ಬೌರಿಂಗ್‌ ಲಾಕರ್ ಪ್ರಕರಣ: ಹೌಸಿಂಗ್ ಸೊಸೈಟಿಯತ್ತ ತನಿಖೆ ಹೊರಳುವುದೇ?

ಉದ್ಯಮಿ ಅವಿನಾಶ್‌ ಕುಕ್ರೇಜ ಎಂಬಾತ ಬೌರಿಂಗ್‌ ಇನ್ಸಿಟಿಟ್ಯೂಟ್‌ನ ಲಾಕರ್‌ ಒಳಗೆ ರಹಸ್ಯವಾಗಿ ಇರಿಸಿದ್ದ ನಿವೇಶನ ದಾಖಲೆ ಪತ್ರಗಳು, ಬಿಜೆಪಿ ಮುಖಂಡ ಜಿ ಪ್ರಸಾದ್‌ ರೆಡ್ಡಿ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ವಿಸ್ತರಿಸಿದೆ. ಅಲ್ಲದೆ ಈ ಪ್ರಕರಣ, ಗೃಹ ನಿರ್ಮಾಣ ಸಹಕಾರ ಸಂಘದತ್ತ ಹೊರಳಿಕೊಂಡಿದೆ

ಬೌರಿಂಗ್‌ ಇನ್ಸಿಟಿಟ್ಯೂಟ್‌ನ ೩ ಲಾಕರ್‌ಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅವಿನಾಶ್‌ ಅಮರ್‌ ಲಾಲ್‌ ಕುಕ್ರೇಜ್‌ ಬಚ್ಚಿಟ್ಟಿದ್ದ ಜಮೀನು ಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೀವ್ರ ಪರಿಶೀಲನೆಗೊಳಪಡಿಸಿದ್ದಾರೆ. ಈ ನಡುವೆ, ಜಮೀನು ಪತ್ರಗಳ ಜಾಡು ಹಿಡಿದು ಹೊರಟಿರುವ ಅಧಿಕಾರಿಗಳು, ಬಿಜೆಪಿ ಮುಖಂಡ ಜಿ ಪ್ರಸಾದ್‌ ರೆಡ್ಡಿ ಅವರ ಮನೆ ಮೇಲೂ ದಾಳಿ ಮುಂದುವರೆಸಿದ್ದಾರೆ.

ವಿಶೇಷವೆಂದರೆ, ಪ್ರಸಾದ್ ರೆಡ್ಡಿ ಅವರ ಮನೆ ಮೇಲೆ ನಡೆದ ದಾಳಿ ವೇಳೆಯಲ್ಲಿ ಅಧಿಕಾರಿಗಳಿಗೆ ದೊರೆತಿರುವ ‘ಅನುಷ್ಕಾ ಎಸ್ಟೇಟ್ಸ್’ ಗೆ ಸಂಬಂಧಿಸಿದ ಜಮೀನು ಪತ್ರಗಳು, ಅವಿನಾಶ್ ಅಮರ್ ಲಾಲ್ ಕುಕ್ರೇಜ್ ವಿರುದ್ಧ ನಡೆಯುತ್ತಿರುವ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಇನ್ನೊಂದು ಮಗ್ಗುಲಿಗೆ ಹೊರಳಿಸುವ ಸಾಧ್ಯತೆಗಳಿವೆ. ಅಲ್ಲದೆ, ನಿವೇಶನ, ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಇದೀಗ ನೇರವಾಗಿ ಬೆಂಗಳೂರಿನ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದತ್ತ ಅಧಿಕಾರಿಗಳನ್ನು ತಂದು ನಿಲ್ಲಿಸಿರುವುದು ಕುತೂಹಲ ಮೂಡಿಸಿದೆ.

ಅವಿನಾಶ್‌ ಅಮರ್‌ ಲಾಲ್‌ ಕುಕ್ರೇಜ ವ್ಯಾವಹಾರಿಕ ಪಾಲುದಾರಿಕೆ ಹೊಂದಿರುವ ಅನುಷ್ಕಾ ಎಸ್ಟೇಟ್ಸ್‌, ಜಿ ಪ್ರಸಾದ್‌ ರೆಡ್ಡಿ ಅವರಿಂದ ೨೦೧೪-೧೫ರಲ್ಲಿ ನಿವೇಶನಗಳನ್ನು ಖರೀದಿಸಿತ್ತು. ಈ ನಿವೇಶನಗಳು ಮೂಲತಃ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘ ನಿರ್ಮಿಸಿದ್ದ ಬಡಾವಣೆಗಳಿಗೆ ಸೇರಿವೆ ಎಂಬ ಅಂಶವೇ ಕುತೂಹಲಕ್ಕೆ ಕಾರಣವಾಗಿದೆ. ಹಾಗೆಯೇ, ಇದೇ ಗೃಹ ನಿರ್ಮಾಣ ಸಹಕಾರ ಸಂಘ ಶ್ರೀನಿವಾಗಿಲು ಮತ್ತು ಜಕ್ಕಸಂದ್ರದಲ್ಲಿ ರಚಿಸಿರುವ ಬಡಾವಣೆಯಲ್ಲಿ ಜಿ ಪ್ರಸಾದ್‌ ರೆಡ್ಡಿ ಅವರ ಹೆಸರಿನಲ್ಲಿ ಅಂದಾಜು ೧೪೩ ನಿವೇಶನಗಳಿವೆ ಎಂದು ಗೊತ್ತಾಗಿದೆ. ಈ ಪೈಕಿ, ಕೆಲ ನಿವೇಶನಗಳನ್ನು ಅನುಷ್ಕಾ ಎಸ್ಟೇಟ್ಸ್‌ಗೆ ಮಾರಾಟ ಮಾಡಿದ್ದಾರೆ. ಅನುಷ್ಕಾ ಎಸ್ಟೇಟ್ಸ್‌ ಖರೀದಿಸಿರುವ ನಿವೇಶನಗಳ ಕೆಲ ನೋಂದಣಿ ಪತ್ರಗಳು ‘ದಿ ಸ್ಟೇಟ್ಸ್‌’ಗೆ ಲಭ್ಯವಾಗಿವೆ.

ಈ ಬಡಾವಣೆಯಲ್ಲಿರುವ ನಿವೇಶನಗಳನ್ನು ಪ್ರಸಾದ್‌ ರೆಡ್ಡಿ ಅವರಿಗೆ ಸಂಘ ಹಂಚಿಕೆ ಮಾಡಿದೆಯೇ ಅಥವಾ ಸಂಘದಿಂದ ಹಂಚಿಕೆ ಮಾಡಿಸಿಕೊಂಡಿದ್ದ ಬೇರೆ ಯಾವ ಸದಸ್ಯರಿಂದ ಅವರು ಖರೀದಿಸಿದ್ದಾರೆಯೇ ಎಂಬುದನ್ನು ‘ದಿ ಸ್ಟೇಟ್‌’ ಖಚಿತಪಡಿಸಿಕೊಂಡಿಲ್ಲ.

ಇದೇ ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ಧ ಶಾಸಕ ಎ ಟಿ ರಾಮಸ್ವಾಮಿ ಅವರು ಗುಡುಗಿದ್ದರು. ಈ ಸಂಘ ಹಲವು ಗಂಭೀರ ಸ್ವರೂಪದ ಅಕ್ರಮಗಳಲ್ಲಿ ಭಾಗಿ ಆಗಿದೆ ಎಂದು ೨ ವರ್ಷದ ಹಿಂದೆಯಷ್ಟೇ ಅವರು ಆರೋಪಿಸಿದ್ದರು. ಹೀಗಾಗಿಯೇ ಜಿ ಪ್ರಸಾದ್ ರೆಡ್ಡಿ ಅವರಿಂದ ಅನುಷ್ಕಾ ಎಸ್ಟೇಟ್ಸ್‌ ಖರೀದಿಸಿರುವ ನಿವೇಶನಗಳ ದಾಖಲೆ ಪತ್ರಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ಹಗರಣ: ಸಿಬಿಐ ತನಿಖೆಗೆ ಶಿಫಾರಸಾದ ಕಡತಗಳೇ ನಾಪತ್ತೆ!

ಖರೀದಿಸಿದ್ದು ಎಲ್ಲೆಲ್ಲಿ?: ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಶ್ರೀನಿವಾಗಿಲು ಮತ್ತು ಜಕ್ಕಸಂದ್ರದ ವಿವಿಧ ಸರ್ವೆ ನಂಬರ್‌ಗಳಲ್ಲಿ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ ರಚಿಸಿತ್ತು. ಈ ಪೈಕಿ, ಸರ್ವೆ ನಂಬರ್‌ ೧೦ರಲ್ಲಿ ನಿವೇಶನವನ್ನು (೭,೧೧೫ ಚ.ಅಡಿ) ೩,೬೨,೮೬,೫೦೦ ರು. ದರದಲ್ಲಿ ಜಿ ಪ್ರಸಾದ್ ರೆಡ್ಡಿ ಅವರಿಂದ ಅನುಷ್ಕಾ ಎಸ್ಟೇಟ್ಸ್ ಖರೀದಿಸಿತ್ತು. ಅದೇ ರೀತಿ ಸರ್ವೆ ನಂಬರ್‌ ೧೧ರಲ್ಲಿ‌ ಒಟ್ಟು ೭,೦೦೦ ಚದರ ಅಡಿ ವಿಸ್ತೀರ್ಣದ ಜಾಗವನ್ನು ೩.೫೭ ಕೋಟಿ ರೂ.ದರದಲ್ಲಿ ಅನುಷ್ಕಾ ಎಸ್ಟೇಟ್ಸ್‌, ಜಿ ಪ್ರಸಾದ್ ರೆಡ್ಡಿ ಅವರಿಂದಲೇ ಖರೀದಿಸಿತ್ತು.

ಆರ್ಥಿಕವಾಗಿ ದುರ್ಬಲರಾಗಿದ್ದ ದಲಿತರು, ಹಿಂದುಳಿದವರಿಗೆ ನಿವೇಶನ ಹಂಚಿಕೆ ಮಾಡಲು 66 ಎಕರೆ ಭೂಮಿಯನ್ನು ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸರ್ಕಾರ ೧೯೮೪ರಲ್ಲಿ ನೀಡಿತ್ತು. ಬಡಾವಣೆ ರಚನೆ ಆದ ಕೂಡಲೇ ಬಹುತೇಕ ನಿವೇಶನಗಳನ್ನು ಬೇನಾಮಿ ದಾಖಲೆ ಸೃಷ್ಟಿಸಿ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಸರಕಾರ ದುರ್ಬಲ ವರ್ಗದವರಿಗೆ ನಿವೇಶನ ಹಂಚಿಕೆ ಮಾಡಲು ನೀಡಿದ್ದ ಭೂಮಿಯಲ್ಲಿ ಅನರ್ಹರಿಗೂ ನಿವೇಶನ ಹಂಚಿಕೆ ಮಾಡಿದೆ ಎಂಬ ಬಲವಾದ ಆಪಾದನೆಗೆ ಸಂಘ ಗುರಿಯಾಗಿತ್ತು. ಈ ಸಂಘದಲ್ಲಿ ಸುಮಾರು 3000 ಕೋಟಿ ರು.ಗೂ ಹೆಚ್ಚಿನ ಅವ್ಯವಹಾರ ನಡೆದಿದೆ ಎಂದು ಎ ಟಿ ರಾಮಸ್ವಾಮಿ ಅವರು ದಾಖಲೆ ಸಮೇತ ಆಪಾದನೆ ಹೊರಿಸಿದ್ದರು.

ಆದರ್ಶ ಹೌಸಿಂಗ್, ಶಾರದಾ ಚಿಟ್ ಫಂಡ್ ಹಗರಣಕ್ಕಿಂತಲೂ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅತಿದೊಡ್ಡ ಹಗರಣ ನಡೆದಿದೆ ಎಂದು ಆಗಿನ ಐಎಎಸ್ ಅಧಿಕಾರಿ ಜಿ ವಿ ಕೃಷ್ಣರಾವ್ ನೇತೃತ್ವದ ತಂಡ ತನಿಖೆಯಲ್ಲಿ ಸಾಬೀತುಪಡಿಸಿತ್ತು. ಇದನ್ನಾಧರಿಸಿ ಈ ಹಿಂದಿನ ಯಾವ ಸರ್ಕಾರಗಳೂ ತನಿಖೆಗೆ ಹಿಂದೇಟು ಹಾಕಿದ್ದನ್ನು ಎ ಟಿ ರಾಮಸ್ವಾಮಿ ಅವರು ಆಕ್ಷೇಪಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More