ಆದಿವಾಸಿಗಳ ಹಕ್ಕುಗಳ ಬಗ್ಗೆ ದನಿ ಎತ್ತಿದರೆ ನಾನು ‘ದೇಶದ್ರೋಹಿ’ ಆಗುತ್ತೇನೆಯೇ?

ಸರ್ಕಾರದ ಕ್ರಮಗಳ ಕಾನೂನುಬದ್ಧತೆ ಪ್ರಶ್ನಿಸಿದರೆ ದೇಶದ್ರೋಹಿ ಎನ್ನಲಾಗುತ್ತದೆ. ಆದಿವಾಸಿ ಚಳವಳಿ ಬೆಂಬಲಿಸಿದ್ದಕ್ಕಾಗಿ ಫಾದರ್ ಸತನ್ ಸ್ವಾಮಿ ವಿರುದ್ಧ ಜಾರ್ಖಂಡ್ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸಿದ್ದು, ಈ ಕುರಿತು ಅವರು ‘ದಿ ವೈರ್‌’ಗೆ ಬರೆದಿರುವ ಲೇಖನದ ಭಾವಾನುವಾದವಿದು

ಎರಡು ದಶಕಗಳಿಂದಲೂ ನಾನು ಆದಿವಾಸಿಗಳು ಮತ್ತು ಅವರ ಘನತೆಯ ಬದುಕು ಹಾಗೂ ಸ್ವಾಭಿಮಾನಕ್ಕಾಗಿ ನಡೆದಿರುವ ಹೋರಾಟದ ಜೊತೆ ಗುರುತಿಸಿಕೊಂಡಿದ್ದೇನೆ. ಅವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ನಾನು ಒಬ್ಬ ಬರೆಹಗಾರನಾಗಿ ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ಈ ಪ್ರಕ್ರಿಯೆಯಲ್ಲಿ, ನಾನು ಸರ್ಕಾರ ಜಾರಿಗೆ ತಂದ ಹಲವು ನೀತಿ ಹಾಗೂ ಕಾನೂನುಗಳ ಬಗ್ಗೆ ಭಾರತೀಯ ಸಂವಿಧಾನದ ಬೆಳಕಿನಲ್ಲಿ ಬಹಳ ಸ್ಪಷ್ಟವಾಗಿ ನನ್ನ ಅಸಮ್ಮತಿ ವ್ಯಕ್ತಪಡಿಸಿದ್ದೇನೆ. ಸರ್ಕಾರ ಮತ್ತು ಆಳುವ ವರ್ಗ ತೆಗೆದುಕೊಂಡ ಹಲವು ಕ್ರಮಗಳ ಅಪ್ರಸ್ತುತತೆ, ಕಾನೂನುಬದ್ಧತೆ ಮತ್ತು ನ್ಯಾಯಸಮ್ಮತೆಗಳನ್ನು ಪ್ರಶ್ನಿಸಿದ್ದೇನೆ.

ಪತ್ಥಲ್‌ಗಡಿ ಹೋರಾಟದ ನಂತರ ನಾನೊಂದು ಪ್ರಶ್ನೆ ಕೇಳಿದೆ: "ಆದಿವಾಸಿಗಳು ಇದನ್ನೆಲ್ಲ ಏಕೆ ಮಾಡುತ್ತಿದ್ದಾರೆ?" ಅವರನ್ನು ಸಹಿಸಲಾಗದಷ್ಟು ಅತಿಯಾಗಿ ಶೋಷಣೆ ಮತ್ತು ದಮನ ಮಾಡಲಾಗುತ್ತಿದೆ ಎಂದು ನನಗೆ ಅನ್ನಿಸಿದೆ. ಅವರ ನೆಲದಿಂದಲೇ ಹೊರತೆಗೆದ ಅಪಾರ ಪ್ರಮಾಣದ ಖನಿಜಗಳು ಹೊರಗಿನ ಉದ್ಯಮಿಗಳನ್ನು ಶ್ರೀಮಂತಗೊಳಿಸಿದರೆ, ಅದೇ ನೆಲದಲ್ಲಿ ವಾಸಿಸುವ ಈ ಆದಿವಾಸಿಗಳನ್ನು ಅದೆಷ್ಟರ ಮಟ್ಟಿಗೆ ನಿಕೃಷ್ಟರನ್ನಾಗಿಸಿವೆ ಎಂದರೆ, ಅವರು ಹಸಿವಿನಿಂದ ಸಾಯುತ್ತಿದ್ದಾರೆ. ಅವರು ಉತ್ಪಾದಿಸಿದ್ದರಲ್ಲಿ ಅವರಿಗೆ ಯಾವ ಪಾಲೂ ಇಲ್ಲ. ಅವರ ಕಲ್ಯಾಣಕ್ಕಾಗಿ ಮಾಡಿದ ಕಾನೂನುಗಳು ಮತ್ತು ನೀತಿಗಳನ್ನು ಉದ್ದೇಶಪೂರ್ವಕವಾಗಿ ಅನುಷ್ಠಾನಗೊಳಿಸದೆ ಬದಿಗಿಡಲಾಗಿದೆ. ಇದೆಲ್ಲದನ್ನು ಇಷ್ಟು ದಿನ ಸಹಿಸಿಕೊಂಡ ಅವರು ಈಗ 'ಅತಿಯಾಯಿತು' ಎಂಬಂತಹ ಸ್ಥಿತಿಗೆ ಬಂದು, ಪಥಲ್ಗಾಡಿಗಳ ಮೂಲಕ ತಮ್ಮ ಗ್ರಾಮಸಭೆಗಳನ್ನು ಗಟ್ಟಿಗೊಳಿಸುವುದರೊಂದಿಗೆ ತಮ್ಮ ಅಸ್ಮಿತೆಯನ್ನು ಮರುಸ್ಥಾಪಿಸುವುದಕ್ಕೆ ಮುಂದಾಗಿದ್ದಾರೆ. ಅವರ ನಡೆ ಸುಲಭವಾಗಿ ಅರ್ಥವಾಗುವಂತಹದ್ದು. ಈ ಹಿನ್ನೆಲೆಯಲ್ಲಿ ನಾನು ಈ ಕೆಲವು ಪ್ರಶ್ನೆಗಳನ್ನು ಎತ್ತಿದ್ದೇನೆ.

ಸಂವಿಧಾನದ 5ನೇ ಅನುಸೂಚಿಯನ್ನು ಜಾರಿಗೊಳಿದಿರುವುದರ ಬಗ್ಗೆ ನಾನು ಪ್ರಶ್ನೆ ಎತ್ತಿದ್ದೇನೆ. ರಾಜ್ಯದಲ್ಲಿ ಆದಿವಾಸಿ ಜನರ ರಕ್ಷಣೆ, ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಆದಿವಾಸಿ ಸಮುದಾಯದಿಂದಲೇ ರಚಿತವಾದ ‘ಆದಿವಾಸಿ ಸಲಹಾ ಮಂಡಳಿ’ಯು ರಾಜ್ಯಪಾಲರಿಗೆ ಸಲಹೆ ನೀಡುತ್ತದೆ ಎಂದು ಸ್ಪಷ್ಟವಾಗಿ ಹೇಳುವ ಸಂವಿಧಾನದ 244(1)ನೇ ವಿಧಿಯನ್ನು ಜಾರಿಗೊಳಿಸದಿರುವುದರ ಬಗ್ಗೆ ನಾನು ಪ್ರಶ್ನೆ ಎತ್ತಿದ್ದೇನೆ.

ರಾಜ್ಯಪಾಲರು ಆದಿವಾಸಿಗಳ ಸಾಂವಿಧಾನಿಕ ರಕ್ಷಕ. ಯಾವಾಗಲೂ ಆದಿವಾಸಿಗಳ ಯೋಗಕ್ಷೇಮವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅವರು ಖುದ್ದಾಗಿ ತಾವೇ ಯಾವುದೇ ಕಾನೂನು ರೂಪಿಸಬಹುದು ಹಾಗೂ ಸಂಸತ್ತು ಅಥವಾ ರಾಜ್ಯದ ವಿಧಾನಸಭೆಗಳು ರೂಪಿಸಿದ ಕಾನೂನುಗಳು ಅಸಿಂಧು ಎಂದು ಘೋಷಿಸಬಹುದು. ಆದರೆ, ವಾಸ್ತವ ಏನೆಂದರೆ, ಚುನಾಯಿತ ರಾಜ್ಯ ಸರ್ಕಾರದೊಂದಿಗೆ ಸಾಮರಸ್ಯದಿಂದಿದ್ದು ಕಾರ್ಯನಿರ್ವಹಿಸಬೇಕು ಎಂಬ ನೆಪದಲ್ಲಿ ಕಳೆದ ಸುಮಾರು ಏಳು ದಶಕಗಳಲ್ಲಿ ಯಾವ ರಾಜ್ಯದ ರಾಜ್ಯಪಾಲರೂ ಆದಿವಾಸಿಗಳ ಕಲ್ಯಾಣಕ್ಕಾಗಿ ಈ ಸಾಂವಿಧಾನಿಕ ವಿವೇಚನಾಧಿಕಾರ ಬಳಸಿಕೊಂಡಿಲ್ಲ. ಆದಿವಾಸಿ ಸಲಹಾ ಮಂಡಳಿ ಸಭೆ ಸೇರುವುದೇ ಅಪರೂಪ. ರಾಜ್ಯದ ಮುಖ್ಯಮಂತ್ರಿಗಳೇ ಈ ಮಂಡಳಿಯ ಸಭೆ ಕರೆದು ಅದರ ಅಧ್ಯಕ್ಷತೆ ವಹಿಸುಸುತ್ತಾರೆ. ಆಡಳಿತದಲ್ಲಿರುವ ಪಕ್ಷವೇ ಅದನ್ನು ನಿಯಂತ್ರಿಸುತ್ತದೆ. ಆದಿವಾಸಿ ಸಲಹಾ ಮಂಡಳಿಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿಡಲಾಗಿದೆ. ಇದು ನಿಜಕ್ಕೂ ಆದಿವಾಸಿ ಜನರಿಗೆ ಮಾಡುತ್ತಿರುವ ಸಾಂವಿಧಾನಿಕ ಮೋಸ.

ಭಾರತದ ಆದಿವಾಸಿ ಸಮುದಾಯಗಳು ಗ್ರಾಮಸಭೆಯ ಮೂಲಕ ಸ್ವಯಂ-ಆಡಳಿತ ನಡೆಸುವ ಶ್ರೀಮಂತ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿವೆ ಎಂಬ ಅಂಶವನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿದ 1996ರ ಪಂಚಾಯತ್ (ಅನುಸೂಚಿತ ಪ್ರದೇಶಗಳಿಗೆ ವಿಸ್ತರಿಸಿದ) ಕಾಯ್ದೆಯನ್ನು ಏಕೆ ವ್ಯವಸ್ಥಿತವಾಗಿ ಕಡೆಗಣಿಸಲಾಗಿದೆ ಎಂದು ನಾನು ಪ್ರಶ್ನಿಸಿದ್ದೇನೆ. ವಾಸ್ತವ ಏನೆಂದರೆ, ಎಲ್ಲ ಒಂಬತ್ತು ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಜಾರಿ ಮಾಡದೆ ಮೂಲೆಗೆ ತಳ್ಳಲಾಗಿದೆ. ಆದಿವಾಸಿಗಳು ತಮ್ಮನ್ನು ತಾವು ಆಳಿಕೊಳ್ಳುವುದು ಬಂಡವಾಳಶಾಹಿ ಆಳುವ ವರ್ಗಗಳಿಗೆ ಇಷ್ಟವಿಲ್ಲ ಎಂದೇ ಇದರ ಅರ್ಥ.

ಅನುಸೂಚಿತ ಪ್ರದೇಶಗಳಲ್ಲಿನ ಆದಿವಾಸಿ ಸಮುದಾಯಗಳಿಗೆ ದೊಡ್ಡ ನೆಮ್ಮದಿ ತಂದಿದ್ದ ಸುಪ್ರೀಂ ಕೋರ್ಟಿನ 1997ರ ಸಮಥಾ ತೀರ್ಪಿನ ಬಗ್ಗೆ ಸರ್ಕಾರ ಏಕೆ ಮೌನ ತಾಳಿದೆ ಎಂದು ಪ್ರಶ್ನಿಸಿದ್ದೇನೆ. ಸರ್ಕಾರವು ಜಾಗತೀಕರಣ, ಉದಾರೀಕರಣ, ಬಜಾರೀಕರಣ ಮತ್ತು ಖಾಸಗೀಕರಣ ನೀತಿಗಳನ್ನು ಜಾರಿಗೊಳಿಸಿದ ನಂತರ ಬೃಹತ್ ದೇಶಿ ಮತ್ತು ವಿದೇಶಿ ಕಂಪನಿಗಳು ಅಪಾರ ಖನಿಜ ಸಂಪತ್ತನ್ನು ಲೂಟಿ ಹೊಡೆಯುವುದಕ್ಕಾಗಿ ಮಧ್ಯಭಾರತದ ವಿಶಾಲ ಆದಿವಾಸಿ ಪ್ರದೇಶಗಳಿಗೆ ನುಗ್ಗಿದವು. ಗಣಿಗಾರಿಕೆಗಾಗಿ ಬಂದ ಈ ದೊಡ್ಡ-ದೊಡ್ಡ ಕಂಪನಿಗಳಿಗೆ ಸರ್ಕಾರಿ ಆಡಳಿತಾಂಗವು ಬೆಂಗಾವಲಾಗಿ ನಿಂತಿತ್ತು. ಈ ಲೂಟಿಗೆ ಪ್ರತಿರೋಧ ಒಡ್ಡಿದ ಆದಿವಾಸಿಗಳನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು. ಇಂತಹ ಸಮಯದಲ್ಲಿ ಸುಪ್ರೀಂ ಕೋರ್ಟು ಈ ತೀರ್ಪ ನೀಡಿತು. ಖನಿಜ ಸಂಪತ್ತಿನ ಗಣಿಗಾರಿಕೆಯಲ್ಲಿ ಆದಿವಾಸಿಗಳಿಗೂ ಒಂದಿಷ್ಟು ನಿಯಂತ್ರಣವಿರುವಂತೆ ಹಾಗೂ ಗಣಿಗಾರಿಕೆಯಿಂದ ಆದಿವಾಸಿಗಳೂ ಆರ್ಥಿಕವಾಗಿ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ತೀರ್ಪಿನ ಉದ್ದೇಶವಾಗಿತ್ತು.

ದೇಶದ ಅತ್ಯುನ್ನತ ನ್ಯಾಯಾಲಯ ನೀಡಿದ ಈ ತೀರ್ಪನ್ನು ಪ್ರಭುತ್ವವು ಮೂಲೆಗೆ ತಳ್ಳಿತು. ಅನೇಕ ನೊಂದ ಸಮುದಾಯಗಳು ಬಹಳಷ್ಟು ಕೇಸುಗಳನ್ನು ದಾಖಲಿಸಿದವು. ಆದರೆ, ಆದಿವಾಸಿಗಳನ್ನು ಅವರ ನೆಲದಿಂದ ಹೊರದಬ್ಬಿ ಅಲ್ಲಿನ ಶ್ರೀಮಂತ ಖನಿಜ ಸಂಪತ್ತನ್ನು ಲೂಟಿ ಮಾಡಲು ಅವಕಾಶ ನೀಡುವುದಕ್ಕಾಗಿ ಪ್ರಭುತ್ವವು ವಸಾಹತುಶಾಹಿ ಆಡಳಿತಗಾರರ ಕುಪ್ರಸಿದ್ಧ ಕಾನೂನುಗಳನ್ನು ಬಳಸಿತು.

2006ರ ಅರಣ್ಯ ಕಾಯ್ದೆಯನ್ನು ಸರ್ಕಾರ ಅರೆಮನಸ್ಸಿನಿಂದ ಜಾರಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದೇನೆ. ನಮಗೆಲ್ಲ ತಿಳಿದಿರುವಂತೆ 'ಜಲ, ಜಂಗಲ್, ಜಮೀನು' ಯಾವುದೇ ಆದಿವಾಸಿ ಸಮುದಾಯದ ಆರ್ಥಿಕ ಸೆಲೆಯಾಗಿರುತ್ತದೆ. ಈ ಜನಸಮುದಾಯಗಳ ಪಾರಂಪರಿಕ ಅರಣ್ಯ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುವ ಕೆಲಸ ದಶಕಗಳಿಂದ ನಡೆಯುತ್ತಿತ್ತು. ಆದಿವಾಸಿಗಳಿಗೆ ಮತ್ತು ಪಾರಂಪರಿಕವಾಗಿ ಕಾಡಿನಲ್ಲಿ ನೆಲೆಸಿರುವ ಅರಣ್ಯವಾಸಿಗಳಿಗೆ ಚಾರಿತ್ರಿಕ ಅನ್ಯಾಯವಾಗುತ್ತಿದೆ ಎಂಬುದನ್ನು ಸರ್ಕಾರ ಕೊನೆಗೂ ಮನಗಂಡಿತು. ಪರಿಣಾಮವಾಗಿ, ಈ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತಂದಿತು.

ಆದರೆ, ವಾಸ್ತವ ಬಹಳ ನಿರಾಶಾದಾಯಕವಾಗಿದೆ. ಭೂಮಿಯ ಮೇಲಿನ ಒಡೆತನಕ್ಕಾಗಿ 2006ರಿಂದ 2011ರ ತನಕ ದೇಶಾದ್ಯಂತ ಸುಮಾರು 30 ಲಕ್ಷ ಅರ್ಜಿ ಬಂದಿವೆ. ಅವುಗಳಲ್ಲಿ 11 ಲಕ್ಷ ಅರ್ಜಿಗಳನ್ನು ಅನುಮೋದಿಸಲಾಗಿದ್ದು, ಸುಮಾರು 14 ಲಕ್ಷ ಅರ್ಜಿ ತಿರಸ್ಕರಿಸಲಾಗಿದೆ ಹಾಗೂ ಉಳಿದ 5 ಲಕ್ಷ ಅರ್ಜಿ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಕೈಗಾರಿಕೆಗಳನ್ನು ಸ್ಥಾಪಿಸಲು ಅರಣ್ಯಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಕಡ್ಡಾಯವಾಗಿ ಗ್ರಾಮಸಭೆ ನಡೆಸಿ, ಸ್ಥಳೀಯ ಜನರ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ಕೈಬಿಟ್ಟು, ಗ್ರಾಮಸಭೆಗಳನ್ನು ಬದಿಗಿಟ್ಟು ನೇರವಾಗಿ ಭೂಸ್ವಾದೀನ ಮಾಡಿಕೊಳ್ಳುವುದಕ್ಕೆ ಜಾರ್ಖಂಡ್ ಸರ್ಕಾರ ಇತ್ತೀಚೆಗೆ ಪ್ರಯತ್ನ ನಡೆಸುತ್ತಿದೆ.

“ಭೂಮಿಯ ಒಡೆಯನೇ ಆ ಭೂಮಿಯ ಮಣ್ಣಿನ ಕೆಳಗಿರುವ ಖನಿಜ ಸಂಪತ್ತಿನ ಒಡೆಯ,” ಎಂದು ಹೇಳಿದ ಸುಪ್ರೀಂ ಕೋರ್ಟಿನ ಆದೇಶದ ಬಗ್ಗೆ ಸರ್ಕಾರ ನಿಷ್ಕ್ರಿಯವಾಗಿರುವುದನ್ನು ನಾನು ಪ್ರಶ್ನಿಸಿದ್ದೇನೆ. ಇನ್ನೊಂದು ತೀರ್ಪಿನಲ್ಲಿ ನ್ಯಾಯಾಲಯವು ಈ ರೀತಿ ಹೇಳಿದೆ: “ಭೂಮಿಯ ಆಳದಲ್ಲಿರುವ ಖನಿಜ ಸಂಪತ್ತಿನ ಒಡೆತನದ ಹಕ್ಕು ಪ್ರಭುತ್ವದ್ದು ಎಂದು ಘೋಷಿಸುವ ಯಾವುದೇ ಅಂಶ ಯಾವುದೇ ಕಾನೂನಿನಲ್ಲಿ ಇಲ್ಲ ಎಂದು ನಮಗನ್ನಿಸುತ್ತದೆ. ವ್ಯಕ್ತಿಯೊಬ್ಬನಿಗೆ ಒಂದು ಭೂಮಿಯ ಒಡೆತನದ ಹಕ್ಕನ್ನು ನ್ಯಾಯಸಮ್ಮತ ಮಾರ್ಗದಲ್ಲಿ ನಿರಾಕರಿಸದ ಹೊರತು ಆ ಭೂಮಿಯ ಆಳದಲ್ಲಿರುವ ಖನಿಜ ಸಂಪತ್ತಿಗೂ ಸಾಮಾನ್ಯವಾಗಿ ಆತನೇ ಒಡೆಯಾಗಬೇಕು.”

ಆದಿವಾಸಿಗಳ ಭೂಮಿಯಲ್ಲಿರುವ ಶ್ರೀಮಂತ ಖನಿಜ ಸಂಪತ್ತನ್ನು ಸರ್ಕಾರ ಮತ್ತು ಖಾಸಗಿ ಕಂಪನಿಗಳು ಲೂಟಿ ಹೊಡೆಯುತ್ತಿವೆ. ದೇಶದಲ್ಲಿರುವ 219 ಕಲ್ಲಿದ್ದಲ್ಲು ಗಣಿಗಳಲ್ಲಿ 214 ಗಣಿಗಳು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟು ಘೋಷಿಸಿ, ಅವುಗಳನ್ನು ಮುಚ್ಚುವಂತೆ ಹಾಗೂ ಅಲ್ಲಿ ಗಣಿಗಾರಿಕೆ ಮಾಡಿದವರಿಂದ ದಂಡ ವಸೂಲಿ ಮಾಡುವಂತೆ ಆದೇಶ ನೀಡಿದೆ. ಆದರೆ, ಅದೇ ಗಣಿಗಳು ಕಾನೂನುಬದ್ಧವಾಗಿ ಕಾಣುವಂತೆ ಮಾಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವುಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ಖಾಸಗಿಯವರಿಗೆ ಗಣಿಗಾರಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ಕಳ್ಳಮಾರ್ಗವನ್ನು ಕಂಡುಕೊಂಡಿವೆ.

“ವ್ಯಕ್ತಿಯೊಬ್ಬ ಹಿಂಸೆಯಲ್ಲಿ ತೊಡಗದ ಹೊರತು ಅಥವಾ ಹಿಂಸೆಯಲ್ಲಿ ತೊಡಗುವಂತೆ ಜನರನ್ನು ಪ್ರಚೋದಿಸದ ಹೊರತು ಅಥವಾ ತಾನೇ ಹಿಂಸೆಯ ಮೂಲಕ ಅಥವಾ ಇತರರು ಹಿಂಸೆಯನ್ನು ಮಾಡುವಂತೆ ಪ್ರಚೋದಿಸಿ ಅವರ ಮೂಲಕ ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಮಾಡದ ಹೊರತು ಆತ ನಿಷೇಧಿತ ಸಂಘಟನೆಯ ಸದಸ್ಯನಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಅಪರಾಧಿಯಾಗಿಬಿಡುವುದಿಲ್ಲ,” ಎಂದು ಹೇಳಿದ ಸುಪ್ರೀಂ ಕೋರ್ಟಿನ ಅಭಿಪ್ರಾಯವನ್ನು ಸರ್ಕಾರಗಳು ಏಕೆ ಕಡೆಗಣಿಸಿವೆ ಎಂದು ಪ್ರಶ್ನಿಸಿದ್ದೇನೆ. ಅಪರಾಧಿಗಳ ಸಂಗದಲ್ಲಿದ್ದವನೂ ಅಪರಾಧಿ ಎನ್ನುವ ವಾದವನ್ನು ಕೋರ್ಟು ತಿರಸ್ಕರಿಸಿದೆ.

“ನಕ್ಸಲೀಯರಿಗೆ ನೆರವಾಗಿದ್ದಾರೆ,” ಎಂಬ ಅನುಮಾನದ ಆಧಾರದಲ್ಲಿ ಮಾತ್ರವೇ ಹಲವಾರು ಯುವಕ, ಯುವತಿಯರನ್ನು ಬಂಧಿಸಿ ಜೈಲಿನಲ್ಲಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆ ಯುವಕ-ಯುವತಿಯರನ್ನು ಬಂಧಿಸಿದ ನಂತರದಲ್ಲಿ ಅವರ ಮೇಲೆ ಇತರ ಆರೋಪಗಳನ್ನು ಹೊರಿಸಲಾಗುತ್ತದೆ. ಪೊಲೀಸರಿಗೆ ಯಾರನ್ನಾದರೂ ಬಂಧಿಸಬೇಕೆನಿಸಿದರೆ ಈ ಹಣೆಪಟ್ಟಿಯನ್ನು ಸುಲಭವಾಗಿ ಅಂಟಿಸಿಬಿಡುತ್ತಾರೆ. ಇದಕ್ಕೆ ಸಾಕ್ಷಿಗಳ ಅವಶ್ಯಕತೆ ಬೀಳುವುದಿಲ್ಲ. ವ್ಯಕ್ತಿಯೊಬ್ಬ ನಿಷೇಧಿತ ಸಂಘಟನೆಯ ಸದಸ್ಯನಾಗಿದ್ದರೂ ಆತ ಅಪರಾಧಿಯಲ್ಲ ಎಂದು ಸುಪ್ರೀಂ ಕೋರ್ಟು ಹೇಳುತ್ತದೆ. ಕಾನೂನು ಮತ್ತು ನ್ಯಾಯಾಂಗ ನೀಡುವ ತೀರ್ಪುಗಳ ನಡುವೆ ಅದೆಷ್ಟು ವ್ಯತ್ಯಾಸವಿದೆ?

ಇತ್ತೀಚೆಗೆ ಜಾರಿಗೊಳಿಸಲಾದ 2013ರ ಭೂಸ್ವಾದೀನ ಕಾಯ್ದೆಗೆ ಜಾರ್ಖಂಡ್ ಸರ್ಕಾರ ಮಾಡಿದ ತಿದ್ದುಪಡಿ ಮಾಡಿದ್ದನ್ನು ನಾನು ಪ್ರಶ್ನಿಸಿದ್ದೇನೆ. ಅದು ಆದಿವಾಸಿಗಳಿಗೆ ಮರಣ ಮೃದಂಗದಂತಿದೆ. ಬಾಧಿತ ಜನಸಮುದಾಯದ ಪರಿಸರ, ಸಾಮಾಜಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸುವುದಕ್ಕೋಸ್ಕರ ಈ ಕಾಯ್ದೆಯಲ್ಲಿ ಸೇರಿಸಲಾಗಿದ್ದ ‘ಸಾಮಾಜಿಕ ಪರಿಣಾಮ ಅಂದಾಜು’ ಎಂಬ ಪ್ರಕ್ರಿಯೆಯನ್ನೇ ಈ ತಿದ್ದುಪಡಿ ರದ್ದುಗೊಳಿಸಿದೆ. ಈ ತಿದ್ದುಪಡಿಯಲ್ಲಿರುವ ಅತ್ಯಂತ ಅಪಾಯಕಾರಿ ಅಂಶ ಎಂದರೆ, ಸರ್ಕಾರವು ಯಾವುದೇ ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವುದಕ್ಕೆ ಅವಕಾಶ ನೀಡಿರುವುದು. ಅಂದರೆ, ಯಾವುದೇ ಭೂಮಿಯನ್ನು ಅಥವಾ ಪ್ರತಿಯೊಂದು ಭೂಮಿಯನ್ನೂ ಇದರಲ್ಲಿ ಸೇರಿಸಿಕೊಳ್ಳಬಹುದು.

‘ಭೂ ಬ್ಯಾಂಕ್’ ಪರಿಕಲ್ಪನೆಯನ್ನೇ ನಾನು ಪ್ರಶ್ನಿಸಿದ್ದೇನೆ. ಅದು ಆದಿವಾಸಿ ಸಮುದಾಯವನ್ನು ನಿರ್ನಾಮ ಮಾಡುವುದಕ್ಕೆ ರಚಿಸಿರುವ ಹೊಸ ಷಡ್ಯಂತ್ರ ಎಂದು ನನಗನ್ನಿಸುತ್ತದೆ. 2017ರ ಫೆಬ್ರವರಿಯಲ್ಲಿ ನಡೆದ 'ಆವೇಗ ಜಾರ್ಖಂಡ್' ಕಾರ್ಯಕ್ರಮದಲ್ಲಿ ಜಾರ್ಖಂಡಿನಲ್ಲಿ 21 ಲಕ್ಷ ಎಕರೆ ಭೂ ಬ್ಯಾಂಕ್ ಸೃಷ್ಟಿಸುವ ಯೋಜನೆ ಘೋಷಿಸಲಾಗಿದ್ದು, ಅದರಲ್ಲಿ 10 ಲಕ್ಷ ಎಕರೆ ಭೂಮಿ ಉದ್ಯಮಿಗಳಿಗೆ ಹಂಚಿಕೆ ಮಾಡುವುದಕ್ಕೆ ಸಿದ್ಧವಾಗಿದೆ ಎಂದು ಪ್ರಕಟಿಸಲಾಗಿದೆ.

‘ಗೇಯ್ರ್-ಮಜುರ್ವಾ’ ಭೂಮಿ (ಸಾಗುವಳಿಯಾಗದ ಭೂಮಿ) ‘ಖಾಸ್’ (ಖಾಸಗಿ) ಆಗಿರಬಹುದು ಅಥವಾ 'ಆಮ್' (ಸಾರ್ವಜನಿಕ) ಆಗಿರಬಹುದು. ಸಂಪ್ರದಾಯದ ಪ್ರಕಾರ, ಬಿಡಿ-ಬಿಡಿ ಆದಿವಾಸಿ ಕುಟುಂಬಗಳು ಅಥವಾ ಸಮುದಾಯಗಳು ಈ ಭೂಮಿಯನ್ನು (ಜಮಾಬಂದಿ) ಹೊಂದಿದ್ದು ಅದನ್ನು ಬಳಕೆ ಮಾಡುತ್ತಿವೆ. ಈಗ ಸರ್ಕಾರ ಏಕಾಏಕಿ ಆಶ್ಚರ್ಯಕರ ರೀತಿಯಲ್ಲಿ ಈ ‘ಜಮಾಬಂದಿ’ ಭೂಮಿಯ ಮೇಲಿನ ಆದಿವಾಸಿಗಳ ಒಡೆತನವನ್ನು ರದ್ದುಗೊಳಿಸಿ, ಅದೆಲ್ಲ ಸರ್ಕಾರದ ಭೂಮಿ ಎಂದು ಘೋಷಿಸಿದೆಯಲ್ಲದೆ, ಅದನ್ನು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕಾಗಿ ಹಂಚಿಕೆ ಮಾಡುವುದಾಗಿ ಹೇಳಿದೆ.

ಇದನ್ನೂ ಓದಿ : ಚಳವಳಿ ನಿರತ ಜಾರ್ಖಂಡ್‌ ಆದಿವಾಸಿ ಕಾರ್ಯಕರ್ತರ ಮೇಲೆ ರಾಷ್ಟ್ರದ್ರೋಹದ ಆರೋಪ

ತಮ್ಮ ಭೂಮಿಯ ಮೇಲಿನ ಒಡೆತನದ ಹಕ್ಕನ್ನು ತಮ್ಮಿಂದ ಕಿತ್ತುಕೊಳ್ಳಲಾಗಿದೆ ಎಂಬ ವಿಷಯವೇ ಬಹುತೇಕ ಆದಿವಾಸಿಗಳಿಗೆ ಗೊತ್ತಿಲ್ಲ. ಈ ಕ್ರಮಕ್ಕೆ ಸಂವಿಧಾನದ ಐದನೇ ಅನುಸೂಚಿಯ ಪ್ರಕಾರ ಕಡ್ಡಾಯವಾಗಿ ಪಡೆಯಬೇಕಿದ್ದ ‘ಆದಿವಾಸಿ ಸಲಹಾ ಮಂಡಳಿ’ಯ ಅನುಮೋದನೆ ಪಡೆದಿಲ್ಲ. 1996ರ ಪಂಚಾಯತ್ (ಅನುಸೂಚಿತ ಪ್ರದೇಶಗಳಿಗೆ ವಿಸ್ತರಿಸಿದ) ಕಾಯ್ದೆಯ ಪ್ರಕಾರ, ಕಡ್ಡಾಯವಾಗಿ ಪಡೆಯಬೇಕಿದ್ದ ಸಂಬಂಧಪಟ್ಟ ಗ್ರಾಮಸಭೆಯ ಸಮ್ಮತಿಯನ್ನೂ ಪಡೆದಿಲ್ಲ. ಭೂಸ್ವಾದೀನ ಕಾಯ್ದೆಯ ಪ್ರಕಾರ ಬಾಧಿತ ಆದಿವಾಸಿ ಜನರೂ ತಮ್ಮ ಒಪ್ಪಿಗೆ ಕೊಟ್ಟಿಲ್ಲ.

ನಾನು ನಿರಂತರವಾಗಿ ಕೇಳುತ್ತ ಬಂದಿರುವ ಪ್ರಶ್ನೆಗಳಿವು. ಈ ಪ್ರಶ್ನೆಗಳನ್ನು ಕೇಳಿದ್ದಕ್ಕೇ ನಾನು ‘ದೇಶದ್ರೋಹಿ’ ಆಗುವುದಾದರೆ ಆಗಲಿ ಬಿಡಿ!

ಚಿತ್ರ: ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More