ವಿರೋಧಕ್ಕೆ ಕಿಮ್ಮತ್ತಿಲ್ಲ, ವಿಧಾನಸೌಧದಲ್ಲಿ ಕಚೇರಿ ನವೀಕರಣ ನಿಲ್ಲಲಿಲ್ಲ

ವಿಧಾನಸೌಧದಲ್ಲಿ ಸಚಿವರಿಗೆ ನೀಡಲಾಗುವ ಕಚೇರಿಗಳ ನವೀಕರಣ ಹಾಗೂ ಪೀಠೋಪಕರಣಗಳ ಬದಲಾವಣೆ ೨೦೦೦ದಿಂದ ಈಚೆಗೆ ಹೆಚ್ಚಾಗಿದೆ. ವಿಧಾನಸಭಾ ಅದ್ಯಕ್ಷ, ಪರಿಷತ್‌ ಸಭಾಪತಿ ಸೇರಿದಂತೆ ನಾಲ್ಕು ಮಂದಿ ಇದುವರೆಗೆ ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾದ ಕಚೇರಿ ನವೀಕರಣ ಮಾಡಿಸಿದ್ದಾರೆ

ವಿಧಾನಸೌಧದಲ್ಲಿ ನೂತನ ಸಚಿವರು ತಮಗೆ ಹಂಚಿಕೆಯಾದ ಕೊಠಡಿಗಳನ್ನು ವಾಸ್ತುವಿಗೆ ಅನುಗುಣವಾಗಿ, ಕೊಠಡಿಯ ಸೌಂದರ್ಯ ವೃದ್ಧಿ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಬದಲಾವಣೆ ಮಾಡುವ ಪ್ರಕ್ರಿಯೆ ೨೦೦೦ದಿಂದೀಚೆಗೆ ಹೆಚ್ಚಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಯಾವುದೇ ಸಚಿವರು ಅಥವಾ ಸರ್ಕಾರದ ಸವಲತ್ತು ಪಡೆಯುತ್ತಿರುವ ರಾಜಕಾರಣಿಗಳು ಇದಕ್ಕೆ ಕಿವಿಗೊಡುತ್ತಿಲ್ಲ.

ಹಾಗೆ ನೋಡಿದರೆ, ೨೦೦೪-೧೪ರ ಅವಧಿಯಲ್ಲಿ ವಿಧಾನಸೌಧದಲ್ಲಿ ಸಚಿವರಿಗೆ ಹಂಚಿಕೆ ಮಾಡಲಾದ ಕೊಠಡಿಗಳ ನವೀಕರಣ ಹಾಗೂ ಅಲ್ಲಿಗೆ ಪೀಠೋಪಕರಣ ಹಾಕುವುದಕ್ಕಾಗಿ ಬಳಕೆ ಮಾಡಿದ ಹಣಕ್ಕೂ ೧೯೫೨-೫೬ರ ಆಸುಪಾಸಿನಲ್ಲಿ ವಿಧಾನಸೌಧ ನಿರ್ಮಾಣಕ್ಕೆ ಖರ್ಚಾದ ಮೊತ್ತದತ್ತ ಕಣ್ಣೊರಳಿಸಿದರೆ ರಾಜಕಾರಣಿಗಳ ವೈಭವೋಪೇತ ನಡೆಗಳು ಅರ್ಥವಾಗುತ್ತದೆ. ೧೯೫೦ರ ದಶಕದಲ್ಲಿ ವಿಧಾನಸೌಧ ನಿರ್ಮಾಣಕ್ಕೆ ೧.೮೪ ಕೋಟಿ ರುಪಾಯಿ ವೆಚ್ಚವಾಗಿತ್ತು. ಆದರೆ, ೨೦೦೪-೨೦೧೪ರ ಅವಧಿಯಲ್ಲಿ ವಿಧಾನಸೌಧದಲ್ಲಿನ ಕಚೇರಿಗಳ ನವೀಕರಣ ಹಾಗೂ ಪೀಠೋಪಕರಣ ಅಳವಡಿಸಲು ಲೋಕೋಪಯೋಗಿ ಇಲಾಖೆಯು ಬರೋಬ್ಬರಿ ೩೮.೫೪ ಕೋಟಿ ರುಪಾಯಿ ವೆಚ್ಚ ಮಾಡಿದೆ. ಇನ್ನು ೨೦೧೪-೨೦೧೮ರವರೆಗೆ ಸಾಕಷ್ಟು ಹಣವನ್ನು ಕಚೇರಿ ನವೀಕರಣ ಹಾಗೂ ಪೀಠೋಪಕರಣ ಬದಲಾವಣೆಗೆ ವಿನಿಯೋಗಿಸಲಾಗಿದ್ದು, ಇದಕ್ಕೆ ವ್ಯಯವಾದ ಮೊತ್ತ ಇನ್ನಷ್ಟೇ ಲಭ್ಯವಾಗಬೇಕಿದೆ.

ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾದ ಕೊಠಡಿಗಳ ನವೀಕರಣ ಕಾರ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು ಮುಂದಿದ್ದಾರೆ. ವಿಧಾನ ಪರಿಷತ್‌ ಸಭಾಪತಿಯಾಗಿದ್ದ ಬಿಜೆಪಿ ನಾಯಕ ಡಿ ಎಚ್‌ ಶಂಕರಮೂರ್ತಿ ಅವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಯನ್ನು ನವೀಕರಣಗೊಳಿಸಿದ್ದರು. ಚಿಂತಕರ ಚಾವಡಿ ಎಂದೇ ಕರೆಯಲಾಗುವ ಪರಿಷತ್‌ನ ನೇತೃತ್ವ ವಹಿಸಿದವರೇ ಹೀಗೆ ಮಾಡಿದರೆ ಹೇಗೆ ಎಂದು ಟೀಕೆ ವ್ಯಕ್ತವಾಗಿತ್ತು. ಆದರೆ, ಶಂಕರಮೂರ್ತಿ ಅವರು ಇದಕ್ಕೆ ಮಣೆ ಹಾಕಿರಲಿಲ್ಲ. ಇನ್ನು ೨೦೧೨-೧೩ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಅವರು ಅಂದಿನ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದರು. ಮುನೇನಕೊಪ್ಪ ವಿಧಾನಸೌಧದಲ್ಲಿ ತಮಗೆ ನೀಡಲಾಗಿದ್ದ ಕಚೇರಿಯ ನವೀಕರಣಕ್ಕೆ ಮುಂದಾಗಿ ವಿವಾದ ಸೃಷ್ಟಿಸಿದ್ದರು. ಟೀಕೆಗೆ ತಲೆಕೊಡಿಸಿಕೊಳ್ಳದ ಮುನೇನಕೊಪ್ಪ ಕಚೇರಿ ನವೀಕರಣ ಪೂರ್ಣಗೊಳಿಸಿದ್ದರು.

ಇದನ್ನೂ ಓದಿ : ದಿ ಸ್ಟೇಟ್‌ ಅಭಿಯಾನ | ವಿಧಾನಸೌಧವನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ

೨೦೧೪ರ ಜನವರಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್‌ ಆಂಜನೇಯ ಅವರು ೧೮ ಲಕ್ಷ ರುಪಾಯಿ ವೆಚ್ಚದಲ್ಲಿ ತಮ್ಮ ಕಚೇರಿಯನ್ನು ನವೀಕರಣ ಮಾಡಿಸಿಕೊಂಡಿದ್ದರು. ವಿಧಾನಸೌಧದ ಮೂರನೇ ಮಹಡಿಯ ೩೪೦ ಮತ್ತು ೩೪೧ನೇ ಕೊಠಡಿಯ ನಡುವೆ ಇದ್ದ ಗೋಡೆಯನ್ನು ಕೆಡವಿ ಒಂದೇ ಕೊಠಡಿಯಾಗಿ ರೂಪಿಸಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದರೂ ಆಂಜನೇಯ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಕಚೇರಿ ಕಿರಿದಾಗಿದೆ ಎಂದು ಅದನ್ನು ವಿಸ್ತರಿಸಲಾಗಿತ್ತು. ಇದೆಲ್ಲಕ್ಕಿಂತಲೂ ಹೆಚ್ಚಿನ ವಿವಾದ ಸೃಷ್ಟಿಸಿದ್ದು ಹಿಂದಿನ ಸರ್ಕಾರದಲ್ಲಿ ವಿಧಾನ ಸಭಾಧ್ಯಕ್ಷರಾಗಿದ್ದ ಕೆ ಬಿ ಕೋಳಿವಾಡ ಅವರು ತಮ್ಮ ಕಚೇರಿಯನ್ನು ೩೫ ಲಕ್ಷ ರುಪಾಯಿ ವೆಚ್ಚದಲ್ಲಿ ನವೀಕರಣ ಮಾಡಲು ಮುಂದಾಗಿದ್ದ ನಿರ್ಣಯ. ವಿಧಾನಸೌಧದ ಮೊದಲ ಮಹಡಿಯಲ್ಲಿನ ೧೨೫ ಮತ್ತು ೧೨೫ಎ ಕೊಠಡಿಗಳ ನಡುವಿನ ಗೋಡೆಯನ್ನು ತೆರವುಗೊಳಿಸಿ ಕೋಳಿವಾಡ ಅವರು ಒಂದೇ ಕಚೇರಿಯನ್ನಾಗಿ ರೂಪಿಸಿದ್ದರು. ಅಲ್ಲಿ ಗೋಡೆಗಳಿಗೆ ವುಡ್‌ ವರ್ಕ್‌, ಟೈಲ್ಸ್, ಎಲ್‌ಇಡಿ ದೀಪಗಳ ಅಳವಡಿಕೆ, ಹೊಸ ಸೋಫಾ-ಖುರ್ಚಿಗಳನ್ನು ಹಾಕಲಾಗಿತ್ತು. ಕಚೇರಿಯಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷವೆಂದರೆ ವಿಧಾನಸೌಧದಲ್ಲಿ ನಡೆಯುವ ನವೀಕರಣದ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ಮೇಲಿದೆ. ಆದರೆ, ಇದನ್ನು ಮೀರಿ ನವೀಕರಣ ಜವಾಬ್ದಾರಿಯನ್ನು ಕೋಳಿವಾಡ ಅವರು ಖಾಸಗಿ ಸಂಸ್ಥೆಗೆ ನೀಡಿದ್ದರಲ್ಲದೇ ಅದರ ಸಮರ್ಥನೆಗೆ ನಿಲ್ಲುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು.

ವಿಧಾನಸೌಧದಲ್ಲಿ ಕಚೇರಿಗಳ ನವೀಕರಣ ಮಾಡುವುದು, ಗೋಡೆ ಕೆಡವುದನ್ನು ತಡೆಯಬೇಕು ಎಂದು ೨೦೧೦ರಲ್ಲಿ ಅಂದಿನ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಂ ಸಿ ನಾಣಯ್ಯ ಅವರು ಖಾಸಗಿ ಕಾಯ್ದೆ ಮಂಡಿಸಲು ಸಿದ್ಧತೆ ನಡೆಸಿದ್ದರು. “ರಾಜ್ಯ ಸರ್ಕಾರ ಈ ಸಂಬಂಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರಿಂದ ಹಿಂದೆ ಸರಿದಿದ್ದೆ. ಆದರೆ, ಇದುವರೆಗೂ ಯಾವುದೇ ಬೆಳವಣಿಗೆಯಾಗಿಲ್ಲ. ದೇಶದಲ್ಲಿ ವಿಶಿಷ್ಟ ವಿನ್ಯಾಸ ಹೊಂದಿರುವ ವಿಧಾನಸೌಧವನ್ನು ಸರ್ಕಾರ ಪಾರಂಪರಿಕ ಕಟ್ಟಡವನ್ನಾಗಿ ಘೋಷಿಸಿ, ಅದನ್ನು ಸಂರಕ್ಷಿಸಬೇಕು” ಎಂದು ಕಾಂಗ್ರೆಸ್‌ ಮುಖಂಡ ನಾಣಯ್ಯ ಆಗ್ರಹಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More