯಶಸ್ವಿಗೊಳಿಸಲು ಡಿಸಿ, ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚನೆ

ರೈತರ ಅಂದಾಜು ೪೯ ಸಾವಿರ ಕೋಟಿ ರುಪಾಯಿ ಸಾಲಮನ್ನಾ ಮಾಡುವ ಸಂಬಂಧ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು, ಇದನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಮಾಧ್ಯಮಗಳಲ್ಲಿ ಸರ್ಕಾರದ ಬಗ್ಗೆ ಪ್ರಕಟವಾಗುವ ವರದಿಗಳ ಬಗ್ಗೆ ಹೆಚ್ಚಿನ ಗಮನ ನೀಡಬಾರದು. ಇದಕ್ಕೆ ಬದಲಾಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಒತ್ತು ನೀಡುವಂತೆ ಸಲಹೆ ನೀಡಿದರು.

ಎರಡು ವಾರ ಇಳಿಜಾರಿನಲ್ಲಿದ್ದ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರುಹಾದಿಗೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರ ಐದರಿಂದ ಹತ್ತು ಪೈಸೆಯಷ್ಟು ಇಳಿಯುತ್ತಿತ್ತು, ಇಲ್ಲವೇ ಸ್ಥಿರವಾಗಿತ್ತು. ಆದರೆ, ಸೋಮವಾರದಿಂದ ಮತ್ತೆ ದರ ಏರಿಕೆ ಆರಂಭವಾಗಿದೆ. ಪೆಟ್ರೋಲ್ ದರ 9 ಪೈಸೆ ಮತ್ತು ಡಿಸೇಲ್ ದರ 13 ಪೈಸೆ ಏರಿಕೆ ಮಾಡಲಾಗಿದೆ. ಕಚ್ಚಾ ತೈಲ ದರವು 79 ಡಾಲರ್ ಮಟ್ಟಕ್ಕೇರಿ ನಂತರ ಶೇ.10ರಷ್ಟು ಕುಸಿದಿತ್ತು. ಇರಾನ್ ಮೇಲಿನ ದಿಗ್ಬಂಧನ ಹೆಚ್ಚಿಸಿದ ನಂತರ ಮತ್ತೆ ಕಚ್ಚಾ ತೈಲ ಏರು ಹಾದಿಯಲ್ಲಿದೆ. ಸೋಮವಾರ ಬ್ರೆಂಟ್ ಕ್ರುಡ್ ಶೇ.1ರಷ್ಟು ಏರಿದ್ದು 75.44 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 78.33 ರುಪಾಯಿ, ಡಿಸೇಲ್ 69.98 ರುಪಾಯಿಗೆ ಏರಿದೆ.

ನಾಸಿಕ್‌ನಲ್ಲಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸೆ

ಮೀಸಲಾತಿಗೆ ಒತ್ತಾಯಿಸಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮರಾಠ ಕ್ರಾಂತಿ ಮೋರ್ಚಾ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, 40 ಕ್ಕೂ ಹೆಚ್ಚು ಸರ್ಕಾರಿ ಬಸ್ಸುಗಳು ಬೆಂಕಿಗೆ ಆಹುತಿಯಾಗಿವೆ. ಮರಾಠ ಕ್ರಾಂತಿ ಮೋರ್ಚಾ ಸಂಘಟನೆಯು ಸೋಮವಾರ ಆಯೋಜಿಸಿದ್ದ ಪ್ರತಿಭಟನೆ ವೇಳೆ ಸಾವಿರಾರು ಯುವಕರು ಪೊಲೀಸರು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ, ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಆಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ಮಾಡಿದ್ದಾರೆ. ಮೀಸಲಾತಿಯ ವಿಚಾರವಾಗಿ ಕಳೆದ ವಾರವೂ ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆದಿತ್ತು. ಪ್ರತಿಭಟನೆ ಕೈಬಿಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡಿದ್ದರು.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ಭಾರತ ಶುಭಾರಂಭ

ಚೀನಾದ ನ್ಯಾನ್‌ಜಿಂಗ್‌ನಲ್ಲಿಂದು ಶುರುವಾದ ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತ ಶುಭಾರಂಭ ಕಂಡಿದೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಎಚ್ ಎಸ್ ಪ್ರಣಯ್, ಸಮೀರ್ ವರ್ಮಾ ಗೆಲುವು ಸಾಧಿಸಿದರೆ, ಬಿ ಸಾಯಿ ಪ್ರಣೀತ್ ಎರಡನೇ ಸುತ್ತಿಗೆ ವಾಕೋವರ್ ಪಡೆದರು. ಆಸ್ಟ್ರೇಲಿಯಾದ ಅಭಿನವ್ ಮನೋಟಾ ವಿರುದ್ಧ ಪ್ರಣಯ್ ೨೧-೧೨, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದರೆ, ಲೂಕಾಸ್ ಕಾರ್ವೀ ವಿರುದ್ಧ ಸಮೀರ್ ವರ್ಮಾ ಫ್ರಾನ್ಸ್‌ನ ಲೂಕಾಸ್ ಕಾರ್ವೀ ವಿರುದ್ಧ ೨೧-೧೩, ೨೧-೧೦ರಿಂದ ಜಯಭೇರಿ ಬಾರಿಸಿದರು.

ಕಾಶ್ಮೀರದಲ್ಲಿ ಕಲ್ಲು ತೂರಾ: ಏಳು ತಿಂಗಳಲ್ಲಿ ೪೧ ಭದ್ರತಾ ಸಿಬ್ಬಂದಿ ಸಾವು

ಕಾಶ್ಮೀರ ಕಣಿವೆಯಲ್ಲಿ ಪೊಲೀಸರು ಹಾಗೂ ಪ್ರತ್ಯೇಕತಾವಾದಿಗಳ ನಡುವಿನ ಕಲ್ಲು ತೂರಾಟದಲ್ಲಿ ಸೋಮವಾರ ೪೧ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ೯೦೭ ಜನರು ಗಾಯಗೊಂಡಿದ್ದಾರೆ. ವರ್ಷದ ಆರಂಭದಿಂದ ಹಿಡಿದು ಇಲ್ಲಿಯವರೆಗೆ ೩೯ ಭದ್ರತಾ ಸಿಬ್ಬಂದಿ, ೧೭ ಸೇನಾಧಿಕಾರಿಗಳು, ೨೦ ಪೊಲೀಸರು ಹಾಗೂ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಉಗ್ರಗಾಮಿ ಸಂಘಟನೆಗಳು, ಭದ್ರತಾಪಡೆಗಳು ಪರಸ್ಪರ ಕೆಸರೆರೆಚಾಟದಲ್ಲಿ ಕಾಶ್ಮೀರದಲ್ಲಿ ಅಶಾಂತಿಯ ವಾತಾವರಣ ನಿರಂತರವಾಗಿದೆ.

ಇಂಗ್ಲೆಂಡ್‌ಗೆ ಶುಭ ಕೋರಿದ ಐಸಿಸಿ

ಬುಧವಾರದಿಂದ (ಆಗಸ್ಟ್ ೧) ಎಡ್ಜ್‌ಬ್ಯಾಸ್ಟನ್‌ನಲ್ಲಿ ಶುರುವಾಗಲಿರುವ ಭಾರತ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ೧ ಸಹಸ್ರ ಪಂದ್ಯವನ್ನಾಡಲಿರುವ ಇಂಗ್ಲೆಂಡ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಶುಭ ಕೋರಿದೆ. ೧೮೭೭ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನಾಡಿದ್ದ ಇಂಗ್ಲೆಂಡ್, ಇದುವರೆಗೆ ೯೯೯ ಪಂದ್ಯಗಳನ್ನಾಡಿರುವ ಇಂಗ್ಲೆಂಡ್, ೩೫೭ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ೨೯೭ರಲ್ಲಿ ಸೋಲನುಭವಿಸಿದೆ. ಅಂತೆಯೇ ಮಿಕ್ಕ ೩೪೫ ಪಂದ್ಯಗಳು ಡ್ರಾನಲ್ಲಿ ಪರ್ಯವಸಾನ ಕಂಡಿದೆ. ಭಾರತ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ಸರ್ವಸನ್ನದ್ಧವಾಗಿದೆ.

ದೆಹಲಿಯಲ್ಲಿ ಮುಂದುವರಿದ ಅಧಿಕಾರ ಸಂಘರ್ಷ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ನಡುವಿನ ಅಧಿಕಾರದ ಸಂಘರ್ಷ ಮುಂದುವರೆದಿದೆ. ಸಿಎಂ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ನೀಡಿದ ವರದಿಯನ್ನೇ ಹರಿದುಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಸೋಮವಾರ ಕಾರ್ಯಕ್ರಮವೊಂದರಲ್ಲಿ ಕೇಜ್ರಿವಾಲ್ ಮಾತನಾಡುತ್ತ, “ಸ್ಥಳೀಯ ವ್ಯಕ್ತಿಗಳು ಸಿಸಿ ಟಿವಿ ಅಳವಡಿಸುವುದಾದರೆ ಪರವಾನಗಿ ಪಡೆಯಬೇಕು ಎಂದು ಲೆಫ್ಟಿನೆಂಟ್‌ ಗವರ್ನರ್‌ ಹೇಳಿದ್ದಾರೆ. ಆದರೆ ಪರವಾನಗಿ ಪಡೆಯಬೇಕೆಂದರೆ ಹಣ ಕೊಡಬೇಕು, ಇಂಥ ಹಣ ಕೀಳುವ ಆದೇಶವನ್ನು ಹರಿದು ಹಾಕಬೇಕು,” ಎಂದು ಹೇಳಿ ವೇದಿಕೆಯಲ್ಲೇ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಮಾಧ್ಯಮಗಳನ್ನು ರಾಷ್ಟ್ರವಿರೋಧಿ ಎಂದ ಟ್ರಂಪ್

ಮಾಧ್ಯಮಗಳು ನಾನು ತಪ್ಪು ಮಾಡುವುದನ್ನೇ ಕಾತರದಿಂದ ಕಾಯುತ್ತಿವೆ ಎಂದು ಹಿಂದೆ ಹೇಳಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಇಂದು ತನ್ನ ವಿರುದ್ಧ ವರದಿ ಮಾಡುತ್ತಿರುವ ಮಾಧ್ಯಮಗಳನ್ನು ರಾಷ್ಟ್ರ ವಿರೋಧಿ ಎಂದು ಕರೆದಿದ್ದಾರೆ. ಇದು ಬರಾಕ್ ಒಬಾಮಾ ಹಾಗೂ ಜಾರ್ಜ್ ಡಬ್ಲ್ಬೂ ಬುಷ್ ಅವರ ಕಾಲದಲ್ಲಿ ನಡೆದಿರಲಿಲ್ಲ ಎಂದು ಮಾಧ್ಯಮಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವು ಜವಾಬ್ದಾರಿಯಿಂದ ಕೂಡಿರುತ್ತದೆ. ಅಧಿಕೃತ ಮಾಹಿತಿಯನ್ನು ಒಳಗೊಂಡಿರುತ್ತದೆ, ಆದರೆ ಅಮೆರಿಕ ಮುಖ್ಯ ವಾಹಿನಿ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಕಟಿಸುತ್ತಿವೆ ಎಂದು ಹೇಳಿದ್ದಾರೆ.

ನಟಿಯರಿಗೆ ಕಡಿಮೆ ಸಂಭಾವನೆ: ಎಮ್ಮಾ ಅಸಮಾಧಾನ

ಹಾಲಿವುಡ್‌ನಲ್ಲಿ ಸಂಭಾವನೆ ವಿಚಾರದಲ್ಲಿ ಲಿಂಗ ತಾರತಮ್ಯ ನೀತಿ ಅನುಸರಿಸುತ್ತಾರೆ ಎಂದು ನಟಿ ಎಮ್ಮಾ ಥಾಮ್ಸನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 59ರ ಹರೆಯದ ಆಸ್ಕರ್ ಪುರಸ್ಕೃತ ನಟಿಗೆ ಈ ಬಗ್ಗೆ ತೀವ್ರ ಖೇದವಿದೆ. “ನನ್ನ ಸಿನಿಮಾಗಳಲ್ಲಿ ನಾನು ಸಹನಟರಿಗಿಂತ ಕಡಿಮೆ ಸಂಭಾವನೆ ಪಡೆದಿದ್ದೇನೆ. ಅವರಷ್ಟೇ ಕೆಲಸ ಮಾಡಿ ಕಡಿಮೆ ಸಂಭಾವನೆ ಪಡೆಯುವುದು ಸಮಂಜಸವಲ್ಲ. ಇಂದಿಗೂ ಮಹಿಳೆಯರನ್ನು ಎರಡನೇ ದರ್ಜೆಯ ನಾಗರೀಕರಂತೆ ನೋಡುತ್ತಿರುವುದು ದುರದೃಷ್ಟಕರ,” ಎಂದಿದ್ದಾರೆ ಎಮ್ಮಾ. ಅವರ ಈ ಹೇಳಿಕೆ ಹಾಲಿವುಡ್‌ನಲ್ಲಿ ಚರ್ಚೆಗೀಡಾಗಿದೆ. ಪ್ರಸ್ತುತ ಎಮ್ಮಾ ಥಾಮ್ಸನ್‌ ಅವರು ಮ್ಯಾಕ್‌ ಎವಾನ್ಸ್‌ ಅವರ ‘ದಿ ಚಿಲ್ಡ್ರನ್‌ ಆಕ್ಟ್‌’ ಕೃತಿಯನ್ನು ಆಧರಿಸಿದ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More