ಶಾಲೆಗಳಲ್ಲಿ ಮೊಟ್ಟೆ ನೀಡಲು ಹಿಂಜರಿಯುತ್ತಿರುವ ಬಿಜೆಪಿ ಆಡಳಿತದ ರಾಜ್ಯಗಳು!

ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳಿಗೆ ಮೊಟ್ಟೆ ಒದಗಿಸಲು ಬಿಜೆಪಿ ಚುಕ್ಕಾಣಿ ಹಿಡಿದಿರುವ ರಾಜ್ಯಗಳು ಹಿಂಜರಿಯುತ್ತಿವೆ. ಹೀಗೇಕೆ ಎಂದು ಪ್ರಶ್ನಿಸುತ್ತ ಹೋದಂತೆ ಬಹುದೊಡ್ಡ ಆಹಾರದ ರಾಜಕೀಯವೊಂದು ಹೆಡೆ ಎತ್ತಿರುವುದನ್ನು ‘ಇಂಡಿಯಾ ಸ್ಪೆಂಡ್’ ಜಾಲತಾಣಕ್ಕೆ ವರದಿ ಮಾಡಿದೆ

ಆಹಾರ ಹಕ್ಕು ಆಂದೋಲನದ ಮೂಲಕ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತೆ ಸ್ವಾತಿ ನಾರಾಯಣ್ ಜುಲೈ ತಿಂಗಳ ಮೊದಲ ವಾರದಲ್ಲಿ ದೇಶದ ಯಾವ ಯಾವ ರಾಜ್ಯಗಳ ಅಂಗನವಾಡಿಗಳಲ್ಲಿ ಬಿಸಿಯೂಟಕ್ಕೆ ಮೊಟ್ಟೆ ವಿತರಿಸಲಾಗುತ್ತಿದೆ ಎನ್ನುವ ನಕ್ಷೆಯೊಂದನ್ನು ತಯಾರಿಸಿದರು. ಇದು ಬಿಜೆಪಿ ಆಡಳಿತವಿರುವ ರಾಜ್ಯಗಳು ಮೊಟ್ಟೆ ವಿತರಣೆಗೆ ಹಿಂಜರಿದು ಶಾಖಾಹಾರಿ ಊಟದ ವ್ಯವಸ್ಥೆಗೇ ಮನಸೋತಿವೆ ಎಂಬುದನ್ನು ಬಯಲು ಮಾಡಿದೆ. ಈ ನಕ್ಷೆಯನ್ನು ಆಧರಿಸಿ ‘ಇಂಡಿಯಾ ಸ್ಪೆಂಡ್’ ಜಾಲತಾಣ ಸರ್ಕಾರದ ಪೌಷ್ಠಿಕಾಂಶ ದಾಖಲೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳನ್ನು, ತಜ್ಞರನ್ನು ಸಂಪರ್ಕಿಸಿ ಕೆಲವು ವಾಸ್ತವ ಅಂಶಗಳನ್ನು ಕಂಡುಕೊಂಡಿತು. ಅವು ಹೀಗಿವೆ:
ಪೌಷ್ಠಿಕಾಂಶ ಕೊರತೆ ಎದುರಿಸುತ್ತಿರುವ ಒಟ್ಟು ಹತ್ತು ರಾಜ್ಯಗಳಲ್ಲಿ ಕೇವಲ 3 ಮಾತ್ರ (ಕರ್ನಾಟಕ, ಬಿಹಾರ, ಜಾರ್ಖಂಡ್) ಪುಷ್ಠಿದಾಯಕ ಆಹಾರವಾದ ಮೊಟ್ಟೆಯನ್ನು ಒದಗಿಸುತ್ತಿವೆ.

  • ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆಡಳಿತವಿರುವ 19 ರಾಜ್ಯಗಳ ಪೈಕಿ (ಮೈತ್ರಿ ಆಡಳಿತವಿದ್ದರೂ 15 ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳೇ ಆಡಳಿತ ನಡೆಸುತ್ತಿದ್ದಾರೆ) ಕೇವಲ 5 ರಾಜ್ಯಗಳು ಮಾತ್ರ ಮೊಟ್ಟೆ ವಿತರಿಸುತ್ತಿವೆ.
  • ಪಂಜಾಬ್, ಮಿಜೋರಾಂ, ದೆಹಲಿಯಂತಹ ಬಿಜೆಪಿಯೇತರ ಸರ್ಕಾರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕೂಡ ಮೊಟ್ಟೆ ವಿತರಿಸಲಾಗುತ್ತಿಲ್ಲ. ಆದರೂ ಸಸ್ಯಾಹಾರದ ಬಗೆಗಿನ ಪ್ರೇಮವೇ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆ ವಿತರಿಸದೇ ಇರಲು ಮುಖ್ಯ ಕಾರಣ.

ದೇಶದ ಐದು ವರ್ಷದೊಳಗಿನ ಶೇ 7.5ರಷ್ಟು ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದು ಜಾಲತಾಣ ಸಂದರ್ಶಿಸಿದ ಬಹುತೇಕ ತಜ್ಞರು ಅಪೌಷ್ಟಿಕತೆ ವಿರುದ್ಧ ಹೋರಾಡಲು ಮೊಟ್ಟೆ ಒದಗಿಸುವುದೊಂದೇ ದೊಡ್ಡ ಅಸ್ತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವು ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ವ್ಯವಸ್ಥೆ ಇತ್ತಾದರೂ ಇದನ್ನು ಎಲ್ಲಾ ರಾಜ್ಯಗಳಲ್ಲಿ ಕಡ್ಡಾಯಗೊಳಿಸಿದ್ದು 2001ರಲ್ಲಿ ಮಾತ್ರ. 1989ರಲ್ಲಿ ತಮಿಳುನಾಡಿನ ಡಿಎಂಕೆ ಆಡಳಿತ ಮೊದಲ ಬಾರಿಗೆ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸಿತು. ಮೊದಲು ಎರಡು ವಾರಗಳಿಗೊಮ್ಮೆ ಅಲ್ಲಿ ಮೊಟ್ಟೆ ವಿತರಿಸಲಾಗುತ್ತಿತ್ತು. ಬಳಿಕ ಪ್ರತಿವಾರವೂ ವಿತರಿಸುವ ಮೂಲಕ ಸುಧಾರಣೆ ತರಲಾಯಿತು.

ಇದನ್ನೂ ಓದಿ : ಐದನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ತಯಾರಕರ ಪ್ರತಿಭಟನೆ, ಸರ್ಕಾರದ ಸಂಧಾನ ವಿಫಲ

ಗುಜರಾತ್ ನಲ್ಲಿ ಶೇ 39.3ರಷ್ಟು ಮಕ್ಕಳು ಮತ್ತು ಮಧ್ಯಪ್ರದೇಶದಲ್ಲಿ 42.8%ರಷ್ಟು ಮಕ್ಕಳು ತಮ್ಮ ವಯಸ್ಸಿಗೆ ತಕ್ಕಷ್ಟು ತೂಕ ಹೊಂದಿರದೇ ಇದ್ದರೂ ಏಕೆ ಈ ರಾಜ್ಯಗಳಲ್ಲಿ ಮೊಟ್ಟೆ ವಿತರಿಸುತ್ತಿಲ್ಲ? ಬಿಜೆಪಿ ಆಡಳಿತವಿರುವ ರಾಜ್ಯಗಳ ಅಧಿಕಾರಿಗಳನ್ನು ಜಾಲತಾಣ ಸಂಪರ್ಕಿಸಿದಾಗ ಸಸ್ಯಾಹಾರಿ ಭಾವನೆಗಳಿಗೆ ಧಕ್ಕೆ ಉಂಟಾಗಬಹುದು ಎಂಬ ಆತಂಕದಿಂದ ಮೊಟ್ಟೆಯಿಂದ ದೂರವಿರುವ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗುಜರಾತಿನ ಬಿಸಿಯೂಟ ಯೋಜನೆ ಆಯುಕ್ತ ಆರ್ ಜಿ ತ್ರಿವೇದಿ “ಗುಜರಾತಿನಲ್ಲಿರುವವರು ಬಹುತೇಕರು ಸಸ್ಯಾಹಾರಿಗಳು. ಹೀಗಾಗಿ ಮೊಟ್ಟೆ ಬದಲಿಗೆ ಪ್ರತಿನಿತ್ಯ ಬೇಳೆಕಾಳುಗಳನ್ನು ನೀಡಲಾಗುತ್ತಿದೆ,” ಎಂದು ಹೇಳಿದ್ದಾರೆ. ಗುಜರಾತಿನ ಮಟ್ಟಿಗೆ ಸಸ್ಯಾಹಾರಿಗಳಿದ್ದಾರೆ ಎಂಬ ಮಾಹಿತಿ ನಿಜವಾದರೂ (ಶೇ 61) ಅದನ್ನು ಇಡೀ ಭಾರತಕ್ಕೆ ಅನ್ವಯಿಸಲು ಸಾಧ್ಯವಿಲ್ಲ. ಏಕೆಂದರೆ ದೇಶದ ಶೇ 71ರಷ್ಟು ಮಂದಿ ಮಾಂಸಾಹಾರಿಗಳು.

ಹಿಮಾಚಲ ಪ್ರದೇಶದಲ್ಲಿ ಕೂಡ ಸಸ್ಯಾಹಾರದ ಮಹತ್ವದ ಕುರಿತೇ ಹೆಚ್ಚು ಅಭಿಪ್ರಾಯಗಳು ವ್ಯಕ್ತವಾದವು. ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳಿಂದಾಗಿ ನಾವು ಮೊಟ್ಟೆಗಳನ್ನು ಕೊಡುವುದಿಲ್ಲ. ಇಲ್ಲಿ ಮೊಟ್ಟೆಯನ್ನು ಮಾಂಸಾಹಾರ ಎಂದು ಪರಿಗಣಿಸುವವರೇ ಹೆಚ್ಚು. ಮಕ್ಕಳಿಗೆ ಮೊಟ್ಟೆ ನೀಡಿದರೆ ಪೋಷಕರು ಸಿಟ್ಟಿಗೇಳಬಹುದು ಎಂಬ ಕಾರಣಕ್ಕೆ ಅನಗತ್ಯ ವಿವಾದ ಉಂಟಾಗಬಾರದು ಎಂಬ ಸಲುವಾಗಿ ಮೊಟ್ಟೆ ನೀಡುತ್ತಿಲ್ಲ," ಎಂದು ಅಲ್ಲಿನ ಬಿಸಿಯೂಟ ಯೋಜನಾಧಿಕಾರಿ ನರೇಶ್ ಶರ್ಮಾ ತಿಳಿಸಿದ್ದಾರೆ.

ಧಾರ್ಮಿಕ ಸಾಂಸ್ಕೃತಿಕ ಕಾರಣಗಳಿಗಿಂತಲೂ ಹೆಚ್ಚಾಗಿ ಸಂಪನ್ಮೂಲ ಕೊರತೆಯಿಂದಾಗಿ ಬಿಜೆಪಿ ರಾಜ್ಯಗಳು ಮೊಟ್ಟೆ ವಿತರಿಸುತ್ತಿಲ್ಲ ಎನ್ನುತ್ತದೆ ಜಾಲತಾಣದ ಅಧ್ಯಯನ. "ಬಿಜೆಪಿ ಅಲ್ಲದ ರಾಜ್ಯಗಳಾದ ಪಂಜಾಬ್, ದೆಹಲಿ ಮತ್ತು ಮಿಜೋರಾಂ ಕೂಡ ಮೊಟ್ಟೆಗಳನ್ನು ಒದಗಿಸುವುದಿಲ್ಲ. ಆದರೆ ಬಿಜೆಪಿ ಆಳ್ವಿಕೆಯಿರುವ ಜಾರ್ಖಂಡ್ ನಲ್ಲಿ ಈ ಸೌಲಭ್ಯ ಇದೆ," ಎಂದು ಸಿನ್ಹಾ ಹೇಳಿದ್ದಾರೆ. "ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ, ಉನ್ನತ-ಜಾತಿ ಹಿಂದೂ ಭಾವನೆಗಳನ್ನು ನೋಯಿಸುವ ಭೀತಿಯಿಂದಾಗಿ ನೀವು ಮೊಟ್ಟೆಗಳನ್ನು ಒದಗಿಸುವುದರ ಬಗ್ಗೆ ಸೊಲ್ಲೆತ್ತುವಂತಿಲ್ಲ. ಕೆಲ ವರ್ಷಗಳಿಂದ ಮೊಟ್ಟೆಗಾಗಿ ಕಾರ್ಯಕರ್ತರು ಬೇಡಿಕೆ ಇಡುತ್ತಿದ್ದರೂ ಸಾಂಸ್ಕೃತಿಕ ಕಾರಣಗಳಿಗಾಗಿ ಬಿಜೆಪಿ ರಾಜ್ಯಗಳಲ್ಲಿ ಮೊಟ್ಟೆ ನೀಡುತ್ತಿಲ್ಲ,” ಎನ್ನುತ್ತಾರೆ ಅವರು.

22 ಏಪ್ರಿಲ್ 2018 ರಂದು, ಹಳೆಯ ಚಿತ್ರಗಳನ್ನು ಟ್ವೀಟ್ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ “ಸಸ್ಯಾಹಾರವೇ ಆರೋಗ್ಯಕ್ಕೆ ಉತ್ತಮ,” ಎಂದು ಟ್ವೀಟ್ ಮಾಡಿ ವಿವಾದಕ್ಕೀಡಾಯಿತು. ಮರುದಿನ ಆ ಟ್ವೀಟ್ ಅನ್ನು ಅಳಿಸಿ ಹಾಕಲಾಯಿತು ಎನ್ನುತ್ತದೆ ಸ್ಕ್ರಾಲ್ ಜಾಲತಾಣದ ವರದಿ.

ಹಿಂದೂ ಬಲಪಂಥೀಯವಾದವನ್ನು ಅಧ್ಯಯನ ಮಾಡಿದ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ರಾಜಕೀಯ ತಜ್ಞ ಮನೀಶ್ ಚರ್ಚಾ ಅವರು ಸಾತ್ವಿಕ ಆಹಾರದ ಬಗ್ಗೆ ಚರ್ಚಿಸುತ್ತಾ, “ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಹೊರತುಪಡಿಸಿದ್ದೆಲ್ಲವೂ ಸಾತ್ವಿಕ ಆಹಾರ ಎನ್ನಲಾಗುತ್ತದೆ. ಬಿಜೆಪಿ ಸಂಘಪರಿವಾರದ ಒಂದು ಅಂಗವಾಗಿದೆ. ನಾವು ತಿನ್ನುವ ಊಟದಿಂದ ಮೊಟ್ಟೆಯನ್ನು ಹೊರಗಿಡುವುದರ ಹಿಂದೆ ದೊಡ್ಡ ಆಹಾರದ ರಾಜಕೀಯ ಇದೆ,” ಎನ್ನುತ್ತಾರೆ.

ಇಂಡಿಯಾ ಟುಡೇ ಕಳೆದ ಏಪ್ರಿಲ್ ನಲ್ಲಿ ವರದಿ ಮಾಡಿರುವಂತೆ ದೆಹಲಿಯಲ್ಲಿ, ಆಮ್ ಆದ್ಮಿ ಪಾರ್ಟಿ (ಎಎಪಿ) ಸರ್ಕಾರ ಶಾಲೆಗಳಿಗೆ ಬಿಸಿಯೂಟದ ಜೊತೆ ಬೇಯಿಸಿದ ಮೊಟ್ಟೆ ನೀಡಲು ಸಾಧ್ಯವಾಗಿಲ್ಲ.

ಅರುಣಾಚಲ ಪ್ರದೇಶ ಸರ್ಕಾರ 2018-19ನೇ ಸಾಲಿನ ಬಿಸಿಯೂಟ ಯೋಜನೆಯಡಿ ಮೊಟ್ಟೆ ಒದಗಿಸಲು ಹೆಚ್ಚಿನ ಸಂಪನ್ಮೂಲ ಅವಶ್ಯಕತೆ ಇದೆ ಎಂದು ಹೇಳಿರುವುದನ್ನು ಗಮನಿಸಿದರೆ ಸಿನ್ಹಾ ಅವರ ಮಾತು ನಿಜವೆನ್ನಿಸುತ್ತದೆ. "ಸೊಪ್ಪು, ತರಕಾರಿ ಹಾಗೂ ಹಣ್ಣುಗಳು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಬೆಲೆಯಲ್ಲಿ ಲಭಿಸುತ್ತವೆ. ಆದರೆ ಮೊಟ್ಟೆಯನ್ನು ತರುವುದು ಮತ್ತು ವಿತರಿಸುವುದು ಕಾರ್ಯಸಾಧುವಲ್ಲದ ವಿಚಾರ,” ಎಂದು ಅದು ಹೇಳಿದೆ.

ಈಶಾನ್ಯ ರಾಜ್ಯಗಳಲ್ಲಿ ಬೇರೆಯದೇ ಸಮಸ್ಯೆ ಇದೆ. “ಇಲ್ಲಿ ಕುಕ್ಕುಟೋದ್ಯಮಕ್ಕೆ ಮುಕ್ತ ಅವಕಾಶವಿದ್ದರೂ ಮೊಟ್ಟೆಗಿಂತಲೂ ಹೆಚ್ಚಾಗಿ ಕೋಳಿಗೆ ಬೇಡಿಕೆ ಇಡುವವರ ಸಂಖ್ಯೆ ಅಧಿಕ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ರಾಜ್ಯಗಳಿಗೆ ಮೊಟ್ಟೆ ವಿತರಿಸಲು ಧನಸಹಾಯ ಮಾಡಬಹುದು. ಆದರೆ ಅದು ಹಾಗೆ ಮಾಡುತ್ತಿಲ್ಲ,” ಎನ್ನುತ್ತಾರೆ ಸಿನ್ಹಾ.

ಬಿಸಿಯೂಟದ ಜೊತೆ ಮೊಟ್ಟೆ ವಿತರಿಸಲು ಹೆಚ್ಚು ಖರ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಜಿ ಕಾರ್ಯದರ್ಶಿ ಕೆ ಸುಜಾತಾ ರಾವ್. "ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮೊಟ್ಟೆಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಗ್ರಾಮೀಣ ಸಮುದಾಯಗಳು ಮುಂದಾದರೆ ಶಾಲೆ ಮತ್ತು ಅಂಗನವಾಡಿಗಳಿಗೆ ಮೊಟ್ಟೆ ಒದಗಿಸಲು ಸಹಾಯಕವಾಗುತ್ತದೆ. ಸರ್ಕಾರ ಮಾತ್ರವಲ್ಲದೇ ಸಮುದಾಯಗಳು ಹೆಚ್ಚು ತೊಡಗಿಕೊಂಡಾಗ ಮಾತ್ರ ಹಸ್ತಕ್ಷೇಪ ನಿಲ್ಲುತ್ತದೆ.” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More