ಅಸ್ಸಾಂ ಅಂತಿಮ ಎನ್‍ಆರ್‌ಸಿ ಕರಡಿನಲ್ಲಿ ಮಾಜಿ ರಾಷ್ಟ್ರಪತಿ ಸಂಬಂಧಿಕರೇ ಇಲ್ಲ!

ಭಾರತದ ೫ನೇ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಸಂಬಂಧಿಕರು, ಭಾರತೀಯ ಪ್ರಜೆಗಳು ಎಂಬುದನ್ನು ಸಾಬೀತುಪಡಿಸುವುದಕ್ಕೆ ಹರಸಾಹಸ ಮಾಡುತ್ತಿದ್ದಾರೆ. ತಮ್ಮ ಪೂರ್ವಜರೊಂದಿಗೆ ಸಂಬಂಧ ಸಾಬೀತು ಮಾಡಲು ದಾಖಲೆಗಳು ತಮ್ಮಲ್ಲಿಲ್ಲ ಎಂದು ಅವರ ಅಣ್ಣನ ಮಗ ಹೇಳುತ್ತಾರೆ

ಭಾರತದ ಐದನೇ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಸಂಬಂಧಿಕರು ತಾವು ಭಾರತೀಯ ಪ್ರಜೆಗಳು ಎಂಬುದನ್ನು ಸಾಬೀತುಪಡಿಸುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.

ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಉದ್ದೇಶದಿಂದ 1971ರ ನಂತರದಲ್ಲಿ ಮೊದಲ ಬಾರಿಗೆ ಪರಿಷ್ಕರಣೆಯಾಗುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ (ಎನ್‍ಆರ್‌ಸಿ) ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಲು ದಿವಂಗತ ರಾಷ್ಟ್ರಪತಿಗಳ ಅಣ್ಣನ ಮಗನಾದ ಜಿಯಾವುದ್ದೀನ್ ಅಲಿ ಅಹ್ಮದ್ ಕುಟುಂಬಕ್ಕೆ ಸಾಧ್ಯವಾಗಿಲ್ಲ.

ಏಕೆಂದರೆ, 1951ರ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಾಯಾಗಲೀ ಅಥವಾ 1971ರ ತನಕ ಯಾವುದೇ ಮತದಾರರ ಪಟ್ಟಿಯಲ್ಲಾಗಲೀ ಈ ಮಾಜಿ ರಾಷ್ಟ್ರಪತಿಗಳನ್ನೂ ಒಳಗೊಂಡಂತೆ ತಮ್ಮ ಯಾವುದೇ ಪೂರ್ವಜರ ಹೆಸರುಗಳು ಇಲ್ಲ ಎಂದು ಅಹ್ಮದ್ ಹೇಳಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿಯ ನಿಯಮಗಳ ಪ್ರಕಾರ ತಮ್ಮ ಪೂರ್ವಜರು 1971ರ ಮಾರ್ಚ್ 24ರ ಮಧ್ಯರಾತ್ರಿಗಿಂತ ಮುಂಚೆ ಭಾರತದಲ್ಲಿ ನೆಲೆಸಿದ್ದರು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಸಾಬೀತು ಮಾಡಬೇಕಾಗುತ್ತದೆ. ಈ ದಿನಾಂಕಕ್ಕಿಂತ ಮುಂಚೆ ತಮ್ಮ ಪೂರ್ವಜರು ಈ ದೇಶದಲ್ಲಿ ನೆಲೆಸಿರುವುದನ್ನು ಸಾಬೀತು ಮಾಡುವುದಕ್ಕೆ ಅಗತ್ಯವಿರುವ ದಾಖಲಾತಿಯನ್ನು ನೀಡಬೇಕು ಹಾಗೂ ಆ ದಾಖಲೆಗೆಳು ತಮ್ಮ ಪೂರ್ವಜರದ್ದೇ ಎಂಬುದನ್ನು ಖಾತ್ರಿಗೊಳಿಸುವುದಕ್ಕೆ ಪೂರಕ ಮಾಹಿತಿಯನ್ನೂ ಒದಗಿಸಬೇಕು.

ಪ್ರಸ್ತುತ ರಾಷ್ಟ್ರೀಯ ಪೌರರ ನೋಂದಣಿಯನ್ನು ಸುಗಮವಾಗಿ ಪೂರೈಸಲು 1951ರ ರಾಷ್ಟ್ರೀಯ ಪೌರರ ನೋಂದಣಿ ಮತ್ತು 1971ರ ಮಾರ್ಚ್ 24ರ ವರೆಗಿನ ಮತದಾರರ ಪಟ್ಟಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ವಾರಸುದಾರಿಕೆ ಸಂಕೇತಗಳನ್ನು ಕೊಡಲಾಗಿದೆ. ಪ್ರಸ್ತುತ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಅರ್ಜಿ ಸಲ್ಲಿಸುವ ಬಹುತೇಕರು ಈ ಸಂಕೇತಗಳನ್ನು ಬಳಸಿ 1971ಕ್ಕೂ ಮುಂಚಿನ ತಮ್ಮ ಪೂರ್ವಜರೊಂದಿಗಿನ ತಮ್ಮ ಸಂಬಂಧವನ್ನು ದೃಢೀಕರಿಸಿಕೊಂಡಿದ್ದಾರೆ.

ಆದರೆ, ಈ ಡಿಜಿಟಲೀಕರಣಗೊಂಡ ಮಾಹಿತಿಯಲ್ಲಿ ತಮ್ಮ ಪೂರ್ವಜರಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ ಎಂದು ಜಿಯಾವುದ್ದೀನ್ ಹೇಳಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಬೇಕೆಂದು ಅರ್ಜಿ ಸಲ್ಲಿಸಿದ 3,29,91,384 ಜನರ ಪೈಕಿ 2,89,83,677 ಜನರ ಹೆಸರುಗಳು ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಕರಡಿನಲ್ಲಿ ಇವೆ. ಜಿಯಾವುದ್ದೀನ್ ಕುಟುಂಬದ ರೀತಿಯಲ್ಲಿ ಸುಮಾರು 40 ಲಕ್ಷಕ್ಕಿಂತ ಹೆಚ್ಚಿನ ಜನರನ್ನು ಈ ಪಟ್ಟಿಯಿಂದ ಕೈಬಿಡಲಾಗಿದ್ದು ಅವರೀಗ ಭಾರತದ ಪೌರತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

‘ವಾರಸುದಾರಿಕೆಯ ಮಾಹಿತಿಯಿಲ್ಲ’

ಜಿಯಾವುದ್ದೀನ್ ಕುಟುಂಬವು ಆಸ್ಸಾಮಿನ ಕಾಮರೂಪ (ಗ್ರಾಮೀಣ) ಜಿಲ್ಲೆಯ ರಂಗಿಯಾ ಎಂಬಲ್ಲಿ ನೆಲೆಸಿದೆ. ತನಗೆ ತಿಳಿದಿರುವಂತೆ ತಮ್ಮ ಪೂರ್ವಜರು ವಾಸವಾಗಿದ್ದ ಎಲ್ಲಾ ಸ್ಥಳಗಳ ಮತದಾರರ ಪಟ್ಟಿಯನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೂ ತಮ್ಮ ಪೂರ್ವಜರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ಜಿಯಾವುದ್ದೀನ್ ಹೇಳುತ್ತಾರೆ. “ನನ್ನ ತಂದೆ ಹುಟ್ಟಿದ ಗೋಲಘಾಟ್ ಊರನ್ನೂ ಒಳಗೊಂಡಂತೆ ನಾವು ಬಹಳ ಸ್ಥಳಗಳಿಗೆ ಹೋಗಿಬಂದೆವು. ಆದರೆ, ಏನೂ ಸಿಗಲಿಲ್ಲ. ನಮ್ಮ ತಂದೆ, ಅಜ್ಜನ ಬಗ್ಗೆ ಮಾಹಿತಿ ಹುಡುಕಿದೆವು. ಅವರ ಹೆಸರುಗಳು ಇರಲಿಲ್ಲ,” ಎನ್ನುತ್ತಾರೆ ವೃತ್ತಿಯಲ್ಲಿ ಕೃಷಿಕರಾಗಿರುವ ಜಿಯಾವುದ್ದೀನ್.

ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಜನರಿಗೆ ನೆರವಾಗುವುದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಸ್ಥಾಪನೆಯಾಗಿರುವ ಎನ್‍ಆರ್‌ಸಿ ಸೇವಾ ಕೇಂದ್ರಗಳ ಅಧಿಕಾರಿಗಳು “ವಾರಸುದಾರಿಕೆಯ ಮಾಹಿತಿಯನ್ನು ಹುಡುಕುವ ಸಾರ್ವಜನಿಕರಿಗೆ ವಾರಸುದಾರಿಕೆ ಸಂಕೇತಗಳನ್ನು ನೀಡುವ ಮೂಲಕ ಹಾಗೂ ಎನ್‍ಆರ್‌ಸಿ ಅರ್ಜಿ ನಮೂನೆಗಳನ್ನು ಸ್ವೀಕರಿಸುವ ಮೂಲಕ ನೆರವಾಗುತ್ತಾರೆ” ಎಂದು ಎನ್‍ಆರ್‍ಸಿ ಅಂತರ್ಜಾಲ ತಾಣವು ಹೇಳುತ್ತದೆ. ಆದರೆ, ಜಿಯಾವುದ್ದೀನ್ ಕುಟುಂಬವು ನೆರವು ಕೋರಿ ಸ್ಥಳೀಯ ಸೇವಾ ಕೇಂದ್ರಕ್ಕೆ ಹೋದಾಗ ಅಲ್ಲಿನ ಅಧಿಕಾರಿಗಳು ವಾರಸುದಾರಿಕೆಯ ಮಾಹಿತಿ ಸಿಗದಿದ್ದರೆ ನಂತರದಲ್ಲಿ ಮೇಲ್ಮನವಿ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಿ ಎಂದು ಹೇಳಿ ವಾಪಾಸು ಕಳಿಸಿದರು ಎಂದು ಜಿಯಾವುದ್ದೀನ್ ಅವರ ಮಗ ಹೇಳುತ್ತಾರೆ.

ಇದನ್ನೂ ಓದಿ : ವಿವಾದಕ್ಕೆ ಕಾರಣವಾದ ಅಸ್ಸಾಂ ನಾಗರಿಕರ ಪೌರತ್ವ ಪರಿಷ್ಕೃತ ಕರಡಿನಲ್ಲಿ ಏನಿದೆ?

ಜಿಯಾವುದ್ದೀನ್ ಅವರು ದಿವಂಗತ ರಾಷ್ಟ್ರಪತಿಗಳ ತಮ್ಮನಾದ ಇಥ್ರಾಮುದ್ದೀನ್ ಅಲಿ ಮೊಹ್ಮದ್ ಅವರ ಮಗ. ಎಥ್ರಾಮುದ್ದೀನ್ ಮತ್ತು ಫಕ್ರುದ್ದೀನ್ ಅವರ ತಂದೆ ಝಲ್ನೂರ್ ಅಲಿ ಮೊಹ್ಮದ್ ಅವರು ವೈದ್ಯಕೀಯ ಪದವಿ ಪಡೆದ ಮೊದಲ ಅಸ್ಸಾಮಿ ವ್ಯಕ್ತಿ ಎಂದು ಹೇಳಲಾಗುತ್ತದೆ. ಸೇನೆಯಲ್ಲಿದ್ದ ಅವರು ಕರ್ನಲ್ ಹುದ್ದೆಗೇರಿ ನಿವೃತ್ತರಾಗಿದ್ದರು.

ಜಿಯಾವುದ್ದೀನ್ ಪ್ರಕಾರ, ಅವರ ಬಹುತೇಕ ಸಹೋದರ-ಸಹೋದರಿಯರು ಹಾಗೂ ದೊಡ್ಡಪ್ಪನ ಮಕ್ಕಳು (ಅಂದರೆ, ಫಕ್ರುದ್ದೀನ್ ಅವರ ಮಕ್ಕಳು) ಅಸ್ಸಾಮಿನಿಂದ ಹೊರಗೇ ಬದುಕಿದ್ದರಿಂದ ರಾಜ್ಯದ ಪೌರತ್ವ ನೋಂದಣಿಯಲ್ಲಿ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಿರಲಿಲ್ಲ. ತಮ್ಮ ನಾಲ್ವರು ಸೋದರ-ಸೋದರಿಯರ ಪೈಕಿ, ಇಬ್ಬರು ದೆಹಲಿಯಲ್ಲಿ ನೆಲಸಿದ್ದರೆ ಒಬ್ಬ ಸಹೋದರಿ ಪಾಕಿಸ್ತಾನದ ವ್ಯಕ್ತಿಯನ್ನು ಮುದುವೆಯಾಗಿದ್ದಾರೆ. “ಇಲ್ಲೇ ನೆಲಸಿದ್ದ ಇನ್ನೊಬ್ಬ ಸಹೋದರಿ ಈಗ ತೀರಿಕೊಂಡಿದ್ದಾರೆ,” ಎಂದು ಅವರು ಹೇಳುತ್ತಾರೆ. ದೆಹಲಿಯಲ್ಲೇ ವಾಸವಾಗಿದ್ದ ಫಕ್ರುದ್ದೀನ್ ಅವರ ಮಕ್ಕಳ ಜೊತೆ ತಾವು ವಿರಳವಾಗಿ ಸಂಪರ್ಕಲ್ಲಿದ್ದುದಾಗಿ ಜಿಯಾವುದ್ದೀನ್ ಹೇಳುತ್ತಾರೆ.

ಜಿಯಾವುದ್ದೀನ್ ಅವರ ತಂದೆ ಎಥ್ರಾಮುದ್ದೀನ್ ಅವರು ಮದುವೆಯಾದ ನಂತರ ರಂಗಿಯಾ ಊರಿಗೆ ಬಂದು ನೆಲಸಿದರು ಎಂದು ಹೇಳಲಾಗುತ್ತದೆ. ಜಿಯಾವುದ್ದೀನ್ ಪ್ರಕಾರ, ಅವರ ತಂದೆ ಎಂಜಿನಿಯರಾಗಿದ್ದು ಅವರ ಕುಟುಂಬವು ರಂಗಿಯಾದಲ್ಲಿದ್ದರೂ ಅವರು ಮಾತ್ರ ಬಹುತೇಕ ಗುವಾಹಟಿಯಲ್ಲೇ ನೆಲೆಸಿದ್ದರು. ಜಿಯಾವುದ್ದೀನ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಂಗಿಯಾದಲ್ಲಿ ನೆಲೆಸಿದ್ದಾರೆ.

ವಾರಸುದಾರಿಕೆಯನ್ನು ಸಾಬೀತುಪಡಿಸುವ ಇತರೆ ವಿಧಾನಗಳು

ಎನ್‍ಆರ್‌ಸಿಯ ರಾಜ್ಯ ಸಮನ್ವಯಕಾರ ಪ್ರತೀಕ್ ಹಜೇಲಾ ಅವರು “ಬಿಡಿ ಬಿಡಿ ಪ್ರಕರಣಗಳ ಕುರಿತು ಮಾತಾಡುವುದು ಕಷ್ಟ” ಎನ್ನುತ್ತಾ ವಾರಸುದಾರಿಕೆ ಸಂಕೇತ ಇಲ್ಲದಿದ್ದರೆ ಇತರೆ 12 ದಾಖಲೆಗಳನ್ನು ನೀಡುವ ಅವಕಾಶವಿದೆ ಎನ್ನುತ್ತಾರೆ. “ಬಹುತೇಕ ಜನರಿಗೆ ಒಂದಲ್ಲಾ ಒಂದು ದಾಖಲೆಯನ್ನು ಒದಗಿಸುವುದಕ್ಕೆ ಸಾಧ್ಯವಾಗುತ್ತದೆ” ಎಂದು ಅವರು ಹೇಳುತ್ತಾರೆ.

ಎನ್‍ಆರ್‌ಸಿ ಅಂತರ್ಜಾಲ ತಾಣದ ಪ್ರಕಾರ ಅವು ಯಾವುವೆಂದರೆ: ಭೂಮಿ ಮತ್ತು ಗೇಣಿ ದಾಖಲಾತಿಗಳು, ಪೌರತ್ವ ಪ್ರಮಾಣಪತ್ರ, ಶಾಶ್ವತ ವಾಸ ಪ್ರಮಾಣಪತ್ರ, ನಿರಾಶ್ರಿತರ ನೋಂದಣಿ ಪ್ರಮಾಣಪತ್ರ, ಪಾಸ್‍ಪೋರ್ಟ್, ಭಾರತೀಯ ಜೀವ ವಿಮಾ ನಿಗಮದ [ದಾಖಲೆ], “ಯಾವುದೇ ಸರ್ಕಾರ ನೀಡಿದ ಪರವಾನಿಗೆ/ ಪ್ರಮಾಣಪತ್ರ, ಸರ್ಕಾರಿ ಸೇವೆ [ದಾಖಲೆ]/ ಉದ್ಯೋಗ ಪ್ರಮಾಣಪತ್ರ, ಬ್ಯಾಂಕು/ ಅಂಚೆ ಕಚೇರಿ ಖಾತೆ [ದಾಖಲೆಗಳು], ಜನನ ಪ್ರಮಾಣಪತ್ರ, ಮಂಡಳಿ/ ವಿಶ್ವವಿದ್ಯಾಲಯ ನೀಡಿದ ಶೈಕ್ಷಣಿಕ ಪ್ರಮಾಣಪತ್ರಗಳು ಅಥವಾ ನ್ಯಾಯಾಲಯದ ದಾಖಲೆಗಳು/ ಪ್ರಕ್ರಿಯೆಗಳು.

ತನ್ನ ತಂದೆ ಇಥ್ರಾಮುದ್ದೀನ್ ಹೆಸರಿನಲ್ಲಿರುವ ಭೂದಾಖಲೆಗಳು ತಮ್ಮಲ್ಲಿದ್ದವು ಎಂದು ಹೇಳುವ ಜಿಯಾವುದ್ದೀನ್ ಅವುಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಲು ಹೋದಾಗ ತಡವಾಗಿ ಬಂದಿದ್ದಾಗಿ ಹೇಳಿ ವಾಪಾಸು ಕಳಿಸಿದರು ಎಂದು ಹೇಳುತ್ತಾರೆ.

ತನ್ನ ಅಥವಾ ತನ್ನ ಕುಟುಂಬದ ಭವಿಷ್ಯದ ಬಗ್ಗೆ ಈ ವಿಷಯದಲ್ಲಿ ತನಗೇನೂ ಚಿಂತೆಯಾಗಿಲ್ಲ ಎನ್ನುವ ಜಿಯಾವುದ್ದೀನ್ “ನಮ್ಮ ಪೂರ್ವಜರಿಂದ ಬಂದ ಭೂಮಿಯ ಕುರಿತು ನಮ್ಮಲ್ಲಿರುವ ದಾಖಲೆಗಳನ್ನು ತೋರಿಸುತ್ತೇನೆ” ಎಂದು ಅವರು ಹೇಳುತ್ತಾರೆ. ಆದರೆ, ಅದು ಅಷ್ಟು ಸರಳವಾಗಿಲ್ಲ.

2015ರ ಆಗಸ್ಟ್ 31ರ ಒಳಗಾಗಿ ಅರ್ಜಿ ಸಲ್ಲಿಸಿದವರು ಮಾತ್ರವೇ ಆಗಸ್ಟ್ 30ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 28ರ ತನಕ ನಡೆಯಲಿರುವ ಈ ಪರಿಶೀಲನಾ ಪ್ರಕ್ರಿಯೆಯಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಜಿಯಾವುದ್ದೀನ್ ಕುಟುಂಬದವರೇ ಒಪ್ಪಿಕೊಂಡಂತೆ ಅವರಿಗೆ ತಮ್ಮ ಪೂರ್ವಜರ ಬಗ್ಗೆ ಮಾಹಿತಿಯೇ ಸಿಗದಿದ್ದುದರಿಂದ ಅವರಿಗೆ ವಾರಸುದಾರಿಕೆಯ ಸಂಕೇತವೂ ಸಿಕ್ಕಿಲ್ಲ ಹಾಗೂ ಅದರಿಂದ ಅವರು ಅರ್ಜಿಯನ್ನೂ ಸಲ್ಲಿಸಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More