ವಾಹನ ಸಾಲದ ಬಡ್ಡಿ ಜೊತೆಗೆ ಕಾರುಗಳ ದರವೂ ಏರಿಕೆ; ಗ್ರಾಹಕರಿಗೆ ಎರಡೆರಡು ಬರೆ

ಜಿಎಸ್ಟಿ ಮಂಡಳಿ 100 ಸರಕು ಮತ್ತು ಸೇವೆಗಳ ತೆರಿಗೆಯನ್ನು ಜು.21ರಂದು ಪರಿಷ್ಕರಿಸಿತು. ಪರಿಷ್ಕೃತ ದರ ಜಾರಿಗೆ ಬಂದ ಪರಿಣಾಮ ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್, ಆವೆನ್ ಸೇರಿದಂತೆ ಗೃಹೋಪಯೋಗಿ ವಸ್ತುಗಳ ದರ ಶೇ.8-10ರಷ್ಟು ಇಳಿದಿದೆ. ಆದರೆ, ಕಾರು ದುಬಾರಿಯಾಗಲು ಕಾರಣ?

ಸರಕು ಮತ್ತು ಸೇವಾ ತೆರಿಗೆ ಮಂಡಳಿ ಇತ್ತೀಚೆಗೆ 100ಕ್ಕೂ ಹೆಚ್ಚು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಿತು. ಪರಿಣಾಮವಾಗಿ ಗೃಹೋಪಯೋಗಿ ವಸ್ತುಗಳ ದರ ಶೇ.8-10ರಷ್ಟು ಇಳಿದಿದೆ. ಈಗಾಗಲೇ ದೇಶೀಯ ಕಂಪನಿಗಳಾದ ಗೋದ್ರೇಜ್, ಉಷಾ, ವಿಡಿಯೋಕಾನ್ ಮತ್ತಿತರ ಕಂಪನಿಗಳು ಜುಲೈ 30ರಿಂದ ದರ ಕಡಿತ ಮಾಡಿದ್ದರೆ, ಬೋಷ್ ಮತ್ತಿತರ ಬಹುರಾಷ್ಟ್ರೀಯ ಕಂಪನಿಗಳು ಆಗಸ್ಟ್ 2ರಿಂದ ದರ ಕಡಿತ ಘೋಷಿಸಿವೆ.

ಗೃಹೋಪಯೋಗಿ ವಸ್ತುಗಳ ದರ ಕಡಿತವಾಗಿದೆ ಎಂದು ಇತ್ತ ಗ್ರಾಹಕರು ನಿಟ್ಟುಸಿರು ಬಿಡುವ ಹೊತ್ತಿಗೆ ಅತ್ತ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದೆ. ರೆಪೊ ದರವನ್ನು ಶೇ.6.5ಕ್ಕೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ವಾಹನ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಿದೆ. ಈಗಾಗಲೇ ವಾಹನ ಸಾಲ ಪಡೆದವರು ಹೆಚ್ಚು ಇಎಂಐ ಪಾವತಿಸಬೇಕು. ಹೊಸದಾಗಿ ಸಾಲ ಮಾಡುವವರು ಆರಂಭದಿಂದಲೇ ಹೆಚ್ಚಿನ ಬಡ್ಡಿದರ ಪಾವತಿಸಬೇಕು. ಗ್ರಾಹಕರ ಸಂಕಷ್ಟ ಇಲ್ಲಿಗೆ ಮುಗಿಯುತ್ತಿಲ್ಲ. ಆಟೊಮೊಬೈಲ್ ಕಂಪನಿಗಳು ಕಾರುಗಳ ದರ ಏರಿಕೆಯಲ್ಲಿ ಪೈಪೋಟಿಗೆ ಇಳಿದಿವೆ.

ಈಗಾಗಲೇ ಮಹಿಂದ್ರ ಅಂಡ್ ಮಹಿಂದ್ರ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳು ಕಾರುಗಳ ದರವನ್ನು ಶೇ.2ರಿಂದ4ರಷ್ಟು ಏರಿಸಿರುವುದಾಗಿ ಘೋಷಿಸಿವೆ. ಪರಿಷ್ಕೃತ ದರ ಆಗಸ್ಟ್ 1ರಿಂದಲೇ ಜಾರಿಯಾಗಿದೆ. ಈಗ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಸಹ ದರ ಏರಿಕೆ ಮಾಡಲು ಸಿದ್ದವಾಗಿದೆ.

2.55 ಲಕ್ಷ ರುಪಾಯಿಯಿಂದ 12 ಲಕ್ಷ ರುಪಾಯಿವರೆಗೆ ವಿವಿಧ ಮಾದರಿ ಕಾರುಗಳನ್ನು ತಯಾರಿಸುತ್ತಿರುವ ಮಾರುತಿ ಸುಜುಕಿ ಕಂಪನಿಯು, ದರ ಏರಿಕೆ ಯಾವತ್ತಿನಿಂದ ಜಾರಿ ಎಂಬುದನ್ನು ತಿಳಿಸಿಲ್ಲ. ಆದರೆ, ದರ ಏರಿಕೆಗೆ ಹೆಚ್ಚಿನ ದಿನಗಳೇನೂ ಬೇಕಾಗುವುದಿಲ್ಲ. ಮಹಿಂದ್ರ ಅಂಡ್ ಮಹಿಂದ್ರ ಮತ್ತು ಟಾಟಾ ಮೋಟಾರ್ಸ್ ಶೇ.2-4ರಷ್ಟು ಏರಿಸಿವೆ. ಮಾರುತಿ ಸಹ ಇದೇ ಪ್ರಮಾಣದಲ್ಲಿ ದರ ಏರಿಕೆ ಮಾಡಬಹುದು.

ಕೆಳವರ್ಗದ ಕಾರುಗಳ ಮೇಲೆ ಅಂದರೆ, 2.5-5 ಲಕ್ಷದವರೆಗಿನ ಕಾರುಗಳ ಮೇಲಿನ ದರ ಶೇ.2ರಷ್ಟು, 5 ಲಕ್ಷ ಮೇಲ್ಪಟ್ಟ ವರ್ಗದ ಕಾರುಗಳ ಮೇಲೆ ಶೇ.3ರಷ್ಟು ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಅಂದರೆ, 12 ಲಕ್ಷದ ಕಾರು ಕೊಳ್ಳುವವರು ಶೇ.3ರಷ್ಟು ಹೆಚ್ಚಿನ ದರ ನೀಡಿದರೆ 36,000 ರುಪಾಯಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ.

ಮಾರುತಿ ದರ ಏರಿಸಿದರೆ, ದೇಶದ ಮೊದಲ ಮೂರು ಪ್ರಮುಖ ಕಂಪನಿಗಳೂ ದರ ಏರಿಸಿದಂತಾಗುತ್ತದೆ. ನಂತರ ಉಳಿದ ಏಳೆಂಟು ಕಂಪನಿಗಳೂ ಅದೇ ದಾರಿಯಲ್ಲಿ ಸಾಗಲಿವೆ. ಹ್ಯೂಂಡೈ, ಟಯೋಟಾ, ರಿನೋ ಮತ್ತಿತರ ಕಂಪನಿಗಳು ದರ ಏರಿಸಲಿವೆ.

ಅಷ್ಟಕ್ಕೂ ದರ ಏರಿಕೆಗೆ ಕಾರಣವೇನು?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆಗಳೇ ಕಾರಣ. ಅಂದರೆ, ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿದಿರುವುದು ಮುಖ್ಯ ಕಾರಣ. ದೇಶೀಯ ಕಂಪನಿಗಳು ಸೇರಿದಂತೆ ಎಲ್ಲ ಕಂಪನಿಗಳು ಹಲವು ಬಿಡಿಭಾಗಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತವೆ. ಆಮದು ಮಾಡಿಕೊಂಡ ಸರಕಿಗೆ ಡಾಲರ್ ಮೂಲಕ ಪಾವತಿ ಮಾಡಬೇಕು. ಈಗ ರುಪಾಯಿ ಮೌಲ್ಯ ಕುಸಿದಿರುವುದರಿಂದ ಬಿಡಿಭಾಗಗಳ ಮೇಲಿನ ವೆಚ್ಚವು ನಿರೀಕ್ಷೆ ಮೀರಿ ಹೆಚ್ಚಳವಾಗಿದೆ. ಈ ಹೆಚ್ಚಳವನ್ನು ಇದುವರೆಗೆ ಭರಿಸಿದ ಕಂಪನಿಗಳು ಈಗ ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ರುಪಾಯಿ ಮೌಲ್ಯವು ಡಾಲರ್ ವಿರುದ್ಧ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಇದುವರೆಗೆ ಕಾರು ಕಂಪನಿಗಳು ಕಾದಿದ್ದವು. ಆದರೆ, ಡಾಲರ್ ವಿರುದ್ಧ ರುಪಾಯಿ 68-69ರ ಆಜುಬಾಜಿನಲ್ಲೇ ಸ್ಥಿರಗೊಂಡು ವಹಿವಾಟಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಡಾಲರ್ ಏರುಹಾದಿಯಲ್ಲಿ ಸಾಗಿ, ರುಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿ, ಮತ್ತಷ್ಟು ದಿನ ಕಂಪನಿಗಳೇ ಹೊರೆ ಭರಿಸಲು ತಯಾರಿಲ್ಲ. ಅಂತಿಮವಾಗಿ ಅದನ್ನು ಗ್ರಾಹಕರ ಮೇಲೆ ಹೇರಲು ಕಂಪನಿಗಳು ನಿರ್ಧರಿಸಿವೆ.

ಇದನ್ನೂ ಓದಿ : ರೆಪೊದರ ಏರಿಸಿದ ಆರ್‌ಬಿಐ; ಸಾಲಗಳ ಮೇಲೆ ಹೆಚ್ಚು ಇಎಂಐ ಪಾವತಿಸಲು ಸಿದ್ದರಾಗಿ

ಈ ನಡುವೆ, ಜುಲೈ ತಿಂಗಳಲ್ಲಿ ಕಾರುಗಳ ಮಾರಾಟವು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಮಾರುತಿ ಸೇರಿದಂತೆ ಬಹುತೇಕ ಎಲ್ಲ ಕಂಪನಿಗಳ ಮಾರಾಟ ಇಳಿಮುಖವಾಗಿದೆ. ಈ ಹಂತದಲ್ಲೇ ಕಂಪನಿಗಳು ದರ ಏರಿಕೆಗೆ ಮುಂದಾಗಿವೆ. ಇದು ಆಗಸ್ಟ್ ತಿಂಗಳ ಮಾರಾಟದ ಮೇಲೆ ಪರಿಣಾಮ ಬೀರಬಹುದು.

ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದೆ. ಆಗಸ್ಟ್ 1ರಿಂದಲೇ ವಾಹನ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕುಗಳ ಏರಿಕೆ ಮಾಡಿವೆ. ಹೀಗಾಗಿ, ಕಾರು ಖರೀದಿ ಮಾಡುವವರು ಮತ್ತೊಮ್ಮೆ ಯೋಚಿಸುವ ಕಾಲ ಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More