ಲೇಖಕ ದಾಮೋದರ್ ಗೆ ಜೀವ ಬೆದರಿಕೆ; ಸನಾತನ ಸಂಸ್ಥೆ ನಿಷೇಧಕ್ಕೆ ಹೆಚ್ಚಿದ ಆಗ್ರಹ

ಲೇಖಕ ದಾಮೋದರ್ ಮೌಜೊ ಅವರ ಹತ್ಯೆಗೂ ಸಂಚು ರೂಪಿಸಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ‘ಸನಾತನ ಸಂಸ್ಥೆ ದೇಶಕ್ಕೆ ಕ್ಯಾನ್ಸರ್ ಇದ್ದಂತೆ. ಇದನ್ನು ನಿಷೇಧಿಸಬೇಕೆಂಬ’ ಆಗ್ರಹ ಗೋವಾದಲ್ಲಿ ಮತ್ತೊಮ್ಮೆ ಕೇಳಿಬಂದಿದೆ. ಈ ಕುರಿತ ‘ದಿ ವೈರ್’ ವರದಿಯ ಭಾವಾನುವಾದ ಇಲ್ಲಿದೆ 

ಗೋವಾದ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ಸಂವಿಧಾನಕ್ಕಿಂತ ಹೆಚ್ಚು ಅಧಿಕಾರ ಹೊಂದಿದಂತೆ ವರ್ತಿಸುತ್ತಿದ್ದು, ದೇಶಕ್ಕೆ ಇದು ಕ್ಯಾನ್ಸರ್ ಇದ್ದಂತೆ. ಇದರ ಸಮಾಜ ವಿರೋಧಿ ಚಟುವಟಿಕೆಗಳು ವಿಸ್ತರಿಸದಂತೆ ತಡೆಯಲು ತಕ್ಷಣದಿಂದಲೇ ಅದನ್ನು ನಿಷೇಧಿಸಬೇಕೆಂಬ ಆಗ್ರಹ ಪ್ರಮುಖ ಸಾಮಾಜಿಕ ಕಾರ್ಯಕರ್ತರಿಂದ ಗೋವಾದಲ್ಲಿ ಮತ್ತೊಮ್ಮೆ ಕೇಳಿಬಂದಿದೆ.

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈವರೆಗೂ ೧೧ ಆರೋಪಿಗಳು ಎಸ್ಐಟಿ ಬಂಧನದಲ್ಲಿದ್ದಾರೆ. ಇದರಲ್ಲಿ ಹೆಚ್ಚಿನವರು ಗೋವಾದ ಸನಾತನ ಸಂಸ್ಥೆಗೆ ಸೇರಿದ್ದಾರೆ ಎನ್ನಲಾಗಿದ್ದು, ತನಿಖೆ ವೇಳೆ ಬಂಧಿತರಿಂದ ಗೋವಾದ ಪ್ರಗತಿಪರ ಲೇಖಕ ದಾಮೋದರ್ ಮೌಜೊ ಅವರ ಹತ್ಯೆಗೂ ಸಂಚು ರೂಪಿಸಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ದಾಮೋದರ್ ಮೌಜೊ ಅವರಿಗೂ ಜೀವ ಬೆದರಿಕೆ ಇದೆ ಎಂಬುದನ್ನು ಗೋವಾ ಪೊಲೀಸರಿಗೆ ಎಸ್ಐಟಿ ಮಾಹಿತಿ ನೀಡಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು ಎಂಬ ಆಗ್ರಹ ಬಲಗೊಂಡಿದೆ.

ಮೌಜೊ ಅವರು ಕೊಂಕಣಿ ಭಾಷೆಯ ಕಾದಂಬರಿಕಾರ ಹಾಗೂ ಕಥೆಗಾರರಾಗಿ ಖ್ಯಾತಿ ಗಳಿಸಿದ್ದಾರೆ. ಅವರ ಸಾಕಷ್ಟು ಬರಹಗಗಳು ಇಂಗ್ಲಿಷ್ ಭಾಷಗೆ ಅನುವಾದಗೊಂಡಿವೆ. 1983 ರಲ್ಲಿ ಅವರು ತಮ್ಮ ‘ಕಾರ್ಮೆಲಿನ್’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.

ಸನಾತನ ಸಂಸ್ಥೆ ದೇಶಾದ್ಯಂತ ಪಸರಿಸಿದ್ದು, ಈವರೆಗೂ ಬಂದ ತನ್ನ ಮೇಲಿನ ಆರೋಪಗಳೆಲ್ಲವನ್ನು ತಳ್ಳಿಹಾಕಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಂಸ್ಥೆ ‘ದೇಶಾದ್ಯಂತ ಹಿಂದುತ್ವದ ಕುರಿತಾಗಿ ಧಾರ್ಮಿಕ ವಿಚಾರಗಳನ್ನು ಹಾಗೂ ಆಧ್ಯಾತ್ಮದ ವಿಚಾರಗಳನ್ನು ಪಸರಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಎಂದು ತಿಳಿಸಿದೆ.

ಮೌಜೊ ಅವರಿಗೆ ಜೀವ ಬೆದರಿಕೆ ಅಪಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಪೊಲೀಸ್ ರಕ್ಷಣೆ ಒದಗಿಸಿದೆ. ತಮಗೆ ಎದುರಾಗಿರುವ ಜೀವ ಬೆದರಿಕೆ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, “ಸನಾತನ ಸಂಸ್ಥೆ ದೇಶಕ್ಕೆ ಕ್ಯಾನ್ಸರ್ ಇದ್ದಂತೆ. ಈ ರೋಗವನ್ನು ಹರಡಲು ಬಿಡಬಾರದು,” ಎಂದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಪ್ರಶಾಂತ ನಾಯ್ಕ್‌ ಕೂಡ ಸನಾತನ ಸಂಸ್ಥೆ ನಿಷೇಧಿಸಬೇಕೆಂಬ ಆಗ್ರಹವನ್ನು ಬೆಂಬಲಿಸಿದ್ದು, “೨೦೦೯ ರಲ್ಲಿ ನಡೆದ ಮಾರ್ಗೋವಾ ಸ್ಫೋಟ ಪ್ರಕರಣದಲ್ಲಿ ಈ ಸಂಸ್ಥೆಯನ್ನು ನಿಷೇಧಿಸಲು ಅವಕಾಶ ಇತ್ತು. ಆದರೆ, ಆ ಸಂದರ್ಭದಲ್ಲಿ ಗೋವಾ ಸರ್ಕಾರ ಮುಂದಾಗಲಿಲ್ಲ. ಸನಾತನ ಸಂಸ್ಥೆ ಸಮಾಜದಲ್ಲಿ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದು, ಇದನ್ನು ನಿಷೇಧಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಮಾರ್ಗೋವಾದ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸುವ ಸಂಚಿನ ಭಾಗವಾಗಿ ಬಾಂಬ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ತನಿಖೆ ವೇಳೆ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಪೈಕಿ ಓರ್ವ ಸನಾತನ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳ ಈ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ೧೨ ಜನ ಆರೋಪಿಗಳು ಸನಾತನ ಸಂಸ್ಥೆಯವರಾಗಿದ್ದಾರೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಸ್ಥಳೀಯ ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿ ಆರೋಪಿಗಳನ್ನು ಬಿಡುಗಡೆ ಮಾಡಿತ್ತು.

ಮೌಜೊ ಅವರಿಗೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿಯೇ ಗೋವಾದ 50ಕ್ಕೂ ಹೆಚ್ಚು ಲೇಖಕರು ಮೌಜೊ ಅವರ ಬೆಂಬಲಕ್ಕೆ ನಿಂತು ಹೇಳಿಕೆಗಳನ್ನು ನೀಡಿದ್ದಾರೆ. ಮೌಜೊ ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಮಾಧ್ಯಮಗಳ ವರದಿ ತಿಳಿದು ಅವರ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಮುಂದಾಗಿರುವುದು ಒಳ್ಳೆಯದು. ಆದರೆ, ಈ ಬಗ್ಗೆ ಇಲ್ಲಿಯ ಗುಪ್ತಚರ ಇಲಾಖೆ ಮೊದಲೇ ತಿಳಿದುಕೊಂಡು ರಕ್ಷಣೆ ಕೊಡಬೇಕಿತ್ತು,” ಎಂದು ಅಭಿಪ್ರಾಯಿಸಿದ್ದಾರೆ.

ಗೋವಾ ರಾಜ್ಯ ಕಾಂಗ್ರೆಸ್ ಈ ಹಿಂದೆಯೂ ಕೂಡ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿತ್ತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋದಂಕರ್ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತ, "ಸನಾತನ ಸಂಸ್ಥೆಯಾಗಲಿ ಅಥವಾ ಸಾಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾವುದೇ ಸಂಘಟನೆಯಾಗಲಿ ಅವುಗಳನ್ನು ನಿಷೇಧಿಸಬೇಕು. ಈಗಾಗಲೇ ಇಂಥ ಸಂಘಟನೆಗಳಿಂದಲೇ ಎಂ ಎಂ ಕಲಬುರ್ಗಿ, ಗೋವಿಂದ್ ಪನ್ಸಾರೆ, ನರೇಂದ್ರ ದಾಬೋಲ್ಕರ್ ಹಾಗೂ ಗೌರಿ ಲಂಕೇಶ್ ಹತ್ಯೆಯಾಗಿದ್ದಾರೆ,” ಎಂದು ಆರೋಪಿಸಿದ್ದಾರೆ.

ಗೋವಾದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಕೊಂಕಣಿ ಭಾಷಾ ಮಂಡಲ್ (ಕೆಬಿಎಲ್) ಇದೇ ಮೊದಲ ಬಾರಿಗೆ ಸನಾತನ ಸಂಸ್ಥೆ ನಿಷೇಧಕ್ಕೆ ಬೆಂಬಲ ಸೂಚಿಸಿದೆ. ಈ ಕುರಿತು ಕೆಬಿಎಲ್ ಅಧ್ಯಕ್ಷ ಚೇತನ್ ಆಚಾರ್ಯ ಮಾತನಾಡಿ, “ಗೋವಾ ರಾಜ್ಯ ಶಾಂತಿ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಇಂಥ ರಾಜ್ಯದಲ್ಲಿ ಸಂವಿಧಾನಾತ್ಮಕ ಆಶಯಗಳ ವಿರುದ್ಧ ನಡೆದುಕೊಳ್ಳುವ ಸನಾತನ ಸಂಸ್ಥೆ ನಿಷೇಧವಾಗಬೇಕು,” ಎಂದಿದ್ದಾರೆ.

ಇದನ್ನೂ ಓದಿ : ಪತ್ರಕರ್ತೆ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಬೆರಳು ತೋರುತ್ತಿರುವುದು ಯಾರೆಡೆಗೆ?

ಸನಾತನ ಸಂಸ್ಥೆಯ ವಕ್ತಾರ ಚೇತನ್ ರಾಜಹನ್ಸ್ ಈ ಬೆಳವಣಿಗೆ ಕುರಿತು ಮಾತನಾಡಿ, “ಸನಾತನ ಸಂಸ್ಥೆ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲವೂ ಆಧಾರರಹಿತವಾಗಿವೆ. ಮೌಜೊ ಅವರ ಜೀವನಕ್ಕೆ ನಮ್ಮ ಸಂಘಟನೆಯಿಂದ ಯಾವುದೇ ಅಪಾಯವಿಲ್ಲ. ಸನಾತನ ಸಂಸ್ಥೆಯಿಂದಲೇ ಅವರಿಗೆ ಜೀವ ಬೆದರಿಕೆ ಇದೆ ಎನ್ನುವುದರ ಬಗ್ಗೆ ಏನಾದರೂ ಆಧಾರಗಳಿವೆಯೇ?,” ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದು, “ಸನಾತನ ಸಂಸ್ಥೆ ಭಾರತದಾದ್ಯಂತ ಧಾರ್ಮಿಕ ಅರಿವನ್ನು ವಿಸ್ತರಿಸಲು ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಹಿಂದೂ ಧರ್ಮ ವಿರೋಧಿ ಬರಹಗಾರರು ನಮ್ಮ ವಿರುದ್ಧದ ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಂಥವರಿಂದಾಗಿ ನಮ್ಮ ಸಂಘಟನೆಯು ಧಾರ್ಮಿಕ ಜ್ಞಾನ ಪ್ರಸರಣದಲ್ಲಿ ತೊಡಗಲು ತಡೆ ಉಂಟಾಗುತ್ತಿದೆ. ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್ ಮತ್ತು ಗೌರಿ ಹತ್ಯೆಗಳಿಗೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ,” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More