ದಾಂಪತ್ಯ ದ್ರೋಹ ಕಾನೂನು ಮಹಿಳೆಯನ್ನು ಪುರುಷನ ಚರಾಸ್ತಿಯಂತೆ ನೋಡುತ್ತಿದೆಯೇ?

ದಾಂಪತ್ಯ ದ್ರೋಹದ ವಿಚಾರದಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ಶಿಕ್ಷೆ ಒದಗಿಸಬೇಕು ಎನ್ನುವ ಬಗ್ಗೆ ನ್ಯಾಯಪೀಠ ಸಂಪೂರ್ಣ ಸಮ್ಮತಿ ತೋರಿಲ್ಲ. ವಿಚ್ಛೇದನಾ ಪ್ರಕರಣಗಳ ನ್ಯಾಯ ತೀರ್ಮಾನದಲ್ಲಿ ‘ದಾಂಪತ್ಯ ದ್ರೋಹ’ ಪ್ರಮುಖ ಪಾತ್ರ ವಹಿಸಬೇಕು ಎಂಬ ಬಗ್ಗೆ ನ್ಯಾಯಪೀಠದಲ್ಲಿ ಸಮ್ಮತಿ ವ್ಯಕ್ತವಾಯಿತು

ದಾಂಪತ್ಯವೊಂದರ ಪಾವಿತ್ರ್ಯ ಕಾಪಾಡುವುದು ಯಾರ ಹಕ್ಕು? ಮಹಿಳೆ ಅಥವಾ ಪುರುಷ ದಾಂಪತ್ಯದಿಂದ ಹೊರಗೆ ಲೈಂಗಿಕ ಸಂಬಂಧ ಹೊಂದಿದರೆ ನ್ಯಾಯಾಲಯ ಅವರನ್ನು ಶಿಕ್ಷಿಸಬೇಕೇ? ದಾಂಪತ್ಯದ ಹೊರಗೆ ಲೈಂಗಿಕ ಸಂಬಂಧ ಹೊಂದುವುದು ನಿಜಕ್ಕೂ ಅಪರಾಧವೇ ಎನ್ನುವ ವಿಚಾರ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆಯಾಗಿದೆ. ದಾಂಪತ್ಯ ದ್ರೋಹಕ್ಕೆ ಸಂಬಂಧಿಸಿದ ಕಾಯ್ದೆಯ ಸೆಕ್ಷನ್ 497 ಮಹಿಳಾ ಪರವಾಗಿದೆ ಮತ್ತು ಸಂವಿಧಾನದ ೧೪ನೇ ವಿಧಿಯಲ್ಲಿ ಹೇಳಲಾಗಿರುವ ಲಿಂಗ ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಒಟ್ಟಾರೆ ಕಾನೂನು ಮಹಿಳಾ ವಿರೋಧಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ದಾಂಪತ್ಯ ದ್ರೋಹ ಎಸಗಿದ ಮಹಿಳೆಗೂ ಶಿಕ್ಷೆಯಾಗಬೇಕು ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ, ಸುಪ್ರೀಂ ಕೋರ್ಟ್, ಒಟ್ಟು ದಾಂಪತ್ಯದ ಪಾವಿತ್ರ್ಯತೆ ಎನ್ನುವುದು ಪತಿ-ಪತ್ನಿಯರ ಜವಾಬ್ದಾರಿಯೇ ವಿನಾ ನ್ಯಾಯಾಲಯ ದಾಂಪತ್ಯದ ಪಾವಿತ್ರ್ಯತೆ ಕಾಪಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಅಭಿಪ್ರಾಯಪಟ್ಟಿದೆ.

ದಾಂಪತ್ಯ ದ್ರೋಹಕ್ಕೆ ಸಂಬಂಧಿಸಿದ ಭಾರತದ ಅತಿ ಹಳೇ ಕಾಯ್ದೆಯ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಚರ್ಚೆಯಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು ದಾಂಪತ್ಯ ದ್ರೋಹ ಕಾನೂನನ್ನು ರದ್ದುಗೊಳಿಸಬೇಕು ಎಂದು ಬೇಡಿಕೆ ಇಟ್ಟು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಮುಗಿಸಿದೆ. ಇಟಲಿಯಲ್ಲಿ ನೆಲೆಸಿರುವ ಭಾರತೀಯ ಸಂಜಾತ ಜೋಸೆಫ್ ಶೈನ್ ಈ ಪ್ರಕರಣದ ಅರ್ಜಿದಾರ. ಅರ್ಜಿದಾರನ ಪರವಾಗಿ ವಕೀಲ ಕಲೀಶ್ವರಂ ರಾಜ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಅರ್ಜಿದಾರರ ಪರ ವಕೀಲರು ಸೆಕ್ಷನ್ 497ರ ವಿವಿಧ ಮುಖಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದರು. “ಇಬ್ಬರು ಅವಿವಾಹಿತ ವಯಸ್ಕರು ಪರಸ್ಪರ ಒಪ್ಪಿ ಲೈಂಗಿಕ ಸಂಬಂಧ ಹೊಂದಿದಲ್ಲಿ ಈ ಕಾನೂನು ಅನ್ವಯಿಸುವುದಿಲ್ಲ. ಅದು ವಿವಾಹಿತ ವ್ಯಕ್ತಿ ಮತ್ತು ವಿವಾಹಿತ ಮಹಿಳೆಯರ ಲೈಂಗಿಕ ಸಂಬಂಧವನ್ನು ಮಾತ್ರ ಪ್ರತ್ಯೇಕವಾಗಿ ನೋಡುತ್ತಿದೆ. ಅಲ್ಲದೆ, ಈ ಕಾನೂನಿನಲ್ಲಿ ದಾಂಪತ್ಯದ ಹೊರಗೆ ಲೈಂಗಿಕ ಸಂಬಂಧ ಹೊಂದಿರುವ ವಿವಾಹಿತ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗುತ್ತದೆಯೇ ವಿನಾ ಮಹಿಳೆಗೆ ಶಿಕ್ಷೆ ವಿಧಿಸುವುದಿಲ್ಲ. ಹೀಗಾಗಿ, ಸಂವಿಧಾನದ ೧೪ನೇ ವಿಧಿಯಲ್ಲಿ ಹೇಳಿರುವ ಲಿಂಗ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಮಹಿಳಾ ಪರವಾಗಿರುವ ಈ ಕಾನೂನಿನಲ್ಲಿಯೇ ಸಾಕಷ್ಟು ಗೊಂದಲಗಳಿವೆ,” ಎಂದು ಕಲೀಶ್ವರಂ ರಾಜ್ ವಾದ ಮಂಡಿಸಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಪೀಠವು, ದಾಂಪತ್ಯ ದ್ರೋಹಕ್ಕೆ ಸಂಬಂಧಿಸಿದ ವಿವಿಧ ಮಜಲುಗಳನ್ನು ಚರ್ಚಿಸಿದೆ. ಈ ಪರಿಶೀಲನೆಯ ನಂತರ ಒಟ್ಟು ಕಾನೂನು ಪುರಾತನ ಮತ್ತು ಮಹಿಳಾ ವಿರೋಧಿ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಒಟ್ಟಾರೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು ಮಹಿಳಾ ಹಕ್ಕುಗಳು ಮತ್ತು ಲಿಂಗ ತಾರತಮ್ಯದ ಬಗ್ಗೆಯೂ ಚರ್ಚಿಸಿದೆ.

ದಾಂಪತ್ಯ ದ್ರೋಹದ ಕಾನೂನು ಪ್ರಕಾರ, ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ಒಪ್ಪಿಗೆಯಿಂದ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದಲ್ಲಿ ಆ ವ್ಯಕ್ತಿ ಶಿಕ್ಷಾರ್ಹನಾಗುವುದಿಲ್ಲ ಎನ್ನುವ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. “ಅರ್ಜಿದಾರರು ಹೇಳುವಂತೆ, ಒಟ್ಟಾರೆ ಕಾನೂನು ಮಹಿಳಾ ಪರವಾಗಿದೆ ಎಂದು ಅನಿಸಿದರೂ ನಿಜವಾಗಿಯೂ ಮಹಿಳಾ ವಿರೋಧಿಯಾಗಿದೆ. ಪತಿಯ ಒಪ್ಪಿಗೆ ಪಡೆದು ಮಹಿಳೆ ಮತ್ತೊಬ್ಬ ವ್ಯಕ್ತಿಯ ಲೈಂಗಿಕ ಆಶಯವನ್ನು ಈಡೇರಿಸಬಹುದು ಎನ್ನುವುದು ಭಾರತೀಯ ನೈತಿಕತೆಯಲ್ಲ,” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಐಪಿಸಿ ಸೆಕ್ಷನ್ ೪೯೭ ಹೇಳುವ ಪ್ರಕಾರ, ವ್ಯಕ್ತಿಯೊಬ್ಬರು ಮತ್ತೊಬ್ಬ ವ್ಯಕ್ತಿಯ ಪತ್ನಿ ಎಂದು ಸಾಬೀತಾದ ಮಹಿಳೆಯ ಜೊತೆಗೆ, ಆಕೆಯ ಪತಿಯ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಬಂಧ ಹೊಂದಿದಲ್ಲಿ ಅದು ಅತ್ಯಾಚಾರ ಎನಿಸುತ್ತದೆ ಮತ್ತು ದಾಂಪತ್ಯ ದ್ರೋಹದ ಅಪರಾಧವಾಗುತ್ತದೆ. ಈ ಬಗ್ಗೆ ವಿಶ್ಲೇಷಿಸಿದ ಸುಪ್ರೀಂ ಕೋರ್ಟ್, “ಮದುವೆಯೊಂದರಲ್ಲಿ ಪ್ರತಿ ಸಂಗಾತಿಯೂ ಸಮಾನ ಜವಾಬ್ದಾರಿ ಹೊಂದಿರುತ್ತಾರೆ. ಮಹಿಳೆ ಮಾತ್ರ ಪುರುಷರಿಗಿಂತ ಹೆಚ್ಚಿನ ಹೊರೆಯನ್ನು ಏಕೆ ನಿಭಾಯಿಸಬೇಕು? ಇದೇ ಕಾರಣದಿಂದ ಇದನ್ನು ಪುರಾತನ ಕಾನೂನು ಎಂದು ನಾವು ತಿಳಿದಿದ್ದೇವೆ,” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ದಾಂಪತ್ಯದ ಪಾವಿತ್ರ್ಯತೆ ಬಗ್ಗೆಯೂ ಚರ್ಚಿಸಿದ್ದಾರೆ. “ಸೆಕ್ಷನ್ ೪೯೭ ಮದುವೆಯ ಪಾವಿತ್ರ್ಯತೆ ರಕ್ಷಿಸುತ್ತದೆ ಎನ್ನುವುದು ಅರ್ಜಿದಾರರ ವಿರುದ್ಧ ಇರುವ ವಾದ. ಆದರೆ, ವಿವಾಹಿತ ವ್ಯಕ್ತಿಯೊಬ್ಬರು ತನ್ನ ಮದುವೆಯಿಂದ ಹೊರಗೆ ಅವಿವಾಹಿತ ಮಹಿಳೆ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದಲ್ಲಿ ಅದು ದಾಂಪತ್ಯ ದ್ರೋಹದ ಪಟ್ಟಿಯಲ್ಲಿ ಬರುವುದಿಲ್ಲ. ಆದರೆ, ಅದು ವಿವಾಹದ ಪಾವಿತ್ರ್ಯತೆಯನ್ನು ನಾಶ ಮಾಡುತ್ತದೆ,” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಇದನ್ನೂ ಓದಿ : ಜಾವೇದ್ ಅಖ್ತರ್-ಶಬಾನಾ ದಾಂಪತ್ಯ ಜೀವನಕ್ಕೆ ಮೂವತ್ಮೂರರ ಸಂಭ್ರಮ 

ಹೀಗೆ, ಮಹಿಳಾ ಪರವಾದ ಕಾನೂನು ಎನ್ನುವ ಅರ್ಜಿದಾರರ ವಾದವನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ವಾಸ್ತವದಲ್ಲಿ ದಾಂಪತ್ಯ ದ್ರೋಹ ಕಾನೂನಿನಲ್ಲಿರುವ ಪುರುಷವಾದಿ ನಿಯಮಗಳ ಬಗ್ಗೆ ಚರ್ಚಿಸಿದೆ. “ಮಹಿಳೆಗೆ ದಾಂಪತ್ಯದ ಹೊರಗೆ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧ ಬೆಸೆಯಲು ಪತಿ ಒಪ್ಪಿಗೆ ನೀಡುವಂತಹ ಕಾನೂನು ನಿಜವಾದ ಲಿಂಗ ತಾರತಮ್ಯದ ಕಾನೂನು. ದಾಂಪತ್ಯ ದ್ರೋಹಕ್ಕೆ ಪತಿಯ ಒಪ್ಪಿಗೆ ಪಡೆಯಬೇಕು ಎಂದರೆ ಮಹಿಳೆ ಪುರುಷನ ಚರಾಸ್ತಿಯೇ?” ಎಂದು ನ್ಯಾಯಮೂರ್ತಿ ಇಂದು ಮಲ್ಹೋತ್ರ ವಿಶ್ಲೇಷಿಸಿದರು.

ಆದರೆ, ದಾಂಪತ್ಯ ದ್ರೋಹದ ವಿಚಾರದಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ಶಿಕ್ಷೆ ಒದಗಿಸಬೇಕು ಎನ್ನುವ ಬಗ್ಗೆ ನ್ಯಾಯಪೀಠ ಸಂಪೂರ್ಣ ಸಮ್ಮತಿ ತೋರಲಿಲ್ಲ. ವಿಚ್ಛೇದನಾ ಪ್ರಕರಣಗಳಲ್ಲಿ ‘ದಾಂಪತ್ಯ ದ್ರೋಹ’ ನ್ಯಾಯಾಧೀಶರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎನ್ನುವ ಬಗ್ಗೆ ಮಾತ್ರ ನ್ಯಾಯಪೀಠದಲ್ಲಿ ಸಮ್ಮತಿ ವ್ಯಕ್ತವಾಯಿತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More