ತೆರಿಗೆ ವಸೂಲಿಯಲ್ಲಿ ಹಿಂದೆ ಬಿದ್ದ ಗ್ರಾಪಂಗಳು; ಸಿಇಓಗಳಿಗೆ ಸರ್ಕಾರದ ಎಚ್ಚರಿಕೆ

ರಾಜ್ಯದ ಗ್ರಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲ ಸಂಗ್ರಹಿಸಿ ಆರ್ಥಿಕ ಸ್ವಾವಲಂಬಿಗಳಾಗುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ತೆರಿಗೆ ವಸೂಲು ಮಾಡುವಲ್ಲಿ ಹಿಂದೆ ಬಿದ್ದಿದ್ದು ಕೇವಲ ಅನುದಾನ ಬಳಸಿಕೊಳ್ಳುವುದರತ್ತಲೇ ಗಮನ ಹರಿಸಿವೆ. ಹೀಗಾಗಿ ತೆರಿಗೆ ವಸೂಲು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ

ಆರ್ಥಿಕ ಸ್ವಾಯತ್ತತೆ ಸಾಧಿಸಬೇಕಿದ್ದ ರಾಜ್ಯದ ಗ್ರಾಮ ಪಂಚಾಯತಿಗಳು ಮತ್ತೆ ಮತ್ತೆ ವಿಫಲವಾಗುತ್ತಿವೆ. ಗ್ರಾಮ ಪಂಚಾಯತಿಗಳು ೨೦೧೭-೧೮ನೇ ಸಾಲಿನಲ್ಲಿ ಒಟ್ಟು ೧,೫೦೭ ಕೋಟಿ ರೂ.ತೆರಿಗೆ ವಸೂಲು ಮಾಡದೇ ಬಾಕಿ ಉಳಿಸಿಕೊಂಡಿವೆ. ಬಾಕಿ ಉಳಿಸಿಕೊಂಡಿರುವ ಪಂಚಾಯ್ತಿಗಳ ಪೈಕಿ ಉತ್ತರ ಕರ್ನಾಟಕದ ಜಿಲ್ಲೆಗಳ ಪಂಚಾಯ್ತಿಗಳು ಅಗ್ರ ಸ್ಥಾನದಲ್ಲಿವೆ. ಕಳೆದ ೫ ವರ್ಷಗಳಿಂದಲೂ ತೆರಿಗೆ ವಸೂಲಾತಿಯಲ್ಲಿ ಗ್ರಾ.ಪಂ.ಗಳು ಹಿಂದೆ ಬಿದ್ದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಲ ಮನ್ನಾದಿಂದ ಸಂಭವಿಸುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಮುಂದಾಗಿದೆ.

ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ತೆರಿಗೆ ನಿರ್ಧಾರ, ಪರಿಷ್ಕರಣೆ ಮತ್ತು ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿರುವ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ (ಸಿಇಓ) ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಚಾಟಿ ಬೀಸಿದೆ.

ಗ್ರಾಮ ಪಂಚಾಯ್ತಿಗಳು ಆಸ್ತಿ, ಕಟ್ಟಡ, ಜಾಹಿರಾತು, ಮನರಂಜನೆ, ವಾಹನ, ಸಾಮಾನ್ಯ ನೀರು, ವಿಶೇಷ ನೀರು, ಬೀದಿ ದೀಪ ತೆರಿಗೆ ಮುಂತಾದ ತೆರಿಗೆಗಳನ್ನು ವಸೂಲು ಮಾಡಬೇಕು. ಈ ತೆರಿಗೆಗಳ ವಸೂಲಾತಿಯಲ್ಲಿ ಗ್ರಾಮ ಪಂಚಾಯತಿಗಳು ಹಿನ್ನಡೆ ಸಾಧಿಸಿದರೆ ಅದಕ್ಕೆ ಸಿಇಒ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳೇ ಕಾರಣ ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ, ಗ್ರಾಮ ಪಂಚಾಯತಿಗಳು ಆರ್ಥಿಕ ಸ್ವಾಯತ್ತತೆ ಸಾಧಿಸುವ ನಿಟ್ಟಿನಲ್ಲಿ ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಲು ಮುಂದಾಗಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ವಸೂಲಾಗದ ಆಸ್ತಿ ತೆರಿಗೆ; ಎಚ್ಚರಿಕೆ ನೀಡಿದ ಹಣಕಾಸು ಆಯೋಗ

ತೆರಿಗೆ ವಸೂಲು ಮತ್ತು ಪರಿಷ್ಕರಣೆ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜುಲೈ ೨೧,೨೦೧೮ರಂದು ಪತ್ರ ಬರೆದಿದ್ದಾರೆ.

ತೆರಿಗೆ ವಸೂಲಾತಿಯಲ್ಲಿ ಗ್ರಾಮ ಪಂಚಾಯತಿಗಳ ಸಾಧನೆ ಕುರಿತಂತೆ ರಾಜ್ಯ ೪ನೇ ಹಣಕಾಸು ಆಯೋಗ ಎರಡು ತಿಂಗಳ ಹಿಂದೆಯಷ್ಟೇ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ತೆರಿಗೆ ವಸೂಲಾತಿ ಸಂಬಂಧ ೨೦೧೩-೧೪ರಿಂದ ೨೦೧೬-೧೭ರವರೆಗಿನ ಅವಧಿಯಲ್ಲಿ ಗ್ರಾಮ ಪಂಚಾಯತಿಗಳು ತೀರಾ ಕೆಳಮಟ್ಟದಲ್ಲಿವೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಇದರ ಬೆನ್ನಲ್ಲೇ ಗ್ರಾಮ ಪಂಚಾಯ್ತಿಗಳು ಕಟ್ಟುನಿಟ್ಟಾಗಿ ತೆರಿಗೆ ವಸೂಲು ಮಾಡುವಂತೆ ಮೇಲ್ವಿಚಾರಣೆ ಮಾಡಲು ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

“ಹೆಚ್ಚಿನ ಗ್ರಾಮ ಪಂಚಾಯತಿಗಳು ತಮಗೆ ನೀಡಲಾದ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ತೆರಿಗೆ ನಿರ್ಧರಣೆ, ಪರಿಷ್ಕರಣೆ ಹಾಗೂ ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕಾಯ್ದೆ ಮೂಲಕ ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ನೀಡಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಸ್ವಾಯತ್ತತೆ ಪಡೆಯದೇ ಕೇವಲ ಸರ್ಕಾರದಿಂದ ನೀಡಲಾಗುವ ಅನುದಾನವನ್ನು ಬಳಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ,” ಎಂದು ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ತೆರಿಗೆ ಪರಿಷ್ಕರಿಸದ ಗ್ರಾ.ಪಂ.ಗಳು; ರಾಜ್ಯದಲ್ಲಿ ೬,೦೨೪ ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ. ತೆರಿಗೆ ವಸೂಲು ಸಂಬಂಧ ೨೦೧೫ನೇ ಸಾಲಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ವಿಪರ್ಯಾಸವೆಂದರೆ ಒಟ್ಟು ಪಂಚಾಯ್ತಿಗಳ ಪೈಕಿ ಕೇವಲ ೧,೪೨೧ ಗ್ರಾಮ ಪಂಚಾಯತಿಗಳು ಮಾತ್ರ ತೆರಿಗೆ ಪರಿಷ್ಕರಣೆ ಮಾಡಿವೆ. ಹಾಗೆಯೇ ೨೦೧೭-೧೮ನೇ ಸಾಲಿನಲ್ಲಿ ತೆರಿಗೆ ವಸೂಲಾತಿ ಸಂಬಂಧದ ಒಟ್ಟು ಬೇಡಿಕೆಯನ್ನು ಕಳೆದ ೪ ವರ್ಷಗಳಿಂದಲೂ ಪರಿಷ್ಕರಿಸಿಲ್ಲ. ಬೆಳಗಾವಿ ಜಿಲ್ಲೆಯ ೫೦೫ ಗ್ರಾಮ ಪಂಚಾಯ್ತಿಗಳ ಪೈಕಿ ೪೧೭ ಗ್ರಾಮ ಪಂಚಾಯತಿಗಳು ೪ ವರ್ಷಗಳಿಂದ ವಸೂಲಾತಿಯ ಬೇಡಿಕೆಯನ್ನು ಪರಿಷ್ಕರಿಸದೇ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ತುಮಕೂರು ಜಿಲ್ಲೆಯ ೩೩೧ ಪಂಚಾಯತಿಗಳ ಪೈಕಿ ೨೭೩,ಮೈಸೂರು ಜಿಲ್ಲೆಯ ಒಟ್ಟು ೨೬೬ ಪಂಚಾಯತಿಗಳ ಪೈಕಿ ೨೩೨ ಪಂಚಾಯ್ತಿಗಳು ೪ ವರ್ಷಗಳಿಂದಲೂ ತೆರಿಗೆ ವಸೂಲಿಯ ಬೇಡಿಕೆಯನ್ನು ಪರಿಷ್ಕರಿಸಿಲ್ಲ ಎಂದು ತಿಳಿದು ಬಂದಿದೆ.

೪೫೦೦ ಕೋಟಿ ರೂ.ಬಾಕಿ

೨೦೧೭-೧೮ನೇ ಸಾಲಿನಲ್ಲಿ ಒಟ್ಟು ಗ್ರಾಮ ಪಂಚಾಯತಿಗ:ಳು ೧,೮೨೧.೪೧ ಕೋಟಿ ರೂ.ಮೊತ್ತದಲ್ಲಿ ತೆರಿಗೆ ವಸೂಲು ಮಾಡಬೇಕಿತ್ತು. ಆದರೆ ಕೇವಲ ೩೧೪ ಕೋಟಿ ರೂ.ಗಳನ್ನಷ್ಟೇ ವಸೂಲು ಮಾಡಿ, ೧,೫೦೭ ಕೋಟಿ ರೂ.ವಸೂಲು ಮಾಡದೇ ಬಾಕಿ ಉಳಿಸಿಕೊಂಡಿವೆ ಎಂದು ಗೊತ್ತಾಗಿದೆ.

ರಾಜ್ಯದ ೪ನೇ ಹಣಕಾಸು ಆಯೋಗವೂ ಗ್ರಾಮ ಪಂಚಾಯತಿಗಳ ತೆರಿಗೆ ವಸೂಲಾತಿ ಮೇಲೆ ಬೆಳಕು ಚೆಲ್ಲಿತ್ತು. ಬೇಡಿಕೆಗೆ ಪ್ರತಿಯಾಗಿ ಸಂಗ್ರಹಣೆಯು ತೀರಾ ಕೆಳಮಟ್ಟದಲ್ಲಿರುವುದನ್ನು ವರದಿಯಲ್ಲಿ ಉಲ್ಲೇಖಿಸಿತ್ತು. ೨೦೧೩-೧೪ರಿಂದ ೨೦೧೬-೧೭ನೇ ಸಾಲಿನವರೆಗೆ ಒಟ್ಟು ೫,೭೩೨.೪೮ ಕೋಟಿ ರೂ.ತೆರಿಗೆ ವಸೂಲಿಗೆ ಒಟ್ಟು ಬೇಡಿಕೆ ಇದ್ದರೆ, ಈ ವರ್ಷಗಳಲ್ಲಿ ವಸೂಲು ಮಾಡಿದ್ದು ೧,೧೩೮.೫೨ ಕೋಟಿ ರೂಪಾಯಿಯಷ್ಟೇ. ಇನ್ನೂ ೪,೫೯೩.೯೬ ಕೋಟಿ ರೂ.ವಸೂಲು ಮಾಡಲು ಗ್ರಾಮ ಪಂಚಾಯತಿಗಳು ಬಾಕಿ ಉಳಿಸಿಕೊಂಡಿರುವುದನ್ನು ರಾಜ್ಯದ ೪ನೇ ಹಣಕಾಸು ಆಯೋಗ ಪತ್ತೆ ಹಚ್ಚಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More