ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು   

ರಾಜ್ಯ ಸಂಪುಟ ಸಭೆ ಇಂದು

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಸಂಜೆ ಸಚಿವ ಸಂಪುಟ ಸಭೆ ನಡೆಯಲಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದದ ಪರ -ವಿರೋಧದ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಮಳೆ ಹಾನಿ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಶ್ರೀಕಾಂತ್, ಸಿಂಧು, ಸೈನಾಗೆ ಕ್ವಾರ್ಟರ್‌ಫೈನಲ್ ಗುರಿ

ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿಂದು ಭಾರತದ ಮೂವರು ಸ್ಟಾರ್ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ನಲ್ಲಿ ಮಲೇಷಿಯಾ ಆಟಗಾರ ಡರೆನ್ ಲಿಯೆವ್ ವಿರುದ್ಧ ಕಿಡಾಂಬಿ ಶ್ರೀಕಾಂತ್ ಸೆಣಸಲಿದ್ದರೆ, ಸಾಯಿಪ್ರಣೀತ್ ಇಂಡೋನೇಷಿಯಾದ ಕ್ರಿಶ್ಚಿಯನ್ ಸೋಲ್ಬರ್ಗ್ ವಿಟಿಂಗಸ್ ಎದುರು ಕಾದಾಡಲಿದ್ದಾರೆ. ಅಂತೆಯೇ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ದಕ್ಷಿಣ ಕೊರಿಯಾದ ಸಂಗ್ ಜಿ ಹ್ಯುನ್ ವಿರುದ್ಧ ಸೆಣಸಲಿದ್ದಾರೆ. ಇತ್ತ, ಸೈನಾ ನೆಹ್ವಾಲ್ ಥಾಯ್ಲೆಂಡ್ ಆಟಗಾರ್ತಿ ರಚಾನಕ್ ಇಂಟಾನಾನ್ ಅವರನ್ನು ಎದುರಾಗಲಿದ್ದಾರೆ.

ನಾಲ್ಕು ದಶಕಗಳ ಚರಿತ್ರೆ ಪುನಾರಚಿಸಲು ಅಣಿಯಾದ ರಾಣಿ ಬಳಗ

ಗುಂಪು ಹಂತದಲ್ಲಿ ಒಂದರಲ್ಲೂ ಗೆಲುವು ಸಾಧಿಸದೆ, ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಇಟಲಿಯನ್ನು ೩-೦ ಗೋಲುಗಳಿಂದ ಮಣಿಸಿದ ಭಾರತ ವನಿತಾ ಹಾಕಿ ತಂಡ ಚರಿತ್ರಾರ್ಹ ಸಾಧನೆಗೆ ಸಜ್ಜಾಗಿದೆ. ಲಂಡನ್‌ನಲ್ಲಿ ನಡೆಯುತ್ತಿರುವ ವಿಶ್ವ ವನಿತಾ ಹಾಕಿ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿಂದು ಐರ್ಲೆಂಡ್ ಎದುರು ರಾಣಿ ರಾಂಪಾಲ್ ಬಳಗ ಸೆಣಸಲಿದೆ. ಗುಂಪು ಹಂತದಲ್ಲಿ ಇದೇ ಐರ್ಲೆಂಡ್ ಎದುರು ದಿಟ್ಟ ಹೋರಾಟ ನಡೆಸಿದರೂ, ೦-೧ ಗೋಲುಗಳಿಂದ ಸೋಲನುಭವಿಸಿದ ಭಾರತ ವನಿತಾ ಹಾಕಿ ತಂಡ, ಐರ್ಲೆಂಡ್ ಅನ್ನು ಮಣಿಸಿ ೪೪ ವರ್ಷಗಳ ಬಳಿಕ ಪ್ರತಿಷ್ಠಿತ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ಗುರಿ ಹೊತ್ತಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 10:30 ಗೆ ನಡೆಯಲಿದ್ದು, ಸ್ಟಾರ್ ನೆಟ್ವರ್ಕ್‌ನಲ್ಲಿ ನೇರಪ್ರಸಾರವಿದೆ.

ಶಿರಾಡಿ ಘಾಟ್ ರಸ್ತೆ ಇಂದಿನಿಂದ ಎಲ್ಲ ವಾಹನಗಳಿಗೂ ಮುಕ್ತ

ಬೆಂಗಳೂರು-ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿರುವ ಶಿರಾಡಿ ಘಾಟ್ ರಸ್ತೆ ಇಂದಿನಿಂದ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, ಎರಡನೇ ಹಂತದ ಕಾಂಕ್ರಿಟ್ ಕಾಮಗಾರಿಯಿಂದಾಗಿ ೬ ತಿಂಗಳಿಂದ ಸಂಚಾರಕ್ಕೆ ತಡೆ ಹಿಡಿಯಲಾಗಿತ್ತು. ಜು. ೧೫ರಿಂದ ಸಣ್ಣ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿತ್ತು. ಈಗ ಎಲ್ಲ ತರಹದ ವಾಹನಗಳು ಸಂಚರಿಸಬಹುದು ಎಂದಿದೆ.

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣ: ಇಂದು ಹೈಕೋರ್ಟ್ ತೀರ್ಪು

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಕುರಿತಂತೆ ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಕಳೆದ ಡಿಸೆಂಬರ್ ನಲ್ಲಿ ನಾಪತ್ತೆಯಾಗಿದ್ದ ಅಜಿತಾಬ್ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದರ ವಿವರ ಕೇಳಿರುವ ಹೈಕೋರ್ಟ್, ಗುರುವಾರ ಈ ಬಗ್ಗೆ ದಾಖಲೆಗಳನ್ನು ಸಲ್ಲಿಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾಪತ್ತೆಯಾಗಿರುವ ಅಜಿತಾಭ್ ತಂದೆ, ಅಶೋಕ್ ಕುಮಾರ್ ಸಿನ್ಹಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವುದರಿಂದ , ಹೈಕೋರ್ಟ್ ಇಂದು ನಿರ್ಧಾರ ಪ್ರಕಟಿಸಲಿದೆ. ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಭ್, ಕಳೆದ ಡಿ.18ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More