ರೆಪೊದರ ಏರಿಸಿದ ಆರ್‌ಬಿಐ; ಸಾಲಗಳ ಮೇಲೆ ಹೆಚ್ಚು ಇಎಂಐ ಪಾವತಿಸಲು ಸಿದ್ದರಾಗಿ

ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆಯೇ ರೆಪೊ ದರ ಏರಿಕೆ ಮಾಡಿದೆ. ಇದು ಸತತ ಎರಡನೇ ಏರಿಕೆ. ರೆಪೊದರ ಈಗ ಶೇ.6.50ಕ್ಕೆ ಏರಿದೆ. ಏರಿಕೆ ಪರಣಾಮ ಗ್ರಾಹಕರು ತಮ್ಮೆಲ್ಲ ಸಾಲಗಳ ಮೇಲಿನ ಇಎಂಐ ಹೆಚ್ಚು ಪಾವತಿಸಬೇಕಾಗುತ್ತದೆ. ಬರುವ ದಿನಗಳಲ್ಲಿ ಸಾಲವೂ ದುಬಾರಿ ಆಗಲಿದೆ!

ಭಾರತೀಯ ರಿಸರ್ವ್ ಬ್ಯಾಂಕ್ ( ಆರ್‌ಬಿಐ ) ರೆಪೊದರವನ್ನು ಶೇ.0.25ರಷ್ಟು ಏರಿಸಿದೆ. ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಂತರ ರೆಪೊದರ ಏರಿಸುವ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಪ್ರಕಟಿಸಿದರು. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಯಾಗಲಿದೆ. ರೆಪೊ ದರ ಈಗ ಶೇ.6.50ಕ್ಕೆ ಏರಿದೆ. ಜೂನ್ ತಿಂಗಳಲ್ಲಿ ನಡೆದ ಹಣಕಾಸು ನೀತಿ ಪರಾಮರ್ಶೆ ವೇಳೆಯೂ ಶೇ.0.25ರಷ್ಟು ಹೆಚ್ಚಿಸಲಾಗಿತ್ತು. ಅದಕ್ಕೂ ಮುನ್ನ ಶೇ.6ರಷ್ಟಿತ್ತು.

ರೆಪೊ ದರದ ಜತೆಗೆ ರಿವರ್ಸ್ ರೆಪೊದರವನ್ನುಏರಿಸಲಾಗಿದೆ. ಶೇ.6ರಷ್ಟಿದ್ದ ರಿವರ್ಸ್ ರೆಪೊದರ ಶೇ.6.25ಕ್ಕೆ ಏರಿದೆ. ತ್ವರಿತ ನಗದು ಸೌಲಭ್ಯ ದರ (ಎಲ್ಎಎಫ್) ಮತ್ತು ಬ್ಯಾಂಕ್ ದರವನ್ನು ಏರಿಸಲಾಗಿದೆ. ಎಲ್ಎಎಫ್ ದರ ಶೇ.6.50ರಿಂದ ಶೇ.6.75ಕ್ಕೆ ಏರಿಸಲಾಗಿದೆ. ಬ್ಯಾಂಕ್ ದರವೂ ಶೇ.6.50 ರಿಂದ ಶೇ.6.75ಕ್ಕೆ ಏರಿದೆ.

ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರವನ್ನು ರೆಪೊ ದರ ಎನ್ನುತ್ತಾರೆ. ಬ್ಯಾಂಕುಗಳು ಆರ್‌ಬಿಐ ನಲ್ಲಿ ಇಡುವ ಹಣಕ್ಕೆ ನೀಡುವ ಬಡ್ಡಿದರವೇ ರಿವರ್ಸ್ ರೆಪೊದರ. ಬ್ಯಾಂಕುಗಳಿಗೆ ತುರ್ತಾಗಿ ಬೇಕಾದ ನಗದನ್ನು ಆರ್‌ಬಿಐ ಒದಗಿಸುತ್ತದೆ. ಇದನ್ನು ತ್ವರಿತ ನಗದು ಸೌಲಭ್ಯ (ಲಿಕ್ವಿಡಿಟಿ ಅಡ್ಜಸ್ಟ್ಮೆಂಟ್ ಫೆಸಿಲಿಟಿ) ಎನ್ನುತ್ತಾರೆ. ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಬ್ಯಾಂಕ್ ರೇಟ್ ಎನ್ನಲಾಗುತ್ತದೆ.

ಬಡ್ಡಿದರ ಏರಿಕೆಗೆ ಹಣದುಬ್ಬರ ಏರಿಕೆಯಾಗುತ್ತಿರುವುದು ಪ್ರಮುಖ ಕಾರಣ. ಜೂನ್ ತಿಂಗಳ ಹಣದುಬ್ಬರವು ಕಳೆದ ಐದು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿ ಶೇ.5ರ ಗಡಿದಾಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರುತ್ತಿರುವುದು, ಅದು ದೇಶಿಯ ಮಾರುಕಟ್ಟೆಯಲ್ಲೂ ಪ್ರತಿಫಲಿಸುತ್ತಿರುವುದು ಹಣದುಬ್ಬರ ಏರಿಕೆಗೆ ಕಾರಣವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಶೇ.4ರಷ್ಟು (-2 ಅಥವಾ +2) ಹಣದುಬ್ಬರ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದೆ. ಹಣದುಬ್ಬರ ಶೇ.4ರ ಗಡಿ ಮೀರಿದಾಗ ಹೆಚ್ಚಿನ ಪರಿಣಾಮವಾಗದು. ಆದರೆ, ಶೇ.5ರ ಗಡಿ ದಾಟಿದರೆ ಅದರ ತೀವ್ರ ಪರಿಣಾಮ ಆರ್ಥಿಕತೆ ಮೇಲಾಗುತ್ತದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮೂಲಕ ಹಣದುಬ್ಬರ ನಿಯಂತ್ರಿಸುತ್ತದೆ. ಬಡ್ಡಿದರ ಏರಿಕೆಯಾದರೆ ಸಾಲ ಪಡೆಯುವ ಪ್ರಮಾಣ ತಗ್ಗುತ್ತದೆ. ಇದು ನಗದು ಹರಿವಿನ ಮೇಲೆ ನಿಯಂತ್ರಣ ಹಾಕಿದಂತಾಗುತ್ತದೆ. ಆಗ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ.

ಆದರೆ, ಬಡ್ಡಿದರ ಏರಿಕೆ ಮಾಡುವುದು ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಪೂರಕವಲ್ಲ. ಬಡ್ಡಿದರ ಹೆಚ್ಚಳವು ಆರ್ಥಿಕ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗುತ್ತದೆ. ಹೀಗಾಗಿ ಬಡ್ಡಿದರ ಏರಿಕೆಯು ತಾತ್ಕಾಲಿಕವಾಗಿರುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಅಕ್ಟೋಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಬಡ್ಡಿದರ ತಗ್ಗಿಸುವ ಮುಕ್ತ ಅಧಿಕಾರ ಆರ್‌ಬಿಐಗೆ ಇರುತ್ತದೆ.

ಶೇ.85ರಷ್ಟು ಆಮದು ಕಚ್ಚಾ ತೈಲ ಅವಲಂಬಿಸಿರುವ ಭಾರತಕ್ಕೆ ಕಚ್ಚಾ ತೈಲ ಬೆಲೆಯು ನಿರ್ಣಾಯಕವಾಗಿರುತ್ತದೆ. ಕಳೆದ ನಾಲ್ಕು ವರ್ಷಗಳ ಕಾಲ 50 ಡಾಲರ್ ಮಟ್ಟದಲ್ಲಿದ್ದ ಕಚ್ಚಾ ತೈಲ 2018ಜನವರಿಯಿಂದೀಚೆಗೆ ಏರುಹಾದಿಯಲ್ಲಿದೆ. ಜೂನ್ ತಿಂಗಳಲ್ಲಿ 80 ಗಡಿ ಮುಟ್ಟಿದೆ. ಈಗ 75-76 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಕಚ್ಚಾ ತೈಲ ದರ ಏರಿಕೆಯು ಡಾಲರ್ ಮೌಲ್ಯ ಹೆಚ್ಚಳಕ್ಕೂ ಕಾರಣವಾಗುತ್ತದೆ. ಇದರಿಂದಾಗಿ ರುಪಾಯಿ ಮೌಲ್ಯ ಕುಸಿಯುತ್ತದೆ. ಇದು ಕಚ್ಚಾ ತೈಲದ ಆಮದ್ ಬಿಲ್ ಹಿಗ್ಗಲು ಕಾರಣವಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲ್, ಡಿಸೇಲ್ ದರ ಏರುವುದರಿಂದ ಸಹಜವಾಗಿಯೇ ಹಣದುಬ್ಬರ ಏರುತ್ತದೆ. ವಿತ್ತೀಯ ಕೊರತೆ ಹೆಚ್ಚುತ್ತದೆ, ಚಾಲ್ತಿ ಖಾತೆ ಕೊರತೆಯು ಹಿಗ್ಗುತ್ತದೆ. ರಫ್ತು ವ್ಯಾಪಾರ ಕೊರತೆಯೂ ಹೆಚ್ಚಿ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಸೇರಿದಂತೆ ಐದು ಮಂದಿ ಬಡ್ಡಿದರ ಏರಿಸುವ ಪರವಾಗಿ, ಒಬ್ಬ ಸದಸ್ಯ ಬಡ್ಡಿದರ ಏರಿಸುವುದರ ವಿರುದ್ಧ ಮತ ಚಲಾಯಿಸಿದರು. ಬಹುಮತದೊಂದಿಗೆ ಬಡ್ಡಿದರ ಏರಿಸುವ ನಿರ್ಧಾರ ಪ್ರಕಟಿಸಲಾಯಿತು.

ಜುಲೈ- ಅಕ್ಟೋಬರ್ ಅವಧಿಯಲ್ಲಿ ಹಣದುಬ್ಬರವು ಶೇ.4.2 ರಷ್ಟು, ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಶೇ.4.8ರಷ್ಟಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಕಾರ್ಪೊರೆಟ್ ಆದಾಯ ಹೆಚ್ಚಿರುವುದು, ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿರುವುದು, ರಫ್ತು ಸುಧಾರಿಸಿರುವುದು ಮತ್ತಿತರ ಧನಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಜಿಡಿಪಿ ಅಭಿವೃದ್ಧಿ ಶೇ.7.5-7.6ರಷ್ಟಾಗಲಿದೆ ಎಂದು ಅಂದಾಜಿಸಿದೆ.

2013 ಅಕ್ಟೋಬರ್ ನಲ್ಲಿ ಆರ್‌ಬಿಐ ರೆಪೊದರ ಏರಿಸಿತ್ತು. ಅದಾದ ನಂತರ 2018ರ ಜೂನ್ ತಿಂಗಳಲ್ಲಿ ರೆಪೊದರ ಏರಿಸಿದೆ. ಈಗಿನ ಏರಿಕೆಯು ಸತತ ಎರಡನೇ ಏರಿಕೆಯಾಗಿದೆ.

ಇದನ್ನೂ ಓದಿ : ಆರ್‌ಬಿಐ ರೆಪೊ ದರ ಏರಿಸಿದರೆ ನಿಮ್ಮ ಜೇಬಿಗೆ ಹೆಚ್ಚಿನ ಭಾರ ಬೀಳುವುದು ನಿಶ್ಚಿತ

ರೆಪೊದರ ಏರಿಕೆ ಪರಿಣಾಮಗಳೇನು?

ರೆಪೊದರ ಏರಿಕೆಯಿಂದ ಬ್ಯಾಂಕುಗಳು ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲಿವೆ.

ಹೆಚ್ಚಿನ ಪರಿಣಾಮ ಬೀರುವುದು ಗೃಹ ಸಾಲದ ಮೇಲೆ. ಸಮಾನ ಮಾಸಿಕ ಕಂತು (ಇಎಂಐ) ಹೆಚ್ಚಾಗಲಿದೆ. ಇಲ್ಲವೇ ಸಾಲದ ಅವಧಿ ಹೆಚ್ಚಾಗಲಿದೆ.

ವಾಹನಗಳ ಸಾಲದ ಮೇಲಿನ ಬಡ್ಡಿದರವೂ ಹೆಚ್ಚಾಗಲಿದೆ. ಹೀಗಾಗಿ ಹೆಚ್ಚಿನ ಇಎಂಐ ಪಾವತಿ ಮಾಡಬೇಕಾಗುತ್ತದೆ. ವಾಹನ ಸಾಲಗಳಿಗೆ ಅವಧಿ ವಿಸ್ತರಿಸಿಕೊಳ್ಳುವ ಅವಕಾಶ ಕಡಮೆ.

ವೈಯಕ್ತಿಕ ಸಾಲ, ಗೃಹೋಪಯೋಗಿ ವಸ್ತುಗಳ ಮೇಲಿನ ಸಾಲದ ಬಡ್ಡಿದರವೂ ಹೆಚ್ಚಳವಾಗುತ್ತದೆ.

ಹೊಸದಾಗಿ ಪಡೆಯುವ ಸಾಲಕ್ಕೆ ಹೆಚ್ಚಿನ ಬಡ್ಡಿದರ ಪಾವತಿ ಮಾಡಬೇಕಾಗುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More