ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ; ವಿರೋಧಿಗಳ ಒಗ್ಗಟ್ಟಿಗೆ ಕೇಂದ್ರ ಮಣಿಯಿತೇ?

ಕಳೆದ ವರ್ಷ ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ವಿರುದ್ಧ ತೀರ್ಪು ಬಂದಾಗ ಅದರ ಮೊದಲ ಅನುಭವ ದಲಿತರಿಗೆ ಆಗಿತ್ತು. ಆದರೆ, ಅದರಿಂದ ಸುಧಾರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತ ಕಾದಿತ್ತು. ಅದು ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯಿದೆ ವಿರುದ್ಧ ಕಳೆದ ಮಾ.20ರ ಸುಪ್ರೀಂ ತೀರ್ಪು

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಸಮುದಾಯಕ್ಕೆ ಒಂದು ಅಭದ್ರತೆಯ ಭಯ ಕಾಡುತ್ತಲೇ ಇತ್ತು. ನಮ್ಮ ಹಕ್ಕುಗಳನ್ನು ಈ ಸರ್ಕಾರ ಯಾವ ಯಾವ ರೂಪದಲ್ಲಿ ಕಿತ್ತುಕೊಳ್ಳಬಹುದು, ಯಾವ ಯಾವ ಕಾಯಿದೆಗಳನ್ನು ರದ್ದುಗೊಳಿಸಬಹುದು... ಹೀಗೆ. ಕಳೆದ ವರ್ಷ ಎಸ್ಸಿ-ಎಸ್ಟಿ ನೌಕರರ ಬಡ್ತಿ ಮೀಸಲಾತಿ ವಿರುದ್ಧ ತೀರ್ಪು ಬಂದಾಗ ಅದರ ಮೊದಲ ಅನುಭವ ದಲಿತರಿಗೆ ಆಗಿತ್ತು. ಆದರೆ ಅದರಿಂದ ಸುಧಾರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತ ಎದುರಾಗಿತ್ತು ಅದು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆ ವಿರುದ್ಧದ ಕಳೆದ ಮಾರ್ಚ್ 20ರ ಸುಪ್ರೀಂ ಕೋರ್ಟ್ ತೀರ್ಪು.

ನಿಜ, ನ್ಯಾಯಾಲಯದ ಇಂತಹ ತೀರ್ಪಿಗೂ ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ? ಎಂದು ಗೊತ್ತಿಲ್ಲದವರು ಕೇಳಬಹುದು. ಇದು ನ್ಯಾಯಾಲಯದ ತೀರ್ಪೇ ಹೊರತು ಕೇಂದ್ರ ಸರ್ಕಾರದ ಪಾತ್ರ ಇದರಲ್ಲಿ ಏನೂ ಇಲ್ಲ ಎಂದು ವಾದಿಸಬಹುದು. ಆದರೆ, ಸರ್ಕಾರದ ಕಾನೂನುಗಳನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳುವುದು ಸಂಬಂಧಿಸಿದ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಜವಾಬ್ದಾರಿ. ಅಂದಹಾಗೆ ಸರ್ಕಾರದ ಆ ಪ್ರತಿನಿಧಿ ಸರ್ಕಾರದ ಒಲವು ನಿಲುವುಗಳ ಆಧಾರದ ಮೇಲೆ ನ್ಯಾಯಾಲಯದ ಮುಂದೆ ವಾದ ಮಂಡಿಸುತ್ತಾರೆಯೇ ಹೊರತು ತಮ್ಮ ಸ್ವಂತ ನಿಲುವಿನ ಮೇಲೆ ಅಲ್ಲ. ಈ ನಿಟ್ಟಿನಲ್ಲಿ ಕಳೆದ ಮಾರ್ಚ್ 20 ರಂದು ಅಟ್ರಾಸಿಟಿ ಕಾಯಿದೆಯ ವಿರುದ್ಧ ಸುಪ್ರೀಂ ನೀಡಿದ ತೀರ್ಪಿನ ನೇರ ಹೊಣೆಗಾರ ಕೇಂದ್ರ ಸರ್ಕಾರ ಎಂಬುದು ಯಾರಿಗಾದರೂ ತಿಳಿದದ್ದೇ.

ಈ ನಿಟ್ಟಿನಲ್ಲಿ ಬಡ್ತಿ ಮೀಸಲಾತಿ ವಿರುದ್ಧ ತೀರ್ಪು, ಅದರ ಹಿಂದೆಯೇ ಅಟ್ರಾಸಿಟಿ ಕಾಯಿದೆಯ ವಿರುದ್ಧ ತೀರ್ಪು, ಇದಕ್ಕೆ ನ್ಯಾಯ ಕೊಡಿಸಬಲ್ಲದೇ ಹಾಲಿ ಮೋದಿ ನೇತೃತ್ವದ ಸರ್ಕಾರ ಎಂಬ ಆತಂಕ ಅಕ್ಷರಶಃ ದಲಿತರನ್ನು ಕಾಡುತ್ತಿತ್ತು. ಆದರೆ, ಭಾರತ ಬಹುತ್ವದ ಪ್ರಜಾಪ್ರಭುತ್ವ. ಇಲ್ಲಿ ಶೋಷಿತರು ಕೂಡ ಪ್ರಬಲರು ಮತ ಬ್ಯಾಂಕಿನಲ್ಲಿ. ಅದರಲ್ಲೂ, ಕಾಂಗ್ರೆಸ್ ನೇತೃತ್ವದಲ್ಲಿ ಮಿತ್ರ ಪಕ್ಷಗಳು ಮುಂಬರುವ ಚುನಾವಣೆಗೆ ಒಂದಾಗತೊಡಗಿದಾಗ ಬಿಜೆಪಿ ಬೆದರಿದೆ. ಸಾಲದ್ದಕ್ಕೆ ಎನ್‌ಡಿಎ ಮಿತ್ರಪಕ್ಷ ಎಲ್‌ಜೆಪಿ ತೀವ್ರ ಒತ್ತಡ ಹೇರಿದಾಗ, ಅದರಲ್ಲೂ ಬಿಜೆಪಿ ವಿರೋಧಿ ಕೂಟಕ್ಕೆ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್ ಜೆ ಪಿಯನ್ನು ಸೆಳೆಯುವ ಯತ್ನ ನಡೆದಾಗ ಬಿಜೆಪಿ ನಿಸ್ಸಂಶಯವಾಗಿ ಬೆದರಿದೆ. ಯಾಕೆಂದರೆ, ಈಗಾಗಲೇ ದಲಿತರ ಪ್ರಮುಖ ಪ್ರತಿನಿಧಿ ಬಿಎಸ್ಪಿ ಎನ್‌ಡಿಎ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದೆ. 2019ರ ಲೋಕಸಭಾ ಚುನಾವಣೆಗೆ ಸ್ಥಾನ ಹೊಂದಾಣಿಕೆ ಕೂಡ ಕಾಂಗ್ರೆಸ್ ಜೊತೆ ಬಿಎಸ್ಪಿ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜೊತೆ ದಲಿತರ ನೇತೃತ್ವದ ಪಕ್ಷಗಳು ಗುರುತಿಸಕೊಳ್ಳತೊಡಗಿದಾಗ ಬಿಜೆಪಿಗೆ ಅಟ್ರಾಸಿಟಿ ಕಾಯಿದೆ ಮರುಸ್ಥಾಪಿಸದೆ ಬೇರೆ ದಾರಿ ಇರಲಿಲ್ಲ.

ಇದನ್ನೂ ಓದಿ : ದಲಿತರ ಮೇಲಿನ ಬಹುತೇಕ ದೌರ್ಜನ್ಯಗಳಿಗೆ ಕ್ಷುಲ್ಲಕ ಕಾರಣಗಳೇ ನೆಪ!

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಹಾಲಿ ಅಟ್ರಾಸಿಟಿ ಕಾಯಿದೆ ಮರುಸ್ಥಾಪಿಸುವ ಮಾರ್ಚ್ 20ಕ್ಕಿಂತ ಮೊದಲು ಹೇಗಿತ್ತೋ ಆ ರೂಪಕ್ಕೆ ತರುವ ತಿದ್ದುಪಡಿ ಮಸೂದೆ ಅಂಗೀಕರಿಸುತ್ತಿರುವುದು ಅದು ದಲಿತರ ಮೇಲಿನ ಪ್ರೀತಿಯಿಂದಂತೂ ಖಂಡಿತ ಅಲ್ಲ. ಏಕೆಂದರೆ, ಹಾಗೇನಾದರೂ ಪ್ರೀತಿ ಇದ್ದಿದ್ದೇ ಆದರೆ, ಆ ತೀರ್ಪು ನೀಡಿದ ನ್ಯಾಯಾಧೀಶರನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್‌ನಂತಹ ಮಹತ್ವದ ಸ್ಥಾನಕ್ಕೆ ನೇಮಿಸುತ್ತಿತ್ತೇ? ಆದ್ದರಿಂದ ಕೇಂದ್ರ ಸರ್ಕಾರದ ಈ ನಡೆ ದಲಿತ ಸಮುದಾಯಕ್ಕೆ ಅಂತಹ ಸಂತಸವನ್ನೇನೂ ತಂದಿಲ್ಲ. ಬದಲಿಗೆ, ಮುಂದೆ ಅಕಸ್ಮಾತ್ ಮತ್ತೊಮ್ಮೆ ಈ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಬದುಕು, ಹಕ್ಕುಗಳು ಏನಾಗಬಹುದು ಎಂಬ ಆತಂಕ ಖಂಡಿತ ಅವರನ್ನು ಕಾಡುತ್ತಲೇ ಇರುತ್ತದೆ.

ಲೇಖಕರು, ದಲಿತ ಸಾಹಿತಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More