ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ   

ಎಸ್‌ಸಿ/ಎಸ್‌ಟಿ ಮುಂಬಡ್ತಿ ವಿಷಯವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಲು ನಿರ್ಧಾರ

ಪರಿಶಿಷ್ಟ ಜಾತಿ ಹಾಗೂ ವರ್ಗದ ಸಿಬ್ಬಂದಿ ಬಡ್ತಿ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಅಧಿಕಾರಿಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ಎಸ್‌ಸಿ/ಎಸ್‌ಟಿ ಅಧಿಕಾರಿಗಳ ಬಡ್ತಿ ಸಂಬಂಧ ರಾಜ್ಯ ಸರ್ಕಾರದ ಕಾಯ್ದೆಗೆ ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ-ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಬಲ ಹೋರಾಟ ಸಂಘಟಿಸಿಲು ವಿರೋಧ ಪಕ್ಷಗಳು ಮುಂದಾಗಿವೆ. ಇದರ ಭಾಗವಾಗಿ ನವದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದಕ್ಕೂ ಮುನ್ನ ಮಮತಾ ಅವರು ಬಿಜೆಪಿ ನೇತಾರ ಎಲ್ ಕೆ ಅಡ್ವಾಣಿ ಅವರ ಆರೋಗ್ಯ ವಿಚಾರಿಸಿದರು.

ಮೂಲ ನಿಬಂಧನೆಗಳಡಿಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ನಿರ್ಧಾರ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯ ಮೂಲ ನಿಯಮಗಳನ್ನೇ ಯಥಾವತ್ತಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕಾಯ್ದೆಯಡಿ ಕೇಸ್ ದಾಖಲಾದ ಕೂಡಲೇ ಅಧಿಕಾರಿಗಳನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಹೊರಡಿಸಿದ್ದ ಆದೇಶ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಪ್ರಸಕ್ತ ಅಧಿವೇಶನದಲ್ಲಿ ಈ ಮಸೂದೆಯನ್ನು ಹಳೆಯ ನಿಬಂಧನೆಗಳೊಂದಿಗೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಎಸ್ಸಿ / ಎಸ್ಟಿ ಕಾಯ್ದೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜುಲೈ ತಿಂಗಳ ಜಿಎಸ್ಟಿ ತೆರಿಗೆ ಸಂಗ್ರಹ 96,483 ಕೋಟಿ ರುಪಾಯಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಜುಲೈ ತಿಂಗಳಲ್ಲಿ 96,483 ಕೋಟಿ ರುಪಾಯಿಗೆ ಏರಿದೆ. ಜೂನ್ ತಿಂಗಳಲ್ಲಿ 95,610 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಬುಧವಾರ ಹಣಕಾಸು ಸಚಿವಾಲಯ ತೆರಿಗೆ ಸಂಗ್ರಹದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಜೂನ್ ತಿಂಗಳಿಗಿಂತ ಜುಲೈ ತಿಂಗಳಲ್ಲಿ ತೆರಿಗೆ ವಿವರ ಸಲ್ಲಿಕೆ ಮಾಡಿದವರ ಸಂಖ್ಯೆ ಹೆಚ್ಚಳವಾಗಿರುವುದು ತೆರಿಗೆ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಜುಲೈ ನಲ್ಲಿ 66 ಲಕ್ಷ ಮಂದಿ ಜಿಎಸ್ಟಿಆರ್ 3ಬಿ ಸಲ್ಲಿಸಿದ್ದಾರೆ. ಜೂನ್ ತಿಂಗಳಲ್ಲಿ ಈ ಸಂಖ್ಯೆ 64.69ಲಕ್ಷವಿತ್ತು. ತೆರಿಗೆ ವಿವರ ಸಲ್ಲಿಸಿರುವ ಸಂಖ್ಯೆ ಹೆಚ್ಚಿದ್ದರೂ ಒಟ್ಟಾರೆ ತೆರಿಗೆ ಸಂಗ್ರಹ ಪ್ರಮಾಣವು ಸರ್ಕಾರದ ನಿರೀಕ್ಷೆಯಂತೆ 1 ಲಕ್ಷ ಕೋಟಿ ರುಪಾಯಿ ಮುಟ್ಟಿಲ್ಲ. 2018-19ನೇ ಸಾಲಿನ ಬಜೆಟ್ ನಲ್ಲಿ ವಾರ್ಷಿಕ ಜಿಎಸ್ಟಿ ತೆರಿಗೆ ಸಂಗ್ರಹ 12 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಗುಲ್ಶನ್ ಕುಮಾರ್‌ ಪಾತ್ರದಲ್ಲಿ ರಣಬೀರ್‌

ಬಾಲಿವುಡ್ ನಿರ್ಮಾಪಕ, ಟಿ-ಸೀರೀಸ್‌ ಮ್ಯೂಸಿಕ್ ಕಂಪನಿ ಮಾಲೀಕ ಗುಲ್ಶನ್ ಕುಮಾರ್ ಬಯೋಪಿಕ್‌ ‘ಮೊಗುಲ್‌’ ಸುದ್ದಿಯಲ್ಲಿದೆ. ನಟ ಅಕ್ಷಯ್ ಕುಮಾರ್ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸುವುದೆಂದು ನಿರ್ದಾರವಾಗಿತ್ತು. ಚಿತ್ರಕಥೆ ವಿಚಾರದಲ್ಲಿ ಹೊಂದಾಣಿಕೆಯಾಗದ ಕಾರಣ ಅಕ್ಷಯ್ ಒಲ್ಲೆ ಎಂದರು. ಇದೀಗ ನಟ ಅಮೀರ್ ಖಾನ್‌ ‘ಮೊಗುಲ್‌’ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಅಲ್ಲದೆ ಚಿತ್ರದ ಮುಖ್ಯಪಾತ್ರಕ್ಕೆ ರಣಬೀರ್ ಕಪೂರ್ ಅವರನ್ನು ಕರೆತರುವ ಯೋಜನೆ ಅಮೀರ್‌ ಅವರದ್ದು. ‘ಸಂಜು’ ಬಯೋಪಿಕ್‌ ಚಿತ್ರದ ದೊಡ್ಡ ಯಶಸ್ಸಿನ ಹಿನ್ನೆಲೆಯಲ್ಲಿ ರಣಬೀರ್‌ ಈಗ ಎಲ್ಲರ ಗಮನ ಸೆಳೆದಿದ್ದಾರೆ. ‘ಮೊಗುಲ್‌’ ಸಿನಿಮಾ ಒಪ್ಪಿಕೊಳ್ಳುವ ಅವರ ನಿರ್ಧಾರವಿನ್ನೂ ಹೊರಬಿದ್ದಿಲ್ಲ.

ಬ್ಯಾನರ್, ಫ್ಲೆಕ್ಸ್ ಗಳ ತೆರವಿಗೆ ಗಡುವು ವಿಧಿಸಿದ ಹೈಕೋರ್ಟ್

ಬೆಂಗಳೂರಿನಲ್ಲಿ ಅನಧಿಕೃತವಾಗಿ ಹೆಚ್ಚುತ್ತಿರುವ ಬ್ಯಾನರ್, ಫ್ಲೆಕ್ಸ್ ಗಳ ಹಾವಳಿಯ ಕುರಿತಂತೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಬುಧವಾರ ಮದ್ಯಾಹ್ನ 2.30ರೊಳಗೆ ಬ್ಯಾನರ್ , ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಗಡುವು ವಿಧಿಸಿತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್, ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿ, ಎಲ್ಲಾ ಫ್ಲೆಕ್ಸ್ ಬಂಟಿಗ್ಸ್‌ಗಳನ್ನು ತೆಗೆಯುವಂತೆ ಆದೇಶ ಹೊರಡಿಸಿದರು.  ನಗರದಲ್ಲಿ ಬ್ಯಾನರ್ ಗಳಿಂದಾಗಿ, ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ  ಮುಖ್ಯ ನ್ಯಾಯಾದೀಶ ದಿನೇಶ್ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ಪೀಠ, ಕೂಡಲೇ ಫ್ಲೇಕ್ಸ್ ಮತ್ತು ಬ್ಯಾನರ್ ಗಳನ್ನು ತೆರವುಗೊಳಿಸಬೇಕು ಈ ಬಗ್ಗೆ ತಾನೇ ಖುದ್ದಾಗಿ ಪರಿಶೀಲನೆ ನಡೆಸುವುದಾಗಿ  ಬಿಬಿಎಂಪಿ ವಕೀಲರಿಗೆ ಸೂಚಿಸಿದರು.

ಏಷ್ಯಾ ಕೂಟ ಬಹಿಷ್ಕರಿಸುವುದಾಗಿ ಪಾಕ್ ಬೆದರಿಕೆ

ಸಂಭಾವನೆ ವಿಚಾರದ ಕಾರಣಕ್ಕೆ ಇದೇ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯಾ ಕ್ರೀಡಾಕೂಟದಿಂದ ಹಿಂದೆ ಸರಿಯಬೇಕಾಗುತ್ತದೆ ಎಂದು ಪಾಕಿಸ್ತಾನ ಹಾಕಿ ತಂಡ ಬೆದರಿಕೆ ಹಾಕಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸಾರಥ್ಯದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಇದೇ ವೇಳೆ ಪಾಕ್ ತಂಡದ ಈ ಬೆದರಿಕೆ ಮಹತ್ವವೆನಿಸಿದೆ. ಕಳೆದ ಆರು ತಿಂಗಳಿನಿಂದ ತಡೆಹಿಡಿದಿರುವ ವೇತನವನ್ನು ಬಿಡುಗಡೆ ಮಾಡದ ಹೊರತು ಏಷ್ಯಾಡ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಏಷ್ಯಾ ಕೂಟದಲ್ಲಿ ಎಂಟು ಪದಕಗಳನ್ನು ಗೆದ್ದಿರುವ ಪಾಕಿಸ್ತಾನ ಹಾಕಿ ತಂಡ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಿದೆ.

ಸೂಜಿ ಮುಕ್ತ ಏಷ್ಯಾಡ್‌ಗೆ ಐಒಎ ಸೂಚನೆ

ನಿಷೇಧಿತ ಉದ್ದೀಪನಾ ಮದ್ದಿನಂಥ ಡೋಪಿಂಗ್ ಮುಕ್ತ ಏಷ್ಯಾ ಕ್ರೀಡಾಕೂಟಕ್ಕೆ ಪ್ರತಿಯೊಬ್ಬ ಅಥ್ಲೀಟ್‌ಗಳೂ ಬದ್ಧರಾಗಿರಬೇಕೆಂದು ಭಾರತೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಸೂಚಿಸಿದೆ. ಎಲ್ಲ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಷನ್ಸ್‌ಗೆ (ಎನ್‌ಎಸ್‌ಎಫ್) ಇಂದು ಪತ್ರ ಬರೆದಿರುವ ಐಒಎ, ಭಾರತದ ಪ್ರತಿಯೊಬ್ಬ ಅಥ್ಲೀಟ್ ಸೂಜಿ ಮುಕ್ತ ನೀತಿಗೆ ಕಟಿಬದ್ಧವಾಗಿರಬೇಕೆಂದು ಕಟ್ಟಪ್ಪಣೆ ಹೊರಡಿಸಿದೆ. ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಈ ಸೂಜಿ ಮುಕ್ತ ನೀತಿಯನ್ನು ಉಲ್ಲಂಘಿಸಿ ತೀವ್ರ ಮುಜುಗರಕ್ಕೆ ಗುರಿಪಡಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಅಥ್ಲೀಟ್‌ಗಳು ಅತೀವ ಎಚ್ಚರಿಕೆ ವಹಿಸಬೇಕೆಂದು ಐಒಎ ಸ್ಪಷ್ಟ ಸೂಚನೆ ನೀಡಿದೆ.

೨೦೮೦ರ ಹೊತ್ತಿಗೆ ಜಾಗತಿಕ ತಾಪಮಾನದಿಂದ ಸಾವಿನ ಸಂಖ್ಯೆ ಏರಿಕೆ

ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ೨೦೮೦ ರ ಹೊತ್ತಿಗೆ ಬಿಸಿಗಾಳಿಯಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ವಿಶೇಷವಾಗಿ ಹವಾಮಾನ ಬದಲಾವಣೆಯನ್ನು ಎದುರಿಸಲು ನಾವು ವಿಫಲವಾದರೆ, ಸೂರ್ಯನಿಗೆ ಹತ್ತಿರವಿರುವ ದೇಶಗಳಲ್ಲಿ ಅದರ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಪಿಎಲ್ಒಎಸ್ ಮೆಡಿಸಿನ್ ನಿಯತಕಾಲಿಕೆಯು ಅಧ್ಯಯನ ಮಾಡಿದೆ. ಬಿಸಿಗಾಳಿಯಿಂದ ಉಂಟಾಗುವ ಸಾವುಗಳ ಪ್ರಮಾಣವನ್ನು ತಗ್ಗಿಸುವ ಕಾರ್ಯನೀತಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಅಧ್ಯಯನ ನಡೆಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More