ನ್ಯಾ.ಜೋಸೆಫ್ ಅವರ ಪದೋನ್ನತಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆಗುವುದೇ?

ಕೇಂದ್ರ ಸರ್ಕಾರ ಹಾಗೂ ಕೊಲಿಜಿಯಂ ನಡುವಿನ ಸಂಘರ್ಷ ಮತ್ತೆ ತಾರಕಕ್ಕೆ ಏರುವ ಸಾಧ್ಯತೆ ಕಾಣುತ್ತಿದೆ. ಪದೋನ್ನತಿಗಾಗಿ ಕೊಲಿಜಿಯಂ ಶಿಫಾರಸು ಮಾಡಿದ ಮೂವರು ನ್ಯಾಯಮೂರ್ತಿಗಳ ಪೈಕಿ ನ್ಯಾ.ಜೋಸೆಫ್ ಹೆಸರನ್ನು ತಡೆಹಿಡಿದು, ಉಳಿದ ಹೆಸರುಗಳನ್ನು ಕೇಂದ್ರ ಅಂಗೀಕರಿಸುವ ಸಾಧ್ಯತೆ ಇದೆ

ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರುವ ಸಾಧ್ಯತೆ ಕಾಣುತ್ತಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳ ಪದೋನ್ನತಿಗೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದ ಮೂವರು ನ್ಯಾಯಮೂರ್ತಿಗಳ ಪೈಕಿ ಕೇಂದ್ರ ಸರ್ಕಾರ, ಎರಡು ಹೆಸರುಗಳನ್ನು ಮಾತ್ರ ಬರುವ ವಾರದೊಳಗೆ ಅಂಗೀಕರಿಸುವ ಸಾಧ್ಯತೆ ಇದೆ. ಆದರೆ, ನ್ಯಾ.ಕೆ ಎಂ ಜೋಸೆಫ್ ಹೆಸರು ಎರಡನೇ ಬಾರಿಗೆ ಶಿಫಾರಸು ಆಗಿದ್ದರೂ ಅವರ ಪದೋನ್ನತಿಗೆ ಸಂಬಂಧಿಸಿದ ಕಡತವನ್ನು ಪ್ರಧಾನಿ ಕಚೇರಿಗೆ ಕಳುಹಿಸಿಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಉತ್ತರಾಖಂಡದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಮಾಡುವಂತೆ ಎರಡು ವಾರಗಳ ಹಿಂದೆ (ಜು.೧೬) ಎರಡನೇ ಬಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಇದೇ ಶಿಫಾರಸಿನಲ್ಲಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಒಡಿಶಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿನೀತ್ ಶರಣ್ ಅವರಿಗೂ ಪದೋನ್ನತಿ ನೀಡಲು ತಿಳಿಸಲಾಗಿತ್ತು.

ಆದರೆ ಕೇಂದ್ರ ಸರ್ಕಾರ, ಪದೋನ್ನತಿ ಅಂಗೀಕಾರಕ್ಕೆ ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ.ವಿನೀತ್ ಶರಣ್ ಅವರ ಕಡತಗಳನ್ನು ಮಾತ್ರ ಪ್ರಧಾನಿ ಕಚೇರಿಗೆ ಕಳುಹಿಸಿದೆ. ನ್ಯಾ.ಕೆ ಎಂ ಜೋಸೆಫ್ ಅವರ ಪದೋನ್ನತಿ ಕಡತವನ್ನು ಕಾನೂನು ಸಚಿವಾಲಯದಲ್ಲೇ ಉಳಿಸಿಕೊಂಡಿರುವ ಬಗ್ಗೆ ಕಾನೂನು ಸಚಿವಾಲಯದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. ನ್ಯಾ.ಜೋಸೆಫ್ ಅವರ ಪದೋನ್ನತಿ ಕಡತವನ್ನು ಅಂಗೀಕರಿಸುವ ವಿಚಾರದಲ್ಲಿ ಎನ್‌ಡಿಎ ಸರ್ಕಾರ ತನ್ನ ಪ್ರಸಕ್ತ ಅವಧಿ ಮುಗಿಯುವರೆಗೂ ವಿಳಂಬ ನೀತಿ ಅನುಸರಿಸಲು ಮುಂದಾಗುವ ಸಾಧ್ಯತೆ ಇದೆ ಎನ್ನುವ ಆರೋಪ ಕೇಳಿಬರುತ್ತಿದೆ. ಪ್ರಕರಣದ ಕುರಿತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

೨೦೧೮ರ ಜನವರಿಯಲ್ಲಿ ನ್ಯಾ.ಕೆ ಎಂ ಜೋಸೆಫ್ ಹಾಗೂ ಬೆಂಗಳೂರು ಮೂಲದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಪದೋನ್ನತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಈ ಕಡತ ಪರಿಶೀಲಿಸಲು ಮೂರು ತಿಂಗಳು ಸಮಯ ತಗೆದುಕೊಂಡ ಕೇಂದ್ರ ಸರ್ಕಾರ, ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರಿಗೆ ಮಾತ್ರ ಪದೋನ್ನತಿ ನೀಡಲು ಒಪ್ಪಿಕೊಂಡು ನ್ಯಾ.ಜೋಸೆಫ್ ಅವರ ಹೆಸರನ್ನು ಮರುಪರಿಶೀಲಿಸಲು ಏಪ್ರಿಲ್ ೨೬ರಂದು ಕೊಲಿಜಿಯಂಗೆ ಸೂಚಿಸಿತ್ತು. ಕೇಂದ್ರದ ಈ ನಡೆ ನ್ಯಾಯಾಂಗ ಮತ್ತು ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿ, ಕೊಲಿಜಿಯಂ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು.

ನ್ಯಾ.ಜೋಸೆಫ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡುವ ವಿಚಾರವಾಗಿ ಮೇ ತಿಂಗಳಿನಲ್ಲಿ ಹಿರಿಯ ನ್ಯಾಯಾಧೀಶರನ್ನು ಒಳಗೊಂಡು ಕೊಲಿಜಿಯಂ ಸಭೆ ನಡೆಸಿ ನ್ಯಾ.ಜೋಸೆಫ್ ಅವರನ್ನೇ ಮತ್ತೆ ಶಿಫಾರಸು ಮಾಡಲು ತಾತ್ವಿಕವಾಗಿ ನಿರ್ಧರಿಸಲಾಯಿತು. ಮತ್ತೆ ಜು.೧೬ ರಂದು ಈ ಕುರಿತು ಸಭೆ ನಡೆದು, ನ್ಯಾ.ಜೋಸೆಫ್ ಅವರ ಹೆಸರನ್ನು ಪುನಃ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸುವ ಮೂಲಕ ಕೇಂದ್ರ ಸರ್ಕಾರದ ಕೋರಿಕೆಯನ್ನು ಕೊಲಿಜಿಯಂ ತಿರಸ್ಕರಿಸಿತು.

ನ್ಯಾ.ಜೋಸೆಫ್ ಅವರಿಗೆ ಪದೋನ್ನತಿ ನೀಡದಿರಲು ಕೇಂದ್ರ ಸರ್ಕಾರ ಮೂರು ಕಾರಣಗಳನ್ನು ಈ ಹಿಂದೆ ತಿಳಿಸಿತ್ತು. ಅವುಗಳನ್ನು ಇಲ್ಲಿ ಗಮನಿಸುವುದಾರೆ, ನ್ಯಾ.ಜೋಸೆಫ್ ಅವರಿಗಿಂತ ಸಮರ್ಥ, ಹಿರಿಯ ನ್ಯಾಯಮೂರ್ತಿಗಳು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಥವರನ್ನು ಪರಿಗಣಿಸಬಹುದಿತ್ತು, ಹಾಗೆಯೇ ನ್ಯಾ. ಜೋಸೆಫ್ ಅವರು ಕೇರಳ ಮೂಲದವರಾಗಿದ್ದು, ಈಗಾಲೇ ಕೇರಳದ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟಿನಲ್ಲಿ ಇದ್ದು, ಕೇರಳಕ್ಕೆ ಪ್ರಾತಿನಿಧ್ಯ ಸಾಕಷ್ಟು ಸಿಕ್ಕಿದೆ. ಪ್ರಾದೇಶಿಕ ಅಸಮಾನತೆಯನ್ನು ಸರಿದೂಗಿಸುವ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರಾತಿನಿಧ್ಯ ಕಡಿಮೆ ಇದ್ದು, ಈ ವರ್ಗದವರನ್ನು ಒಳಗೊಳ್ಳುವ ಅರ್ಹರನ್ನು ಆಯ್ಕೆಮಾಡುವಂತೆ ತಿಳಿಸಿತ್ತು.

59 ವರ್ಷದ ನ್ಯಾ.ಜೋಸೆಫ್ ಅವರನ್ನು ವಯಸ್ಸಿನ ಹಿರಿತನದ ಆಧಾರದ ಮೇಲೆ ಗಮನಿಸಿದರೆ, ಈ ಹಿಂದೆ ನ್ಯಾ. ಜೋಸೆಫ್ ಅವರಿಗಿಂತ ಚಿಕ್ಕ ವಯಸ್ಸಿನ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌‌ ‌ಗೆ ಪದೋನ್ನತಿ ನೀಡಲು ಕೆಲವರ ಹೆಸರನ್ನು ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ವೇಳೆ ಕೊಲಿಜಿಯಂ ನಿರ್ಣಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಆ ಪೈಕಿ ಮೊಹನ್ ಶಾಂತನಗೌಡರ್, ನವೀನ್ ಸಿನ್ಹಾ, ದೀಪಕ್ ಗುಪ್ತಾ, ಎಸ್. ಕೆ. ಕೌಲ್ ಮತ್ತು ಅಬ್ದುಲ್ ನಝೀರ್ ಅವರಿಗೆ ಪದೋನ್ನತಿ ಸಿಕ್ಕಿದೆ. ಇವರೆಲ್ಲರೂ ಜೋಸೆಫ್ ಅವರಿಗಿಂತ ಕಡಿಮೆ ವಯಸ್ಸಿನಲ್ಲೇ ಪದೋನ್ನತಿ ಹೊಂದಿದ್ದಾರೆ.

ಈ ಎಲ್ಲ ಉದಾಹರಣೆಗಳನ್ನಿಟ್ಟುಕೊಂಡು ನ್ಯಾ.ಜೋಸೆಫ್ ಅವರಿಗೆ ಪದೋನ್ನತಿ ನೀಡಲು ಯಾವುದೇ ಅಂಶಗಳು ಅಡ್ಡಿಯಾಗುವುದಿಲ್ಲ ಎಂದು ಸಿಜೆಐ ದೀಪಕ್ ಮಿಶ್ರಾ, ನ್ಯಾ. ರಂಜನ್ ಗೊಗೊಯಿ, ನ್ಯಾ.ಮದನ್ ಬಿ ಲೋಕೂರ್, ನ್ಯಾ.ಕುರಿಯನ್ ಜೋಸೆಫ್ ಮತ್ತು ಎ ಕೆ ಸಿಕ್ರಿ ಅವರನ್ನು ಒಳಗೊಂಡ (ನ್ಯಾ.ಸಿಕ್ರಿ ಜೂ. 22ರಂದು ನಿವೃತ್ತರಾದ ನ್ಯಾಯಮೂರ್ತಿ ಚೆಲಮೇಶ್ವರ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ) ಕೊಲಿಜಿಯಂ ನ್ಯಾ.ಜೋಸೆಫ್ ಹೆಸರನ್ನು ಎರಡನೇ ಬಾರಿಗೆ ಶಿಫಾರಸು ಮಾಡಲು ನಿರ್ಧರಿಸಿತ್ತು.

ಸುಪ್ರೀಂ ಕೋರ್ಟ್ ಹಿಂದೆ ನೀಡಿದ ತೀರ್ಪಿನ ಅನುಗುಣವಾಗಿ ಕೊಲಿಜಿಯಂ ಎರಡನೇ ಬಾರಿಗೆ ಒಂದೇ ಹೆಸರನ್ನು ಶಿಫಾರಸು ಮಾಡಿದರೆ ಅದನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇಬೇಕು. ಆದರೆ, ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ.ವಿನೀತ್ ಶರಣ್ ಅವರ ಪದೋನ್ನತಿ ಕಡತ ಪ್ರಧಾನಿ ಕಚೇರಿಗೆ ಹೋಗಿದ್ದು, ನ್ಯಾ.ಜೋಸೆಫ್ ಅವರ ಕಡತ ಮಾತ್ರ ಕಾನೂನು ಸಚಿವಾಲಯದಲ್ಲೇ ಉಳಿದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೇಂದ್ರದ ಈ ನಡೆಯನ್ನು ಹಠಮಾರಿ ಧೋರಣೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ನ್ಯಾ.ಜೋಸೆಫ್ ಅವರ ಪದೋನ್ನತಿ ವಿಚಾರ ಬುಧವಾರ ಮುಂಗಾರು ಸಂಸತ್ ಅಧಿವೇಶನದಲ್ಲಿಯೂ ಚರ್ಚೆಯಾಗಿದೆ. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ನ್ಯಾ.ಜೋಸೆಫ್ ಅವರ ಹೆಸರನ್ನು ಒಂದು ಸಲ ಪರಿಶೀಲಿಸಲಿಸಲು ಕಾನೂನು ಸಚಿವಾಲಯ ಸೂಚಿಸಿದೆ. ಆದರೆ, ಜೋಸೆಫ್ ಹೆಸರು ಮತ್ತೆ ಶಿಫಾರಸು ಆಗಿದೆ. ಕೇಂದ್ರ ಸರ್ಕಾರ ಮಾತ್ರ ತನಗೆ ಇಷ್ಟವಾದರಿಗೆ ಪದೋನ್ನತಿ ನೀಡುತ್ತಿದ್ದು, ತಮ್ಮ ವಿರುದ್ಧವಾಗಿರುವವರ ವಿಷಯದಲ್ಲಿ ಪದೇಪದೇ ಕೊಂಕು ತಗೆಯುತ್ತಿದೆ,” ಎಂದು ಆರೋಪಿಸಿದ್ದರು.

ಇದನ್ನೂ ಓದಿ : ನ್ಯಾ.ಜೋಸೆಫ್ ಪದೋನ್ನತಿಗೆ ಕೊಲಿಜಿಯಂ ಮರು ಶಿಫಾರಸು; ಕೇಂದ್ರದ ಮುಂದಿನ ನಡೆ?

ಖರ್ಗೆ ಅವರ ಮಾತಿಗೆ ಸಂಸತ್ ನಲ್ಲಿ ಧ್ವನಿಗೂಡಿಸಿರುವ ಸಿಪಿಐ ಸಂಸದ ಎ ಸಂಪತ್, “ಸುಪ್ರೀಂ ಕೋರ್ಟ್‌ನಲ್ಲಿ ಒಂದೇ ಮಾತೃಭಾಷೆ ಮಾತನಾಡುವ ಇಬ್ಬರು ನ್ಯಾಯಾಧೀಶರು ಇಲ್ಲವೇ? ಒಂದೇ ರಾಜ್ಯಕ್ಕೆ ರಾಜ್ಯಕ್ಕೆ ಸೇರಿದವರಿದ್ದರೆ ಅದು ಪಾಪವೇ?”ಎಂದಿದ್ದಾರೆ.

೨೦೧೬ರಲ್ಲಿ ಉತ್ತರಾಖಂಡದ ಮೇಲೆ ಜಾರಿಗೊಳಿಸಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಉತ್ತರಾಖಂಡ ಹೈಕೋರ್ಟ್‌ ನ್ಯಾ.ಜೋಸೆಫ್ ನೇತೃತ್ವದ ಪೀಠ ರದ್ದುಗೊಳಿಸಿತ್ತು. ಈ ನಿರ್ಧಾರದಿಂದಾಗಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರದ ಗದ್ದುಗೆಗೆ ಮರಳಿತು. ಈ ಬೆಳವಣಿಗೆಯನ್ನು ಬಿಜೆಪಿಗಾದ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. ಹೀಗಾಗಿ, ನ್ಯಾ.ಜೋಸೆಫ್ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಈ ಹಿಂದೆ ಕಾಂಗ್ರೆಸ್ ಆರೋಪಿಸಿದ್ದನ್ನು ಇಲ್ಲಿ ನೆನೆಯಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More