ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ವಿಫಲ; ಅಖಂಡ ಕರ್ನಾಟಕಕ್ಕೆ ಬಲ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಕೆಲವು ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್‌ ವಿಫಲವಾಗಿದ್ದು, ಜನಜೀವನ ಸಹಜವಾಗಿತ್ತು. ಪ್ರತ್ಯೇಕ ರಾಜ್ಯ ಪ್ರಸ್ತಾವದ ಪರ-ವಿರೋಧ ವ್ಯಕ್ತಪಡಿಸಿದ ಸಂಘಟನೆಗಳು, ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿವೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಕೆಲವು ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್‌ ಸಂಪೂರ್ಣ ವಿಫಲವಾಗಿದ್ದು, ಹುಬ್ಬಳ್ಳಿ-ಧಾರವಾಡ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುರುವಾರ ಜನಜೀವನ ಸಹಜವಾಗಿತ್ತು. ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬಂದ್‌ ಆಚರಣೆಯಿಂದ ದೂರ ಉಳಿಯುವ ಮೂಲಕ ಪ್ರತ್ಯೇಕ ರಾಜ್ಯ ಅವಾಸ್ತವ ಎಂಬ ಸಂದೇಶ ರವಾನೆಯಾಗಿದೆ.

“ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣದ ಜಿಲ್ಲೆಗಳಿಗೆ ನೀಡಿದ ಪ್ರಾಮುಖ್ಯತೆಯನ್ನು ಉತ್ತರದ ಜಿಲ್ಲೆಗಳಿಗೆ ನೀಡಲಾಗಿಲ್ಲ,” ಎಂದು ಬಿಜೆಪಿಯ ಕೆಲವು ಶಾಸಕರು, ಮಠಾಧೀಶರು ಹಾಗೂ ಹೋರಾಟಗಾರರು ಪ್ರತ್ಯೇಕ ರಾಜ್ಯದ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೇ ಮುಂದೆ ಮಾಡಿ ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಆದರೆ, ಜನರು ದೈನಂದಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಬಂದ್‌ ವಿಫಲಗೊಳಿಸಿದರು. ಶಾಲಾ-ಕಾಲೇಜು, ಆಸ್ಪತ್ರೆ, ವ್ಯಾಪಾರ-ವಹಿವಾಟು, ಸಾರಿಗೆ ಸಂಪರ್ಕದಲ್ಲಿ ಯಾವುದೇ ತೆರನಾದ ವ್ಯತ್ಯಯವಾಗಲಿಲ್ಲ.

ಬೆರಳೆಣಿಕೆಯಷ್ಟು ಹೋರಾಟಗಾರರು ಮಾತ್ರ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆನಂತರ ಮಾತನಾಡಿದ ಪ್ರತಿಭಟನಾನಿರತರು, “ಕರ್ನಾಟಕ ಏಕೀಕರಣವಾದ ನಂತರ ಉತ್ತರ ಕರ್ನಾಟಕಕ್ಕೆ ರಾಜಕೀಯ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಾಕಷ್ಟು ಅನ್ಯಾಯವಾಗಿದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಮೂಲಸೌಕರ್ಯವೇ ಇಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹುಬ್ಬಳ್ಳಿ- ಧಾರವಾಡ, ಕಲಬುರಗಿ, ವಿಜಯಪುರ, ಬೀದರ್, ರಾಯಚೂರು ಸೇರಿದಂತೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳಿಲ್ಲ. ಉತ್ತರ ಕರ್ನಾಟಕದ ಜನತೆ ಪ್ರತಿಯೊಂದನ್ನೂ ಹೋರಾಟದ ಮೂಲಕವೇ ಪಡೆದಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏಕೀಕರಣದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನತೆಯೇ ಹೋರಾಟ ಮಾಡಿ ರಾಜ್ಯವನ್ನು ಒಂದುಗೂಡಿಸಿದ್ದರು. ಆದರೆ, ಲಾಭವನ್ನು ದಕ್ಷಿಣ ಕರ್ನಾಟಕದ ಜನತೆ ಪಡೆಯುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ರಾಜ್ಯದ ಅಗತ್ಯವಿದೆ,” ಎಂದು ಪ್ರತಿಪಾದಿಸಿದರು.

ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೊಲಶೆಟ್ಟಿ, “ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿ ಕೊನೆ ಗಳಿಗೆಯಲ್ಲಿ ಹಿಂದಕ್ಕೆ ಸರಿದವು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂಚು ನಡೆಸಿ ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿವೆ. ಮುಂದೆ ಪ್ರಬಲ ಹೋರಾಟ ಸಂಘಟಿಸಲಾಗುವುದು,” ಎಂದರು.

ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷ ಕಳ್ಳಿಮನಿ ಮಾತನಾಡಿ, “ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಕಳೆದ ನಾಲ್ಕು ತಿಂಗಳಿಂದ ಜನಾಭಿಪ್ರಾಯ ಸಂಗ್ರಹಿಸಲಾಗಿದೆ. 65 ಲಕ್ಷಕ್ಕೂ ಅಧಿಕ ಜನ ಪ್ರತ್ಯೇಕ ರಾಜ್ಯದ ಪರ ಸಹಿ ಮಾಡಿದ್ದಾರೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಹೋರಾಟಗಾರರ ಜೊತೆ ಮಾತುಕತೆ ನಡೆಸಿ, ಬೆಳಗಾವಿಯ ಸುವರ್ಣಸೌಧಕ್ಕೆ ಕೆಲವು ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದು, ೧೫ ದಿನಗಳೊಳಗೆ ವಿವಿಧ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಬಂದ್‌ಗೆ ಉತ್ತಮ ಬೆಂಬಲ ಸಿಗಲಿಲ್ಲ,” ಎಂದರು.

ಬಿಜೆಪಿ ಶಾಸಕರಾದ ಶ್ರೀರಾಮುಲು, ಉಮೇಶ ಕತ್ತಿ, ಎ ಎಸ್ ಪಾಟೀಲ ನಡಹಳ್ಳಿ ಅವರು, “ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯವಾಗುತ್ತಿದೆ. ಇದು ಹೀಗೆ ಮುಂದುವರಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಬೇಕಾಗುತ್ತದೆ,” ಎಂದು ಆಕ್ರೋಶ ಹೊರಹಾಕಿದ್ದರು. ಅಭಿವೃದ್ಧಿ ವಿಚಾರಕ್ಕೆ ಸಹಮತ ವ್ಯಕ್ತಪಡಿಸಿದ್ದ ಬಹುತೇಕ ಹೋರಾಟಗಾರರು ಪ್ರತ್ಯೇಕ ರಾಜ್ಯದ ಕೂಗಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರವು ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಇಂಥ ಅಪಾಯಕಾರಿ ಬೆಳವಣಿಗೆಗಳನ್ನು ಹತ್ತಿಕ್ಕಬೇಕು ಎಂದು ಸಲಹೆ ನೀಡಿದ್ದರು.

ಇನ್ನು, ಹಾವೇರಿಯಲ್ಲಿ ರೈತ ಸಂಘದ ಕೆಲವರು ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಆಗ್ರಹಿಸಿ ಸಹಿ ಸಂಗ್ರಹಣೆ ಮಾಡುತ್ತಿದ್ದ ಕೆಲವರನ್ನು ಪೊಲೀಸರು ಬಂಧಿಸಿ, ಆನಂತರ ಬಿಡುಗಡೆ ಮಾಡಿದರು. ಬೆಳಗಾವಿಯಲ್ಲಿ ಜನರಿಗೆ ಹೂವು ನೀಡುವ ಮೂಲಕ ಅಖಂಡ ಕರ್ನಾಟಕಕ್ಕೆ ಬೆಂಬಲ ವ್ಯಕ್ತಪಡಿಸಲಾಗಿದ್ದು, ಯಾದಗಿರಿಯಲ್ಲಿ ಚಹಾ ವಿತರಿಸುವ ಮೂಲಕ ಸಮಗ್ರ ಕರ್ನಾಟಕಕ್ಕೆ ಬೆಂಬಲ ಸೂಚಿಸಲಾಗಿದೆ. ಉಳಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಂದ್‌ ಆಚರಣೆಯೇ ನಡೆಯಲಿಲ್ಲ.

ಅಖಂಡತೆಗಾಗಿ ಮೊಳಗಿದ ಧ್ವನಿ

“ರಾಜ್ಯ ಸರ್ಕಾರವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧತೆ ತೋರಬೇಕು. ಕರ್ನಾಟಕ ಅಖಂಡ ರಾಜ್ಯವಾಗಿ ಉಳಿಯಬೇಕು,” ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗದಗದ ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಯುವ ಕರ್ನಾಟಕ ರಕ್ಷಣಾ ಪಡೆ, ವಕೀಲರ ಸಂಘದ ಸೇರಿದಂತೆ ಹಲವು ಕನ್ನಡಪರ, ರೈತಪರ, ಜನಪರ ಸಂಘಟನೆಗಳೂ ಇದೇ ನಿಲುವು ತಳೆದು ಸರ್ಕಾರಕ್ಕೆ ಮನವಿ ಸಲ್ಲಿಸಿದವು. ಆದರೆ, ಕಳಸಾ-ಬಂಡೂರಿ ಹಾಗೂ ಮಲಪ್ರಭಾ ನದಿ ಜೋಡಣಾ ಹೋರಾಟ ಸಮಿತಿಯಿಂದ ವಿಜಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಲಾಯಿತು.

ಇದನ್ನೂ ಓದಿ : ಪ್ರತ್ಯೇಕ ರಾಜ್ಯ ವಿವಾದವನ್ನು ಜಾತಿ ರಾಜಕಾರಣದ ತೆಕ್ಕೆಗೆ ಎಳೆದರೇ ಬಿಎಸ್‌ವೈ?

ಇದಕ್ಕೂ ಮುನ್ನ, ಗಾಂಧಿ ವೃತ್ತದ ಬಳಿ ರಕ್ಷಣಾ ವೇದಿಕೆಯ ವತಿಯಿಂದ ಕನ್ನಡಮ್ಮನ ಜಾತ್ರೆ ಆಯೋಜಿಸಲಾಗಿತ್ತು. ಜಾತ್ರೆಯಲ್ಲಿ ನಾಡಿನ ಪರಂಪರೆಯ ಕುರಿತಾದ ಗಾಯನ ಗಮನ ಸೆಳೆಯಿತು. ಲಕ್ಷ್ಮೇಶ್ವರ ಪಟ್ಟಣದಲ್ಲೂ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ವಿನೂತನ ಪ್ರತಿಭಟನೆ ಮಾಡಲಾಯಿತು. ಲಕ್ಷ್ಮೇಶ್ವರ ಬಸ್ ನಿಲ್ದಾಣ ಎದುರು ರಸ್ತೆ ಮಧ್ಯೆ ಕುಳಿತು, ಖಡಕ್ ರೊಟ್ಟಿ, ಶೇಂಗಾ ಚಟ್ನಿ ಸವಿಯುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು. “ದಕ್ಷಿಣ ಕರ್ನಾಟಕದವರು ಮೃಷ್ಠಾನ ಭೋಜನ ಮಾಡುತ್ತಾರೆ. ಆದರೆ, ನಾವು ಖಡಕ್ ರೊಟ್ಟಿ ಖಾರದಪುಡಿ ತಿನ್ನುವಂತಾಗಿದೆ,” ಎನ್ನುವ ಸಂದೇಶ ರವಾನಿಸಲು ಈ ರೀತಿ ಮಾಡಲಾಗಿದೆ ಎಂದು ವಿಭಿನ್ನ ರೀತಿಯಲ್ಲಿ ಅಭಿವೃದ್ಧಿಯ ಮಾದರಿಯನ್ನು ಅಣಕಿಸಿದರು. “ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಈ ಭಾಗದ ರಾಜಕಾರಣಿಗಳ ಪಾತ್ರ ಅಪಾರವಾಗಿದೆ. ಪ್ರಮುಖ ಸ್ಥಾನದಲ್ಲಿದ್ದಾಗ ಅವರಾರು ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ,” ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More