ದಾಂಡೇಲಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಅಜಿತ್ ನಾಯ್ಕ್ ಬರ್ಬರ ಹತ್ಯೆ

ವೃತ್ತಿಯಲ್ಲಿ ವಕೀಲರಾಗಿದ್ದ ಅಜಿತ್ ನಾಯ್ಕ್ ಸಮಾಜ ಸೇವೆಯ ಮುಖೇನ ದಾಂಡೇಲಿಗರ ಪ್ರೀತಿಗೆ ಪಾತ್ರರಾದವರು. ಆದರೆ ಕಳೆದ ಶುಕ್ರವಾರ ರಾತ್ರಿ ದಾಂಡೇಲಿಯ ಸಂಡೆ ಮಾರ್ಕೆಟ್ಎದುರು ಅವರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ

ಉತ್ತರಕನ್ನಡ ಜಿಲ್ಲೆಗೂ ಇತ್ತೀಚೆಗೆ ಕದಡಿದ ಕರಾವಳಿಯ ಕರಾಳ ಛಾಯೆ ನಿಧಾನವಾಗಿ ವ್ಯಾಪಿಸುತ್ತಿದೆ. ಗಡಿಯಂಚಿನ ದಟ್ಟಡವಿಯ ಮಧ್ಯೆ ಪ್ರವಾಸೋದ್ಯಮ ಅಭಿವೃದ್ಧಿಗೆಂದೇ ಕಾಯುತ್ತಿರುವ ಪುಟ್ಟ ಪ್ರದೇಶ ದಾಂಡೇಲಿ. ಇಂಥ ನಗರದಲ್ಲಿ ಶುಕ್ರವಾರ ಬೆಚ್ಚಿಬೀಳಿಸುವ ಘಟನೆ ನಡೆಯಿತು.

ಸಮಾಜ ಸೇವೆಯ ಮುಖೇನ ದಾಂಡೇಲಿಗರ ಪ್ರೀತಿಗೆ ಪಾತ್ರರಾದ ವೃತ್ತಿಯಲ್ಲಿ ವಕೀಲರಾಗಿದ್ದ ಅಜಿತ್ ನಾಯ್ಕ್ ಅವರನ್ನು ಸಂಡೆ ಮಾರ್ಕೆಟ್ಎದುರು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಿಂಬದಿಯಿಂದ ಬಂದ ಹಂತಕರು ಅಜಿತ್ ನಾಯ್ಕ್ ಅವರನ್ನು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ದಾಂಡೇಲಿ ತಾಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷರಾಗಿ ಬರೋಬ್ಬರಿ ೧೨ ವರ್ಷಗಳ ಕಾಲ ದಾಂಡೇಲಿಯನ್ನು ತಾಲೂಕೆಂದು ಘೋಷಣೆ ಮಾಡಬೇಕೆಂದು ಸಾವಿರಾರು ಜನ ಸಂಘಟನೆಯೊಂದಿಗೆ, ನೂರಾರು ಪ್ರತಿಭಟನೆ, ಹೋರಾಟ, ಉಪವಾಸ ಸತ್ಯಾಗ್ರಹದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡು ರಾಜ್ಯದ ಗಮನ ಸೆಳೆದವರು ಅಜಿತ್ ನಾಯ್ಕ್‌.

ವಕೀಲ ಅಜಿತ್ ನಾಯ್ಕ್ ಅವರ ನಿರಂತರ ಹೋರಾಟದ ಧ್ವನಿಗೆ ಎಚ್ಚೆತ್ತ ರಾಜ್ಯ ಸರ್ಕಾರ ದಾಂಡೇಲಿಯನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಿ ಎರಡು ವರ್ಷಗಳು ಕಳೆದಿವೆ. ದಾಂಡೇಲಿ ತಾಲೂಕಾಗಿ ಘೋಷಣೆಯಾದಾಗ ಅಜಿತ್ ನಾಯ್ಕ್‌ ಅವರನ್ನು ಪ್ರಶಂಸಿಸಿ ಸಂಭ್ರಮಾಚರಣೆ ನಡೆದಿತ್ತು. ಅಜಿತ್ ಅವರಿಗೆ ಸನ್ಮಾನ ಸಂದಿದ್ದವು. ದಾಂಡೇಲಿಯ ಬಾರ್ ಅಸೋಶಿಯೇಶನ್ ಅಧ್ಯಕ್ಷರಾಗಿಯೂ ಅಜಿತ್ ಬಹಳಷ್ಟು ಕೆಲಸ ಮಾಡಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸಿದ ಗರಿಮೆಯೂ ಅವರಿಗಿದೆ.

ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಆರು ತಾಲೂಕುಗಳ ಹಾಗೂ ಘಟ್ಟದ ಕೆಳಗಿನ ಕರಾವಳಿಯಂಚಿನ ಆರು ತಾಲೂಕುಗಳಲ್ಲಿ ಸ್ಥಳಿಯ ವಕೀಲರ ಸಂಘವು ಅಜಿತ್ ನಾಯ್ಕ್ ಹತ್ಯೆ ವಿರೋಧಿಸಿ ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ಸರ್ಕಾರಕ್ಕೆ ಸ್ಥಳೀಯ ಸಹಾಯಕ ಆಯುಕ್ತರ ಹಾಗೂ ತಹಶಿಲ್ದಾರ ಮೂಲಕ ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯಗಳಿಂದ ಆಯುಕ್ತರ ಕಚೇರಿಯವರೆಗೆ ಮೌನ ಪ್ರತಿಭಟನೆಯ ಮೂಲಕ ಕಾಲ್ನಡಿಗೆಯಲ್ಲಿ ಸಾಗಿ ಪ್ರತಿಭಟನೆ ನಡೆಸಿರುವ ವಕೀಲರು ಕೊಲೆಗಾರರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇಂತಹ ವಿಕೃತ ದ್ವೇಷ ಭಾವನೆ ಉಳ್ಳವರನ್ನು ಕಾನೂನು ಶಿಕ್ಷೆಗೆ ಗುರಿಪಡಿಸಿ ಸಮಾಜದಲ್ಲಿ ಶಾಂತಿ ಕಾಪಾಡಬೇಕೆನ್ನುವುದು ವಕೀಲರ ಮನವಿ.

ಇದನ್ನೂ ಓದಿ : ಹುಸೈನಬ್ಬ ಪ್ರಕರಣ ಕೊಲೆ ಎಂದು ದೃಢಪಡಿಸಿದ ಪೋಸ್ಟ್ ಮಾರ್ಟಂ ವರದಿ!

ಅಜಿತ್ ನಾಯ್ಕ್ ಅವರ ಬರ್ಬರ ಕೊಲೆಯ ಬಗ್ಗೆ ಜಿಲ್ಲೆಯಲ್ಲಿ ನೂರಾರು ಕಾರಣಗಳು ಚರ್ಚೆಯಾಗುತ್ತಿವೆ. ದಾಂಡೇಲಿ ಅಭಿವೃದ್ಧಿ ವಿಚಾರದಲ್ಲಿ ಹೋರಾಟಗಾರರು, ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಅಜಿತ್ ನಾಯ್ಕ್ ಅವರು ಖಾಸಗಿ ವೈಷಮ್ಯಕ್ಕೆ ಬಲಿಯಾಗಿದ್ದಾರೆ ಎನ್ನುವ ಒಂದು ಊಹೆಯನ್ನೂ ಹರಿಯಬಿಡಲಾಗುತ್ತಿದೆ. ಕೆಲವರು ಇದು ವೃತ್ತಿಪರವಾದ ದ್ವೇಷದ ಕೊಲೆ ಎಂದೂ ಹೇಳುತ್ತಿದ್ದಾರೆ.

ಜಿಲ್ಲೆಯನ್ನು ತಲ್ಲಣಗೊಳಿಸಿದ್ದ ಅಜಿತ್ ನಾಯ್ಕ್ ಹತ್ಯೆಯ ತನಿಖೆ ಮತ್ತು ವಿಚಾರಣೆಗೆ ೫ ಪೋಲಿಸ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಒಬ್ಬ ಶಂಕಿತ ವ್ಯಕ್ತಿಯನ್ನುಬಂಧಿಸಿ ವಿಚಾರಣೆ ನಡೆಸಿದೆ. ಆದರೆ ಶಂಕಿತನ ಹೆಸರನ್ನು ಪೊಲೀಸ್ ಇನ್ನೂ ಬಿಡುಗಡೆಯಾಗಿಲ್ಲ. ಶಿರಸಿಯ ಎಸ್ ಪಿ ನಾಗೇಶ ಡಿ ಎಲ್ ನೇತೃತ್ವದಲ್ಲಿ ತಂಡಗಳು ರಚನೆಯಾಗಿವೆ. ಶಂಕಿತರ ಪಟ್ಟಿಯನ್ನೂ ತಯಾರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆದರೆ ಪ್ರಕರಣದ ತನಿಖೆಯ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಅಧಿಕೃತವಾಗಿ ಕೊಲೆಯ ಬಗ್ಗೆ ಪೊಲೀಸರು ಯಾವುದೇ ಮಾಧ್ಯಮ ಹೇಳಿಕೆಯನ್ನು ಈವರೆಗೆ ನೀಡಿಲ್ಲ.

ಜಿಲ್ಲೆಯ ಕೊಲೆಗಳ ಇತಿಹಾಸ

೧೯೯೬ರ ಏಪ್ರಿಲ್ ತಿಂಗಳಲ್ಲಿ ಭಟ್ಕಳ ತಾಲೂಕಿನ ಬಿಜೆಪಿ ಶಾಸಕ ಡಾ ಚಿತ್ತರಂಜನ್ ಕೊಲೆ, ೨೦೦೦ರಲ್ಲಿ ಕಾರವಾರದ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಕೊಲೆ, ದಿಲೀಪ್ ನಾಯ್ಕ್ ಕೊಲೆ, ೨೦೧೪ರಲ್ಲಿ ಬಿಜೆಪಿಯ ಅಂಕೋಲಾದ ಆರ್ ಎನ್ ನಾಯ್ಕ್, ಭಟ್ಕಳದ ತಿಮ್ಮಪ್ಪ ನಾಯ್ಕ್ ಕೊಲೆಗಳಾಗಿದ್ದವು. ಈಗ ಜನಮುಖಿ ವ್ಯಕ್ತಿತ್ವದ ನಾಯ್ಕ್‌ ಅವರ ಹತ್ಯೆ ಜನರಲ್ಲಿ ಆತಂಕ, ಭೀತಿ ಹುಟ್ಟಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More