ಚಳವಳಿ ನಿರತ ಜಾರ್ಖಂಡ್‌ ಆದಿವಾಸಿ ಕಾರ್ಯಕರ್ತರ ಮೇಲೆ ರಾಷ್ಟ್ರದ್ರೋಹದ ಆರೋಪ

ಜಾರ್ಖಂಡ್‌ನಲ್ಲಿ ಆದಿವಾಸಿಗಳು ‘ಪಾತಾಲ್‌ಗಡಿ ಚಳವಳಿ’ ಮೂಲಕ ಗ್ರಾಪಂಗಳ ಸಾರ್ವಭೌಮತೆಯನ್ನು ಘೋಷಿಸಿದ ನಂತರ ಸರ್ಕಾರ ಮತ್ತು ಆದಿವಾಸಿಗಳ ನಡುವಿನ ಬಿಕ್ಕಟ್ಟು ಉಲ್ಬಣಿಸಿದೆ. ೨೦ ಆದಿವಾಸಿ ಕಾರ್ಯಕರ್ತರ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಿರುವುದು ಈಗಿನ ಬೆಳವಣಿಗೆ

ಜಾರ್ಖಂಡ್ ಪೊಲೀಸರು ಕಳೆದ ಶನಿವಾರ 20 ಹಿರಿಯ ಆದಿವಾಸಿ ಕಾರ್ಯಕರ್ತರ ಮೇಲೆ 26 ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದಾರೆ. ರಘುಬಾರ್ ದಾಸ್ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ಟೀಕಿಸಿರುವುದು ಮತ್ತು ಪಾತಾಲ್‌ಗಡಿ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಆರೋಪದಲ್ಲಿ ಈ ರಾಷ್ಟ್ರದ್ರೋಹದ ಆರೋಪವನ್ನು ಹೊರಿಸಲಾಗಿದೆ. ಪೊಲೀಸರು ಕಾರ್ಯಕರ್ತರನ್ನು ಬಂಧಿಸದೇ ಇದ್ದರೂ, ರಾಜ್ಯ ಸರ್ಕಾರದ ಕ್ರಮ ಆದಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೋಮುವಾದಿ-ವಾಣಿಜ್ಯ ಉದ್ದೇಶದಿಂದ ಸರ್ಕಾರ ಆದಿವಾಸಿಗಳ ಧ್ವನಿಯನ್ನು ಅಡಗಿಸಲು ಕಾರ್ಯಕರ್ತರ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಿದ ಎಂದು ಬುಡಕಟ್ಟು ಸಮುದಾಯಗಳು ಅಭಿಪ್ರಾಯಪಟ್ಟಿವೆ. ಆದಿವಾಸಿ ಹಕ್ಕುಗಳ ವಿರುದ್ಧ ಹೋರಾಡುತ್ತಿದ್ದ ಕಾರ್ಯಕರ್ತರನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಕೊನೆಯ ಪ್ರಯತ್ನ ಇದೆಂದು ಆದಿವಾಸಿ ಗ್ರಾಮಗಳು ಹೇಳುತ್ತಿವೆ.

ರಾಷ್ಟ್ರದ್ರೋಹದ ಆರೋಪವನ್ನು ಹೊತ್ತ ಆದಿವಾಸಿ ಕಾರ್ಯಕರ್ತರಲ್ಲಿ ಫಾದರ್ ಸ್ಟಾನ್ ಸ್ವಾಮಿ, ಮಾಜಿ ಕಾಂಗ್ರೆಸ್ ಶಾಸಕ ಥಿಯೋಡರ್ ಕಿರೋ ಮತ್ತು ಅಲೋಕ್ ಕುಜೂರ್ ಅವರೂ ಇದ್ದಾರೆ. ಇವರ ಮೇಲೆ ರಾಜ್ಯದಲ್ಲಿ ಕೋಮು ಸಂಘರ್ಷವನ್ನು ಪ್ರೇರೇಪಿಸಿರುವುದು, ಐಟಿ ಕಾಯ್ದೆಯನ್ನು ಉಲ್ಲಂಘಿಸಿರುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ತಡೆಯೊಡ್ಡಿರುವ ಆರೋಪಗಳನ್ನೂ ಹೊರಿಸಲಾಗಿದೆ.

ಕುಂತಿ ಜಿಲ್ಲೆಯ ಅನಿಗರ್ಹ ಗ್ರಾಮದ ಜನರು ಲೋಕಸಭಾ ಉಪಾಧ್ಯಕ್ಷ ಮತ್ತು ಬಿಜೆಪಿ ಮುಖಂಡ ಕಾರ್ಯ ಮುಂಡಾ ಅವರು ಮನೆಯಲ್ಲಿಲ್ಲದ ಸಂದರ್ಭ ಅವರ ಮನೆಗೆ ದಾಳಿ ನಡೆಸಿದ ಆದಿವಾಸಿಗಳು ಮೂವರು ಭದ್ರತಾ ಸಿಬ್ಬಂದಿಯನ್ನು ಅಪಹರಿಸಿ ವಶದಲ್ಲಿರಿಸಿದ್ದಾರೆ ಎಂದು ಜೂನ್ ೨೬ರಂದು ಕುಂತಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಜೇಶ್ ಪ್ರಸಾದ್ ರಾಜಕ್ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣಕ್ಕೂ ಮೊದಲು ಮೌನವಾಗಿ ಪ್ರತಿಭಟಿಸುತ್ತಿದ್ದ ಆದಿವಾಸಿ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.

ರಾಜಕ್ ಅವರು ತಮ್ಮ ಎಫ್‌ಐಆರ್‌ನಲ್ಲಿ ಕಾರ್ಯಕರ್ತರು ಗ್ರಾಮಸ್ಥರನ್ನು ಹಿಂಸೆಗೆ ಪ್ರೇರೇಪಿಸುತ್ತಿರುವ ಆರೋಪ ಹೊರಿಸಿದ್ದಾರೆ. “ಆದಿವಾಸಿ ಕಾರ್ಯಕರ್ತರು ಅಮಾಯಕ ಮತ್ತು ಅಶಿಕ್ಷಿತ ಗ್ರಾಮಸ್ಥರನ್ನು ಯುಕ್ತಿಯಿಂದ ಮರಳು ಮಾಡಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರೇರೇಪಿಸುತ್ತಿದ್ದಾರೆ. ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ರಾಷ್ಟ್ರವಿರೋಧಿ ಭಾಷಣಗಳು ಮತ್ತು ಪ್ರಚಾರಾಭಿಯಾನದ ಮೂಲಕ ಕುಂತಿ ಗ್ರಾಮಸ್ಥರ ತಲೆಯಲ್ಲಿ ತುಂಬುತ್ತಿದ್ದಾರೆ. ಕಾರ್ಯಕರ್ತರು ಸಂವಿಧಾನಬದ್ಧ ಸೌಲಭ್ಯಗಳನ್ನು ತಿರುಚಿ ವಿವರಿಸುವ ಮೂಲಕ ಗ್ರಾಮಸ್ಥರ ಮನಬದಲಾಯಿಸುತ್ತಿದ್ದಾರೆ. ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳು, ಫೇಸ್‌ಬುಕ್‌ ಮೊದಲಾದ ವೇದಿಕೆಗಳನ್ನು ಬಳಸಿಕೊಂಡು ತಮ್ಮ ರಾಷ್ಟ್ರವಿರೋಧಿ ಪ್ರಚಾರವನ್ನು ಹರಡುವ ಮೂಲಕ ಕೋಮು ಸೌಹಾರ್ದಕ್ಕೆ ಭಂಗ ತಂದು ದೇಶದ ಏಕತೆಗೆ ವಿಘ್ನವುಂಟು ಮಾಡುತ್ತಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ರಾಜೇಶ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಆದಿವಾಸಿ ಕಾರ್ಯಕರ್ತರು ಈ ಆರೋಪಗಳನ್ನು ಸುಳ್ಳೆಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಜಾರ್ಖಂಡ್‌ನ ಆದಿವಾಸಿ ಗ್ರಾಮಗಳು ಆರಂಭಿಸಿರುವ ‘ಪಾತಾಲ್‌ಗಡಿ ಚಳವಳಿ’ಯನ್ನು ಹತ್ತಿಕ್ಕಲು, ತಮ್ಮನ್ನು ಬೆದರಿಸಲು ಎಫ್‌ಐಆರ್ ದಾಖಲಿಸುವುದು ಮತ್ತು ರಾಷ್ಟ್ರದ್ರೋಹದ ಆಪಾದನೆಯನ್ನು ಸರ್ಕಾರ ಹೊರಿಸುತ್ತಿದೆ ಎನ್ನುವುದು ಆದಿವಾಸಿ ಕಾರ್ಯಕರ್ತರ ಅಭಿಪ್ರಾಯ. ಪೊಲೀಸರು ದಾಖಲಿಸುವ ಎಫ್‌ಐಆರ್‌ನಲ್ಲಿ ಹುರುಳಿಲ್ಲ ಎಂದು ಆದಿವಾಸಿ ಕಾರ್ಯಕರ್ತರು ಹೇಳುತ್ತಾರೆ. ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ ೬೬ಎ ಅಡಿಯಲ್ಲಿ ಆರೋಪ ದಾಖಲಿಸಿದ್ದಾರೆ. ಆದರೆ ಈ ಕಾಯ್ದೆಯನ್ನು ಸುಪ್ರೀಂಕೋರ್ಟ್ ೨೦೧೫ ಮಾರ್ಚ್‌ನಲ್ಲಿಯೇ ತೆಗೆದು ಹಾಕಿದೆ ಎನ್ನುತ್ತಾರೆ ಕಾರ್ಯಕರ್ತರು.

ಬಿಜೆಪಿ ಸರ್ಕಾರದ ತಿದ್ದುಪಡಿ, ಸುಧಾರಣೆಗಳು ಆದಿವಾಸಿಗಳಿಗೆ ಸಂವಿಧಾನದ ಒಂಭತ್ತನೇ ವಿಧಿಯಡಿ ಕೊಡಲಾಗಿರುವ ಭೂಮಿ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಆದಿವಾಸಿ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಹಲವು ಆದಿವಾಸಿ ಗ್ರಾಮಗಳು ಮತ್ತು ಮುಖ್ಯವಾಗಿ ಕುಂತಿ ಜಿಲ್ಲೆಯ ಗ್ರಾಮಗಳು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪುರಾತನ ಸಂಪ್ರದಾಯವಾದ ಪಾತಾಲ್‌ಗಡಿಯಿಂದ ಪ್ರೇರಣೆ ಪಡೆದು “ಗ್ರಾಮ ಪಂಚಾಯತ್‌ಗಳು ಸಾರ್ವಭೌಮತೆಯನ್ನು ಹೊಂದಿವೆ” ಎಂದು ಘೋಷಿಸಿವೆ. ಸಂವಿಧಾನದಲ್ಲಿ ಗ್ರಾಮ ಪಂಚಾಯತ್‌ಗೆ ಸಾರ್ವಭೌಮತೆಯನ್ನು ನೀಡಲಾಗಿದೆ ಎನ್ನುವ ಸೌಲಭ್ಯವನ್ನು ಮುಂದಿಟ್ಟು, ಈ ಪಾತಾಲ್‌ಗಡಿ ಚಳವಳಿ ಆರಂಭವಾದ ಕಾರಣ ಬಿಜೆಪಿ ಸರ್ಕಾರವು ಪ್ರಸ್ತಾಪಿಸಿರುವ ಭೂ ಸ್ವಾಧೀನ ಕಾನೂನುಗಳು ಮತ್ತು ರಾಜ್ಯ ನಾಗರಿಕ ಅರ್ಹತೆಯಂತಹ ಕಾಯ್ದೆಗಳಿಗೆ ಬೆಲೆ ಇಲ್ಲದಂತಾಗಿದೆ. ಇದೀಗ ಜಾರ್ಖಂಡ್‌ನ ಸುಮಾರು ೩೨,೬೨೦ ಗ್ರಾಮಗಳಿಗೆ ಈ ಚಳವಳಿ ವ್ಯಾಪಿಸಿದೆ.

ಏನಿದು ಪಾತಾಲ್‌ಗಡಿ ಚಳವಳಿ?

ಜಾರ್ಖಂಡ್ ಶೇ. ೨೬ರಷ್ಟು ಜನಸಂಖ್ಯೆ ಆದಿವಾಸಿ ಸಮುದಾಯ. ಕಳೆದ ವರ್ಷ ರಾಜ್ಯದ ಕುಂತಿ, ಗುಮ್ಲಾ, ಸಿಂಡೆಗಾ ಮತ್ತು ಪಶ್ಚಿಮ ಸಿಂಗ್‌ಭೂಮ್‌ನ ಸುಮಾರು ೨೦೦ ಗ್ರಾಮಗಳು ಸ್ಥಳೀಯವಾಗಿ ನಿರ್ಮಿಸಿದ ಪಾತಾಲ್‌ಗಡಿ ಎನ್ನಲಾಗುವ ದೊಡ್ಡ ಕಲ್ಲಿನ ಫಲಕಗಳ ಮೂಲಕ ತಮ್ಮ ಸಾರ್ವಭೌಮತೆಯನ್ನು ಸಾರಿವೆ. ಸುಮಾರು ೧೫ ಅಡಿಯಿಂದ ೪ ಅಡಿಯ ನಡುವೆ ಇರುವ ಈ ಪಾತಾಲ್‌ಗಡಿ ಕಲ್ಲುಗಳಿಗೆ ಹಸಿರು ಬಣ್ಣ ಹಚ್ಚಲಾಗಿದೆ. ಇವುಗಳಲ್ಲಿ ಪಂಚಾಯತ್‌ (ಪರಿಶಿಷ್ಟ ಪ್ರಾಂತ್ಯಗಳ ವಿಸ್ತರಣೆ) ಕಾಯ್ದೆ, ೧೯೯೬ (ಪಿಇಎಸ್‌ಎ)ಯಲ್ಲಿ ನೀಡಲಾಗಿರುವ ಸೌಲಭ್ಯಗಳ ವಿವರ ಹಾಗೂ ಹೊರಗಿನವರನ್ನು ಗ್ರಾಮಕ್ಕೆ ಪ್ರವೇಶಿಸದಂತೆ ತಡೆಯುವ ಸಂದೇಶವನ್ನು ಕೆತ್ತಲಾಗಿದೆ.

ಮುಂಡಾ ಬುಡಕಟ್ಟು ಸಂಪ್ರದಾಯದ ಪ್ರಕಾರ ದೊಡ್ಡ ಕಲ್ಲಿನ ಫಲಕಗಳನ್ನು ಹಾಕುವುದು ಸಾವಿನ ಸಂಕೇತವಾಗಿರುತ್ತದೆ. ಸಮುದಾಯದ ಪೂರ್ವಜರನ್ನು ಗೌರವಿಸುವ ಈ ಸಂಪ್ರದಾಯದಿಂದಲೇ ಪಾತಾಲ್‌ಗಡಿ ಚಳವಳಿ ಆರಂಭವಾಗಿದೆ. ಪೇಸಾದ ಸೌಲಭ್ಯಗಳಿಂದ ಪ್ರೇರಣೆ ಪಡೆದು ಗ್ರಾಮಸ್ಥರು ಈ ಚಳವಳಿ ಆರಂಭಿಸಿದ್ದಾರೆ. ಚಳವಳಿಯ ನಾಯಕರು ಪಿಇಎಸ್‌ಎ ಕಾನೂನಿನ ಸಂದೇಶವನ್ನು ದೊಡ್ಡ ಕಲ್ಲುಗಳಲ್ಲಿ ಕೆತ್ತುವ ಮೂಲಕ ಆದಿವಾಸಿ ಜನರಿಗೆ ಕಾನೂನಿನ ಅರಿವು ಮೂಡಿಸುತ್ತಿದ್ದಾರೆ. ಗ್ರಾಮಾಡಳಿತದ ಸಾರ್ವಭೌಮತೆಯನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಪಾತಾಲ್‌ಗಡಿ ಚಳವಳಿಯು ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನುಗಳು ಗ್ರಾಮಕ್ಕೆ ಅನ್ವಯಿಸುವುದಿಲ್ಲ ಎನ್ನುವುದನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ. “ಭೂಮಿ, ಕಾಡು ಮತ್ತು ನೆಲ ನಮ್ಮದು. ಯಾರೂ ಅದನ್ನು ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದೇ ಪಾತಾಲ್‌ಗಡಿ ಚಳವಳಿ” ಎನ್ನುತ್ತಾರೆ ಆದಿವಾಸಿ ಗ್ರಾಮಸ್ಥರು.

ನಾಗರಿಕ ಸಮಾಜ ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟವು ಇತ್ತೀಚೆಗೆ ಜಾರ್ಖಂಡ್‌ನಲ್ಲಿ ಸಂಘರ್ಷದ ರೂಪ ಪಡೆದುಕೊಂಡಿದೆ. ಹೀಗಾಗಿ ರಘುದಾಸ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ರಾಜ್ಯ ಹಲವು ಬಿಕ್ಕಟ್ಟುಗಳನ್ನು ಎದುರಿಸಿದೆ. ರಾಜ್ಯ ಸರ್ಕಾರವನ್ನು ಟೀಕಿಸಿದ ವ್ಯಕ್ತಿಗಳ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಿರುವುದು ಇಂತಹುದೇ ಒಂದು ಬಿಕ್ಕಟ್ಟು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ರೀತಿಯಲ್ಲಿ ಆದಿವಾಸಿ ಪ್ರಾಂತ್ಯಗಳನ್ನು ಉದ್ಯಮ ಮತ್ತು ಗಣಿ ಸಂಬಂಧಿತ ವಿಸ್ತರಣೆಗಳಿಗಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಅಲ್ಲದೆ, ಧಾರ್ಮಿಕವಾಗಿ ಜಾರ್ಖಂಡ್‌ನಲ್ಲಿ ನೆಲೆಯೂರುವ ನಿಟ್ಟಿನಲ್ಲಿ ಚರ್ಚ್‌ ಮತ್ತು ಸಂಬಂಧಿತ ಸಂಸ್ಥೆಗಳ ಮೇಲೆ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ದಾಳಿ ನಡೆಸುತ್ತಿರುವ ಆರೋಪವೂ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿವೆ. ಈ ಸಂಸ್ಥೆಗಳು ಆದಿವಾಸಿ ಚಳವಳಿಗಳನ್ನು ವ್ಯಾಪಕವಾಗಿ ಬೆಂಬಲಿಸಿರುವುದೂ ಬಿಜೆಪಿ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಜಾರ್ಖಂಡ್ ಪೊಲೀಸರು ರಾಜ್ಯಾದ್ಯಂತ ಹಲವು ಚರ್ಚ್‌ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಷ್ಟ್ರದ್ರೋಹದ ಆರೋಪ ಎದುರಿಸುತ್ತಿರುವ ಆದಿವಾಸಿ ಕಾರ್ಯಕರ್ತರಲ್ಲಿ ಫಾದರ್ ಸ್ಟಾನ್ ಸ್ವಾಮಿ ಪ್ರಮುಖರು. ೭೫ ವರ್ಷದ ಸ್ಟಾನ್ ಸ್ವಾಮಿ ಜಾರ್ಖಂಡ್‌ನ ನಾಗರಿಕ ಸಮಾಜದ ಚಟುವಟಿಕೆಗಳಲ್ಲಿ ಅಗ್ರಗಣ್ಯರು. ಜಾರ್ಖಂಡ್ ಪೊಲೀಸರು ಅಮಾಯಕ ಆದಿವಾಸಿ ಗ್ರಾಮಸ್ಥರ ಮೇಲೆ ಕ್ಷುಲ್ಲಕ ಆರೋಪಗಳನ್ನು ಹೊರಿಸಿ ನಕ್ಸಲರೆಂದು ಬ್ರಾಂಡ್ ಮಾಡಿರುವ ೬೦೦೦ ಪ್ರಕರಣಗಳನ್ನು ಅವರು ಪಟ್ಟಿ ಮಾಡಿದ್ದಾರೆ.

ಮಾಜಿ ಕಾಂಗ್ರೆಸ್ ಶಾಸಕರಾಗಿರುವ ಕಿರೋ ಅವರ ಪ್ರಕಾರ, ಬಿಜೆಪಿ ಸರ್ಕಾರ ಜನಪರ ಧ್ವನಿಗಳನ್ನು ಹತ್ತಿಕ್ಕುತ್ತಿದೆ. “ಇಂದು ಚರ್ಚ್‌ಗಳ ಧ್ವನಿಯನ್ನು ಅಡಗಿಸಿರುವಂತೆ ಭವಿಷ್ಯದಲ್ಲಿ ಇತರ ಕಾರ್ಯಕರ್ತರ ಧ್ವನಿಯನ್ನು ಅಡಗಿಸುವುದು ಬಿಜೆಪಿಯ ಪ್ರಯತ್ನವಾಗಿದೆ” ಎಂದು ಕಿರೋ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿರುವ ಥೀಯೋಡರ್ ಕಿರೋ, “ಜಾರ್ಖಂಡ್ ಈಗ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯಸರ್ಕಾರದ ನೀತಿಗಳನ್ನು ವಿರೋಧಿಸುವ ಎಲ್ಲರನ್ನೂ ಸರ್ಕಾರ ಗುರಿ ಮಾಡುತ್ತಿದೆ. ನಾವು ಆದಿವಾಸಿಗಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮುಂದಿಡುತ್ತಿದ್ದೇವೆ. ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳುವುದು ಹೋರಾಟದ ಮುಖ್ಯಗುರಿ” ಎಂದು ಹೇಳಿದ್ದಾರೆ. “ರಾಜ್ಯ ಸರ್ಕಾರ ವಾಣಿಜ್ಯ ಆಸಕ್ತಿಗಳಿಗಾಗಿ ಕೆಲಸ ಮಾಡುತ್ತಿದೆ. ತಾರತಮ್ಯದ ಭೂ ಸ್ವಾಧೀನ ನೀತಿಗಳಿಂದ ಆದಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎನ್ನುವುದನ್ನು ಜಾರ್ಖಂಡ್‌ನ ನಿವಾಸಿಗಳು ತಿಳಿದುಕೊಂಡಿದ್ದಾರೆ. ಛೋಟಾನಾಗಪುರ್‌ ಟೆನೆನ್ಸಿ ಕಾಯ್ದೆ ಮತ್ತು ಸಂತಾಲ್ ಪರಗಣ ಕಾಯ್ದೆಗೆ ಮಾಡಿರುವ ತಿದ್ದುಪಡಿಗಳು ಈ ನಿಟ್ಟಿನಲ್ಲಿ ಉತ್ತಮ ಉದಾಹರಣೆಗಳು. ಹಾಗೆಯೇ ನಾಗರಿಕ ನೀತಿಗೆ ಬದಲಾವಣೆ ತಂದು ರಾಜ್ಯದ ಜನಸಂಖ್ಯಾ ಸಮತೋಲನವನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಈ ಬದಲಾವಣೆ ಆದಿವಾಸಿಗಳಿಗೆ ವಿರುದ್ಧವಾಗಿ ಕೆಲಸ ಮಾಡಲಿದೆ,” ಎಂದು ಥೀಯೋಡರ್ ಕಿರೋ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಚಾರ್ಮಾಡಿ ಸ್ಥಗಿತಗೊಂಡರೆ ಮಲೆಕುಡಿಯರ ಆ ಕಾಲನಿಗೂ ಕವಿಯುತ್ತದೆ ಕತ್ತಲು!

ಸರ್ಕಾರದ ಹೊಸ ನೀತಿಗಳು ತಮ್ಮನ್ನು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಾಶ ಮಾಡಲಿದೆ ಎನ್ನುವುದು ಆದಿವಾಸಿಗಳ ಅಭಿಪ್ರಾಯ. ಹೀಗಾಗಿ ಅವರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆದಿವಾಸಿಗಳಿಗೆ ಸಂವಿಧಾನ ಬದ್ಧವಾಗಿ ಇರುವ ರಕ್ಷಣೆಯನ್ನು ಸಡಿಲಗೊಳಿಸುವ ಮೂಲಕ ವಾಣಿಜ್ಯೋದ್ದೇಶಗಳಿಗೆ ಸಂಪನ್ಮೂಲವನ್ನು ಕಸಿದುಕೊಳ್ಳುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ಆದಿವಾಸಿ ಕಾರ್ಯಕರ್ತರು ಆರೋಪಿಸುತ್ತಾರೆ. “ಆದಿವಾಸಿಗಳ ನೆಲೆ ಕಿತ್ತುಕೊಳ್ಳಲು ಸಂಘಪರಿವಾರ ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಬಿಜೆಪಿ/ಆರ್‌ಎಸ್‌ಎಸ್‌/ವಿಎಚ್‌ಪಿ ಮತ್ತು ಇತರ ದೊಡ್ಡ ವಾಣಿಜ್ಯ ಸಮೂಹಗಳು ಜಾರ್ಖಂಡ್‌ನಲ್ಲಿ ಜೊತೆಗೂಡಿ ಕೆಲಸ ಮಾಡುತ್ತಿವೆ. ಕಾರ್ಪೋರೇಟ್‌ಗಳಿಗೆ ತಮ್ಮ ಉದ್ಯಮಗಳು ಮತ್ತು ಗಣಿಗಳನ್ನು ಸ್ಥಾಪಿಸಲು ಆದಿವಾಸಿಗಳ ಭೂಮಿ ಬೇಕಿದೆ. ಬಿಜೆಪಿ ಆದಿವಾಸಿಗಳು ಹಿಂದುತ್ವದ ಹಿಡಿತದೊಳಗೆ ಬರಬೇಕು ಎಂದು ಪ್ರಯತ್ನಿಸುತ್ತಿದೆ. ಆದಿವಾಸಿಗಳ ಮೇಲೆ ಹಿಡಿತ ಸಿಕ್ಕಾಗ ಮಾತ್ರ ಅವರ ನೆಲವನ್ನು ವಶಪಡಿಸಿಕೊಳ್ಳಬಹುದು ಎನ್ನುವುದು ಅವರಿಗೆ ತಿಳಿದಿದೆ” ಎಂದು ಥೀಯೋಡರ್ ಕಿರೋ ಅಭಿಪ್ರಾಯಪಟ್ಟಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More