ಅಸ್ಸಾಂ ಪೌರತ್ವ ಸಮಸ್ಯೆಯಲ್ಲಿ ಮೇಲುಗೈ ಸಾಧಿಸತೊಡಗಿದೆ ರಾಜಕೀಯ ಆಟ

ಎಲ್ಲ ರಾಜಕೀಯ ಪಕ್ಷಗಳೂ ಸ್ವಪ್ರಯೋಜನಕ್ಕಾಗಿ ಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬಳಸಿಕೊಳ್ಳುವುದನ್ನು ಬಿಟ್ಟು ಪೌರತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ 40 ಲಕ್ಷ ಜನರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಪ್ರಯತ್ನಿಸಬೇಕು. ಈ ಕುರಿತು ಯಾರಿಗೂ ಆಸಕ್ತಿ ಇದ್ದಂತಿಲ್ಲ

ಜುಲೈ 30ರಂದು ಅಸ್ಸಾಮಿನ ರಾಷ್ಟ್ರೀಯ ಪೌರರ ನೋಂದಣಿಯ (ಎನ್‍ಆರ್‌ಸಿ ) ಕರಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬಿಜೆಪಿಯ ನಾಯಕರು ದೆಹಲಿಯಲ್ಲಿ ಕುಳಿತು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅದನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುವುದಕ್ಕೆ ಆಲೋಚಿಸುತ್ತಿದ್ದಾರೆ. ಇದನ್ನು ಬಳಸಿಕೊಂಡು ಕೇವಲ ಅಸ್ಸಾಮಿನಲ್ಲಿ ಮಾತ್ರವಲ್ಲದೆ, ಇಡೀ ದೇಶಾದ್ಯಂತ ರಾಜಕೀಯ ಲಾಭ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಅವರಿಗಿದೆ. ತಾನು ರಾಷ್ಟ್ರೀಯ ಭದ್ರತೆಯನ್ನೇ ಆದ್ಯತೆಯನ್ನಾಗಿ ಮಾಡಿಕೊಂಡಿರುವ, ಅಕ್ರಮ ವಲಸಿಗರನ್ನು ಎಳ್ಳಷ್ಟೂ ಸಹಿಸಿಕೊಳ್ಳದ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಹೇಳಿದಂತೆ, 'ಭಾರತೀಯ ಪೌರರ ಹಕ್ಕುಗಳಿಗಾಗಿ ಹೋರಾಡುವ’ ಬಲಿಷ್ಠ ರಾಷ್ಟ್ರವಾದಿ ಪಕ್ಷವೆಂದು ಬಿಂಬಿಸಿಕೊಳ್ಳುವುದಕ್ಕೆ ಬಿಜೆಪಿಗೆ ಈ ಎನ್‍ಆರ್‌ಸಿ ಉತ್ತಮ ಸಲಕರಣೆಯಾಗಿ ಸಿಕ್ಕಿದೆ.

ಇದು ವಾಸ್ತವದಲ್ಲಿ ಕೇಸರಿ ಪಕ್ಷ ಆಡುತ್ತಿರುವ ಅಪಾಯಕಾರಿ ಕೋಮುವಾದಿ ಆಟ. ಅಸ್ಸಾಮಿನಲ್ಲಿ ಪ್ರಸ್ತುತ ನೆಲೆಸಿರುವ 40 ಲಕ್ಷ ನಿವಾಸಿಗಳನ್ನು ಕಾನೂನುಬದ್ಧ ಪೌರತ್ವ ಪಟ್ಟಿಯಿಂದ ಹೊರಗಿಡುವ ಮೂಲಕ ಎನ್‍ಆರ್‌ಸಿ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಬಿಜೆಪಿಯ ಉದ್ದೇಶಗಳಿಗೆ ನೆರವಾಗಿದ್ದಂತೂ ನಿಜ. ರಾಜ್ಯದ ಜನಸಂಖ್ಯೆಯ ಶೇ.10ರಷ್ಟಿರುವ ಈ 40 ಲಕ್ಷ ಮಂದಿ ಬಾಂಗ್ಲಾದೇಶದಿಂದ ಗಡಿಯನ್ನು ಅಕ್ರಮವಾಗಿ ದಾಟಿ ಬಂದಿರುವ ವಲಸಿಗರು (ಮುಸ್ಲಿಮರು ಎಂದು ಓದಿಕೊಳ್ಳಿ) ಎಂದು ಹೇಳುವುದಕ್ಕೆ ಬಿಜೆಪಿ ಪ್ರಾರಂಭಿಸುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸಂಸ್ಥೆಯು ಅಸ್ಸಾಮಿನ ಎನ್‍ಆರ್‌ಸಿ ಘಟಕದ ಮೂಲಕ ಸಿದ್ಧಪಡಿಸಿದ ಈ ಪೌರರ ಪಟ್ಟಿಯಿಂದ ಹೊರಗುಳಿದಿರುವವರಲ್ಲಿ ಕೆಲವರು ನೈಜ ಭಾರತೀಯ ಪೌರರೂ ಇರಬಹುದೆಂದು ಒಪ್ಪಿಕೊಳ್ಳುತ್ತಲೇ, ಹಾಗೆ ಹೊರಗುಳಿದವರು ಸೆಪ್ಟೆಂಬರ್ 28ರ ಒಳಗಾಗಿ ತಮ್ಮ ಭಾರತೀಯ ಪೌರತ್ವ ಸಾಬೀತು ಮಾಡುವುದಕ್ಕೆ ಅವಕಾಶ ಕೊಟ್ಟಿರುವುದನ್ನು ಬೆಟ್ಟು ಮಾಡಿ ತೋರಿಸುತ್ತದೆ.

ಎನ್‍ಆರ್‌ಸಿ ಕರಡು ಪಟ್ಟಿಯಿಂದ ಹೊರಗುಳಿದವರೆಲ್ಲರೂ ಅಮಿತ್ ಶಾ ಆರೋಪಿಸಿರುವಂತೆ ಅಕ್ರಮ ವಲಸಿಗರೇ ಅಥವಾ ಕಾನೂನುಬಾಹಿರವಾಗಿ ದೇಶದೊಳಗೆ ನುಸುಳಿರುವವರೇ? ಈ ರೀತಿಯ ಅಭಿಪ್ರಾಯಕ್ಕೆ ಬರುವುದು ತಪ್ಪು ಮತ್ತು ಆತುರದ ತೀರ್ಮಾನವಾಗುತ್ತದೆ ಎಂದು ಎನ್‍ಆರ್‌ಸಿ ರಾಜ್ಯ ಸಮನ್ವಯಕಾರ ಪ್ರತೀಕ್ ಹಜೇಲಾ ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನು ಒಪ್ಪಿಕೊಂಡ ಅವರು, ಕರಡು ಪಟ್ಟಿಯಲ್ಲಿ ದೋಷಗಳಿರಬಹುದು ಎಂದಿದ್ದಾರಲ್ಲದೆ, ಒಬ್ಬ ವ್ಯಕ್ತಿ ಅಕ್ರಮ ವಲಸಿಗನೇ ಅಥವಾ ಅಲ್ಲವೇ ಎಂಬುದು ನ್ಯಾಯಾಂಗ ಪರಿಶೀಲನೆಯಿಂದ ಮಾತ್ರ ರುಜುವಾಗುವಂತಹದ್ದು ಎಂದಿದ್ದಾರೆ.

ಎನ್‍ಆರ್‌ಸಿ ಕರಡು ಪಟ್ಟಿಯಿಂದ ಹೊರಗುಳಿದ ೧೦ ಲಕ್ಷದಷ್ಟು ಗಣನೀಯ ಪ್ರಮಾಣದ ಜನರು ಭಾರತದ ನೈಜ ಪೌರರೇ? ಎಂಬಂತಹ ಪ್ರಶ್ನೆಗಳು ಉದ್ಭವವಾಗಿವೆ. ಕೆಲವು ಅಂದಾಜುಗಳ ಪ್ರಕಾರ, ಕರಡು ಪಟ್ಟಿಯಲ್ಲಿ ಇಲ್ಲದವರ ಪೈಕಿ ಸುಮಾರು 40 ಲಕ್ಷದಷ್ಟು ಜನರು ಹಿಂದೂಗಳಾಗಿದ್ದಾರೆ. ಹೀಗೆ ಹೊರಗುಳಿದವರಲ್ಲಿ ರಾಜಕಾರಣಿಗಳ ಸಂಬಂಧಿಗಳೂ ಇದ್ದಾರೆ ಹಾಗೂ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸಿದವರ ಸಂಬಂಧಿಕರೂ ಇದ್ದಾರೆ. ಅದೇ ರೀತಿಯಲ್ಲಿ, ಆಸ್ಸಾಮಿನಲ್ಲಿ ನೆಲೆಸಿರುವ ಸುಮಾರು ಒಂದು ಲಕ್ಷ ಗೋರ್ಖಾಗಳು ಭಾರತದ ನೈಜ ಪ್ರಜೆಗಳಾಗಿದ್ದು, ಈ ಪಟ್ಟಿಯಲ್ಲಿ ಸೇರ್ಪಡೆಯಾಗುವ ಅರ್ಹತೆ ಇದ್ದರೂ ಅವರು ಪಟ್ಟಿಯಿಂದ ಹೊರಗುಳಿದಿದ್ದಾರೆ.

ಎನ್‍ಆರ್‌ಸಿ ಪಟ್ಟಿಯು ಬಿಜೆಪಿ ಪಾಳೆಯದಲ್ಲಿ ಬಹಳ ಉತ್ಸಾಹ ಮೂಡಿಸಿದೆ. ಏಕೆಂದರೆ, “ನುಸುಳುಕೋರರು ಮತ್ತು ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಕಾರಿಯಾಗಿದ್ದಾರೆ,” ಎಂದು ಬಿಜೆಪಿ ಹಲವು ವರ್ಷಗಳಿಂದ ಹರಿಬಿಟ್ಟಿರುವ ಸಿದ್ಧಾಂತಕ್ಕೆ ಈ ಪಟ್ಟಿಯು ಪೂರಕವಾಗಿದೆ. ಬಿಜೆಪಿ ಮೂಲಗಳ ಪ್ರಕಾರ, ಹೊರಗಿನಿಂದ ಅಕ್ರಮವಾಗಿ ವಲಸೆ ಬಂದಿರುವವರಿಂದ ದೇಶಕ್ಕೆ ಅಪಾಯವಿದೆ ಎಂಬ ಸಿದ್ಧಾಂತವನ್ನು ಇಡೀ ಭಾರತಾದ್ಯಂತ ಬಹುತೇಕ ಜನರು ಒಪ್ಪುತ್ತಾರೆ ಎಂದು ಬಿಜೆಪಿ ನಂಬಿದೆಯಲ್ಲದೆ, ಈ ವಿಷಯವನ್ನು ಕೈಗೆತ್ತಿಕೊಂಡರೆ ‘ಇತರರು’ ಎಂದು ಕರೆಯಲಾಗುವ ಮುಸ್ಲಿಮರಿಂದ ಹಿಂದೂಗಳನ್ನು ಪ್ರತ್ಯೇಕಿಸಿ ಧ್ರುವೀಕರಣ ಮಾಡುವುದಕ್ಕೆ ನೆರವಾಗುತ್ತದೆ ಎಂಬ ವಿಶ್ವಾಸವೂ ಅದಕ್ಕಿದೆ.

ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ, ಅಸ್ಸಾಮಿನಲ್ಲಿ ಭಾರತೀಯ ಪೌರರ ಪಟ್ಟಿಯನ್ನು ಪರಿಷ್ಕರಿಸುವ ಈ ಕೆಲಸವನ್ನು ಮಾಡಿದೆಯಾದರೂ, ಅದನ್ನು ತಾನೇ ಮಾಡಿಸಿದ್ದು ಎಂದು ಬಿಜೆಪಿ ಹೇಳಿಕೊಂಡರೂ ಯಾವುದೇ ಆಶ್ಚರ್ಯವಿಲ್ಲ. ಎನ್‍ಸಿಆರ್ ಕೇವಲ ಅಸ್ಸಾಮಿಗೆ ಮಾತ್ರ ಸೀಮಿತವಾಗಿದ್ದು, ನೈಜ ಭಾರತೀಯ ಪೌರರ ಪಟ್ಟಿಯನ್ನು ತಯಾರಿಸುವ ಕೆಲಸಕ್ಕಾಗಿ ಅದು 1951ರಿಂದಲೇ ಕಾರ್ಯಾರಂಭ ಮಾಡಿದೆ. ಈ ಪಟ್ಟಿಯಲ್ಲಿಲ್ಲದ ಜನರನ್ನು ಭಾರತೀಯ ಪೌರರು ಎಂದು ಪರಿಗಣಿಸುವುದಿಲ್ಲ. ಆದರೆ, ಎನ್‍ಆರ್‌ಸಿ ಕರಡು ಪಟ್ಟಿಯಲ್ಲಿ ಇಲ್ಲದ ಜನರ ಮತದಾನದ ಹಕ್ಕು ತನ್ನಿಂದ ತಾನೇ ರದ್ದಾಗುವುದಿಲ್ಲ ಎಂದು ಭಾರತದ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಎನ್‍ಸಿಆರ್ ಪಟ್ಟಿ ಸಿದ್ಧಪಡಿಸಿರುವುದರ ಶ್ರೇಯಸ್ಸು ತಮಗೇ ಸೇರಬೇಕೆಂದು ಪ್ರಯತ್ನಿಸಿದವರಲ್ಲಿ ಮೊದಲಿಗರೆಂದರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ. ಸುದ್ದಿಗಾರರೊಂದಿಗೆ ಮಾತಾಡುತ್ತ ಅವರು, ಎನ್‍ಆರ್‌ಸಿ ಕೆಲಸ ಪೂರ್ಣಗೊಳ್ಳುವಂತೆ ತಮ್ಮ ಪಕ್ಷ ಹಾಗೂ ಸರ್ಕಾರ ನೋಡಿಕೊಂಡಿದೆ ಎಂದು ಹೇಳಿದ್ದಾರೆ. ಅಮಿತ್ ಶಾ ಹೇಳಿದ್ದಿಷ್ಟು: “2005ರಲ್ಲಿ ಎನ್‍ಆರ್‌ಸಿ ಪರಿಷ್ಕರಿಸುವ ಕೆಲಸವನ್ನು ಪ್ರಾರಂಭಿಸಿದ್ದು ಕಾಂಗ್ರೆಸ್. ಈಗ ಮತಬ್ಯಾಂಕ್ ರಾಜಕೀಯಕ್ಕಾಗಿ ಅವರೇ ಅಪಸ್ವರ ಎತ್ತುವುದು ಎಷ್ಟು ಸರಿ? ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಹೊರದಬ್ಬುವುದಕ್ಕೆ ನಿಮಗೆ (ಕಾಂಗ್ರೆಸ್) ಧೈರ್ಯ ಇರಲಿಲ್ಲ. ದೇಶದ ಭದ್ರತೆ ನಿಮಗೆ ಆದ್ಯತೆಯ ವಿಷಯವಾಗಿರಲಿಲ್ಲ. ಭಾರತೀಯರ ಮಾನವ ಹಕ್ಕುಗಳು ನಿಮಗೆ ಮುಖ್ಯವಲ್ಲ. ಪೌರರ ಪಟ್ಟಿಯನ್ನು ಪರಿಷ್ಕರಿಸುವುದಕ್ಕೆ ನಿಮಗೆ ಧೈರ್ಯ ಇರಲಿಲ್ಲ. ಆದ್ದರಿಂದಲೇ ಅದನ್ನು 2005ರಲ್ಲಿ ಪ್ರಾರಂಭಿಸಿದ ಮೇಲೆ ಕೈಬಿಟ್ಟಿರಿ. ನಮಗೆ ಧೈರ್ಯ ಇತ್ತು, ಪೂರ್ಣಗೊಳಿದೆವು.”

ಈ ಪೌರ ಪಟ್ಟಿಯನ್ನು ಪರಿಷ್ಕರಿಸುವ ವಿಷಯದಲ್ಲಿ ವಿರೋಧ ಪಕ್ಷಗಳು ಮೊದಲಿನಿಂದಲೂ ವಿಮರ್ಶಾತ್ಮಕವಾಗಿವೆ. ನೈಜ ಭಾರತೀಯ ಪ್ರಜೆಗಳ ಅರ್ಜಿಗಳೂ ತಿರಸ್ಕೃತವಾಗುತ್ತಿವೆ ಎಂದು ಅಸ್ಸಾಮಿನ ಮೂಲೆಮೂಲೆಗಳಿಂದ ರಾಶಿಗಟ್ಟಲೆ ದೂರುಗಳು ಬರುತ್ತಿದ್ದುದರಿಂದ ಎನ್‍ಆರ್‌ಸಿಯನ್ನು ಪರಿಷ್ಕರಿಸುವ ಕೆಲಸ ವಿಳಂಬವಾಗುತ್ತಿತ್ತು ಎಂದು ಕಾಂಗ್ರೆಸ್ ಹೇಳಿದೆ. ವಾಸ್ತವದಲ್ಲಿ, ನೈಜ ಭಾರತೀಯ ಪೌರರ ಅರ್ಜಿಗಳು ಸಮರ್ಪಕ ಪುರಾವೆಗಳು ಇದ್ದರೂ ಹೇಗೆ ತಿರಸ್ಕೃತಗೊಳ್ಳುತ್ತಿವೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಡುವ ಹೃದಯಸ್ಪರ್ಶಿ ಸುದ್ದಿಗಳು ಪತ್ರಿಕೆಗಳಲ್ಲಿ ನಿತ್ಯ ಬರುತ್ತಿದ್ದವು.

ಇಡೀ ಪ್ರಕ್ರಿಯೆಯ ಬಗ್ಗೆ ಕಾಂಗ್ರೆಸ್ಸಿಗಿಂತ ಹೆಚ್ಚು ವಿಮರ್ಶಾತ್ಮಕವಾಗಿದ್ದದ್ದು ತೃಣಮೂಲ ಕಾಂಗ್ರೆಸ್. ಅದರ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ದೆಹಲಿ ಕ್ಯಾಥೋಲಿಕ್ ಚರ್ಚು ಆಯೋಜಿಸಿದ ಸಭೆಯೊಂದರಲ್ಲಿ ಮಾತಾಡುತ್ತ ಹೀಗೆ ಹೇಳಿದ್ದಾರೆ: “ನಾನು ಕ್ರಿಶ್ಚಿಯನ್. ಆದ್ದರಿಂದಲೇ ನನ್ನನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ನಾನು ಮುಸ್ಲಿಂ, ನಾನು ದಲಿತ, ಆ ಕಾರಣಕ್ಕಾಗಿಯೇ ನಮ್ಮನ್ನು ದೂರವಿಡಲಾಗಿದೆ. ಇದು ಹೀಗೇ ಮುಂದುವರಿದರೆ ದೇಶದಲ್ಲಿ ಅಂತರ್ಯುದ್ಧ ಭುಗಿಲೇಳುತ್ತದೆ ಎಂದು ನಿಮಗನ್ನಿಸುವುದಿಲ್ಲವೇ? ಇದರಿಂದ ದೇಶದಲ್ಲಿ ರಕ್ತಸಿಕ್ತ ಯುದ್ಧ ಪ್ರಾರಂಭವಾಗುತ್ತದೆ ಎಂದು ನಿಮಗನ್ನಿಸುವುದಿಲ್ಲವೇ?” ಅಸ್ಸಾಮಿನಲ್ಲಿ ಎನ್‍ಆರ್‌ಸಿ ಪರಿಷ್ಕರಣೆ ಪೂರ್ಣಗೊಂಡ ಮೇಲೆ ಮುಂದಿನ ಸರದಿ ಪಶ್ಚಿಮ ಬಂಗಾಳದ್ದೇ ಎಂದು ಬಿಜೆಪಿಯ ಕೆಲವು ರಾಜ್ಯಮಟ್ಟದ ನಾಯಕರು ಒಡ್ಡಿದ ಬೆದರಿಕೆಗಳೇ ಪ್ರಾಯಶಃ ಮಮತಾ ಬ್ಯಾನರ್ಜಿಯವನ್ನು ಕೆರಳಿಸಿರಬೇಕು.

ಎನ್‍ಆರ್‌ಸಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ಬಿಜೆಪಿ ಎಣಿಸಿರುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ತಳಮಟ್ಟದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲವಾದ್ದರಿಂದ ಅಭಿವೃದ್ಧಿಯನ್ನು ತೋರಿಸಿ 2019ರ ಲೋಕಸಭಾ ಚುನಾವಣೆ ಗೆಲ್ಲುವುದು ಕಷ್ಟ ಎಂದು ಬಿಜೆಪಿಯೊಳಗಿನ ಬಹುತೇಕರಿಗೆ ಅನ್ನಿಸಿದೆ. ಬಿಜೆಪಿ ಎಷ್ಟೇ ಹೇಳಿಕೊಂಡರೂ ನಿರುದ್ಯೋಗ ಸಮಸ್ಯೆ ಬಗೆಹರಿದಿಲ್ಲ. ಕೃಷಿ ಕೇತ್ರದ ಜ್ವಲಂತ ಸಮಸ್ಯೆಗಳೂ ಹಾಗೇ ಇವೆ. ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ದಿನ ಕಳೆದಂತೆ ಗಟ್ಟಿಯಾಗಿ ಕೇಳತೊಡಗಿವೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಿಸುವ ಕಾರ್ಯತಂತ್ರ ಫಲ ಕೊಡಬಹುದು ಎಂದು ಹಲವರಿಗೆ ಅನ್ನಿಸುತ್ತಿದೆ.

ಇದನ್ನೂ ಓದಿ : ಬಿಜೆಪಿಯ ಅಸ್ಸಾಂ ಗೆಲುವಿನ ರಹಸ್ಯ ಮತ್ತು ತಿರುಗುಬಾಣವಾದ ಹಿಂದೂ ಲೆಕ್ಕಾಚಾರ

ಆದರೆ, ಈ ಪೌರತ್ವ ರಾಜಕಾರಣದಲ್ಲಿ ಮರೆತೇಹೋಗಿರುವ ವಿಷಯ ಎಂದರೆ, ಸಮಸ್ಯೆಯ ಮಾನವೀಯ ಮುಖ. ಮಾಧ್ಯಮ ವರದಿಗಳ ಪ್ರಕಾರ ಹೋಗುವುದಾದರೆ, ತಾವು ಅಸ್ಸಾಮಿಗರು ಎಂಬುದನ್ನು ಅಥವಾ ತಮ್ಮ ಪೂರ್ವಜರು 1971ಕ್ಕಿಂತ ಮುಂಚೆ ಅಸ್ಸಾಮಿನಲ್ಲೇ ನೆಲಸಿದ್ದರು ಎಂಬುದನ್ನು ಸಾಬೀತು ಮಾಡುವಂತಹ ದಾಖಲೆಗಳನ್ನು ಒದಗಿಸುವುದು ಬಡವರಿಗೆ ಮತ್ತು ಮೂಲೆಗುಂಪಾದವರಿಗೆ ತುಂಬಾ ಕಷ್ಟ. ಅಂತಹ ವ್ಯಕ್ತಿಗಳು ಈ ಪರಿಷ್ಕೃತ ಪೌರತ್ವ ಪಟ್ಟಿಯಿಂದ ಹೊರಗುಳಿದುಬಿಡುತ್ತಾರೆ. ಅವರನ್ನು ಏನು ಮಾಡಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅವರಲ್ಲಿ ಕೆಲವರನ್ನು ಬಾಂಗ್ಲಾದೇಶಕ್ಕೆ ಕಳಿಸಲಾಗುತ್ತದೆಯೇ ಅಥವಾ ಅವರು ತಮ್ಮದೇ ದೇಶದಲ್ಲಿ ಮತದಾನದ ಹಕ್ಕಿಲ್ಲದೆ ಪ್ರಭುತ್ವರಹಿತ ನಿರಾಶ್ರಿತರಾಗಿಬಿಡುತ್ತಾರೆಯೇ? ನೆನಪಿಡಿ, ನಾವಿಲ್ಲಿ ಮಾತಾಡುತ್ತಿರುವುದು ಕೆಲವೇ ಸಾವಿರ ಜನರ ಬಗ್ಗೆ ಅಲ್ಲ; ಬದಲಿಗೆ, ಕ್ರೋವೇಷ್ಯಾದಂಥ ದೇಶವೊಂದರ ಜನಸಂಖ್ಯಾ ಗಾತ್ರಕ್ಕೆ ಹೋಲಿಸಬಹುದಾದ 40 ಲಕ್ಷ ಜನರ ಬಗ್ಗೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More